Elon Musk: ತಾಜಮಹಲ್ ಸೊಬಗಿಗೆ ಬೆರಗಾಗಿದ್ದ ಎಲಾನ್ ಮಸ್ಕ್
ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್. 2007ರಲ್ಲಿ ಭಾರತದ ತಾಜ್ ಮಹಲ್ ಗೆ ಭೇಟಿ ನೀಡಿದ್ದ ಅವರು ಇತ್ತೀಚೆಗೆ ಅದನ್ನು ಸ್ಮರಿಸಿಕೊಂಡಿದ್ದಾರೆ, ತಾಜ್ ಮಹಲ್ ಜಗತ್ತಿನ ಅದ್ಭುತ ಎಂಬುದಾಗಿಯೂ ಟ್ವೀಟ್ ಮಾಡಿದ್ದಾರೆ.
ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk). ಈತ ಕೆಲವು ವರ್ಷಗಳ ಹಿಂದೆ ಸ್ಪೇಸ್ಎಕ್ಸ್ (SpaceX) ಎನ್ನುವ ಸಂಸ್ಥೆಯನ್ನು ಆರಂಭಿಸಿದಾಗ ಅದನ್ನೊಂದು ಚೋದ್ಯವಾಗಿ ಕಂಡವರೇ ಹೆಚ್ಚು. ಆದರೆ, ಚೋದ್ಯದಿಂದಲೇ ಬದುಕನ್ನು ಆರಂಭಿಸಿ, ನಗುತ್ತಲೇ ಎಲ್ಲವನ್ನೂ ಸಾಧಿಸಿದಾತ ಎಲಾನ್ ಮಸ್ಕ್. ಇದೀಗ ವಿಶ್ವದ ದುಬಾರಿ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಟ್ವಿಟರ್ (Twitter) ಖರೀದಿ ಮಾಡುವ ಮೂಲಕ ಮಗದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅದಿರಲಿ. ಈ ನಡುವೆ, ಎಲಾನ್ ಮಸ್ಕ್ ಭಾರತಕ್ಕೂ (India) ಖುಷಿಯಾಗುವ ನಡೆಯೊಂದನ್ನು ತೋರಿದ್ದಾರೆ.
ಎಲಾನ್ ಮಸ್ಕ್ 2007ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಆಗ ಅವರನ್ನು ಗುರುತಿಸಿದವರು ಕಡಿಮೆಯೇ ಇರಬಹುದು. ಆ ಸಂದರ್ಭದಲ್ಲಿ ಅವರು ವಿಶ್ವದ ಅದ್ಭುತಗಳಲ್ಲಿ ಒಂದಾದ ಆಗ್ರಾದ(Agra) ತಾಜ್ ಮಹಲ್ (Tajmahal)ಗೆ ಭೇಟಿ ನೀಡಿದ್ದರು. ಅದನ್ನವರು ಇತ್ತೀಚೆಗೆ ಜ್ಞಾಪಿಸಿಕೊಂಡಿದ್ದಾರೆ. ಭಾರತದ ಪಾರಂಪರಿಕ ಸ್ಮಾರಕಗಳನ್ನು ಸ್ಮರಿಸಿಕೊಂಡಿರುವ ಅವರು, “ತಾಜ್ ಮಹಲ್ ನಿಜಕ್ಕೂ ವಿಶ್ವದ ಅದ್ಭುತವಾಗಿದೆ’ ಎಂದು ಹೇಳಿದ್ದಾರೆ.
ಹಿಸ್ಟರಿ ಡಿಫೈನ್ಡ್ ಎನ್ನುವ ಟ್ವಿಟರ್ ಖಾತೆಯಿಂದ ಪ್ರಕಟಿಸಲಾಗಿದ್ದ ತಾಜ್ ಮಹಲ್ ಮುಂಭಾಗದ ಚಿತ್ರದ ಬಗ್ಗೆ ಅವರು ಕಮೆಂಟ್ ಮಾಡಿದ್ದಾರೆ. “ಆಗ್ರಾದಲ್ಲಿರುವ ಕೆಂಪುಕೋಟೆಯ ಅದ್ಭುತ ಮುಂಭಾಗ’ ಎಂದು ಚಿತ್ರ ಪ್ರಕಟಿಸಲಾಗಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, “ಹೌದು, ತಾಜ್ ಮಹಲ್ ನಿಜಕ್ಕೂ ವಿಶ್ವದ ಅದ್ಭುತ’ ಎಂದು ಹೇಳಿದ್ದಾರೆ.
ಎಲಾನ್ ಮಸ್ಕ್ ಅವರ ತಾಯಿ ಮಾಯೆ ಮಸ್ಕ್ (Maye Musk) ಅವರೂ ಸಹ ಇದಕ್ಕೆ ಪ್ರತಿಕ್ರಿಯೆ ನೀಡಿರುವುದು ವಿಶೇಷ. ತಮ್ಮ ಖಾಸಗಿ ಅನುಭವವನ್ನು ಇದರಲ್ಲಿ ಅವರು ಹಂಚಿಕೊಂಡಿದ್ದಾರೆ. “1954ರಲ್ಲಿ ನಿನ್ನ ಅಜ್ಜಅಜ್ಜಿ ತಾಜ್ ಮಹಲ್ ನೋಡಲು ಹೋಗಿದ್ದರು. ದಕ್ಷಿಣ ಆಫ್ರಿಕಾದಿಂದ ಆಸ್ಟ್ರೇಲಿಯಾ ತೆರಳುವ ಮಧ್ಯದಲ್ಲಿ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಸಿಂಗಲ್ ಎಂಜಿನ್ ಹೊಂದಿದ್ದ ಪ್ರೊಪೆಲ್ಲರ್ ಏರ್ ಕ್ರಾಫ್ಟ್ (Aircraft) ಮೂಲಕ ಯಾವುದೇ ರೇಡಿಯೋ, ಜಿಪಿಎಸ್ ಇಲ್ಲದೇ ಪಯಣಿಸಿದ್ದರು. “ರೋಮಾಂಚನದಿಂದ ಬದುಕಬೇಕು ಹಾಗೆಯೇ ಎಚ್ಚರಿಕೆಯೂ ಇರಬೇಕು’ ಎನ್ನುವುದು ಅವರ ಉದ್ದೇಶವಾಗಿತ್ತು’ ಎಂದು ತಿಳಿಸಿದ್ದಾರೆ. ಜತೆಗೆ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
ಇದೀಗ ಭಾರತೀಯರು ಈ ಟ್ವೀಟ್ ಗಳನ್ನು ಮರುಟ್ವೀಟ್ ಮಾಡುತ್ತಲೇ ಇದ್ದಾರೆ. ಎರಡೇ ದಿನಗಳ ಮೊದಲು ಎಲಾನ್ ಅವರು “ತಾವು ಸಾವಿಗೀಡಾಗಬಹುದು, ನಿಗೂಢ ಸನ್ನಿವೇಶದಲ್ಲಿ ಮೃತಪಡಬಹುದು’ ಎಂದು ಹೇಳಿಕೊಂಡಿರುವುದು ಸುದ್ದಿಯಾಗಿತ್ತು.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಟ್ವಿಟರ್‌ನಿಷೇಧ ಹಿಂಪಡೆಯುತ್ತೇನೆ ಎಂದ ಟೆಸ್ಲಾ ಸಿಇಓ ಎಲಾನ್ ಮಸ್ಕ್
ಸ್ಪೇಸ್ ಎಕ್ಸ್ ಮತ್ತು ಶ್ರೀಮಂತ ವ್ಯಕ್ತಿ
ಫೋರ್ಬ್ಸ್ (Forbes) ಪ್ರಕಾರ, ಎಲಾನ್ ಮಸ್ಕ್ ಅವರು ವಿಶ್ವದ ಅತಿ ಶ್ರೀಮಂತ ವ್ಯಕ್ತಿ. ಇವರ ಆಸ್ತಿ 273.6 ಬಿಲಿಯನ್ ಡಾಲರ್. ಎಲಾನ್ ಮಸ್ಕ್ ಪ್ರಸ್ತುತ ಟೆಲ್ಸಾ ಹಾಗೂ ಸ್ಪೇಸ್ಎಕ್ಸ್ ಸಿಇಒ ಆಗಿದ್ದು, ಸ್ಪೇಸ್ಎಕ್ಸ್ ಮೂಲಕ ಬಾಹ್ಯಾಕಾಶ ಕ್ಷೇತ್ರಕ್ಕೆ ಅದ್ದೂರಿ ಖಾಸಗಿ ಟಚ್ ನೀಡಿದ್ದರು. ಇದೀಗ ಈ ಕಂಪನಿ ಪ್ರಮುಖ ಏರೋಸ್ಪೇಸ್ ಉತ್ಪಾದನಾ ಕೇಂದ್ರವಾಗಿ ಬೆಳೆದಿದೆ. ಅಲ್ಲದೆ, ಸ್ಪೇಸ್ ಎಕ್ಸ್ ಹಲವಾರು ರಾಕೆಟ್ ಗಳನ್ನು ಉಡಾವಣೆ ಮಾಡಿದೆ. ಅಂತರಿಕ್ಷಯಾನಿಗಳನ್ನೂ ನಭಕ್ಕೆ ಕಳುಹಿಸಿದೆ. ಸಾಮಾನ್ಯ ಜನರಿಗೂ ಬಾಹ್ಯಾಕಾಶಯಾನ ಸಾಧ್ಯವಾಗುವಂತೆ ಮಾಡುವುದು ಸ್ಪೇಸ್ಎಕ್ಸ್ ಉದ್ದೇಶವಾಗಿದ್ದು, ಮಂಗಳಗ್ರಹಕ್ಕೆ ಮನುಷ್ಯರನ್ನು ಕಳುಹಿಸಲಾಗುವುದು ಎಂದು ದಶಕಗಳ ಹಿಂದೆಯೇ ಪ್ರಕಟಿಸಿದೆ.
ಇದನ್ನೂ ಓದಿ: ಸ್ಥಳೀಯ ಉತ್ಪಾದನೆಯಿಂದ ಟೆಸ್ಲಾಗೆ ಸಾಕಷ್ಟು ಲಾಭ; ನಿತಿನ್ ಗಡ್ಕರಿ
ಮಂಗಳ ಗ್ರಹವನ್ನು ಮಾನವರ ಕಾಲೋನಿಯಾಗಿಸಲಾಗುವುದು ಎಂದು 2002ರಲ್ಲಿ ಹೇಳಿದಾಗ ಎಲಾನ್ ಮಸ್ಕ್ ಕಡೆಗೆ ನೋಡಿ ನಕ್ಕವರೇ ಹೆಚ್ಚಿರಬಹುದು. ಅದಿನ್ನೂ ಸಾಧ್ಯವಾಗಿಲ್ಲ, ಆದರೆ, ಈ ನಿಟ್ಟಿನಲ್ಲಿ ಪ್ರಯತ್ನವಂತೂ ಜಾರಿಯಲ್ಲಿದೆ. ಜತೆಗೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಅವರು ಅಗಾಧವಾಗಿ ಬೆಳೆದಿದ್ದಾರೆ. ಸ್ಪೇಸ್ಎಕ್ಸ್ ಸಂಸ್ಥೆಯನ್ನು ಅವರು 2002ರಲ್ಲಿ ಸ್ಥಾಪಿಸಿದ್ದು ಕ್ಯಾಲಿಫೋರ್ನಿಯಾದ ಹಾತೋರ್ ನಲ್ಲಿ ಮುಖ್ಯಕಚೇರಿ ಹೊಂದಿದೆ.