ಬೆಂಗಳೂರು ಮೆಟ್ರೋದ ಹಳದಿ ಮಾರ್ಗವು ಜೂನ್ 2025ರಲ್ಲಿ ಭಾಗಶಃ ಕಾರ್ಯಾರಂಭ ಮಾಡಲಿದೆ. ಆರಂಭದಲ್ಲಿ ಕೆಲವು ನಿಲ್ದಾಣಗಳಲ್ಲಿ ಸೀಮಿತ ಸೇವೆ ಲಭ್ಯವಿರುತ್ತದೆ. ಪೂರ್ಣ ಪ್ರಮಾಣದ ಸೇವೆ ಆಗಸ್ಟ್ ಅಥವಾ ಸೆಪ್ಟೆಂಬರ್ 2025ರಲ್ಲಿ ಆರಂಭವಾಗುವ ನಿರೀಕ್ಷೆಯಿದೆ.
ಬಹುನಿರೀಕ್ಷಿತ ಹಳದಿ ಮೆಟ್ರೋ ಮಾರ್ಗ ಕೊನೆಗೂ ಸಾರ್ವಜನಿಕ ಸೇವೆಗೆ ಲಭ್ಯವಾಗುವ ಕಾಲ ಹತ್ತಿರ ಬಂದಿದೆ. ಬೆಂಗಳೂರು ಮೆಟ್ರೋ ಯೋಜನೆಯ ಭಾಗವಾಗಿ ಈ ಮಾರ್ಗವು ಜೂನ್ 2025ರೊಳಗೆ ಭಾಗಶಃ ಕಾರ್ಯಾರಂಭಗೊಳ್ಳಲಿದ್ದು, ಆರಂಭದಲ್ಲಿ ಕೆಲ ನಿಲ್ದಾಣಗಳಲ್ಲಿ ಸೇವೆ ಆರಂಭವಾಗಲಿದೆ ಎಂದು ವರದಿ ತಿಳಿಸಿದೆ.
ಆರ್‌ವಿ ರಸ್ತೆ (ರಾಷ್ಟ್ರೀಯ ವಿದ್ಯಾಲಯ ರಸ್ತೆ) ಯಿಂದ ಬೊಮ್ಮಸಂದ್ರವರೆಗೆ ಹರಡಿಕೊಂಡಿರುವ ಈ ಮಾರ್ಗವು, ನಿತ್ಯದ ಭಾರೀ ಸಂಚಾರ ದಟ್ಟಣೆಯಿಂದ ಬಳಲುತ್ತಿರುವ ಪ್ರಯಾಣಿಕರಿಗೆ ದೊಡ್ಡ ಸೌಲಭ್ಯ ಒದಗಿಸಲಿದೆ. ಆರಂಭಿಕ ಹಂತದಲ್ಲಿ ಎರಡು ಟರ್ಮಿನಲ್ ಪಾಯಿಂಟ್‌ಗಳು ಸೇರಿ ಎಳು ನಿಲ್ದಾಣಗಳಲ್ಲಿ ಸೇವೆ ಲಭ್ಯವಿರಲಿದೆ. ಚಾಲಕರಿಲ್ಲದ ಮೆಟ್ರೋ ರೈಲುಗಳ ಲಭ್ಯತೆ ಸೀಮಿತವಾಗಿರುವ ಕಾರಣದಿಂದ, ಆರಂಭದಲ್ಲಿ ಮೂರು ರೈಲು ಸೆಟ್‌ಗಳು 30 ನಿಮಿಷಗಳ ಮಧ್ಯಂತರದಲ್ಲಿ ಸಂಚರಿಸಲಿವೆ. ಮೇ. 13ರಂದು ಮೂರನೇ ರೈಲು ಸೆಟ್ ಹೆಬ್ಬಗೋಡಿ ಡಿಪೋಗೆ ಬಂದಿದ್ದು, ಪ್ರಾಯೋಗಿಕ ಪರೀಕ್ಷಾರ್ಥ ಸಂಚಾರಗಳು ನಡೆಯುತ್ತಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳ ಪ್ರಕಾರ, ರೈಲುಗಳ ಪ್ರಮಾಣ ಹೆಚ್ಚಾಗಿ ಸುರಕ್ಷತಾ ಮಾನ್ಯತೆಗಳು ಬಂದ ನಂತರ, ಆಗಸ್ಟ್ ಅಥವಾ ಸೆಪ್ಟೆಂಬರ್ 2025ರೊಳಗೆ ಎಲ್ಲಾ 16 ನಿಲ್ದಾಣಗಳಲ್ಲಿ ಪೂರ್ಣ ಪ್ರಮಾಣದ ಸೇವೆ ಆರಂಭವಾಗಲಿದೆ.
ಹಳದಿ ಮಾರ್ಗದ ಮಹತ್ವ:
ಹಳದಿ ಮಾರ್ಗವು ಬೆಂಗಳೂರು ಮೆಟ್ರೋ ಯೋಜನೆಯ ದ್ವಿತೀಯ ಹಂತದ ಪ್ರಮುಖ ಭಾಗವಾಗಿದೆ. ಒಟ್ಟು 18.82 ಕಿ.ಮೀ ಉದ್ದದ ಮಾರ್ಗವು ನಗರದ ದಕ್ಷಿಣ ಭಾಗದ ಆರ್‌ವಿ ರಸ್ತೆಯನ್ನು, ಬೊಮ್ಮಸಂದ್ರದವರೆಗೆ ಸಂಪರ್ಕಿಸುತ್ತದೆ. ಈ ಮಾರ್ಗವು ಪ್ರಮುಖ ವಸತಿ ಪ್ರದೇಶಗಳು, ಐಟಿ ಕಂಪನಿಗಳು, ಮತ್ತು ಕೈಗಾರಿಕಾ ವಲಯಗಳ ಮೂಲಕ ಹಾದು ಹೋಗಲಿದ್ದು, ಇದು ಸಾರ್ವಜನಿಕ ಸಾರಿಗೆಯ ಗುಣಮಟ್ಟವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ. ನಗರದ ದಟ್ಟ ಸಂಚಾರದಿಂದ ಬಳಲುತ್ತಿರುವ ನಾಗರಿಕರಿಗೆ, ಈ ಮಾರ್ಗವು ಪ್ರಯಾಣ ಸಮಯವನ್ನು ಕಡಿಮೆ ಮಾಡುತ್ತದೆ, ಖಾಸಗಿ ವಾಹನಗಳ ಅವಲಂಬನೆಯನ್ನು ತಗ್ಗಿಸುತ್ತದೆ ಮತ್ತು ಪರಿಸರ ಸ್ನೇಹಿ ಸಾರಿಗೆ ಪರಿಕಲ್ಪನೆಯನ್ನು ಬೆಂಬಲಿಸುತ್ತದೆ.
ಒಟ್ಟು ಈ ಮಾರ್ಗದಲ್ಲಿ 16 ನಿಲ್ದಾಣಗಳು, ಯಾವುದಕ್ಕೆ ಹತ್ತಿರ
ಆರ್‌ವಿ ರಸ್ತೆ – ಹಸಿರು ಮಾರ್ಗದ ಸಂಪರ್ಕ
ಜಯದೇವ ಆಸ್ಪತ್ರೆ – ಆರೋಗ್ಯ ಕೇಂದ್ರ ಪ್ರವೇಶಕ್ಕಾಗಿ
ಬಿಟಿಎಂ ಲೇಔಟ್ – ಜನಸಂದಣಿಯ ಪ್ರದೇಶ
ಸಿಲ್ಕ್ ಬೋರ್ಡ್ – ಭಾರೀ ಸಂಚಾರ ಕೇಂದ್ರ
HSR ಲೇಔಟ್ – ಐಟಿ ಉದ್ಯೋಗಿಗಳು ಮತ್ತು ನಿವಾಸಿಗಳಿಗಾಗಿ
ಆಕ್ಸ್‌ಫರ್ಡ್ ಕಾಲೇಜು – ವಿದ್ಯಾರ್ಥಿಗಳಿಗೆ ಅನುಕೂಲ
ಎಲೆಕ್ಟ್ರಾನಿಕ್ ಸಿಟಿ ಹಂತ 1 – ತಂತ್ರಜ್ಞಾನ ಉದ್ಯೋಗಿಗಳ ತಾಣ
ಬೊಮ್ಮಸಂದ್ರ – ಕೈಗಾರಿಕಾ ಮತ್ತು ವಸತಿ ಪ್ರದೇಶದ ಕೊನೆ ನಿಲ್ದಾಣ
ಇತರ ನಿಲ್ದಾಣಗಳು: ಮುನೇಶ್ವರ ನಗರ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕುಡ್ಲು ಗೇಟ್, ಸಿಂಗಸಂದ್ರ, ಬಸಾಪುರ ಮತ್ತು ಹೊಸ ರಸ್ತೆ.
ಕಾರ್ಯಾಚರಣೆಗಳ ಸಮಯ:
ಒಮ್ಮೆ ಮಾರ್ಗ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದ ನಂತರ, ಮೆಟ್ರೋ ರೈಲುಗಳು ಪ್ರತಿದಿನ ಬೆಳಿಗ್ಗೆ 5:00 ರಿಂದ ರಾತ್ರಿ 11:00 ಗಂಟೆವರೆಗೆ ಸಂಚರಿಸಲಿವೆ. ಪೀಕ್ ಅವಧಿಯಲ್ಲಿ ಪ್ರತಿ 10 ನಿಮಿಷಕ್ಕೆ, ಮತ್ತು ಅಫ್ಫ್-ಪೀಕ್ ವೇಳೆಯಲ್ಲಿ ಪ್ರತಿ 15 ನಿಮಿಷಕ್ಕೆ ಒಂದು ರೈಲುಗಳ ಸಂಚಾರ ಇರಲಿದೆ.
ಟಿಕೆಟ್ ದರಗಳು ಮತ್ತು ಪಾವತಿ ವ್ಯವಸ್ಥೆ:
ಹಳದಿ ಮಾರ್ಗದಲ್ಲಿ ಪ್ರಯಾಣ ದರಗಳು ₹15 ರಿಂದ ₹85ರ ವರೆಗೆ ಇರುತ್ತದೆ, ಇದು ಪ್ರಯಾಣದ ದೂರವನ್ನು ಆಧರಿಸಿರುತ್ತದೆ. ಪ್ರಯಾಣಿಕರು ಸ್ಮಾರ್ಟ್ ಕಾರ್ಡ್‌ಗಳು, QR ಕೋಡ್ ಟಿಕೆಟ್‌ಗಳು, ಅಥವಾ ಸಾಂಪ್ರದಾಯಿಕ ಕಾಗದದ ಟಿಕೆಟ್‌ಗಳನ್ನು ಬಳಸಬಹುದು. ಡಿಜಿಟಲ್ ಪಾವತಿ ವ್ಯವಸ್ಥೆಗಳು ಕೂಡ ಲಭ್ಯವಿದ್ದು, ನಗದುರಹಿತ ಅನುಭವವನ್ನೂ ನೀಡಲಿದೆ. ಈ ಹಳದಿ ಮಾರ್ಗವು ಜನರ ದಿನನಿತ್ಯದ ಜೀವನವನ್ನು ಸುಲಭಗೊಳಿಸಿ, ಬೆಂಗಳೂರು ನಗರದ ಸಾರಿಗೆ ಚಿತ್ರಣವನ್ನು ಬದಲಾಯಿಸುವ ನಿರೀಕ್ಷೆಯಿದೆ.
