Bhavana Nagaiah ಅಪ್ಪನ ಜೊತೆ ಹೀಗೋಂದು ಕಾಶೀಯಾತ್ರೆ
ಒಮ್ಮೆ ಕಾಶಿ ನೋಡಿ ಬರಬೇಕು ಅನ್ನುವುದು ಅನೇಕರ ಮಹದಾಸೆ. ಅದೇ ಆಸೆ ಹೊಂದಿದ್ದ ಸುವರ್ಣ ನ್ಯೂಸ್ ಆಂಕರ್ ಭಾವನಾ ನಾಗಯ್ಯ ಕಾಶಿ ಪ್ರವಾಸ ಹೊರಟ ಕಥೆ ಇದು. ಅವರ ಈ ಯಾತ್ರೆಯ ಹಿನ್ನಲೆಯಲ್ಲಿ ತಮ್ಮ ತಂದೆಯನ್ನು ಮೊದಲ ಬಾರಿ ವಿಮಾನಯಾನ ಮಾಡಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರ ಕಾಶೀಯಾತ್ರೆಯ ಮೊದಲ ಭಾಗ ಇಲ್ಲಿದೆ.
ಭಾವನಾ ನಾಗಯ್ಯ
ನಾನು ಸಾಮಾನ್ಯವಾಗಿ ಬರೆಯೋ ಗೋಜಿಗೆ ಹೋಗೋದಿಲ್ಲ . ಅದೇನೋ.. ಬರವಣಿಗೆಗಿಂತ ಮಾತಿನಲ್ಲೇ ಹೆಚ್ಚು ತೃಪ್ತಿ.. ಆದರೆ ವಿಷಯಗಳು ಮನಸ್ಸಿಗೆ ಅತಿ ಹೆಚ್ಚು ಹತ್ತಿರವಾದಾಗ ಮನಸ್ಸು ಮೌನವಾಗಿ, ಭಾವನೆಗಳು ಬರವಣಿಗೆ ರೂಪ ಪಡೆಯುತ್ತವೆ. ಹೀಗೇ ಇತ್ತೀಚೆಗೆ ಮನಸ್ಸಿನ ಆಳಕ್ಕೆ ಹೊಕ್ಕು, ಬೇರೊಂದು ಲೋಕಕ್ಕೆ ಕರೆದೊಯ್ದಿದ್ದು ಕಾಶಿ..
ನಾನು ನಾಸ್ತಿಕಳಲ್ಲ.. ಹಾಗಂತ ದಿನ ಬೆಳಗಾಗುತ್ತಲೇ ದೇವರ ನಾಮ ಭಜನೆ ಮಾಡುವವಳೂ ಅಲ್ಲ.. ಮನಸ್ಸಿಗೆ ಅನ್ನಿಸಿದಾಗ ಶ್ರದ್ಧೆಯಿಂದ ಕೂಡಿದ ಒಂದು ದೀರ್ಘ ಪೂಜೆ, ದೇವಾಲಯದಲ್ಲಿ ಸಾವಿರ ಜನರ ನಡುವೆಯೂ ಏಕಾಂಗಿಯಾಗಿ ನಿಂತು ಒದ್ದೆಯಾದ ಕಣ್ಣಾಲಿಗಳೊಂದಿಗೆ ಸುಖ ದುಃಖಗಳಲ್ಲಿ ನೀ ನನ್ನ ಜೊತೆಗಿರು ಪರಮಾತ್ಮ ಅನ್ನೋರ ಸಾಲಿನವಳು. ಜಗತ್ತಿನಲ್ಲಿ ಮುಕ್ಕೋಟಿ ದೇವರಂತೆ. ಆದರೆ ನನ್ನ ಇಷ್ಟದೈವ ಮಾತ್ರ ಭೋಲಾ ಶಂಕರ. ಅತೀ ಆಚಾರ- ಆಡಂಬರವಿಲ್ಲದ ಬೈರಾಗಿ. ಹಾಗಾಗಿಯೇ ಶಂಕರನ ಕಾಶಿ ಬಗ್ಗೆ ಇನ್ನಿಲ್ಲದ ಸೆಳೆತ.
ಪ್ರತೀ ಬಾರಿ ಕಾಶಿ ಸುದ್ದಿ ಕೇಳಿದಾಗ ಅಥವಾ ದೃಶ್ಯ ಕಂಡಾಗ ಇನ್ನೂ ಹೋಗಿಲ್ಲವಲ್ಲ ಅನ್ನೋ ಸಂಕಟ. ಅಂತೂ ಈ ಬಾರಿ ನಾ ಹುಟ್ಟಿದ ತಿಂಗಳಲ್ಲೇ ಕಾಶಿಗೆ ಹೋಗಬೇಕೆಂಬ ಗಟ್ಟಿನಿರ್ಧಾರ ಮಾಡಿಬಿಟ್ಟೆ. ಸುಬ್ಬು ನಾನೂ ಬರ್ತೀನಿ ಅಂದ್ರು. ಹೀಗೆ ಹೊರಟಾಗ ಕಾಶಿಗೆ ತಂದೆಯನ್ನು ಜೊತೆಗೆ ಕರೆದೊಯ್ಯುವ ನಿರ್ಧಾರ ನನಗೆ ನೀಡಿದ್ದು ಜೀವಮಾನದ ಒಂದು ಸುಂದರ ನೆನಪು. ಅಪ್ಪ ಆಗಲೇ ಹಳೇ ಕಾಶಿ ನೋಡಿದ್ದರು. ನಾನಷ್ಟೇ ಹೊರಟೆ ಅಂದುಕೊಂಡಿದ್ದ ತಂದೆ ಕಾಶಿಯ ಬಗ್ಗೆ ದಿನಕ್ಕೊಂದಿಷ್ಟುಅನ್ನೋ ಹಾಗೆ ಮಾಹಿತಿ ಕೊಡುತ್ತಿದ್ದರು. ಕೊನೇ ಕ್ಷಣದಲ್ಲಿ ಸಪ್ರ್ರೈಸ್ ಕೊಡ್ಬೇಕು ಅಂದುಕೊಂಡಿದ್ದೆ. ಮನೆಗೆ ನನ್ನ ತಂಗಿ ಸಹನಾ ಬರೋದರೊಂದಿಗೆ ಅಪ್ಪನಿಗೆ ಒಂದು ದಿನ ಮುಂಚೆಯೇ ವಿಷಯ ಗೊತ್ತಾಗೋ ಹಾಗಾಯಿತು. ಕಾಶಿಗೆ ಅವರಿಗೂ ಟಿಕೆಟ್ ಬುಕ್ಕಾದ ವಿಷಯ ಹೇಳಿದಾಗ ಅವರ ಖುಷಿ ನೋಡಬೇಕು. ಜೀವಮಾನದಲ್ಲಿ ಎಂದೂ ನೋಡದ ಕಾಶಿ ಬಗ್ಗೆ ನೂರು ಕೂತುಹಲದೊಂದಿಗೆ ಅಪ್ಪ ಮತ್ತು ಸುಬ್ಬು ಜೊತೆ ಫ್ಲೈಟ್ ಹತ್ತಿದ್ದೆ.
ಸ್ವರ್ಗಸೀಮೆಯ ಮಡಿಲು, ಅತಿ ಸುಂದರ ಬೀಚ್, ದ್ವೀಪ ಪ್ರಪಂಚ ಫುಕೆಟ್
ಅಪ್ಪನಿಗೆ ಫ್ಲೈಟ್ ಹತ್ತಿಸಬೇಕು ಅನ್ನೋ ಆಸೆ ಈಗಾಗಲೇ ಪೂರ್ತಿ ಆಗಿದ್ದರೂ, ಅಪ್ಪ ನಾನು ಒಟ್ಟಿಗೇ ಫ್ಲೈಟ್ ಹತ್ತಿದ್ದು ಇದೇ ಮೊದಲು. ಹೀಗೆ ಶುರುವಾಯಿತು ಅಪ್ಪ- ಮಗಳ ಕಾಶಿ ಯಾತ್ರೆ. ಬೆಳಿಗ್ಗೆಯೇ ಮೊದಲ ಪಾಳಿಯ ಆಫೀಸ್ ಕೆಲಸ ಮುಗಿಸಿ ಪಯಣ ಆರಂಭಿಸಿದ ನನಗೆ ಫ್ಲೈಟ್‌ನಲ್ಲಿ ಕೂರುತ್ತಿದ್ದಂತೆ ನಿದ್ದೆಗೆ ಜಾರೋ ಐಡಿಯಾ ಇತ್ತು. ಆದರೆ ಫ್ಲೈಟ್ ಮೇಲಕ್ಕೆ ಎಗರುತ್ತಿದ್ದಂತೆಯೇ ಅಪ್ಪನ ಅಚ್ಚರಿಯ ಬುತ್ತಿ ಒಂದೊಂದಾಗಿ ತೆರೆಯುತ್ತಾ ಸಾಗಿತ್ತು. ಕಿಟಕಿಯಿಂದಾಚೆಗೆ ಇಣುಕಿ ನೋಡುತ್ತಿದ್ದ ಕಂಗಳಲ್ಲಿ ಅದೇನು ಅಚ್ಚರಿಯೋ, ಅದೇನು ಸಂಭ್ರಮವೋ. ನಿದ್ದೆಗೆ ಜಾರುತ್ತಿದ್ದ ನನ್ನನ್ನ ಎಬ್ಬಿಸಿ ಎಬ್ಬಿಸಿ ತನ್ನ ಅಚ್ಚರಿ ಹೊರಹಾಕುತ್ತಿದ್ದರು ಅಪ್ಪ.
‘ನೋಡು ದೇವರ ಸೃಷ್ಟಿನೋಡು.. ಯಾವುದರ ಸಪೋರ್ಚ್ ಇಲ್ಲದೆಯೇ ಗಾಳಿಯಲ್ಲಿ ಎಷ್ಟುಪ್ರಮಾಣದ ನೀರು ನಿಂತಿದೆ.. ಭಗವಂತ ಏನು ನಿನ್ನ ಸೃಷ್ಟಿ, ಮನುಷ್ಯನ ಸೃಷ್ಟಿನೋಡು.. ಇಷ್ಟುದೊಡ್ಡ ದೈತ್ಯ(ಫ್ಲೈಟ್) ಎಷ್ಟುಜನರನ್ನು ಹೊತ್ತು ಗಾಳಿಯಲ್ಲಿ ಹಾರುತ್ತಿದೆ’ ಎನ್ನುತ್ತಾ ಹತ್ತು ಬಾರಿ ಕೈ ಮುಗಿಯುತ್ತಾ, ದೇವರ ಸೃಷ್ಟಿಗೆ ಮನುಷ್ಯನ ಆವಿಷ್ಕಾರಕ್ಕೆ ಬೇರಗಾಗುತ್ತಾ, ಮೇಲಿಂದ ಮೇಲೆ ಕಿಟಕಿಯಿಂದ ಆಚೆ ನೋಡುತ್ತಾ, ತನ್ನ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸುತ್ತಾ ಮಗುವಿನಂತೆ ಸಂಭ್ರಮಿಸಿದ್ದು ನೋಡಿ ನನ್ನ ನಿದ್ದೆ ಹಾರಿಹೋಗಿತ್ತು. ಅವರ ಖುಷಿ ನನ್ನಲ್ಲಿ ಸಂತಸ ಮೂಡಿಸಲಾರಂಭಿಸಿತು. ಮುಖದಲ್ಲಿ ಸಂತೃಪ್ತ ಮಂದಹಾಸ. ಈ ಎಲ್ಲದರ ನಡುವೆ ಇನ್ನೊಂದು ಕಿಟಕಿ ಬದಿಯ ಖಾಲಿ ಸೀಟ್ ಹುಡುಕಿ ಅಲ್ಲಿ ಹೋಗಿ ಕೂತು ತನ್ನ ಎಂದಿನ ಫೋಟೋಗ್ರಫಿಯಲ್ಲಿ ಮುಳುಗಿದ್ದರು ಸುಬ್ಬಣ್ಣ.
ಸುವರ್ಣ ನ್ಯೂಸ್ ನಿರೂಪಕಿ ಭಾವನಾ ನಾಗಯ್ಯಾಗೆ 'ಮಾಧ್ಯಮ ರತ್ನ' ಪ್ರಶಸ್ತಿ ಪ್ರದಾನ
ಏನೇ ಹೇಳಿ ದಿನನಿತ್ಯದ ಜೀವನದಲ್ಲಿ ನಾವು ಎಷ್ಟುಯಾಂತ್ರಿಕ ಅನ್ನೋದು ಅಪ್ಪನನ್ನ ನೋಡಿ ಅರ್ಥ ಆಯಿತು. ಉತ್ಸಾಹ ನಮಗಿಂತ ನಮ್ಮ ಹಿರಿಯರಲ್ಲಿ ನೂರು ಪಟ್ಟು.. ಎರಡೂವರೆ ಮೂರು ಗಂಟೆಯಲ್ಲಿ ಒಂದು ಕ್ಷಣವೂ ಉತ್ಸಾಹ ಕುಂದದೆ ಕಳೆದುಹೋಯಿತು. ಅಪ್ಪ ಹೇಳಿದ ದೈತ್ಯ ಉಕ್ಕಿನ ಹಕ್ಕಿ ಮೂರು ಗಂಟೆಗಳ ಒಳಗೆ ವಾರಾಣಸಿಗೆ ಬಂದು ನಿಂತಿತು.
ವಾರಣಾಸಿ ತಲುಪಿದಾಗ ಸಂಜೆ 6.45. ಬಹಳ ವರ್ಷಗಳು ನನ್ನ ಇನ್ನಿಲ್ಲದಂತೆ ಸೆಳೆದಿದ್ದ ನೆಲಕ್ಕೆ ಅಡಿ ಇಟ್ಟಕ್ಷಣ ಮನಸ್ಸಿನಲ್ಲಿ ಪುಳಕ.