ನೈಜೀರಿಯಾದಲ್ಲಿ ವಧುವಿನ ಮೇಲೆ ಹಣ ಸುರಿಸಿ ನಗಿಸುವ ಮೂಲಕ ಮದುವೆ ನೆರವೇರಿಸುವ ವಿಶಿಷ್ಟ ಸಂಪ್ರದಾಯವಿದೆ. "ಸ್ಪ್ರೇಯಿಂಗ್ ನೈರಾ" ಎಂಬ ಈ ಆಚರಣೆಯಲ್ಲಿ ವರನ ಕಡೆಯವರು ವಧುವಿನ ಮೇಲೆ ನೋಟುಗಳ ಮಳೆ ಸುರಿಸುತ್ತಾರೆ. ವಧುವಿನ ತೃಪ್ತಿಯ ನಗುವೇ ಮುಂದಿನ ವಿಧಿವಿಧಾನಗಳಿಗೆ ಸಂಕೇತ. ವರನ ಆರ್ಥಿಕ ಸ್ಥಿತಿ ಪ್ರದರ್ಶಿಸುವ ಈ ಸಂಪ್ರದಾಯ ಯೊರುಬಾ ಸಂಸ್ಕೃತಿಯಿಂದ ಬಂದಿದೆ.
ಸದಾ ಮೌನವಾಗಿರುತ್ತಿದ್ದ ರಾಜ ಕುಮಾರಿಯನ್ನು ಯಾರು ನಗಿಸ್ತಾರೋ ಅವರಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡ್ತೇನೆ ಅಂತ ಘೋಷಣೆ ಮಾಡಿದ್ದ ರಾಜನ ಕಥೆಯನ್ನು ನೀವು ಕೇಳಿರ್ತೀರಿ. ಇಲ್ಲಿಯೂ ಹುಡುಗಿ ಮದುವೆ ಆಗುವ ವರ, ಹುಡುಗಿಯನ್ನು ನಗಿಸ್ಬೇಕು. ಆದ್ರೆ ಜೋಕ್ ಮಾಡಿ ಅಲ್ಲ. ಅವಳಿಗೆ ಹಣ ನೀಡಿ ನಗಿಸ್ಬೇಕು. ವರ ನೋಟಿನ ಮಳೆ ಸುರಿಸ್ತಿದ್ದರೆ ವಧು ಗಂಭೀರವಾಗಿ ನಿಂತಿರ್ತಾಳೆ. ಅವಳಿಗೆ ಹಣ ಸಾಕು ಅನ್ನಿಸಿದ ತಕ್ಷಣ ನಗ್ತಾಳೆ. ಅಲ್ಲಿಗೆ ನೋಟು ನೀಡುವ ಕೆಲ್ಸ ಸಮಾಪ್ತಿಯಾಗುತ್ತದೆ. ಇದು ಮದುವೆ ಸಂಪ್ರದಾಯ. ಮದುವೆ ಸಮಯದಲ್ಲಿ ವರ ತನ್ನ ಆರ್ಥಿಕ ಸ್ಥಿತಿಯನ್ನು ಪ್ರದರ್ಶನ ಮಾಡಿದ್ರೆ, ವಧು ಹಣದ ಜೊತೆ ಗಂಡನ ಮನೆಗೆ ಬರ್ತಾಳೆ ಎಂಬುದು ಈ ಸಂಪ್ರದಾಯದ ನಂಬಿಕೆ.
ಪ್ರಪಂಚದಾದ್ಯಂತ ಮದುವೆ ಸಂಪ್ರದಾಯ (Marriage tradition)ಗಳು ಭಿನ್ನವಾಗಿವೆ. ಕೆಲ ಮದುವೆ ಸಂಪ್ರದಾಯಗಳು ಅಚ್ಚರಿ ಹುಟ್ಟಿಸುತ್ತವೆ. ನೈಜೀರಿಯಾ (Nigeria)ದಲ್ಲಿ ನಡೆಯುವ ಮದುವೆ ಕೂಡ ಎಲ್ಲರ ಹುಬ್ಬೇರಿಸುತ್ತದೆ. ಇಲ್ಲಿ ವಧುವಿಗೆ ತೃಪ್ತಿಯಾಗುವಷ್ಟು ಹಣ ನೀಡಲಾಗುತ್ತದೆ. ವಧು ಹಣ ನೋಡಿ ನಕ್ಕ ನಂತ್ರ ಮದುವೆಯ ಮುಂದಿನ ಸಂಪ್ರದಾಯ ನೆರವೇರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ನೈಜೀರಿಯಾದ ಇಂಥ ಮದುವೆಯ ಕೆಲ ವಿಡಿಯೋ ವೈರಲ್ ಆಗಿದೆ. ಹುಡುಗಿ ಕುರ್ಚಿ ಮೇಲೆ ಕುಳಿತುಕೊಂಡಿದ್ದಾಳೆ. ಹುಡುಗ ಆಕೆ ಮೈ ಮೇಲೆ ನೋಟುಗಳನ್ನು ಇಡ್ತಿದ್ದಾನೆ. ಕಂತೆ ಕಂತೆ ನೋಟನ್ನು ಮೈಮೇಲೆ ಇಟ್ರೂ ಆಕೆ ನಗೋದಿಲ್ಲ.
ನೈಜೀರಿಯಾದಲ್ಲಿ ಈ ಸಂಪ್ರದಾಯವನ್ನು ಸ್ಪ್ರೇಯಿಂಗ್ ನೈರಾ (spraying naira) ಎಂದು ಕರೆಯಲಾಗುತ್ತದೆ. ಇದರಲ್ಲಿ, ವರನ ಕಡೆಯವರು ವಧುವಿನ ಮೇಲೆ ಹಣವನ್ನು ಖರ್ಚು ಮಾಡುವ ಮೂಲಕ ಅವಳನ್ನು ಸಂತೋಷಪಡಿಸಲು ಪ್ರಯತ್ನಿಸ್ತಾರೆ. ಅವರ ಪ್ರೀತಿ, ಗೌರವ ಮತ್ತು ಆರ್ಥಿಕ ಸ್ಥಿತಿಯನ್ನು ಇಲ್ಲಿ ಪ್ರದರ್ಶಿಸುತ್ತಾರೆ. ಈ ಆಚರಣೆಯನ್ನು ಅಲ್ಲಿನ ಮದುವೆಗಳಲ್ಲಿ ವಿಶೇಷವೆಂದು ಪರಿಗಣಿಸಲಾಗುತ್ತದೆ. ಅತಿಥಿಗಳು ಸಹ ಇದನ್ನು ಬಹಳ ಆಸಕ್ತಿಯಿಂದ ವೀಕ್ಷಿಸುತ್ತಾರೆ.
ಸ್ಪ್ರೇಯಿಂಗ್ ನೈರಾ, ಯೊರುಬಾ ಸಂಸ್ಕೃತಿಯಲ್ಲಿ ಹುಟ್ಟಿಕೊಂಡಿದೆ. ಆರಂಭದಲ್ಲಿ ಸಂತೋಷದ ಸಂದರ್ಭಗಳಲ್ಲಿ ಇದನ್ನು ಆಚರಣೆ ಮಾಡಲಾಗ್ತಾಯಿತ್ತು. ನಂತ್ರ ಮದುವೆ ಸಂಪ್ರದಾಯವಾಗಿ ಇದು ಬದಲಾಯಿತು. ನೈಜೀರಿಯಾ ಸೇರಿದಂತೆ ನೆರೆ ದೇಶಗಳಲ್ಲೂ ಈಗ ಈ ಆಚರಣೆಯನ್ನು ಕಾಣಬಹುದು. ಈ ಸಂಪ್ರದಾಯವು ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ. ಸಣ್ಣ ಪ್ರಮಾಣದಲ್ಲಿ ಹಣವನ್ನು ನೀಡುವ ಸಾಧಾರಣ ಸಂಪ್ರದಾಯವಾಗಿದ್ದ ಇದು ಈಗ ಭವ್ಯ ಪ್ರದರ್ಶನವಾಗಿ ಬೆಳೆದಿದೆ. ತಮ್ಮ ಅತಿಥಿಗಳನ್ನು ಮೀರಿಸಲು ಜನರು ಸ್ಪರ್ದೆಗಿಳಿದು ಹಣ ಖರ್ಚು ಮಾಡ್ತಾರೆ.
ನೈಜೀರಿಯಾದ ನೀಲಿ ನೋಟುಗಳು ಸಾವಿರ ನೈರಾ ನೋಟುಗಳಾಗಿವೆ. ಹಸಿರು ಬಣ್ಣಗಳು ಐದು ನೂರು ನೈರಾ ನೋಟುಗಳಾಗಿವೆ. ಒಂದು ಸಾವಿರ ನೈರಾ 0.62 ಡಾಲರ್ ಗೆ ಸಮಾನವಾಗಿದೆ. ಹತ್ತು ನೀಲಿ ಬಂಡಲ್ಗಳು ಸುಮಾರು 620 ಡಾಲರ್ ಆಗುತ್ತೆ. ಮದುವೆ ಸಮಯದಲ್ಲಿ ನಡೆಯುವ ಡಾನ್ಸ್, ಸಂಗೀತದಲ್ಲಿ ಈ ಹಣ ನೀಡುವ ಪದ್ಧತಿಯನ್ನು ಆಚರಿಸಲಾಗುತ್ತದೆ. ಅನೇಕ ಬಾರಿ ಹುಡುಗಿ ಡಾನ್ಸ್ ಮಾಡ್ತಿರವಾಗ್ಲೇ ಹಣ ಚೆಲ್ಲಲಾಗುತ್ತದೆ. ಮದುವೆಗೆ ಬರುವ ಕೆಲ ಅಥಿತಿಗಳಿಗೆ ಮೊದಲೇ ಈ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ. ಎಷ್ಟು ಹಣ ಚೆಲ್ಲಬೇಕು ಎನ್ನುವ ಬಗ್ಗೆ ಮಾಹಿತಿ ಕೂಡ ನೀಡಲಾಗುತ್ತದೆ. ವರನ ಕಡೆಯವರು ಅತಿಥಿ ಕೈಗೆ ಹಣದ ಕಂತೆ ನೀಡುವುದಿದೆ. ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಅಥವಾ ದಂಪತಿ ಮದುವೆಯ ವೆಬ್ಸೈಟ್ನಲ್ಲಿ ಹಣವನ್ನು ಖರ್ಚು ಮಾಡುವ ಬಗ್ಗೆ ಸಂಕ್ಷಿಪ್ತ ಟಿಪ್ಪಣಿಯನ್ನು ಸೇರಿಸುವವರಿದ್ದಾರೆ. ನೈಜೀರಿಯಾದ ಬುಡಕಟ್ಟು ಜನಾಂಗದಲ್ಲಿ ಈ ಪದ್ದತಿ ಹೆಚ್ಚು ಜಾರಿಯಲ್ಲಿದೆ.


