MukthinathaTemple ನೇಪಾಳದಲ್ಲಿದೆ ಮುಕ್ತಿನಾಥ ದೇಗುಲ; ಅಷ್ಟಕ್ಕೂ ಯಾರೀ ಮುಕ್ತಿನಾಥ?

ಮುಕ್ತಿನಾಥದಲ್ಲಿರುವ ಈ ವಿಷ್ಣುವಿನ ದೇವಾಲಯವು ಅನ್ನಪೂರ್ಣ ಸಕ್ರ್ಯೂಟ್‌ನ ಪ್ರಸಿದ್ಧ ಚಾರಣ ಮಾರ್ಗದಲ್ಲಿದೆ. ಹಾಗಾಗಿ ಹೆಜ್ಜೆ ಹೆಜ್ಜೆಗೂ ಚಾರಣಿಗರೂ ಸೈಕ್ಲಿಸ್ಟ್‌ರೂ ಎದುರಾಗುತ್ತಾರೆ. ಎತ್ತೆಸೆಯುವ ಜೀಪಿನಲ್ಲಿ ಕುಲುಕುವ ಪ್ರಯಾಣದಲ್ಲಿ ನಾವಿದ್ದರೆ ಬೆನ್ನಿಗೆ ಚೀಲ ಕಟ್ಟಿಕೊಂಡು ಚಾರಣಿಗರಿಗೆಂದೇ ಬೆಟ್ಟದಿಂದ ಬೆಟ್ಟಕ್ಕಿರುವ ತೂಗು ಸೇತುವೆಗಳನ್ನು ಬಳಸಿಕೊಂಡು ನಮಗಿಂತ ಮೊದಲೇ ಗಮ್ಯ ಸ್ಥಾನ ಮುಟ್ಟುವ ಅವರನ್ನು ಅವರ ಉತ್ಸಾಹವನ್ನೂ ಮೆಚ್ಚಲೇ ಬೇಕು.

About Nepal Mukthinatha temple DS Ramaswamy travel experiance vcs

ಡಿ ಎಸ್‌ ರಾಮಸ್ವಾಮಿ

ಮುಕ್ತಿನಾಥ ದೇವಾಲಯವು ನೇಪಾಳದ ಮುಸ್ತಾಂಗ್‌ ಜಿಲ್ಲೆಯ ಥೋರಾಂಗ್‌-ಲಾ- ಪರ್ವತದ ಮೇಲಿದೆ. ಈ ಪರ್ವತವು ವರ್ಷದ ಬಹಳ ಕಾಲ ಹಿಮದಿಂದ ಆವೃತವಾಗಿ ಇರುವುದರಿಂದ ಬೆಳಿಗ್ಗೆ ಸೂರ್ಯನ ಕಿರಣ ಬಿದ್ದೊಡನೆಯೇ ನೀರಾಗಿ ಹರಿಯುವುದರಿಂದ ಅತ್ಯಂತ ದುರ್ಗಮವಾದ ದಾರಿಯುದ್ದಕ್ಕೂ ಲೆಕ್ಕವಿಲ್ಲದಷ್ಟುಜಲಪಾತಗಳನ್ನು ಕಾಣಬಹುದು. ಪೋಖ್ರಾ ನಗರದಿಂದ ಸುಮಾರು 170 ಕಿಮೀ ಹಾದಿಯಲ್ಲಿ ಕೇವಲ 50 ಕಿಮೀಗಳಷ್ಟುಮಾತ್ರ ಸಿದ್ಧ ರಸ್ತೆ ಇದೆಯಾದರೂ ಉಳಿದ 120 ಕಿಮೀ ಕಚ್ಚಾ ರಸ್ತೆಯಲ್ಲೇ ಸಾಗಬೇಕು. ನೀರಿನ ಹರಿಯುವಿಕೆಯಿಂದಾದ ಕೊರಕಲುಗಳು, ಗುಡ್ಡ ಕುಸಿತಗಳು ಮತ್ತು ಮೇಲಿಂದ ಮೇಲೆ ಜರುಗುವ ಭೂ ಕಂಪನಗಳಿಂದ ಮುಕ್ತಿನಾಥದ ದಾರಿಯು ರುದ್ರ ರಮಣೀಯ ಮತ್ತು ಮರಣಾನಂದದ ಸುಖವನ್ನು ನೀಡುತ್ತದೆ.

ಮುಕ್ತಿನಾಥದಲ್ಲಿರುವ ಈ ವಿಷ್ಣುವಿನ ದೇವಾಲಯವು ಅನ್ನಪೂರ್ಣ ಸಕ್ರ್ಯೂಟ್‌ನ ಪ್ರಸಿದ್ಧ ಚಾರಣ ಮಾರ್ಗದಲ್ಲಿದೆ. ಹಾಗಾಗಿ ಹೆಜ್ಜೆ ಹೆಜ್ಜೆಗೂ ಚಾರಣಿಗರೂ ಸೈಕ್ಲಿಸ್ಟ್‌ರೂ ಎದುರಾಗುತ್ತಾರೆ. ಎತ್ತೆಸೆಯುವ ಜೀಪಿನಲ್ಲಿ ಕುಲುಕುವ ಪ್ರಯಾಣದಲ್ಲಿ ನಾವಿದ್ದರೆ ಬೆನ್ನಿಗೆ ಚೀಲ ಕಟ್ಟಿಕೊಂಡು ಚಾರಣಿಗರಿಗೆಂದೇ ಬೆಟ್ಟದಿಂದ ಬೆಟ್ಟಕ್ಕಿರುವ ತೂಗು ಸೇತುವೆಗಳನ್ನು ಬಳಸಿಕೊಂಡು ನಮಗಿಂತ ಮೊದಲೇ ಗಮ್ಯ ಸ್ಥಾನ ಮುಟ್ಟುವ ಅವರನ್ನು ಅವರ ಉತ್ಸಾಹವನ್ನೂ ಮೆಚ್ಚಲೇ ಬೇಕು.

Travel Tips: ಹೆಲಿಕಾಪ್ಟರ್ ಸೌಲಭ್ಯವಿರುವ ಧಾರ್ಮಿಕ ಸ್ಥಳಗಳಿವು

ಏಳೆಂಟು ತಾಸುಗಳ ಜೀಪ್‌ ಪ್ರಯಾಣ ಬೇಡವಾದಲ್ಲಿ ಮಿನಿ ಬಸ್ಸುಗಳಲ್ಲೂ ಸಂಚರಿಸಬಹುದು. ಈ ಬಸ್ಸುಗಳು 170 ಕಿಮೀ ಕ್ರಮಿಸಲು ಕಡಿಮೆಯೆಂದರೆ ಹತ್ತು- ಹನ್ನೊಂದು ಗಂಟೆ ತೆಗೆದುಕೊಳ್ಳುತ್ತವೆ. ಕೊರಕಲಲ್ಲಿ, ದಿನ ನಿತ್ಯವೂ ಕುಸಿಯುವ ಹಾದಿಯಲ್ಲಿ, ಜಲಪಾತಗಳ ರಭಸ ಹೆಚ್ಚಾಗಿ ರಸ್ತೆಯೇ ಕೊಚ್ಚಿಹೋದಲ್ಲೆಲ್ಲ, ಈ ಬಸ್ಸುಗಳು ಪ್ರಯಾಣಿಕರನ್ನು ಇಳಿಸಿ ಮುಂದಕ್ಕೆ ಚಲಿಸಿ ನಿಲ್ಲುತ್ತವೆ. ಆ ಜಲಪಾತವನ್ನೋ, ಕುಸಿದ ರಸ್ತೆಯ ಆಳ ಅಗಲಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತ ಅಂತೂ ಬಸ್‌ ಹತ್ತುವ ಪ್ರಯಾಣಿಕರು ಗಾಜು ಇಲ್ಲದ ಕಿಟಕಿಗಳಿಂದ ತಲೆಯನ್ನು ಹೊರ ಚಾಚುತ್ತಲೇ ಇರುತ್ತಾರೆ. ಆದರೆ ಸ್ಕಾರ್ಪಿಯೋ ಜೀಪಿನಲ್ಲಿ 6 ಜನರನ್ನು ಬಂಧಿಸಿದಂತೆ ತುರುಕಿ, ಗಾಜು ಏರಿಸಿ,ಕೊರಕಲು, ಗುಂಡಿಗಳನ್ನು ಹಾರುತ್ತ ನೆಗೆಯುತ್ತ ಚಲಿಸುವ ಜೀಪಿನ ಹಾದಿಯುದ್ದಕ್ಕೂ ಕಾಳಿ ಗಂಡಕಿ ನದಿಯ ಹರಿಯುವ ಶಬ್ದ, ನದಿಯ ಉದ್ದಕ್ಕೂ ಕಾಣಸಿಗುವ ಸಾಲಿಗ್ರಾಮ ಶಿಲೆಗಳು, ಅಪರೂಪಕ್ಕೆ ಅಲ್ಲೊಬ್ಬರು ಇಲ್ಲೊಬ್ಬರು ಆ ಶೀತದ ನದಿಯುದ್ದಕ್ಕೂ ಸಂಚರಿಸುತ್ತ, ಆ ಕಪ್ಪು ಶಿಲೆಗಳಲ್ಲಿ ಮೂಡಿರಬಹುದಾದ ಸಾಲಿಗ್ರಾಮಗಳನ್ನು ಅರಸುವುದನ್ನೂ ಕಾಣಬಹುದು. ಹಾದಿಯುದ್ದಕ್ಕೂ ಹೈಡ್ರೋ ಎಲೆಕ್ಟ್ರಿಕ್‌ ಪವರ್‌ ಜನರೇಟಿಂಗ್‌ ಸ್ಥಾವರಗಳಿವೆ.

ಭಾರತದ ಈ ಸುಂದರ ನಗರಗಳನ್ನು ನೋಡಲು ಭಾರತೀಯರಿಗೇ ಬೇಕು ಪರವಾನಗಿ!

ಸ್ಥಳ ಪುರಾಣದ ಪ್ರಕಾರ ಶಿವ ಮತ್ತು ಜಲಂಧರ ಎನ್ನುವ ರಾಕ್ಷಸ ರಾಜನ ನಡುವೆ ಇಲ್ಲಿ ಯುದ್ಧ ನಡೆದಿತ್ತು. ರಾಕ್ಷಸನು ದುಷ್ಟಮನಸ್ಸಿನವನಾಗಿದ್ದ ಕಾರಣ ಅವನು ಶಿವನ ಪತ್ನಿ ಪಾರ್ವತಿ ದೇವಿಯನ್ನು ವರಿಸಲು ಶಿವನ ರೂಪ ಧರಿಸಿ ಬಂದಿದ್ದನಂತೆ. ಆದರೆ ಪಾರ್ವತಿಯು ಸೂಕ್ಷ್ಮ ಬುದ್ಧಿಯಿಂದ ಅವನು ಶಿವನಲ್ಲ ಎನ್ನುವುದನ್ನು ಕಂಡುಹಿಡಿದು ತಕ್ಷಣ ಶಿವನನ್ನು ಕೂಗಿದಳು. ಆಗ ಶಿವನು ಜಲಂಧರನ ಜೊತೆಗೆ ಯುದ್ಧಕ್ಕಿಳಿದ. ಆ ರಾಕ್ಷಸನ ಅನುಯಾಯಿಗಳು ಇತರ ದೇವತೆಗಳಿಗೂ ತೊಂದರೆಯನ್ನು ನೀಡಲು ಮುಂದಾದರು. ಆಗ ವಿಷ್ಣು ದೇವನು ಜಲಂಧರನ ರೂಪವನ್ನು ಧರಿಸಿ ಅವನ ಹೆಂಡತಿ ವೃಂದಳನ್ನು ಒಲಿಸಿಕೊಂಡನು. ವೃಂದ ತನ್ನ ಗಂಡ ಎಂದೇ ವಿಷ್ಣು ದೇವನನ್ನು ಭಾವಿಸಿದಳು. ಪಾಪ ವೃಂದೆಗೆ ಬಂದವನು ವಿಷ್ಣು ಅಂತ ಗೊತ್ತಾಗಲಿಲ್ಲ! ಅತ್ತ ಶಿವನು ಜಲಂಧರನನ್ನು ವಧಿಸಿದನು.

ನಂತರ ತನ್ನ ಜೊತೆಗಿರುವವನು ತನ್ನ ಗಂಡನಲ್ಲ ಎಂಬ ಸತ್ಯವನ್ನು ತಿಳಿದ ವೃಂದಾ ವಿಷ್ಣು ದೇವರಿಗೆ ಕಲ್ಲಾಗುವಂತೆ ಶಪಿಸುತ್ತಾಳಂತೆ. ಇದರಿಂದಾಗಿ ವಿಷ್ಣು ದೇವರು ಮುಕ್ತಿನಾಥ್‌ ಪ್ರದೇಶದಲ್ಲಿ ಸಾಲಿಗ್ರಾಮವಾಗಿ ಹುಟ್ಟುತ್ತಾನಂತೆ. ಶಾಪ ನೀಡಿದ ವೃಂದಾ ತನ್ನನ್ನು ತಾನು ಶಪಿಸಿಕೊಂಡು ಭಸ್ಮವಾಗುತ್ತಾಳೆ. ನಂತರ ಆ ಭಸ್ಮದಿಂದ ತುಳಸಿ ಸಸ್ಯವಾಗಿ ಜನಿಸುತ್ತಾಳಂತೆ. ಭಗವಾನ್‌ ವಿಷ್ಣು ದೇವನು ವೃಂದಾಳನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದನಾದ್ದರಿಂದ ಸಾಲಿಗ್ರಾಮದ ಪೂಜೆಗೆ ತುಳಸಿಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಹೇಳಿದನಂತೆ. ಹಾಗಾಗಿ ಈಗಲೂ ಸಾಲಿಗ್ರಾಮಕ್ಕೆ ಅಲಂಕಾರ ಮಾಡಲು ತುಳಸಿ ಬೇಕೇ ಬೇಕು. ಈ ಹಿನ್ನೆಲೆಯಲ್ಲಿಯೇ ಮುಕ್ತಿನಾಥ ದೇವಾಲಯವನ್ನು ನಿರ್ಮಿಸಲಾಯಿತು ಎನ್ನುವ ಐತಿಹ್ಯವಿದೆ.

Travel Tips: ಭೂತಾನ್ ಪ್ರವಾಸಕ್ಕೆ ಹೋದಾಗ ಈ ಖಾದ್ಯ ತಿನ್ನದೆ ಬರ್ಬೇಡಿ

ಮುಕ್ತಿನಾಥ ದೇವಾಲಯವು ನೇಪಾಳದ ಅತಿ ಆಕರ್ಷಕ ತಾಣಗಳಲ್ಲೊಂದು.ಈ ದೇವಾಲಯದ ಪ್ರಮುಖ ಆಕರ್ಷಣೆ ಎಂದರೆ ದೇವಾಲಯದ ಮುಂದೆ ಇರುವ ಎರಡು ನೀರಿನ ಕುಂಡಗಳು. ಒಂದು ಲಕ್ಷ್ಮೇ ಕುಂಡ, ಮತ್ತೊಂದು ಸರಸ್ವತಿ ಕುಂಡ. ಈ ದೇವಾಲಯಕ್ಕೆ ಭೇಟಿ ನೀಡಿದಾಗ ಈ ಕುಂಡದಲ್ಲಿ ಸ್ನಾನ ಮಾಡಿದರೆ ವ್ಯಕ್ತಿಗೆ ಇರುವ ಪಾಪ ಕರ್ಮಗಳು ತೊಳೆದು ಹೋಗುತ್ತವೆ ಎಂಬ ನಂಬಿಕೆ ಇದ್ದರೂ ಕೊರೆಯುವ ಚಳಿಯಲ್ಲಿ ನಡುಗುತ್ತಿದ್ದ ನಾನು ಸ್ನಾನ ಮಾಡುವುದಿರಲಿ, ಆ ನೀರನ್ನು ಪ್ರೋಕ್ಷಿಸಿಕೊಳ್ಳಲೂ ಕೈ ಗವಸು ತೆಗೆಯಬೇಕೆಂಬ ಕಾರಣದಿಂದ ಸುಮ್ಮನಾದೆ.

ಮುಕ್ತಿನಾಥ್‌ ದೇವಾಲಯದ ಹಿಂಭಾಗದಲ್ಲಿ ನಂದಿಯ ತಲೆಯ ಆಕಾರದಲ್ಲಿರುವ 108 ನೀರಿನ ಚಿಲುಮೆಗಳಿವೆ. ಇವನ್ನು ಅರ್ಧ ವೃತ್ತಾಕಾರದಲ್ಲಿ ಅರ್ಧ ಅಡಿ ಅಂತರದಲ್ಲಿ ಜೋಡಿಸಲಾಗಿದೆ. ನಂದಿಯ ಬಾಯಲ್ಲಿ ಸುರಿಯುವ ನೀರು ಕಾಳಿ ಗಂಡಕಿ ನದಿಯಿಂದ ಹರಿದು ಬಂದದ್ದೇ. ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪ ಕರ್ಮಗಳು ತೊಳೆಯುತ್ತವೆ ಎಂಬ ನಂಬಿಕೆಯಿದೆ.

ಸಾಲಿಗ್ರಾಮವನ್ನು ಒಂದು ಪಳೆಯುಳಿಕೆಯ ಕಲ್ಲು ಎಂದು ಪರಿಗಣಿಸಲಾಗಿದೆ. ವೈಷ್ಣವರು ವಿಷ್ಣು ದೇವರನ್ನು ಸಾಮಾನ್ಯವಾಗಿ ಸಾಲಿಗ್ರಾಮದ ರೂಪದಲ್ಲಿಯೇ ಪೂಜಿಸುವರು. ನೇಪಾಳದ ಕಾಳಿ ಗಂಡಕಿ ನದಿ ಸಾಲಿಗ್ರಾಮದ ಮುಖ್ಯ ಮೂಲ. ಹಾಗಾಗಿ ಈ ನದಿಯು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಕಪ್ಪು ಬಣ್ಣ, ಗೋಳಾಕಾರದ ಚಕ್ರವನ್ನು ಹೊಂದಿರುವ ಸಾಲಿಗ್ರಾಮವು ವಿಷ್ಣುವಿನ ರೂಪ ಎಂದು ನಂಬಲಾಗಿದೆ. ಸಾಲಿಗ್ರಾಮವು ಕಡು ಕಪ್ಪು ಬಣ್ಣ ಅಥವಾ ಚಿನ್ನದ ಬಣ್ಣವನ್ನು ಹೊಂದಿರುತ್ತದೆ. .

ಅತ್ಯಂತ ಪುರಾತನ ಹಾಗೂ ಶಕ್ತಿಯುತ ದೇವಾಲಯವಾದ ಮುಕ್ತಿನಾಥ ದೇವಾಲಯವು ಭಕ್ತಾದಿಗಳ ಆಕರ್ಷಕ ತೀರ್ಥಕ್ಷೇತ್ರ. ಈ ಕ್ಷೇತ್ರಕ್ಕೆ ಭಕ್ತಾದಿಗಳು ತಮ್ಮ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ರಸ್ತೆ ಮಾರ್ಗದ ಮೂಲಕ ಅಥವ ವಾಯು ಮಾರ್ಗದ ಮೂಲಕವೂ ಪ್ರಯಾಣಿಸಬಹುದು. ವಾಯು ಮೂಲಕ ಸಾಗಲು ಕೇವಲ 30 ನಿಮಿಷ ಸಾಕು.

ರಸ್ತೆ ಮಾರ್ಗದಲ್ಲಾಗಲೀ ವಾಯುಮಾರ್ಗದಲ್ಲಾಗಲೀ ಮುಕ್ತಿನಾಥ ಮುಟ್ಟುವ ಮೊದಲು ಜಾಂಸಂ ಎನ್ನುವ ಹಳ್ಳಿಗೆ ಬರಲೇ ಬೇಕು. ಇಲ್ಲಿ ಸಾಕಷ್ಟುವಸತಿ ಗೃಹಗಳು ಊಟ ತಿಂಡಿಗಳೂ ದೊರೆಯುತ್ತವೆ. ಇಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ ಮತ್ತೆ 15 ಕಿಮೀ ಜೀಪಿನ ಪ್ರಯಾಣ ಮಾಡಿ ಮುಕ್ತಿನಾಥನ ಪದತಲ ಮುಟ್ಟಬೇಕು. ಇಲ್ಲಿಂದ ನಡೆದೋ ಕುದುರೆ ಹತ್ತಿಯೋ ಬೆಟ್ಟದ ಮೇಲಿರುವ ಮುಕ್ತಿನಾಥನ ದರ್ಶನ ಮಾಡಬೇಕು.

ಬೆಳಿಗ್ಗೆ 8 ಗಂಟೆಗೆ ಪೋಖ್ರಾದಿಂದ 8 ಗಂಟೆ ಡ್ರೈವ್‌ ಮಾಡಿದರೂ ಮುಕ್ತಿನಾಥನ ಪದತಲ ತಲುಪುವಾಗ ಸಂಜೆ 4 ಗಂಟೆ ಮುಟ್ಟಿರುತ್ತದೆ. ಬೆಟ್ಟಹತ್ತಿ ಇಳಿಯಲು ಒಂದು ಗಂಟೆ ಬೇಕೇ ಬೇಕು. ಸಂಜೆ ಐದಕ್ಕೆಲ್ಲ ಸೂರ್ಯ ಕಂದಿ ಕತ್ತಲು ಆವರಿಸತೊಡಗಿರುತ್ತದೆ. ಮತ್ತೆ 15 ಕಿಮೀ ಜೀಪ್‌ ಪ್ರಯಾಣ ಮಾಡಿ ಜಾಂಸಂ ಊರು ಮುಟ್ಟಿದರೆ ಅಲ್ಲಿನ ವಸತಿ ಗೃಹಗಳಲ್ಲಿ ಯಾಕ್‌ (ಚಮರೀ ಮೃಗ) ಹಾಲಿನಿಂದ ಮಾಡಿದ ಟೀ ಕುಡಿದ ನಂತರ ರೂಮಿನ ಹೀಟರಿನಲ್ಲಿ ಮೈ ಕಾಯಿಸಿಕೊಳ್ಳುತ್ತ ಲೋಕಲ್‌ ಡ್ರಿಂಕ್ಸ್‌ ತೆಗೆದುಕೊಳ್ಳಬಹುದು. ಮಧ್ಯಾಹ್ನ ಹನ್ನೆರಡಕ್ಕೆಲ್ಲ ವಿಮಾನ ಹಾರಾಟ ನಿಲ್ಲುವುದರಿಂದ ವಿಮಾನದಲ್ಲಿ ಬಂದವರೂ ಒಂದು ರಾತ್ರಿ ಜಾಂಸಂನಲ್ಲೋ ಅಥವ ಇತರ ಹಳ್ಳಿಗಳಲ್ಲೋ ತಂಗುವುದು ಅನಿವಾರ್ಯ.

ಸಾಮಾನ್ಯ ದಿನಗಳಲ್ಲೂ ತಾಪಮಾನ 7 ಡಿಗ್ರಿಗಿಂತ ಕಡಿಮೆ ಇರುತ್ತದೆ. ಹಾಗಾಗಿ ಸುತ್ತ ಇರುವ ಅನ್ನಪೂರ್ಣ ಬೆಟ್ಟಸಾಲು ರಾತ್ರಿಯ ಚಳಿಗೆ ಹಿಮಾಚ್ಛಾದಿತವಾಗುತ್ತದೆ. ಬೆಳಗ್ಗೆದ್ದು ನೋಡಿದರೆ ಆ ಬೆಟ್ಟಸಾಲುಗಳಲ್ಲಿ ಶೇಖರವಾದ ಅಪಾರ ಹಿಮ ಗುಡ್ಡೆಗಳ ಮೇಲೆ ಸೂರ್ಯ ರಶ್ಮಿ ಬಿದ್ದೊಡನೆಯೇ ಬಂಗಾರದ ಹೊಂಬಣ್ಣದಲ್ಲಿ ಮಿಂದೆದ್ದ ಎವೆರೆಸ್ಟ್‌ ದರ್ಶನ ನಮ್ಮದಾಗುತ್ತದೆ. (ರಾಗಿ, ಅಕ್ಕಿ, ಗೋಧಿಗಳಿಂದ ಮನೆ ಮನೆಯಲ್ಲೂ ನೇಪಾಳದಲ್ಲಿ ಮದ್ಯ ತಯಾರಿಸುತ್ತಾರೆ. ಇಲ್ಲಿ ಕುಡಿತ ಮತ್ತು ಜೂಜು ಸರ್ವೇ ಸಾಮಾನ್ಯ. ಯಾವ ನಿಯಂತ್ರಣಗಳೂ ಇಲ್ಲ. ಜೊತೆಗೆ ಡ್ಯಾನ್ಸ್‌ ಬಾರುಗಳೂ, ಕ್ಯಾಸಿನೋಗಳೂ ತೀರ ಸಾಮಾನ್ಯ.)

ಗಂಗೋತ್ರಿ, ಯಮುನೋತ್ರಿ, ಕೇದಾರಗಳನ್ನು ಕಂಡವರಿಗೆ ಮುಕ್ತಿನಾಥ್‌ ಅಷ್ಟೇನೂ ತ್ರಾಸದಾಯಕವಲ್ಲ. ಜೀಪ್‌ ಅಥವ ಬಸ್ಸಿನಲ್ಲಿ ಹೋಗಿಬರಬಹುದು. ಕುದುರೆ ಬಳಸಿದರೆ ನಡೆಯುವ ಪ್ರಮೇಯವೇ ಇಲ್ಲ. ಆದರೆ ಹಿಮಾಚ್ಛಾದಿತ ಬೆಟ್ಟಸಾಲುಗಳಲ್ಲಿ ಕರಗಿ ಹರಿಯುವ ಗಂಡಕಿ ನದಿಯ ವಿವಿಧ ಜಲಪಾತಗಳನ್ನು ಕಾಣುತ್ತಲೇ ಕೊರಕಲು ಭರಿತ ರಸ್ತೆಗಳಲ್ಲಿ ಕ್ರಮಿಸುವುದು ರುದ್ರ ರಮಣೀಯ ಅನುಭವವೇ ಹೌದು.

Latest Videos
Follow Us:
Download App:
  • android
  • ios