ಶೇ.40 ರಷ್ಟು ಮೂನ್ ಮಿಶನ್ ವಿಫಲ: ನಾಸಾ ವರದಿಯಲ್ಲಿದೆ ಮಾಹಿತಿ ವಿಫುಲ!
ಚಂದ್ರಯಾನ-2 ಯೋಜನೆ ಹಿನ್ನಡೆ ಹಿನ್ನೆಲೆ| ಯೋಜನೆಗಾಗಿ ಇಸ್ರೋಗೆ ಅಭಿನಂದನೆ ಸಲ್ಲಿಸಿದ ನಾಸಾ| ಯೋಜನೆ ಹಿನ್ನಡೆಯಿಂದಾಗಿ ಧೃತಿಗೆಬೇಡಿ ಎಂದು ನಾಸಾ ಮನವಿ| ‘ಮೂನ್ ಫ್ಯಾಕ್ಟ್ ಶೀಟ್’ ವರದಿ ಬಿಡುಗಡೆ ಮಾಡಿದ ನಾಸಾ | 6 ದಶಕದಲ್ಲಿ ಶೇ.40ರಷ್ಟು ಮೂನ್ ಮಿಶನ್ ವಿಫಲ| 109 ಮೂನ್ ಮಿಶನ್’ನಲ್ಲಿ 61 ಯಶಸ್ವಿ, 41 ವಿಫಲ| ಅಮೆರಿಕ, ರಷ್ಯಾ, ಭಾರತ, ಚೀನಾ, ಜಪಾನ್, ಯೂರೋಪಿಯನ್ ಯೂನಿಯನ್, ಇಸ್ರೇಲ್ ದೇಶಗಳಿಂದ ಮೂನ್ ಮಿಶನ್|
ವಾಷಿಂಗ್ಟನ್(ಸೆ.07): ಭಾರತದ ಚಂದ್ರಯಾನ-2 ಯೋಜನೆ ಹಿನ್ನಡೆ ಕಂಡಿದ್ದು, ವಿಕ್ರಂ ಮೂನ್ ಲ್ಯಾಂಡರ್ ಇಸ್ರೋದೊಂದಿಗೆ ಸಂಪರ್ಕ ಕಡಿದುಕೊಂಡಿದೆ.
ಈ ಮಧ್ಯೆ ಭಾರತದ ಇಸ್ರೋ ಯೋಜನೆಯ ಬೆನ್ನು ತಟ್ಟಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ, ಕಳೆದ 60 ದಶಕದಲ್ಲಿ ಕೈಗೊಳ್ಳಲಾಗದ ಮೂನ್ ಮಿಶನ್’ಗಳಲ್ಲಿ ಶೇ.40ರಷ್ಟು ವಿಫಲವಾಗಿವೆ ಎಂದು ಹೇಳಿದೆ.
ಚಂದ್ರಯಾನ ಯೋಜನೆ ನಿಜಕ್ಕೂ ಒಂದು ಉತ್ತಮ ಯೋಜನೆ ಎಂದಿರುವ ನಾಸಾ, ಹಿನ್ನಡೆಯಿಂದ ಇಸ್ರೋ ಕುಗ್ಗಬೇಕಿಲ್ಲ ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿದೆ. ಅಷ್ಟೇ ಅಲ್ಲದೇ ಭವಿಷ್ಯದಲ್ಲಿ ಇಸ್ರೋದೊಂದಿಗೆ ಜಂಟಿಯಾಗಿ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳಲು ಉತ್ಸುಕನಾಗಿರುವುದಾಗಿ ನಾಸಾ ಸ್ಪಷ್ಟಪಡಿಸಿದೆ.
ಕಳೆದ 6 ದಶಕದಲ್ಲಿ ವಿಶ್ವದಾದ್ಯಂತ ಸುಮಾರು 109 ಮೂನ್ ಮಿಶನ್ ಕೈಗೊಳ್ಳಲಾಗಿದ್ದು, ಇದರಲ್ಲಿ 61 ಯೋಜನೆ ಯಶಸ್ಸು ಕಂಡಿದ್ದರೆ, 41 ಯೋಜನೆ ವಿಫಲವಾಗಿವೆ ಎಂದು ನಾಸಾ ತನ್ನ ವರದಿಯಲ್ಲಿ ತಿಳಿಸಿದೆ.
1958ರಿಂದ 2019ರವರೆಗೆ ಅಮೆರಿಕ, ಭಾರತ, ರಷ್ಯಾ, ಜಪಾನ್, ಯೂರೋಪಿಯನ್ ಯುನಿಯನ್, ಚೀನಾ ಮತ್ತು ಇಸ್ರೇಲ್ ದೇಶಗಳು ವಿವಿಧ ಕಾಲಘಟ್ಟದಲ್ಲಿ ಮೂನ್ ಮಿಶನ್ ಹಮ್ಮಿಕೊಂಡಿದ್ದು, ಕೆಲವೊಮ್ಮೆ ಯಶಸ್ವಿಯಾಗಿದ್ದರೆ ಇನ್ನೂ ಕೆಲವೊಮ್ಮೆ ವಿಫಲವಾಗಿವೆ ಎಂದು ನಾಸಾ ತಿಳಿಸಿದೆ.
ನಾಸಾ ಸಿದ್ಧಪಡಿಸಿರುವ ‘ಮೂನ್ ಫ್ಯಾಕ್ಟ್ ಶೀಟ್’ನ ವರದಿಯಲ್ಲಿ ಈ ಕೆಳಕಂಡ ಅಂಶಗಳನ್ನು ಉಲ್ಲೇಖಿಸಲಾಗಿದೆ.
1. ಆ.17, 1958ರಂದು ನಾಸಾ ಮೊಟ್ಟ ಮೊದಲ ಪಯೋನಿಯರ್ ಮೂನ್ ಮಿಶನ್ ಯೋಜನೆ ಕೈಗೊಂಡಿತ್ತು .ಆದರೆ ಈ ಯೋಜನೆ ವಿಫಲವಾಯಿತು.
2. ಜನೆವರಿ 4, 1959ರಂದು ಅಂದಿನ USSR ಮೊಟ್ಟ ಮೊದಲ ಯಶಸ್ವಿ ಲೂನಾ-1 ಯೋಜನೆಯನ್ನು ಹಮ್ಮಿಕೊಂಡಿತು. ಇದು ವಿಶ್ವ ಮೊದಲ ಯಶಶ್ವಿ ಚಂದ್ರ ಯೋಜನೆ ಎಂಬ ಹೆಗ್ಗಳಿಕೆ ಪಡೆಯಿತು.
3. ಆ.1958ರಿಂದ ನವೆಂಬರ್ 1959ರ ಅವಧಿಯಲ್ಲಿ ಅಮೆರಿಕ ಮತ್ತು ರಷ್ಯಾ ಒಟ್ಟು 14 ಮೂನ್ ಮಿಶನ್ ಹಮ್ಮಿಕೊಂಡಿದ್ದವು. ಆದರೆ ಇವುಗಳಲ್ಲಿ ಕೇವಲ ಲೂನಾ-1, ಲೂನಾ-2 ಹಾಗೂ ಲೂನಾ-3 ಯೋಜನೆಗಳು ಮಾತ್ರ ಯಶಸ್ವಿಯಾದವು. ಈ ಮೂರು ಯೋಜನೆಗಳನ್ನು USSR ಹಮ್ಮಿಕೊಂಡಿದ್ದು ವಿಶೇಷ.
4. ಜುಲೈ 1964ರಲ್ಲಿ ನಾಸಾದ ರೇಂಜರ್-7 ನೌಕೆ ಚಂದ್ರನ ಮೊದಲ ಅತ್ಯಂತ ಸಮೀಪದ ಫೋಟೋ ಕ್ಲಿಕ್ಕಿಸಿತ್ತು.
5. ಜನೆವರಿ 1966ರಲ್ಲಿ USSRನ ಲೂನಾ-9 ಮಿಶನ್ ಮೊಟ್ಟ ಮೊದಲ ಬಾರಿಗೆ ಚಂದ್ರನ ನೆಲ ಸ್ಪರ್ಶಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು.
6. ಮೇ 1966ರಲ್ಲಿ ನಾಸಾದ ಸರ್ವೈವರ್-1 ಮಿಶನ್ ಕೂಡ ಚಂದ್ರನ ನೆಲ ಸ್ಪರ್ಶಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು.
7. ಮುಂದೆ ಜುಲೈ 20, 1969ರಲ್ಲಿ ನಾಸಾದ ಅಪಓಲೋ-11 ನೌಕೆ ಮೊಟ್ಟ ಮೊದಲ ಬಾರಿಗೆ ಮನುಷ್ಯರನ್ನು ಚಂದ್ರನ ಮೇಲೆ ಇಳಿಸಿತು. ನೀಲ್ ಆರ್ಮಸ್ಟ್ರಾಂಗ್ ನೇತೃತ್ವದ ಗಗನಯಾತ್ರಿಗಳ ತಂಡ ಚಂದ್ರನ ನೆಲ ಸ್ಪರ್ಶಿಸಿದ ಮೊದಲ ಮಾನವರು ಎಂಬ ಹೆಗ್ಗಳಿಕೆ ಪಾತ್ರರಾದರು.
8. 1958ರಿಂದ 1979ರವರೆಗೆ ಕೇವಲ ರಷ್ಯಾ ಮತ್ತು ಅಮೆರಿಕ ಮಾತ್ರ ಮೂನ್ ಮಿಶನ್ ಹಮ್ಮಿಕೊಂಡಿದ್ದವು. ಈ 21 ವರ್ಷದಲ್ಲಿ ಒಟ್ಟು 90 ಯೋಜನೆಗಳನ್ನು ಕೈಗೊಳ್ಳಲಾಗಿತ್ತು.
9. 1980ರಿಂದ 1989ರ ಅವಧಿಯಲ್ಲಿ ಒಂದೂ ಚಂದ್ರ ಯೋಜನೆ ಕೈಗೆತ್ತಿಕೊಳ್ಳದಿರುವುದು ವಿಶೇಷವಾಗಿದೆ.
10. 1990ರಲ್ಲಿ ಜಪಾನ್ ತನ್ನ ಹಿಟೆನ್ ನೌಕೆಯನ್ನು ಚಂದ್ರನತ್ತ ಕಳುಹಿಸಿತು. ನಂತರ 2007ರಲ್ಲಿ ಸೆಲೆನೆ ನೌಕೆಯನ್ನು ಉಡಾಯಿಸಿತು.
11. 2000ರಿಂದ 2009ರ ಅವಧಿಯಲ್ಲಿ ಒಟ್ಟು 6 ಮೂನ್ ಮಿಶನ್ ಹಮ್ಮಿಕೊಳ್ಳಲಾಗಿತ್ತು. ಜಪಾನ್(ಸೆಲೆನೆ), ಯೂರೋಪಿಯನ್ ಯುನಿಯನ್(ಸ್ಮಾರ್ಟ್-1) ಚೀನಾ(ಚೇಂಜ್-1), ಭಾರತ(ಚಂದ್ರಯಾನ-1), ಅಮೆರಿಕ(LCCROSS) ಯೋಜನೆಯನ್ನು ಕೈಗೆತ್ತಿಕೊಂಡಿದ್ದವು.
12. 2009-2019ರ ಅವಧಿಯಲ್ಲಿ ಒಟ್ಟು 1o ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ 5 ನೌಕೆಗಳನ್ನು ಭಾರತದಿಂದಲೇ ಉಡಾಯಿಸಲಾಗಿತ್ತು.
13. 1990ರಿಂದ ಇಲ್ಲಿಯವರೆಗೆ ಅಮೆರಿಕ, ಭಾರತ, ಚೀನಾ, ಜಪಾನ್, ಯೂರೋಪಿಯನ್ ಯೂನಿಯನ್ ಹಾಗೂ ಇಸ್ರೇಲ್ ದೇಶಗಳು ಒಟ್ಟು 19 ಮೂನ್ ಮಿಶನ್’ಗಳನ್ನು ಹಮ್ಮಿಕೊಂಡಿವೆ.
14. 2018ರ ಏಪ್ರಿಲ್’ನಲ್ಲಿ ಇಸ್ರೇಲ್ ಬೇರ್’ಶೀಟ್ ಎಂಬ ಚಂದ್ರ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಆದರೆ ನೌಕೆ ಕ್ರ್ಯಾಶ್ ಆಗುವ ಮೂಲಕ ಯೋಜನೆ ವಿಫಲಗೊಂಡಿತ್ತು.