ನವದೆಹಲಿ[ಸೆ.07]: ಒಂದೆಡೆ ನೆರೆ ರಾಷ್ಟ್ರ ಪಾಕಿಸ್ತಾನ ಚಂದ್ರಯಾನ 2ರಲ್ಲಿ ಭಾರತಕ್ಕಾಗದ ಹಿನ್ನಡೆಯನ್ನು ಸಂಭ್ರಮಿಸುತ್ತಿದ್ದರೆ, ವಿಶ್ವದ ಇತರ ರಾಷ್ಟ್ರದ ಗಣ್ಯರು ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಹಾಡಿ ಹೊಗಳಿದ್ದಾರೆ. ಮೊದಲ ಯತ್ನದಲ್ಲೇ ಭಾರತದ ವಿಜ್ಞಾನಿಗಳ ಅದ್ಭುತ ಸಾಧನೆಯನ್ನು ಕೊಂಡಾಡಿದ್ದಾರೆ.

ಹೌದು ಇಸ್ರೋ ವಿಜ್ಞಾನಿಗಳಿಗೆ ಅಂತಿಮ ಕ್ಷಣದಲ್ಲಿ ಹಿನ್ನಡೆಯಾಗಿದೆಯಾಗಿದೆಯಾದರೂ, ಚಂದ್ರಯಾನ 2 ಶೇ. 95ರಷ್ಟು ಯಶಸ್ವಿಯಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷರೇ ಹೇಳಿದ್ದಾರೆ. ಇಡೀ ದೇಶವೇ ಇಸ್ರೋ ಬೆನ್ನಿಗೆ ನಿಂತಿದೆ. ಹಿನ್ನಡೆಯಾದರೂ ಮತ್ತೆ ಪ್ರಯತ್ನಿಸಿ ಭಾರತ ಚಂದ್ರನ ಅಂಗಳಕ್ಕೆ ತಲುಪುತ್ತದೆ ಎಂಬುವುದನ್ನು ತಮ್ಮ ಭಾಷಣದಲ್ಲಿ ದೃಢಪಡಿಸಿದ್ದಾರೆ. ಸದ್ಯ ಭೂತಾನ್ ಪ್ರಧಾನಿಯೂ ನಮ್ಮ ವಿಜ್ಞಾನಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಭೂತಾನ್ ಪ್ರಧಾನಿ ಲೋಟೆ ತ್ಸೆರಿಂಗ್ 'ಭಾರತ ಹಾಗೂ ಅಲ್ಲಿನ ವಿಜ್ಞಾನಿಗಳ ಸಾಧನೆ ಬಗ್ಗೆ ಹೆಮ್ಮೆಯಾಗುತ್ತದೆ. ಅಂತಿಮ ಕ್ಷಣದವರೆಗೂ ಸವಾಲುಗಳನ್ನೆದುರಿಸಿದ್ದ ಚಂದ್ರಯಾನ 2 ಪಯಣವನ್ನಾರಂಭಿಸಿತ್ತು. ಆದರೆ ವಿಜ್ಞಾನಿಗಳ ಕಠಿಣ ಪರಿಶ್ರಮ ಹಾಗೂ ಧೈರ್ಯ ಇತಿಹಾಸದಲ್ಲಿ ದಾಖಲಾಗಲಿದೆ. ಇಸ್ರೋ ತಂಡ ಮುಂದಿನ ದಿನಗಳಲ್ಲಿ ಯಶಸ್ಸು ಸಾಧಿಸುತ್ತದೆ ಎನ್ನುವುದರಲ್ಲಿ ನನಗೆ ಕಿಂಚಿತ್ತೂ ಅನುಮಾನವಿಲ್ಲ' ಎಂದಿದ್ದಾರೆ.

ಸದ್ಯ ಭೂತಾನ್ ಪ್ರಧಾನಿಯ ಈ ಟ್ವೀಟ್ ಭಾರೀ ವೈರಲ್ ಆಗುತ್ತಿದ್ದು, ಭಾರತೀಯರ ಮನ ಗೆದ್ದಿದೆ.