Asianet Suvarna News Asianet Suvarna News

Bhavana Nagaiah ನೆಮ್ಮದಿಯ ಕ್ಷಣ ವಿಶ್ವನಾಥನ ದರ್ಶನ

ಒಮ್ಮೆ ಕಾಶಿ ನೋಡಿ ಬರಬೇಕು ಅನ್ನುವುದು ಅನೇಕರ ಮಹದಾಸೆ. ಅದೇ ಆಸೆ ಹೊಂದಿದ್ದ ಸುವರ್ಣ ನ್ಯೂಸ್ ಆಂಕರ್ ಭಾವನಾ ನಾಗಯ್ಯ ಕಾಶಿ ಪ್ರವಾಸ ಹೊರಟ ಕಥೆ ಇದು. ಅವರ ಈ ಯಾತ್ರೆಯ ಹಿನ್ನಲೆಯಲ್ಲಿ ತಮ್ಮ ತಂದೆಯನ್ನು ಮೊದಲ ಬಾರಿ ವಿಮಾನಯಾನ ಮಾಡಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರ ಕಾಶೀಯಾತ್ರೆಯ ಮೊದಲ ಭಾಗ ಇಲ್ಲಿದೆ.

Asianet Suvarna News anchor Bhavana Nagaiah pens down first trip to Kashi vcs
Author
First Published Sep 25, 2022, 1:10 PM IST

ಭಾವನಾ ನಾಗಯ್ಯ

ವರುಷಗಳ ಕಾಲ ನನ್ನ ಇನ್ನಿಲ್ಲದಂತೆ ಸೆಳೆದಿದ್ದ ಬೈರಾಗಿ ಶಿವನ ಕ್ಷೇತ್ರ ಕಾಶಿ ನೆಲದ ಮೇಲೆ ಅಡಿ ಇಟ್ಟಕ್ಷಣ ಮನಸ್ಸಿನಲ್ಲಿ ಪುಳಕ. ಖುಷಿಗೆ ಒಮ್ಮೆ ಬಾಗಿ ನೆಲ ಮುಟ್ಟಿನಮಿಸಲೇ ಅನಿಸಿತು.

ಏರ್‌ಪೋರ್ಚ್‌ನಿಂದ ಹೊರಬರುತ್ತಿದ್ದಂತೆ ನಾ ಮುಂದು ತಾ ಮುಂದು ಅಂತ ಬಂದ ಲಗೇಜ್‌ ಟೀಂಗೆ ನಮಸ್ಕಾರ ಹೇಳಿ ಏರ್‌ಪೋರ್ಟಿನಲ್ಲಿ ಇದ್ದ ಸರ್ಕಾರಿ ಟ್ಯಾಕ್ಸಿ ಬುಕಿಂಗ್‌ ಸೆಂಟರ್‌ನಲ್ಲಿ ಟ್ಯಾಕ್ಸಿ ಬುಕ್‌ ಮಾಡಿ ಮೊದಲೇ ನಿಗದಿಯಾಗಿದ್ದ ಜಂಗಮವಾಡಿ ಮಠದತ್ತ ಹೊರಟೆವು. ವಾರಾಣಸಿ ಏರ್‌ಪೋರ್ಚ್‌ನಿಂದ ನಗರ ತುಂಬಾ ದೂರ ಏನಲ್ಲ. ವಾರಾಣಸಿ ನಗರ ಪ್ರವೇಶ ಆಗುತ್ತಿದ್ದಂತೆ ಕಿರಿದಾದ ದಾರಿಗಳು. ಕುಂಯ್ಗುಡುತ್ತಾ ಸಾಗುತ್ತಿದ್ದ ವಾಹನಗಳು. ಥೇಟ್‌ ನಮ್ಮ ಅವೆನ್ಯೂ ರಸ್ತೆ ಇದ್ದಂತೆ. ಮೊದಲು ಸಿಕ್ಕಿದ್ದೇ ಸುಣ್ಣ ಬಣ್ಣದ ಮುಖ ನೋಡಿ ಶತಮಾನ ಕಳೆದುಹೋಗಿರುವ, ಆದರೂ ತನ್ನ ಗತಕಾಲದ ಗತ್ತು ಕೂಗಿ ಹೇಳೋ ಹಳೇ ಬೃಹತ್‌ ಕಟ್ಟಡಗಳು. 3000 ವರ್ಷಗಳ ಹಿಂದಿನ ನಗರ ವಾರಾಣಸಿ ಎಂದು ಓದಿದ ಸಾಲುಗಳು ಕಣ್ಣಮುಂದೆ ಹಾದು ಹೋಯಿತು. ಮತ್ತೊಂದು ಕಡೆ ಅಪ್ಪ ನಾಲ್ಕು ವರ್ಷದ ಹಿಂದೆ ಕಂಡ ವಾರಾಣಸಿಯನ್ನ ಮೆಲುಕು ಹಾಕುತ್ತಾ ಮೊದಲ ಬಾರಿಗೆ ಕಾಶಿಗೆ ಬಂದ ಮಗಳಿಗೆ ಉತ್ಸಾಹದಿಂದ ನೆನಪು ಮಾಡಿಕೊಂಡು ಇದು ಆ ಘಾಟ್‌ ಗೆ ಹೋಗುವ ದಾರಿ, ಇದು ದೇವಾಲಯಕ್ಕೆ ಹೋಗುವ ದಾರಿ ಅಂತ ವಿವರಿಸುತ್ತಿದ್ದರು. ಸುಮಾರು ರಾತ್ರಿ 8 ಗಂಟೆಗೆ ದಶಾಶ್ವಮೇಧ ಘಾಟ್‌ಗೆ ಕೂಗಳತೆ ದೂರದಲ್ಲಿರುವ ಜಂಗಮವಾಡಿ ಮಠಕ್ಕೆ ಬಂದು ತಲುಪಿದೆವು. ಮಠದ ಒಳಕ್ಕೆ ಕಾಲಿಡುತ್ತಿದ್ದಂತೆ ಜನವೋ ಜನ. ಮಠದ ಆವರಣದಲ್ಲೇ ಜಮಖಾನ ಹಾಕಿ ಬಹಳಷ್ಟುಮಂದಿ ಮಲಗಿದ್ದರು. ಕೆಲವರು ರೂಂಗಾಗಿ ಕ್ಯೂನಲ್ಲಿದ್ದರು. ಗುರುಗಳಿಗೆ ಕಾಲ್‌ ಮಾಡಿ ಕಾಯುತ್ತಾ ನಿಂತೆವು.

Asianet Suvarna News anchor Bhavana Nagaiah pens down first trip to Kashi vcs

ಮಠದ ಅನುಭವ ಮತ್ತು ಕಾಯುವ ಅಭ್ಯಾಸವೇ ಇಲ್ಲದ ನಾನು ಸುಬ್ಬು ಬೇರೆ ಕಡೆ ಹೋಗೋಣ ಅಂತ ಮಾತಾಡಿಕೊಳ್ಳುತ್ತಿದ್ದೆವು. ಬೇರೆಲ್ಲೋ ವ್ಯಾಪಾರಕ್ಕಾಗಿ ಕಟ್ಟಿದ ನಾಲ್ಕು ಗೋಡೆಗಳಲ್ಲಿ ಕಾಣಲಾಗದ ಭಕ್ತಿ ಭಾವ ಮಠದ ಅಂಗಳದಲ್ಲಿ ಕಾಣಬಹುದೆಂಬ ಕಲ್ಪನೆ ನಮಗೆ ಇರಲಿಲ್ಲ. ಅಷ್ಟರಲ್ಲಿ ಅಪ್ಪ ಬೆನ್ನು ತಟ್ಟಿಯಾರನ್ನೋ ತೋರಿಸಿದರು. ಮಠದ ಹೆಬ್ಬಾಗಿಲ ಕಟ್ಟೆಮೇಲೆ ಕುಳಿದಿದ್ದ ಒಬ್ಬಾಕೆ ನನ್ನ ಕಿವಿಯಲ್ಲಿ ನೇತಾಡುತ್ತಿದ್ದ ಕೆಜಿ ತೂಕದ ಜುಮಕ ಕಂಡು ಬಿದ್ದು ಬಿದ್ದು ನಗ್ತಾ ಇದ್ರು. ಈ ಹುಡುಗಿಯ ಕಿವಿ ಇದೋ ಈಗ ಹರಿದು ಬಿದ್ದೀತು ಅಂತ ಅನ್ನಿಸಿರಬೇಕು. ನಾನು ಪೆಚ್ಚಾಗಿ ನಕ್ಕು ಸುಮ್ಮನಾದೆ.

ಕಾಶಿ ಧಗೆ ನಮ್ಮ ಬೆವರಿಳಿಸುತ್ತಿತ್ತು. ರೂಮಿಗೆ ಓಡಿ ಎಸಿ ಹಾಕಿಕೊಂಡೆವು. ರಾತ್ರಿ ಮಠದಲ್ಲೇ ಊಟ. ಮಠದ ಶಿವಲಿಂಗು ನಮಗೆ ಶ್ರದ್ಧೆಯಿಂದ ಊಟ ಬಡಿಸಿದರು. ಪ್ರತೀ ತುತ್ತು ಪರಮಾನ್ನ.. ಹೊಟ್ಟೆತುಂಬಾ ತಿಂದು ಒಂದು ಸುತ್ತು ಹಾಕಿ ಬರೋಣ ಅಂತ ದಶಾಶ್ವಮೇಧ ಘಾಟ್‌ ಕಡೆ ಹೊರಟೆವು. ಘಾಟ್‌ ನೋಡಿ ಬೆಚ್ಚಿ ಬಿದ್ದೆವು. ಅಪ್ಪ ಅಯ್ಯೋ ಅಂದಿದ್ದರು. ವರ್ಷ ಪೂರ್ತಿ ಪಾಪ ತೊಳೆಯುವ ಗಂಗೆ ಮಳೆಗಾಲದಲ್ಲಿ ತನ್ನ ಕೋಪ ತೋರಿದಂತಿತ್ತು. ಪ್ರವಾಹದಲ್ಲಿ ಗಂಗೆ ತಂದ ಮಣ್ಣಿನ ಗುಡ್ಡಗಳಲ್ಲಿ ಘಾಟ್‌ ಸಂಪೂರ್ಣ ಮುಚ್ಚಿತ್ತು. ಗಂಗಾ ತೀರದ ಎಲ್ಲಾ ಘಾಟ್‌ ಪರಿಸ್ಥಿತಿಯೂ ಇದೇ ಆಗಿತ್ತು. ಪ್ರತಿನಿತ್ಯ ಕಣ್ಣು ಕೋರೈಸುವ ಗಂಗಾರತಿ ಕಾಣುವ ಘಾಟ್‌ ಇದೇನಾ ಅನ್ನೋ ಹಾಗಾಗಿತ್ತು. ಆ ರಾಡಿ ನೀರಲ್ಲೇ ಜನ ಸ್ನಾನಕ್ಕೆ ಇಳಿದಿದ್ದರು. ನನಗೆ ರಾಡಿಯಾಗಿ ಕಂಡಿದ್ದು ಅಲ್ಲಿ ಮೀಯುತ್ತಿದ್ದವರಿಗೆ ಪರಮ ಪವಿತ್ರ ಗಂಗೆ. ಅಪ್ಪನ ಮನಸ್ಸು ಗಂಗಾ ಸ್ನಾನಕ್ಕೆ ಹಾತೊರೆಯುತ್ತಿತ್ತು. ಮೊದಲೇ ಸೋರಿಯಾಸಿಸ್‌ ಮತ್ತು ಸೆಲ್ಯುಲೈಟಿಸ್‌ ಸಮಸ್ಯೆ ಅಪ್ಪನನ್ನು ಇನ್ನಿಲ್ಲದಂತೆ ಕಾಡುತ್ತಿತ್ತು. ಅದರ ಮೇಲೆ ನಮ್ಮಪ್ಪ ತುಂಬಾ ಸ್ವೀಟ್‌. ಹಾಗಾಗಿ ಅವರಿಗೆ ಸಿಹಿ ನಿಷಿದ್ಧ..

ಅಪ್ಪ ನೀರಿಗೆ ಇಳಿತೀನಿ ಅಂತ ಸನ್ನೆ ಮಾಡಿದರು. ನಾನು ಮುಖ ಗಂಟಿಕ್ಕಿ ನೋ ವೇ ಚಾನ್ಸೇ ಇಲ್ಲ ಅಂದುಬಿಟ್ಟೆ. ಅಪ್ಪನ ಮುಖ ಚಿಕ್ಕದಾಯಿತು. ಆರೋಗ್ಯ ವಿಷಯದಲ್ಲಿ ನಾನು ಬಗ್ಗುವವಳಲ್ಲ. ನಾನೇ ಹೋಗಿ ನೀರು ತಂದು ಪ್ರೋಕ್ಷಣೆ ಮಾಡಿದೆ. ಮರುದಿನ ದರ್ಶನಕ್ಕೆ ಹೋಗುವ ಪ್ಲಾನ್‌ ಇತ್ತು. ಆದರೆ ಅಪ್ಪ ಕೇಳಬೇಕಲ್ಲ. ವಿಶ್ವನಾಥ ಇಷ್ಟುಹತ್ತಿರದಲ್ಲಿದ್ದಾಗ ಮನಸ್ಸನ್ನ ತಡೆಯೋದು ಹೇಗೆ. ನುಗ್ಗಿದರು ಘಾಟ್‌ಗೆ ಹತ್ತಿರದಲ್ಲೇ ಕಂಡ ಶಂಕರಾಚಾರ್ಯರ ದ್ವಾರಕ್ಕೆ. ಏನ್‌ ಹೇಳಿದರೂ ಕೇಳಲ್ವಲ್ಲಾ ಅಂತ ಸಿಡಿಸಿಡಿ ಅಂದುಕೊಂಡೆ ಹಿಂಬಾಲಿಸಿದೆ. ಕಿರಿದಾದ ಗಲ್ಲಿಗಳು. ಮುಚ್ಚಿದ ಅಂಗಡಿಗಳ ಆ ಗಲ್ಲಿಯಲ್ಲಿ ಶುಚಿತ್ವದ ಗಂಧ ಗಾಳಿ ಇಲ್ಲ. ಅಲ್ಲಲ್ಲೇ ಪಾನ್‌ ಉಗುಳಿದ್ದ ಕಲೆಗಳು, ಪೊರಕೆ ಹಿಡಿದು ಗುಡಿಸುತ್ತಿದ್ದರು, ನೀರು ಹರಿಯುತ್ತಿತ್ತು. ಶಿವ ಶಿವ ಇದ್ಯಾವ ದಾರಿ ಅಂದೆ. ಅಪ್ಪ ಇದೇ ಕಾಶಿ ವಿಶ್ವನಾಥನ ಗುಡಿಗೆ ದಾರಿ ಅಂದರು.

Bhavana Nagaiah ಅಪ್ಪನ ಜೊತೆ ಹೀಗೋಂದು ಕಾಶೀಯಾತ್ರೆ

ಸುರುಳಿ ಸುತ್ತಿ ಸುತ್ತಿ ಅಂತೂ ದೇವಾಲಯ ತಲುಪಿದೆವು. ಸುಂದರ ಅಂಗಳ. ಬಲಬದಿಯಲ್ಲಿ ಹೊಸದಾಗಿ ನಿರ್ಮಾಣವಾದ ವಿಶಾಲ ಗಂಗಾ ಕಾರಿಡಾರ್‌ ಕರೆಯುತ್ತಿತ್ತು. ಎಡಭಾಗದಲ್ಲಿದ್ದ ದೇಗುಲದ ಹೆಬ್ಬಾಗಿಲು ದಾಟಿ ಬಂದೆವು. ವಿಶಾಲ ಒಳಾಂಗಣದಲ್ಲಿ ಅದೋ ವಿಶ್ವನಾಥನ ಗರ್ಭಗುಡಿ. ಮನಸ್ಸಿನಲ್ಲಿ ವಿವರಿಸಲಾಗದ ಖುಷಿ. ನನಗೆ ಇದು ಹೊಸ ಪ್ರಪಂಚ. ನನ್ನ ಇಷ್ಟದೈವ ಕೂತಿರುವ ಜಾಗ. ತುಂಬಾ ಇಷ್ಟಪಟ್ಟವರು ಮೊದಲ ಬಾರಿ ಎದುರಿಗೆ ಬಂದಾಗ ಆಗುತ್ತಲ್ಲ ಒಂದು ಸಹಜ ಹಿಂಜರಿಕೆ, ಬಹುಶಃ ಆ ಹಿಂಜರಿಕೆ ಕಾಡಿತ್ತೇನೋ.

Asianet Suvarna News anchor Bhavana Nagaiah pens down first trip to Kashi vcs

ಏಕ್‌ದಮ್‌ ದರ್ಶನಕ್ಕೆ ಮುಂದಾಗಲಿಲ್ಲ ಮನಸ್ಸು. ಹಿಂಜರಿಕೆ. ನಿಟ್ಟುಸಿರು ಬಿಟ್ಟು ಮೊದಲು ದೇವಾಲಯದ ಇಂಚಿಂಚೂ ನೋಡಲಾರಂಭಿಸಿದೆ. ನಿರ್ಮಾಣದ ಸೌಂದರ್ಯವನ್ನು ಸವಿಯೋದಕ್ಕೆ ಶುರುಮಾಡಿದೆ. ವಿಶಾಲ ಪ್ರಾಂಗಣ, ಸ್ವರ್ಣ ಗೋಪುರ, ನಂದಿ, ಬಾವಿ, ಮಸೀದಿ ಎಲ್ಲವನ್ನೂ ಕಣ್ತುಂಬಿಕೊಳ್ಳುತ್ತಾ ಸುಬ್ಬಣ್ಣನಿಗೆ ವಿವರಿಸುತ್ತಾ ನಿಂತೆ. ಮತ್ತೊಂದು ಕಡೆ ಅಪ್ಪನಿಗೆ ಅಚ್ಚರಿಯೋ ಅಚ್ಚರಿ. ಶುಚಿತ್ವವನ್ನೇ ಕಾಣದ ಕೊಳಚೆ ನೀರು ಹರಿಯುವ ಗಲ್ಲಿಯಲ್ಲೇ ವಿಶ್ವನಾಥನ ದರ್ಶನ ಮಾಡಿದ್ದ ಅಪ್ಪ ಅಂದಿನ ಕಾಶಿ ವಿಶ್ವನಾಥನ ಸ್ಥಿತಿ ಕಂಡು ನೊಂದುಕೊಂಡಿದ್ದರು. ಈಗ ಈ ವೈಭವದ ಕಾಶಿ ನೋಡಿ ಅಪ್ಪನಿಗೆ ಕೆಲವು ಕ್ಷಣ ಮಾತೇ ಹೊರಡಲಿಲ್ಲ. ಅದೊಂಥರಾ ಹೆಮ್ಮೆ ಮತ್ತು ತೃಪ್ತಿಯ ಮಿಶ್ರಣ.

‘ಹರ ಹರ ಮಹಾದೇವ..’ ಘೋಷಣೆ ಕಿವಿಗೆ ರಾಚಿ ನನ್ನ ನರನಾಡಿಗಳಲ್ಲಿ ಮಾರ್ದನಿಸಿತು. ಸ್ವಲ್ಪ ಹೊತ್ತು ಸುಮ್ಮನೆ ನಿಂತೆವು. ಬಹುಶಃ ಆ ಘೋಷಣೆಗಳು ಮತ್ತು ಭಕ್ತಿಯ ನಡುವೆ ನಾವು ಕಳೆದುಹೋಗಿದ್ದೆವೆನೋ ಗೊತ್ತಿಲ್ಲ. ಮರುದಿನ ದರ್ಶನಕ್ಕೆ ಬುಕಿಂಗ್‌ ಆಗಿತ್ತು. ಹಿಂಜರಿಕೆಯೂ ಕಾಡಿತ್ತು. ಹಾಗಾಗಿ ದರ್ಶನಕ್ಕೆ ಮುಗಿಬೀಳದೆ ಕಿಕ್ಕಿರಿದ ಜನ ನೋಡಿ ಹೆದರಿ ನಿಂತಿದ್ದೆ. ‘ನಾಳೆ ದರ್ಶನ ಮಾಡೋಣ’ ಅಂದೆ. ಅಪ್ಪನಿಗೋ ಹೇಳಿಕೊಳ್ಳಲಾಗದ ಸಂಕಟ. ಇದೇನಿದು ಗುಡಿಯೊಳಕ್ಕೆ ಕಾಲಿಟ್ಟು ದರ್ಶನ ಬೇಡ ಅನ್ನೋದೇ? ಎಲ್ಲಾದರೂ ಉಂಟೇ.. ಸೋಮವಾರದ ದಿನ ನನ್ನ ಮಗಳಿಗೆ ಮನೆ ದೇವರ ದರ್ಶನ ಮಾಡಿಸಿಯೇ ಸಿದ್ಧ. ಆಗಿದ್ದಾಗಲಿ, ಅಬ್ಬಬ್ಬಾ ಅಂದ್ರೆ ಮಗಳು ಕೊಸರಾಡುತ್ತಾಳೆ. ಬೈಸಿಕೊಂಡರಾಯಿತು ಅಂತ ರೈಲಿನ ಬೋಗಿಗಳನ್ನು ಎಂಜಿನ್‌ ಎಳೆದೊಯ್ಯುವ ರೀತಿ ಕಿಕ್ಕಿರಿದ ಶಿವ ಭಕ್ತರ ನಡುವೆ ನಮ್ಮಿಬ್ಬರನ್ನು ನುಗ್ಗಿಸಿಕೊಂಡು ಎಳೆದೊಯ್ದರು ಅಪ್ಪ. ‘ನೋಡು, ನೋಡು, ಅಲ್ಲಿ..’ ಅಂತ ಕೈ ತೋರಿಸಿದರು. ಹರ ಹರ ಮಹಾದೇವ ಘೋಷಣೆಗಳ ನಡುವೆ ದರುಶನ ಕೊಟ್ಟಬಿಳಿ ಹೂಗಳಲ್ಲಿ ಮಿಂದೇಳುತ್ತಿದ್ದ ವಿಶ್ವನಾಥ!

Follow Us:
Download App:
  • android
  • ios