Ichhadevi Temple: ಇದು ಸುಮಾರು 450 ವರ್ಷಗಳ ಹಳೆಯ ದೇವಸ್ಥಾನ. ಸಂತಾನ ಭಾಗ್ಯ ಇಲ್ಲದವರು ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದರೆ, ಅವರಿಗೆ ಶೀಘ್ರದಲ್ಲಿ ಸಂತಾನ ಭಾಗ್ಯ ದೊರೆಯುತ್ತದೆಯಂತೆ. ಅಂತಹ ಪವರ್ ಫುಲ್ ಆಗಿರುವ ದೇವಾಲಯವಿದು. ಈ ದೇಗುಲ ಎಲ್ಲಿದೆ? ಇಲ್ಲಿನ ವಿಶೇಷತೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.
50 ವರ್ಷಗಳ ಇತಿಹಾಸವಿರುವ ಇಚ್ಛಾದೇವಿ ದೇವಸ್ಥಾನ!
ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿರುವ ಸುಮಾರು 450 ವರ್ಷಗಳಷ್ಟು ಹಳೆಯ ಇಚ್ಛಾದೇವಿ ಮಾತಾ ದೇವಸ್ಥಾನವು ಭಕ್ತರ ಅಚಲ ನಂಬಿಕೆಯ ಪ್ರಮುಖ ಕೇಂದ್ರವಾಗಿದೆ. ಐತಿಹಾಸಿಕ ಮಹತ್ವ ಮತ್ತು ಧಾರ್ಮಿಕ ನಂಬಿಕೆಗಳಿಗೆ ಹೆಸರುವಾಸಿಯಾಗಿರುವ ಈ ದೇವಸ್ಥಾನಕ್ಕೆ ವರ್ಷವಿಡೀ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಅದರಲ್ಲೂ ಶರನ್ನವರಾತ್ರಿ ಸಂದರ್ಭದಲ್ಲಿ ಇಲ್ಲಿ ಭಕ್ತರ ಸಾಗರವೇ ಹರಿದು ಬರುತ್ತದೆ. ಮಧ್ಯಪ್ರದೇಶ ಮಾತ್ರವಲ್ಲದೆ ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ.
ಸಂತಾನ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ
ಇಚ್ಛಾದೇವಿ ಮಾತಾ ದೇವಸ್ಥಾನದ ಕುರಿತು ದೇವಸ್ಥಾನ ಬಗ್ಗೆ ಈ ಭಾಗದಲ್ಲಿ ಹಲವು ಧಾರ್ಮಿಕ ನಂಬಿಕೆಗಳು ಪ್ರಚಲಿತದಲ್ಲಿವೆ. ನಂಬಿಕೆಯ ಪ್ರಕಾರ, ಭೋಸ್ಕುಟೆ ಸರ್ಕಾರ್ ಅವರು ಈ ದೇವಸ್ಥಾನವನ್ನು ನಿರ್ಮಿಸಿದ್ದರು ಎನ್ನಲಾಗುತ್ತದೆ. ದೇವಿಯ ಕೃಪೆಯಿಂದ ಅವರಿಗೆ ಸಂತಾನ ಭಾಗ್ಯ ದೊರೆಯಿತು ಎಂಬ ನಂಬಿಕೆಯೂ ಇದೆ. ಅಂದಿನಿಂದ ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸಲು ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆ. ಇಂದಿಗೂ ಅನೇಕ ದಂಪತಿಗಳು ಮಕ್ಕಳಾಗಲಿ ಎಂಬ ಹರಕೆಯನ್ನು ಹೊತ್ತು ದೇವಿಯ ಸನ್ನಿಧಿಗೆ ಆಗಮಿಸುತ್ತಾರೆ. ಭಕ್ತಿಯಿಂದ ಪೂಜೆ ಸಲ್ಲಿಸಿ ತಮ್ಮ ಮನದಾಸೆ ಈಡೇರಲಿ ಎಂದು ಪ್ರಾರ್ಥಿಸುತ್ತಾರೆ.
ಹರಕೆ ಈಡೇರಿದ ಬಳಿಕ ದೇವಿಗೆ ಸೀರೆ ಅರ್ಪಣೆ!
ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ತಮ್ಮ ಇಷ್ಟಾರ್ಥಗಳು ಈಡೇರಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತಾರೆ. ಶುದ್ಧ ಮನಸ್ಸಿನಿಂದ ದೇವಿಯನ್ನು ಆರಾಧಿಸಿದರೆ ಮನೋಕಾಮನೆಗಳು ಈಡೇರುತ್ತವೆ ಎಂಬುದು ಭಕ್ತರ ನಂಬಿಕೆ. ತಮ್ಮ ಹರಕೆ ಈಡೇರಿದ ಬಳಿಕ ಭಕ್ತರು ದೇವಸ್ಥಾನಕ್ಕೆ ಮರಳಿ ಬಂದು ದೇವಿಗೆ ಚುನ್ನರಿ ಅಥವಾ ಸೀರೆಯನ್ನು ಅರ್ಪಿಸಿ ಕೃತಜ್ಞತೆ ಸಲ್ಲಿಸುತ್ತಾರೆ. ಇಂತಹ ಧಾರ್ಮಿಕ ನಂಬಿಕೆಗಳಿಂದಾಗಿ ಈ ದೇವಸ್ಥಾನದ ಖ್ಯಾತಿ ಸುತ್ತಮುತ್ತಲಿನ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ಬೇರೆ ರಾಜ್ಯಗಳಿಗೂ ಹರಡಿದೆ. ದೂರದ ಊರುಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ.
ನವರಾತ್ರಿ ವೇಳೆ ಅದ್ಧೂರಿ ಜಾತ್ರೆ
ಶರನ್ನವರಾತ್ರಿ ಸಂದರ್ಭದಲ್ಲಿ ಇಚ್ಛಾದೇವಿ ಮಾತಾ ದೇವಸ್ಥಾನದ ಆವರಣದಲ್ಲಿ ಅದ್ಧೂರಿ ಜಾತ್ರೆ ನಡೆಯುತ್ತದೆ. ಈ ದಿನಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಭಕ್ತರ ಆಗಮನ ನಿರಂತರವಾಗಿರುತ್ತದೆ. ದೇವಿಯ ದರ್ಶನ ಪಡೆದು ಕುಟುಂಬದ ಸುಖ, ಸಮೃದ್ಧಿ ಮತ್ತು ಸಂತೋಷಕ್ಕಾಗಿ ಭಕ್ತರು ಪ್ರಾರ್ಥಿಸುತ್ತಾರೆ. ಸುಮಾರು 450 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನ ಇಂದಿಗೂ ಜನರ ನಂಬಿಕೆ, ಭಕ್ತಿ ಮತ್ತು ಧಾರ್ಮಿಕ ಸಂಪ್ರದಾಯಗಳ ಪ್ರತೀಕವಾಗಿ ಉಳಿದಿದೆ. ದೇವಿಯ ದರ್ಶನ ಪಡೆಯಲು ಹಾಗೂ ಹರಕೆ ಹೊತ್ತುಕೊಳ್ಳಲು ದೂರದೂರಿನಿಂದ ಭಕ್ತರು ಆಗಮಿಸುವುದು ಈ ದೇವಸ್ಥಾನದ ವಿಶೇಷತೆಯಾಗಿದೆ.


