ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಬೆಂಗಳೂರಿಗರು ಅಧಿಕ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ವಿಮಾನ ದರಗಳು ಗಗನಕ್ಕೇರಿದರೂ ಲೆಕ್ಕಿಸದೆ ಟ್ರಾವೆಲ್ ಏಜೆನ್ಸಿಗಳ ಮೂಲಕ ಪ್ರಯಾಗ್‌ರಾಜ್ ತಲುಪುವುದಕ್ಕಾಗಿ ವಿಚಾರಿಸುತ್ತಿದ್ದಾರೆ.
ಉತ್ತರಪ್ರದೇಶ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ದೇಶದೆಲ್ಲೆಡೆಯಿಂದ ಮಾತ್ರವಲ್ಲದೇ ಪ್ರಪಂಚದ ವಿವಿಧ ದೇಶಗಳ ಮೂಲೆ ಮೂಲೆಗಳಿಂದ ಸಾಧು ಸಂತರು ಭಕ್ತರು ಆಗಮಿಸಿ ಗಂಗೆಯಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ. 144 ವರ್ಷಗಳ ನಂತರ ನಡೆಯುತ್ತಿರುವ ಈ ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಬೆಂಗಳೂರಿಗರು ಕೂಡ ಅಧಿಕ ಸಂಖ್ಯೆಯಲ್ಲಿ ಹಾತೊರೆಯುತ್ತಿದ್ದು, ಗಗನಕ್ಕೇರಿರುವ ವಿಮಾನ ಪ್ರಯಾಣ ದರವನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳದೇ ಪ್ರಯಾಗ್‌ರಾಜ್‌ಗೆ ತೆರಳುವುದಕ್ಕಾಗಿ ಟ್ರಾವೆಲ್ ಏಜೆನ್ಸಿಗಳನ್ನು ಸಂಪರ್ಕಿಸುತ್ತಿದ್ದಾರೆ ದರ ವಾಸ್ತವ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರಿಗರು ಪ್ರಯಾಗ್‌ರಾಜ್‌ಗೆ ತೆರಳಲು ಬಹುಬೇಡಿಕೆ ತೋರಿಸಿದ ಹಿನ್ನೆಲೆಯಲ್ಲಿ ಅನೇಕ ವಿಮಾನಯಾನ ಸಂಸ್ಥೆಗಳು ಬೆಂಗಳೂರಿನಿಂದ ಪ್ರಯಾಗ್‌ರಾಜ್‌ಗೆ ವಿಮಾನಗಳ ಸಂಖ್ಯೆಯನ್ನು ಕೂಡ ಹೆಚ್ಚಳ ಮಾಡಿವೆ. ಪ್ರಮುಖ ದಿನಗಳು ಹಾಗೂ ಸಂದರ್ಭಗಳಲ್ಲಿ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಿರುವುದಾಗಿ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಇಂಡಿಗೋ ಏರ್‌ಲೈನ್ಸ್‌ನ ವಕ್ತಾರರು ಹೇಳಿದ್ದಾರೆ.
ಜನವರಿ 13ರಂದು ಆರಂಭವಾದ ಈ ಕುಂಭಮೇಳ ಫೆಬ್ರವರಿ 26ರಂದು ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ ಟ್ರಾವೆಲ್ ವೆಬ್‌ಸೈಟ್‌ನಲ್ಲಿ ಬೆಂಗಳೂರಿನಿಂದ ಪ್ರಯಾಗ್‌ರಾಜ್‌ಗೆ ಲಭ್ಯವಿರುವ ಅಗ್ಗದ ಟಿಕೆಟ್ ಫೆಬ್ರವರಿ 25ಕ್ಕೆ ಇದು ದರ 12,374 ರೂಪಾಯಿಯಾಗಿದೆ ಹಾಗೆಯೇ ಅತ್ಯಂತ ದುಬಾರಿ ಟಿಕೆಟ್, ಬೆಲೆ ರೂ. 54,351, ರೂಪಾಯಿಯಾಗಿದ್ದು, ಜನವರಿ 27ಕ್ಕೆ ಇದೆ. ಈ ಬೆಲೆಯೂ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಲಭ್ಯವಿರುವ ಸಾಮಾನ್ಯ ಟಿಕೆಟ್ ಬೆಲೆಗಳಿಗಿಂತ ಸುಮಾರು 1.5 ರಿಂದ 7.5 ಪಟ್ಟು ಹೆಚ್ಚಾಗಿದೆ. ಕೆಲವು ವಿಮಾನಯಾನ ಸಂಸ್ಥೆಗಳು ಈ ಅವಧಿಯಲ್ಲಿ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಿವೆ.
ಟ್ರಾವೆಲ್ ಏಜೆನ್ಸಿಗಳಿಗೆ ಕರೆಗಳ ಸುರಿಮಳೆ
ಮಲ್ಲೇಶ್ವರಂ ಮೂಲದ ಟ್ರಾವೆಲ್ ಏಜೆನ್ಸಿ 'ತೀರ್ಥಯಾತ್ರ'ಗೆ ಬೆಂಗಳೂರಿನಿಂದ ದಿನಕ್ಕೆ ಸುಮಾರು 200 ವಿಚಾರಣ ಕರೆಗಳು ಬರುತ್ತಿವೆ. ನೇರವಾಗಿ ಪ್ರಯಾಗರಾಜ್‌ಗೆ ಟಿಕೆಟ್ ಬೆಲೆಗಳು ಹೆಚ್ಚಾದ ಕಾರಣ, ನಾವು ವಾರಣಾಸಿ, ಲಕ್ನೋ ಮತ್ತು ಕಾನ್ಪುರದಂತಹ ಪರ್ಯಾಯ ವಿಮಾನ ನಿಲ್ದಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದೇವೆ, ನಂತರ ಅವರನ್ನು ಪ್ರಯಾಗ್‌ರಾಜ್ ನಗರಕ್ಕೆ ಕರೆದೊಯ್ಯಲು ಟೆಂಪೋಗಳು ಅಥವಾ ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತೀರ್ಥಯಾತ್ರದ ಸಂಸ್ಥಾಪಕ-ವ್ಯವಸ್ಥಾಪಕ ನಿರ್ದೇಶಕ ಅಗ್ರಣಿ ಕೃಷ್ಣ ದಾಸ ಹೇಳಿದ್ದಾರೆ. ಅವರ ಸಂಸ್ಥೆ ಪ್ರಸ್ತುತ ಎರಡು ದಿನಗಳ ಪ್ಯಾಕೇಜ್ ಅನ್ನು ಗ್ರಾಹಕರಿಗೆ ನೀಡುತ್ತಿದೆ.
ಹಾಗೆಯೇ ಗಂಗಾನಗರದ ಸುಶೀಲ್ ಹಾಲಿಡೇಸ್ ಮತ್ತು ಫಾರೆಕ್ಸ್‌ನ ನಿರ್ದೇಶಕಿ ಪುಣ್ಯ ಟಿ ಪಟೇಲ್ ಹೇಳುವಂತೆ ಜನವರಿ ಮಧ್ಯಭಾಗದಿಂದ ಕುಂಭಮೇಳದ ಬಗ್ಗೆ 100 ಕ್ಕೂ ಹೆಚ್ಚು ವಿಚಾರಣಾ ಕರೆಗಳನ್ನು ಸ್ವೀಕರಿಸಿದ್ದೇವೆ. 3ನೇ ಎರಡರಷ್ಟು ಕರೆಗಳು ಪ್ರಯಾಗ್‌ರಾಜ್‌ಗೆ ಪ್ರವಾಸಕ್ಕೆ ಸಂಬಂಧಿಸಿದಾಗಿದೆ. 20ರಿಂದ ಶುರುವಾಗಿ 80 ವರ್ಷ ವಯಸ್ಸಿನವರು ಕೂಡ ಕರೆ ಮಾಡಿ ವಿಚಾರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಇವರ ಸಂಸ್ಥೆ 3 ಹಗಲು 4 ರಾತ್ರಿ ಹಾಗೂ 4 ಹಗಲು 5 ರಾತ್ರಿಯ ಪ್ಯಾಕೇಜ್‌ಗಳನ್ನು ನೀಡುತ್ತಿದ್ದು, ಇದರಲ್ಲಿ ಮೊದಲನೆಯದಕ್ಕೆ ಹೆಚ್ಚು ಬೇಡಿಕೆ ಇದೆ ಎಂದು ಅವರು ಹೇಳುತ್ತಾರೆ.
ಹಾಗೆಯೇ ನಾಗರಭಾವಿ ಮೂಲದ ನೇಸರ ಟೂರ್ಸ್ ದಿನಕ್ಕೆ ಒಟ್ಟು 60-70 ಕರೆಗಳನ್ನು ಸ್ವೀಕರಿಸುತ್ತಿದ್ದು, ಅದರಲ್ಲಿ 45-50 ಕರೆಗಳು ಕುಂಭಮೇಳದ ಬಗ್ಗೆಯಾಗಿದೆ. ಪ್ರಯಾಗ್‌ರಾಜ್‌ನಲ್ಲಿ ಉತ್ತಮ ವಸತಿ ಮತ್ತು ವ್ಯವಸ್ಥೆಗಳು ಈ ಕರೆಗಳ ಸಂಖ್ಯೆಯನ್ನು ಹೆಚ್ಚಿಸಿವೆ ಎಂದು ಸಂಸ್ಥೆಯ ವ್ಯವಸ್ಥಾಪಕ ಮೋಹನ್ ಹೆಗ್ಡೆ ಹೇಳಿದ್ದಾರೆ.
