ಮುಂಬೈನ ಸಿದ್ಧಿವಿನಾಯಕ ದೇಗುಲದಲ್ಲಿ ವಾರ್ಷಿಕ 18 ಕೋಟಿ ರೂ. ಕಳ್ಳತನವಾಗುತ್ತಿದೆ ಎಂದು ರಾಜ್ ಠಾಕ್ರೆ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಸಂಜಯ್ ರಾವುತ್ ಸಮರ್ಥಿಸಿದ್ದು, ಶಿಂಧೆ ಬಣದ ಹಿಡಿತದಲ್ಲಿ ಅಕ್ರಮ ಹೆಚ್ಚಾಗಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದೇನು?
ಮುಂಬೈ: ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇಗುಲದಲ್ಲೂ ಭಾರೀ ಪ್ರಮಾಣದ ಹಣ ಲೂಟಿ ಮಾಡಲಾಗುತ್ತಿದೆ ಎಂದು ಎಂಎನ್‌ಎಸ್ ನಾಯಕ ರಾಜ್ ಠಾಕ್ರೆ ಗಂಭೀರ ಆರೋಪ ಮಾಡಿದ್ದಾರೆ.
‘ದೇಗುಲದ ಕಾಣಿಕೆ ಡಬ್ಬಿಯಿಂದ ನೌಕರರು ಹಣ ಕದ್ದಿದ್ದಾರೆ. ಲೂಟಿ ಬೆಳಕಿಗೆ ಬರುವ ಮುನ್ನ ಮಂದಿರದಲ್ಲಿ ವಾರಕ್ಕೆ 50 ಲಕ್ಷ ರು. ಕಾಣಿಕೆ ರೂಪದಲ್ಲಿ ಸಂಗ್ರಹವಾಗುತ್ತಿತ್ತು. ಆದರೆ ಲೂಟಿಕೋರರು ಸಿಕ್ಕಿಬಿದ್ದಾಗ ಅದು 1.5 ಕೋಟಿ ರು.ಗೆ ಏರಿದೆ. ಇದರರ್ಥ ದೇವಸ್ಥಾನದಲ್ಲಿ ವರ್ಷಕ್ಕೆ 18 ಕೋಟಿ ರು. ಕಳ್ಳತನವಾಗುತ್ತಿತ್ತು’ ಎಂದಿದ್ದಾರೆ.
ಈ ನಡುವೆ ರಾಜ್ ಹೇಳಿಕೆ ಸಮರ್ಥಿಸಿರುವ ಉದ್ಧವ್ ಬಣದ ಶಿವಸೇನೆ ನಾಯಕ ಸಂಜಯ್ ರಾವುತ್, ದೇಗುಲವು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಹಿಡಿತಕ್ಕೆ ಬಂದ ಬಳಿಕ ಅಲ್ಲಿ ಅಕ್ರಮ ಹೆಚ್ಚಾಗಿದೆ ಎಂದಿದ್ದಾರೆ. ಇದರ ನಡುವೆ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷೆ, ಏಕನಾಥ್ ಶಿಂದೆ ಬಣದ ನಾಯಕಿ ಸದಾ ಸರ್ವಾಂಕರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ 9 ಜನರನ್ನು ಬಂಧಿಸಲಾಗಿದೆ. ಇದರಿಂದ ವಾರ್ಷಿಕ ಆದಾಯ ಹೆಚ್ಚಾಗಿದ್ದು, 114 ಕೋಟಿ ರು.ಗಳಿಂದ 182 ಕೋಟಿ ರು.ಗೆ ಏರಿಕೆಯಾಗಿದೆ’ ಎಂದು ಹೇಳಿದ್ದಾರೆ.
ಮೋದಿ ಆಡಳಿತ ಅದ್ಭುತ ಎಂದಾದ್ರೆ ಒಬೇರಾಯ್, ಮಾಧವನ್ ದುಬೈ ವಾಸ ಏಕೆ: ರಾಜ್
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದ ದೇಶದಲ್ಲಿ ಎಲ್ಲವೂ ಅದ್ಭುತವಾಗಿದೆ ಎನ್ನುವುದಾದರೆ ದುಬೈನಲ್ಲಿ ಏಕೆ ನೆಲೆಸಿದ್ದೀರಿ?’ ಎಂದು ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅವರು ದುಬೈನಲ್ಲಿ ನೆಲೆಸಿರುವ ನಟರಾದ ವಿವೇಕ್ ಒಬೆರಾಯ್ ಮತ್ತು ಆರ್.ಮಾಧವನ್ ಅವರನ್ನು ಪ್ರಶ್ನಿಸಿದ್ದಾರೆ.
ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮೋದಿ ಅವರ ಜೀವನಾಧರಿತ ಸಿನಿಮಾದಲ್ಲಿ ಅವರ ಪಾತ್ರ ಮಾಡಿದ್ದ ಒಬೆರಾಯ್ ಅವರು ಭಾರತ ಬಿಟ್ಟು ದುಬೈನಲ್ಲಿದ್ದಾರೆ. ಮೋದಿಯನ್ನು ಹೊಗಳಿದ್ದ ಆರ್. ಮಾಧವನ್ ಕೂಡ ದುಬೈನಲ್ಲಿದ್ದಾರೆ. ನೀವು ಮೋದಿಯನ್ನು ಇಷ್ಟಪಟ್ಟರೆ, ಅವರ ಅಭಿವೃದ್ಧಿ ಮೇಲೆ ನಂಬಿಕೆಯಿದ್ದರೆ ಯಾಕೆ ದೇಶ ಬಿಟ್ಟು ದುಬೈ ನೆಲದಲ್ಲಿ ಕುಟುಂಬದ ಜತೆ ನೆಲೆಸಿದ್ದೀರಿ? ’ ಎಂದು ಪ್ರಶ್ನಿಸಿದರು.


