ಮೆಟ್ರೋನಲ್ಲಿ ಟ್ರಾವೆಲ್ ಮಾಡೋ ಪ್ರಯಾಣಿಕರ ಗಮನಕ್ಕೆ, ಈ ವಸ್ತುಗಳಿಲ್ಲಿ ನಿಷಿದ್ಧ!
ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣವನ್ನು ಮೆಟ್ರೋ ಒದಗಿಸುತ್ತದೆ. ಮೆಟ್ರೋದಲ್ಲಿ ಪ್ರಯಾಣ ಬೆಳೆಸುವುದ್ರಿಂದ ಸಮಯ ಉಳಿಯುತ್ತದೆ. ಆದ್ರೆ ಈ ಮೆಟ್ರೋ ಏರುವ ಮೊದಲು ಕೆಲವೊಂದು ಸಂಗತಿಯನ್ನು ಪ್ರಯಾಣಿಕರು ತಿಳಿದಿರಬೇಕು.
ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಓಡಾಡುವ ಜನರಿಗೆ ಮೆಟ್ರೋ ಜೀವನಾಡಿಯಾಗಿದೆ. ದೆಹಲಿಯ ಬಹುತೇಕ ಜನರು ಮೆಟ್ರೋ ಬಳಕೆ ಮಾಡ್ತಾರೆ. ದೇಶದ ಅತಿ ದೊಡ್ಡ ರೈಲ್ವೆ ಜಾಲವೆಂಬ ಹೆಗ್ಗಳಿಕೆಗೆ ದೆಹಲಿ ಮೆಟ್ರೋ ಪಾತ್ರವಾಗಿದೆ. ದೆಹಲಿ ಮಾತ್ರವಲ್ಲ ಮಹಾನಗರಗಳ ಜನರಿಗೆ ಮೆಟ್ರೋ ಇಲ್ಲವೆಂದ್ರೆ ದೇಹದ ಒಂದು ಅಂಗ ಕಳೆದುಕೊಂಡಂತೆ. ಪ್ರಯಾಣವನ್ನು ಸುಲಭ ಮಾಡಿರುವ ಮೆಟ್ರೋ, ಸಮಯ ಉಳಿಸುತ್ತದೆ. ಹಾಗಾಗಿಯೇ ಮೆಟ್ರೋಗೆ ಜನರು ಮೊದಲ ಪ್ರಾಶಸ್ತ್ಯ ನೀಡ್ತಿದ್ದಾರೆ. ನೀವೂ ಮೆಟ್ರೋ ಮೂಲಕ ಸಂಚರಿಸುವ ಪ್ಲಾನ್ ಮಾಡಿದ್ದರೆ ಕೆಲವೊಂದು ನಿಯಮಗಳನ್ನು ತಿಳಿದುಕೊಳ್ಳಬೇಕು.
ಮೆಟ್ರೋ (Metro) ದಲ್ಲಿ ನೀವು ಯಾವ ವಸ್ತು (Material) ಗಳನ್ನು ತೆಗೆದುಕೊಳ್ಳಬಹುದು ಅಥವಾ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ನಿಷೇಧ ಎಂಬುದನ್ನು ತಿಳಿದಿರಬೇಕು. ನಿಷೇಧಿತ ವಸ್ತುಗಳನ್ನು ನೀವು ತೆಗೆದುಕೊಂಡು ಹೋದ್ರೆ ದಂಡ ಪಾವತಿಸಬೇಕಾಗಬಹುದು ಅಥವಾ ಜೈಲು (Jail) ಶಿಕ್ಷೆ ಅನುಭವಿಸಬೇಕಾಗುತ್ತದೆ. ನಾವಿಂದು ಮೆಟ್ರೋದಲ್ಲಿ ಯಾವ ವಸ್ತು ತೆಗೆದುಕೊಂಡು ಹೋಗೋದು ನಿಷಿದ್ಧ ಎಂಬುದನ್ನು ನಿಮಗೆ ಹೇಳ್ತೆವೆ.
Travel Guide: ಭಾರತದ ಭಾಗವಾದ್ರೂ ಇಲ್ಲಿ ನಡೆಯಲ್ಲ ನಮ್ಮ ಕಾನೂನು!
ಮೆಟ್ರೋದಲ್ಲಿ ಈ ವಸ್ತು ತೆಗೆದುಕೊಂಡು ಹೋದ್ರೆ ದಂಡ :
ಮೆಟ್ರೋದಲ್ಲಿ ಮದ್ಯ (Alcohol) ಸಾಗಣೆ ನಿಷಿದ್ಧ : ಮೆಟ್ರೋದಲ್ಲಿ ಮದ್ಯದ ಬಾಟಲ್ ಸಾಗಿಸಲು ಅವಕಾಶವಿದ್ಯೆ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲ. ಸೀಲ್ಡ್ ಬಾಟಲಿಯನ್ನು ಕೂಡ ನೀವು ತೆಗೆದುಕೊಂಡು ಹೋಗುವ ಹಾಗಿಲ್ಲ. ಮೆಟ್ರೋ ಪ್ರಯಾಣದ ವೇಳೆ ಚೆಕ್ಕಿಂಗ್ ನಡೆಯುತ್ತದೆ. ಅದ್ರಲ್ಲಿ ಲಗೇಜ್ ಅನ್ನು ಸ್ಕ್ಯಾನ್ ಮಾಡಲಾಗುತ್ತದೆ. ಈ ವೇಳೆ ಭದ್ರತಾ ಸಿಬ್ಬಂದಿ ಮದ್ಯದ ಬಾಟಲಿ ಜೊತೆ ನಿಮ್ಮ ಪ್ರಯಾಣವನ್ನು ತಡೆಯುತ್ತಾರೆ.
ಮೆಟ್ರೋದಲ್ಲಿ ಸಾಕು ಪ್ರಾಣಿಯ ಪ್ರಯಾಣ : ಅನೇಕರು ತಮ್ಮ ಜೊತೆ ಸಾಕು ಪ್ರಾಣಿಯನ್ನು ಎಲ್ಲ ಕಡೆ ಕರೆದುಕೊಂಡು ಹೋಗ್ತಾರೆ. ಆದ್ರೆ ನಿಮ್ಮ ನೆಚ್ಚಿನ ಬೆಕ್ಕು, ನಾಯಿ ಅಥವಾ ಪಕ್ಷಿಗಳಿಗೆ ಮೆಟ್ರೋದಲ್ಲಿ ಪ್ರಯಾಣಿಸುವ ಭಾಗ್ಯವಿಲ್ಲ. ಸಾಕು ಪ್ರಾಣಿಗಳನ್ನು ಮೆಟ್ರೋದಲ್ಲಿ ಸಾಗಿಸುವುದನ್ನು ನಿಷೇಧಿಸಲಾಗಿದೆ. ಸಾಕು ಪ್ರಾಣಿ ಜೊತೆ ನೀವು ಹೊರಟಿದ್ದರೆ ಮೆಟ್ರೋ ಪ್ಲಾನ್ ಬಿಟ್ಟು, ಕಾರು, ಆಟೋ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.
ಮೆಟ್ರೋದಲ್ಲಿ ಸೈಕಲ್ ನಂತ ವಾಹನ ತೆಗೆದುಕೊಂಡು ಹೋಗ್ಬಹುದು? : ಈ ಪ್ರಶ್ನೆಗೆ ಉತ್ತರ ನೋ. ನೀವು ಸೈಕಲ್ ನಂತಹ ಯಾವುದೇ ವಾಹನವನ್ನು ಮೆಟ್ರೋದಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ಆದ್ರೆ ಮಕ್ಕಳ ಆಟಿಕೆ ಸೈಕಲ್ ತೆಗೆದುಕೊಂಡು ಹೋಗ್ಬಹುದು. ಅದ್ರ ತೂಕ ಕಡಿಮೆಯಿರಬೇಕು. ಎಲ್ಲ ಮೆಟ್ರೋ ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ. ನೀವು ವಾಹನವನ್ನು ಅಲ್ಲಿ ನಿಲ್ಲಿಸಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸಬಹುದು.
ಮೆಟ್ರೋದಲ್ಲಿ ರೀಲ್ ನಿಷಿದ್ಧ : ರೀಲ್ಸ್ ಈಗ ಹೆಚ್ಚು ಪ್ರಸಿದ್ಧಿ ಪಡೆದಿದೆ. ಜನರು ಎಲ್ಲೆಂದರಲ್ಲಿ ರೀಲ್ಸ್ ಮಾಡಲು ಶುರು ಮಾಡ್ತಾರೆ. ಆದ್ರೆ ಮೆಟ್ರೋದಲ್ಲಿ ರೀಲ್ಸ್ ಅಥವಾ ಯಾವುದೇ ಕಿರು ವಿಡಿಯೋ ಮಾಡಲು ಅನುಮತಿಯಿಲ್ಲ. ಕೆಲ ದಿನಗಳ ಹಿಂದೆ ದೆಹಲಿ ಮೆಟ್ರೋ ಈ ಬಗ್ಗೆ ಸೂಚನೆ ನೀಡಿದೆ. ಒಂದ್ವೇಳೆ ರೀಲ್ಸ್ ಮಾಡಿ ಸಿಕ್ಕಿಬಿದ್ರೆ ದಂಡ ವಿಧಿಸಲಾಗುತ್ತದೆ.
ಗೋವಾದಲ್ಲಿ ಅನುಮತಿ ಇಲ್ಲದೆ ಪ್ರವಾಸಿಗರ ಫೋಟೋ ತೆಗೆದ್ರೆ ಜೈಲು ಗ್ಯಾರಂಟಿ!
ಇವುಗಳನ್ನು ಮೆಟ್ರೋದಲ್ಲಿ ಕೊಂಡೊಯ್ಯುವಂತಿಲ್ಲ : ಸ್ಪಿರಿಟ್ ಮತ್ತು ದಹಿಸುವ ದ್ರವಗಳನ್ನು ಮೆಟ್ರೋದಲ್ಲಿ ನಿಷೇಧಿಸಲಾಗಿದೆ. ಅಪಾಯಕಾರಿ ಮತ್ತು ನಿರ್ಬಂಧಿತ ರಾಸಾಯನಿಕ ಆಮ್ಲಗಳು, ಪೆಟ್ರೋಲಿಯಂ ಉತ್ಪನ್ನಗಳು,ಸ್ಫೋಟಕಗಳು, ಚಾಕು,ಕತ್ತಿ ಇತ್ಯಾದಿ ಚೂಪಾದ ವಸ್ತುಗಳು ಮತ್ತು ಸಾಕುಪ್ರಾಣಿಗಳು ಮತ್ತು 15 ಕೆಜಿಗಿಂತ ಹೆಚ್ಚಿನ ಗಾತ್ರದ ಸಾಮಾನುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಮೆಟ್ರೋ ರೈಲಿನಲ್ಲಿ ಅಪಾಯಕಾರಿ, ಆಕ್ಷೇಪಾರ್ಹ ಮತ್ತು ನಿಷೇಧಿತ ವಸ್ತುಗಳನ್ನು ಸಾಗಿಸಿದರೆ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 5,000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.