Alleppey Kerala ಬ್ಯಾಚುಲರ್‌ ಡೈರೀಸ್‌; ನಮ್ಮದಲ್ಲದ ಮೂರು ದಿನಗಳು

ಅಲೆಪ್ಪಿಯಲ್ಲಿ ಬೋಟ್‌ಗಳು ನಮ್ಮೂರಲ್ಲಿ ರಿಕ್ಷಾನಿಂತಂತೆ ಸಾಲು ನಿಂತಿರುತ್ತಿವೆ.  ಬಗೆ ಬಗೆ ಬೋಟ್‌ಗಳು. ಅಲ್ಲೊಂದು ಬೋಟ್‌ ಹತ್ತಿರಕ್ಕೆ ಕರೆದುಕೊಂಡು ಹೋಗಿ ಬಿಟ್ಟ. ನಾಲ್ಕು ಗಂಟೆ ನೀರಿಂದ ಆಚೆ ಬರೋಹಾಗಿಲ್ಲ. ನಾವು ಬಲಗಾಲಿಟ್ಟು ಒಳಗೆ ಹೋದೆವು. ಅವನು ಅಲೆಪ್ಪಿಯ ಹಿನ್ನೀರಿನಲ್ಲಿ ಸುತ್ತಾಡಿಸಿದ ನಮ್ಮ ದುಡ್ಡಲ್ಲಿ ತಿಂಡಿ ಕೊಡಿಸಿದ. ಅಲೆಪ್ಪಿಯ ಹಿನ್ನೀರು ಬದುಕನ್ನು ಪರಿಚಯಿಸಿದ.

Bachelor dairy 3 days at Alleppey Kerala by Rajesh shetty vcs

ರಾಜೇಶ್‌ ಶೆಟ್ಟಿ

ಒಂದು ಕಾಲದಲ್ಲಿ ಒಂದೇ ಮನೆಯಲ್ಲಿ ಜೊತೆಗೇ ಇದ್ದವರು ಕಾಲಾಂತರದಲ್ಲಿ ಅನಿವಾರ್ಯ ಕಾರಣಗಳಿಂದ ದೂರಾಗುತ್ತಾ ಹೋಗುತ್ತೇವೆ. ದಿನನಿತ್ಯ ಮಾತನಾಡದೇ ಇದ್ದವರು ವರ್ಷಗಟ್ಟಲೆ ಮಾತನಾಡದೇ ಹೋಗುವಂತಹ ಪರಿಸ್ಥಿತಿ ಎದುರಾಗುತ್ತದೆ. ನಾವು ಮೂವರು ಗೆಳೆಯರ ಕತೆ ಕೂಡ ಹೀಗೇ ಆಗಿತ್ತು. ಒಂದು ಹಂತದಲ್ಲಿ ಪ್ರತೀದಿನ ಹೊಡೆದಾಡುತ್ತಾ ಇದ್ದವರು ಆಮೇಲೆ ಇದ್ದಕ್ಕಿದ್ದಂತೆ ಒಂದು ದಿನ ಬೆಳಿಗ್ಗೆ ಎದ್ದು ಬೇರೆ ಬೇರೆ ಜಾಗಕ್ಕೆ ಸ್ಥಳಾಂತರಗೊಂಡೆವು. ಒನ್‌ ಫೈನ್‌ ಡೇ ಮೂರು ಜನ ಒಟ್ಟು ಸೇರುವುದು ಎಂದು ನಿರ್ಧಾರವಾಯಿತು. ನಮ್ಮದಲ್ಲ ಎಂದು ಮೂರು ದಿನ ಎತ್ತಿಟ್ಟುಕೊಂಡೆವು.

ಎಲ್ಲಿ ಹೋಗಬೇಕು, ಎಲ್ಲಿ ಉಳಿದುಕೊಳ್ಳಬೇಕು ಎಂಬಿತ್ಯಾದಿ ಯಾವ ಆಲೋಚನೆಗಳೂ ಇಲ್ಲದೆ ಬೆಂಗಳೂರಿನಿಂದ ಮೈಸೂರು ರಸ್ತೆಗೆ ಇಳಿದಾಗ ಸೂರ್ಯ ಮೇಲೆ ಬಂದು ತುಂಬಾ ಹೊತ್ತಾಗಿತ್ತು. ದಾರಿಯಲ್ಲಿ ಹೋಗ್ತಾ ಹೋಗ್ತಾ ಊಟಿ ಕಡೆ ಹೋಗೋಣ ಎಂದು ಒಬ್ಬ ಹೇಳಿದ. ಯಾರಿಗೂ ಆಕ್ಷೇಪಣೆ ಇರಲಿಲ್ಲ. ಬಂಡೀಪುರ ಮಾರ್ಗವಾಗಿ ಸಾಗುತ್ತಿದ್ದರೆ ಧಾರಾಕಾರ ಮಳೆ. ಮಧುಮಲೈ ದಾರಿಯಲ್ಲಿ ಅಕ್ಕಪಕ್ಕ ಜಿಂಕೆಗಳು,ಆನೆಗಳು ಸ್ವಾಗತ ಕೋರಿದವು. ಹಾಗೂಹೀಗೂ ಊಟಿ ತಲುಪುವಷ್ಟರಲ್ಲಿ ಸಂಜೆಯಾಗಿತ್ತು. ಚಳಿ ಅಂದ್ರೆ ಚಳಿ. ದಾರಿಯಲ್ಲಿ ಸಿಕ್ಕ ಅಂಗಡಿಯಲ್ಲಿ 30 ರೂಪಾಯಿಗೆ ಮಂದು ಮಂಕಿ ಕ್ಯಾಪ್‌ ತೆಗೆದುಕೊಂಡು ಅಲ್ಲಿ ಇಲ್ಲಿ ಸುತ್ತಾಡಿ ಯಾವುದೋ ಹೋಟೆಲ್‌ನಲ್ಲಿ ರೂಮ್‌ ಮಾಡಿದೆವು. ಊಟಿ ಅಂದಮೇಲೆ ಬೊಟಾನಿಕಲ್‌ ಗಾರ್ಡನ್‌, ಟಾಯ್‌ ಟ್ರೈನ್‌ ಇದ್ದಿದ್ದೇ. ಟಾಯ್‌ ಟ್ರೈನಲ್ಲಿ ಕೂನೂರ್‌ಗೆ ಹೋಗಿ ಇಳಿದ ತಕ್ಷಣ ಒಬ್ಬ ಆಟೋರಾಜ ಬಂದ. ಅವನ ಬಳಿ ಹೆಂಗ್ಹೆಂಗೋ ತಮಿಳಲ್ಲಿ ಮಾತನಾಡಿ ಸಾವಿರ ರೂಪಾಯಿಗೆ ಆ ಊರು ಸುತ್ತಾಡಿಸಿ ಮತ್ತೆ ಉದಗಮಂಡಲಂಗೆ ಬಿಡಬೇಕು ಅಂತ ಒಪ್ಪಿಸಲಾಯಿತು. ನಮ್ಮ ಮಾತು ಅವನಿಗೆ ಅರ್ಥವಾಯಿತೋ ಅಥವಾ ಅರ್ಥವಾದಂತೆ ನಟಿಸಿದನೋ ಗೊತ್ತಿಲ್ಲ.

Travel Plan: ಪ್ರವಾಸಕ್ಕೆ ಹೋಗ್ತೀರಾ? ಈ ತಪ್ಪುಗಳನ್ನ ಮಾಡ್ಲೇಬೇಡಿ

ಅಲ್ಲಿನ ಟೀ ಎಸ್ಟೇಟ್‌ಗಳಲ್ಲಿ ಓಡಾಡುವುದೇ ಒಂದು ಖುಷಿ. ಮಂಜು ಹಾರುತ್ತಿರುವ ಹಾದಿಬೀದಿಯಲ್ಲಿ ಟೀ ಕುಡಿಯುತ್ತಿದ್ದರೆ ಬೆಂಗಳೂರೆಲ್ಲವೂ ಮರೆತುಹೋಯಿತು. ಅರ್ಧಂಬರ್ಧ ತಮಿಳು, ಫಿಲ್ಟರ್‌ ಇಲ್ಲದ ಮಾತು, ಪರಸ್ಪರ ಹೊಡೆದಾಟ ನಮ್ಮನ್ನು ಕೆಲವು ವರ್ಷ ಹಿಂದಕ್ಕೆ ಕರೆದೊಯ್ದಿತ್ತು. ಅದೇ ಸಂಭ್ರಮದಲ್ಲಿ ಕೂನೂರು ಸುತ್ತಾಡಿಕೊಂಡು ಬಂದೆವು. ಆಟೋದವನು ನಗುತ್ತಲೇ ಒಣಕ್ಕಂ ಎಂದ. ಆಗಲೇ ಮತ್ತೊಬ್ಬ ಅಲೆಪ್ಪಿ ಹೋಗೋಣ ಎಂದು ಪೀಠಿಕೆ ಹಾಕಿದ. ದಾರಿ ಯಾವುದು ಗೊತ್ತಿಲ್ಲ, ಅಲ್ಲಿ ಉಳಿಯುವುದು ಹೇಗೆ ತಿಳಿದಿಲ್ಲ. ಉದಗಮಂಡಲಂ ರೈಲ್ವೇ ಸ್ಟೇಷನ್‌ಗೆ ಹೋಗಿ ಅಲ್ಲಿ ನಿಲ್ಲಿಸಿದ್ದ ಕಾರು ಹತ್ತಿ ಅಲೆಪ್ಪಿ ಕಡೆಗೆ ಹೊರಟು ಬಿಟ್ಟೆವು.

ಆ ದಾರಿಯಲ್ಲೊಂದು ಘಾಟ್‌. ಘಾಟ್‌ ಆರಂಭಿಸುತ್ತಿರುವಂತೆಯೇ ಕತ್ತಲು ಆವರಿಸಿತ್ತು. ಲಾರಿಗಳು, ಬಸ್ಸುಗಳು ಅಬ್ಬರಿಸುತ್ತಿದ್ದವು. ತಮಿಳುನಾಡು ಬೇರೆ, ಯಾರ ಬಾಯಿಗೂ ಸಿಕ್ಕಿಬೀಳುವ ಧೈರ್ಯ ಇರಲಿಲ್ಲ. ಸುಮಾರು 320 ಕಿಮೀ ಕ್ರಮಿಸಿ ಅಲೆಪ್ಪಿಯ ದಾರಿ ತಲುಪಿದಾಗ ರಾತ್ರಿ 2 ಗಂಟೆ ದಾಟಿತ್ತು. ಹೈವೇಯಲ್ಲಿ ಸಿಕ್ಕ ಒಂದು ಹೋಟೆಲಲ್ಲಿ ಕಾರು ನಿಲ್ಲಿಸಿ ರಿಸೆಪ್ಷನ್‌ಗೆ ಹೋದರೆ ಅರ್ಧ ನಿದ್ದೆಯಲ್ಲಿದ್ದವ ಎದ್ದು ಬಂದ. ಒಲ್ಲದ ಮನಸ್ಸಿನಿಂದ ರೂಮು ತೋರಿಸಿದ. ನಾವು ಜುಗಾಡ್‌ ಮಾಡಲು ಕಡಿಮೆ ಬೆಲೆಗೆ ರೂಮು ಕೇಳುತ್ತಿದ್ದಂತೆ ಅವನು ರೂಮು ಖಾಲಿ ಇಲ್ಲ ಎಂದ. ಬೇರೆ ಊರಿಗೆ ಬಂದಾಗ ಅವಮಾನಗಳನ್ನು ಮನಸ್ಸಲ್ಲಿ ಇಟ್ಟುಕೊಳ್ಳಬಾರದು ಎಂದು ನಮ್ಮನ್ನು ನಾವೇ ಸಂತೈಸಿಕೊಂಡು ಅಲ್ಲಿಂದ ವಾಪಸ್‌ ಬಂದೆವು. ಮತ್ತೆರಡು ಹೋಟೆಲ್‌ ನೋಡಿದಾಗಲೂ ಇದೇ ಕತೆ. ಹೋಟೆಲ್‌ ಸಹವಾಸ ಬೇಡ ಅಂತ ಯಾವುದೋ ಪೆಟ್ರೋಲ್‌ ಬಂಕಲ್ಲಿ ಕಾರು ನಿಲ್ಲಿಸಿ ಮಲಗುವ ಪ್ಲಾನ್‌ ಮಾಡಿದೆವು. ದೇವರು ದೊಡ್ಡವನು. ಅಲ್ಲಿದ್ದ ಬಂಕ್‌ ಕಾಯುತ್ತಿದ್ದ ಸೆಕ್ಯುರಿಟಿ ನಮ್ಮನ್ನು ಅಲ್ಲಿಂದಲೂ ಓಡಿಸಿದ.

Travel Tips in Kannada: ಏಕಾಂಗಿ ಪ್ರಯಾಣ ಇಷ್ಟನಾ? ಕರ್ನಾಟಕದ ಈ ಸ್ಥಳಗಳಿಗೆ ಹೋಗಿ

ಮುಂದೇನು ಎಂದು ತಿಳಿಯದೆ ಅಡ್ಡಾಡುತ್ತಿರಬೇಕಾದರೆ ಯಾವುದೋ ಒಂದು ತಿರುವಲ್ಲಿ ಒಬ್ಬ ಬೈಕಿನವನು ಅಡ್ಡ ಹಾಕಿದ. ಬೈಕಲ್ಲಿ ಇಬ್ಬರು ಇದ್ದರು. ಹೋಟೆಲ್‌ ಬೇಕಾಗಿತ್ತಾ ಎಂದು ಕೇಳಿದ. ಹೌದು ಎಂದ ತಕ್ಷಣ ನಮ್ಮದು ಹೋಮ್‌ಸ್ಟೇ ಉಂಟು ಬನ್ನಿ ಎಂದವನೇ ಬೈಕ್‌ ಸ್ಟಾರ್ಚ್‌ ಮಾಡಿಕೊಂಡು ಹೊರಟೇಬಿಟ್ಟ. ನಮಗೋ ಸ್ವಲ್ಪ ಅಳುಕು. ಅಲ್ಲಿಗೆ ಹೋದ ಮೇಲೆ ನಮ್ಮನ್ನು ಹೊಡೆದು ಹಾಕಿ ಇದ್ದ ಚೂರುಪಾರು ದುಡ್ಡು, ಮೊಬೈಲು ಕಿತ್ತುಕೊಂಡು ಹೋದರೆ ಅಂತ ಆತಂಕ. ಒಂದು ಕೈ ನೋಡೇಬಿಡೋಣ ಎಂದು ಹೊರಟೆವು. ಹಿಂದಿನ ಸೀಟಲ್ಲಿದ್ದವ ಎಕ್ಸರ್‌ಸೈಸ್‌ ಎಲ್ಲ ಮಾಡಿಕೊಂಡು ಫೈಟಿಂಗಿಗೆ ರೆಡಿಯಾದ. ಆ ಬೈಕಿನವನು ಯಾವ್ಯಾವುದೋ ಗಲ್ಲಿಗಳಲ್ಲಿ ಕರೆದುಕೊಂಡು ಹೋದ. ಒಂದು ವೇಳೆ ಹೆಚ್ಚು ಕಡಿಮೆಯಾಗಿದ್ದರೆ ಅಲ್ಲಿಂದ ವಾಪಸ್‌ ಓಡಿ ಬರುವ ದಾರಿ ಸತ್ಯವಾಗಲೂ ನಮಗೆ ಗೊತ್ತಾಗುತ್ತಿರಲಿಲ್ಲ. ಆದರೆ ಅವನು ಸತ್ಯವನ್ನೇ ಹೇಳಿದ್ದ. ಅಲ್ಲೊಂದು ಹೋಮ್‌ಸ್ಟೇ ಇತ್ತು. ಹೋಟೆಲ್‌ ಮತ್ತು ಮರುದಿನ ಬೋಟ್‌ ಸವಾರಿಗೆ ಅಂತ ರು.6000 ಕೇಳಿದ. ನಾವು ಹೆಚ್ಚು ಕಡಿಮೆ ಮಾಡಿಸಿ ರು.5000ಕ್ಕೆ ಒಪ್ಪಿಸಿ ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡೆವು.

ಬೆಳಿಗ್ಗೆ ಎದ್ದಾಗ ಅವನು ತನ್ನ ಬೈಕಲ್ಲಿ ಕೂಲಿಂಗ್‌ ಧರಿಸಿ ರೆಡಿಯಾಗಿದ್ದ. ಅಲೆಪ್ಪಿಯಲ್ಲಿ ಬೋಟ್‌ಗಳು ನಮ್ಮೂರಲ್ಲಿ ರಿಕ್ಷಾ ನಿಂತಂತೆ ಸಾಲು ನಿಂತಿರುತ್ತಿವೆ. ಬಗೆ ಬಗೆ ಬೋಟ್‌ಗಳು. ಅಲ್ಲೊಂದು ಬೋಟ್‌ ಹತ್ತಿರಕ್ಕೆ ಕರೆದುಕೊಂಡು ಹೋಗಿ ಬಿಟ್ಟ. ನಾಲ್ಕು ಗಂಟೆ ನೀರಿಂದ ಆಚೆ ಬರೋಹಾಗಿಲ್ಲ. ನಾವು ಬಲಗಾಲಿಟ್ಟು ಒಳಗೆ ಹೋದೆವು. ಅವನು ಅಲೆಪ್ಪಿಯ ಹಿನ್ನೀರಿನಲ್ಲಿ ಸುತ್ತಾಡಿಸಿದ. ನಮ್ಮ ದುಡ್ಡಲ್ಲಿ ತಿಂಡಿ ಕೊಡಿಸಿದ. ಅಲೆಪ್ಪಿಯ ಹಿನ್ನೀರು ಬದುಕನ್ನು ಪರಿಚಯಿಸಿದ. ನಮ್ಮಲ್ಲಿ ಬಸ್ಸುಗಳಿರುವಂತೆ ಅಲ್ಲಿ ಬೋಟ್‌ ಓಡಾಡುವುದನ್ನು, ಬೋಟ್‌ ಸ್ಟಾಂಡ್‌ಗಳನ್ನು ತೋರಿಸಿದ. ಫ್ರೆಶ್‌ ಕಳ್ಳು ಸಿಗುವ ಜಾಗಕ್ಕೂ ಕರೆದುಕೊಂಡು ಹೋದ. ನಾವು ಆ ಜಾಗವನ್ನೆಲ್ಲಾ ನೋಡಿ ಪುಳಕಿತರಾಗಿ ನೀವು ದಿನಕ್ಕೆ ಎಷ್ಟುತೆಗೆದುಕೊಳ್ಳುತ್ತೀರಿ ಎಂದು ಕೇಳಿದೆವು. ಅವನು ನೀವು ಮೂರು ಜನಕ್ಕೆ ರು.2500 ತೆಗೆದುಕೊಳ್ಳುತ್ತಿದ್ದೆ ಎಂದ. ರಾತ್ರಿ ಸಿಕ್ಕಿದ ಅಪರಿಚಿತ ಮನುಷ್ಯ ನಮಗೆ ಸಣ್ಣದೊಂದು ಟೋಪಿ ಹಾಕಿ ಹೋಗಿದ್ದು ಆಗ ಅಂದಾಜಾಯಿತು.

ಅಲೆಪ್ಪಿಯ ಸಮುದ್ರ ತೀರ, ಒಳನಾಡು ಬೀದಿಗಳು, ಕೊಚ್ಚಿಯ ಫಿಶಿಂಗ್‌ ನೆಟ್‌ಗಳು, ಕೊಚ್ಚಿ ಫೋರ್ಟು, ಕುಂಬಳಂಗಿ ಹಾದಿ ಎಲ್ಲವನ್ನೂ ಕಣ್ಣುತುಂಬಿ ಮನಸ್ಸು ತುಂಬುವಷ್ಟರಲ್ಲಿ ರಾತ್ರಿಯಾಗಿತ್ತು. ಅಲ್ಲಿಂದ ಬೆಂಗಳೂರಿಗೆ ಹೊರಟೆವು. ಬೆಳಗಿನ ಜಾವ ತಮಿಳುನಾಡು ಹೈವೆಯಲ್ಲಿ ಒಂದು ಹೋಟೆಲ್‌ಗೆ ಹೋದರೆ ರೂಮು ಸಿಗಲಿಲ್ಲ. ಹೊರಗೆ ಪಾರ್ಕ್ ಮಾಡಿ ನಿದ್ದೆ ಮಾಡುವ ಎಂದುಕೊಂಡರೆ ಅಲ್ಲಿಯೂ ಸೆಕ್ಯುರಿಟಿ ಬಿಡಲಿಲ್ಲ. ತಮಿಳಲ್ಲಿ ಸರಿಯಾಗಿ ಬೈದ. ನಾವೂ ತುಳುವಲ್ಲಿ ಅವನಿಗೆ ಮರ್ಮಾಘಾತ ಆಗುವಂತೆ ಬೈದೆವು. ಕೊಂಚ ದೂರ ಬಂದು ಯಾವುದೋ ಪೆಟ್ರೋಲ್‌ ಬಂಕಿನಲ್ಲಿ ಕಾರು ಹಾಕಿ ನಿದ್ದೆ ಮಾಡಿ ಬೆಳಿಗ್ಗೆ ಬೆಂಗಳೂರು ದಾರಿ ಹಿಡಿದೆವು.

ನಮ್ಮದಲ್ಲ ಎಂದು ಇಟ್ಟುಕೊಂಡಿದ್ದ ಈ ಮೂರು ದಿನಗಳು ವಾಪಸ್‌ ಬರುವ ಹೊತ್ತಿಗೆ ನಮ್ಮದು ಮಾತ್ರ ಆಗಿ ಉಳಿದವು. ಕೆಲವೊಮ್ಮೆ ದಾರಿ ತಪ್ಪಿದಾಗಲೇ ಸರಿ ದಾರಿ ಸಿಗುತ್ತವೆ.

Latest Videos
Follow Us:
Download App:
  • android
  • ios