ಇಡೀ ದೇಶದ ಭಾವನೆ ಹಿಡಿದಿಟ್ಟ ಕನ್ನಡಿಗ ಬರೆದ ಕಾರ್ಟೂನ್ ಎಲ್ಲೆಡೆ ವೈರಲ್!
ಇಸ್ರೋ ಬೆನ್ನು ತಟ್ಟಿದ ಭಾರತೀಯರು| ನಿಮ್ಮ ಸಾಧನೆ ಅಸಾಮಾನ್ಯ, ಕುಗ್ಗದಿರಿ... ಮತ್ತೆ ಪ್ರಯತ್ನಿಸಿ, ನಿಮ್ಮೊಂದಿಗೆ ನಾವಿದ್ದೇವೆ ಅಂದ್ರ ದೇಶದ ಜನತೆ| ಇಡೀ ದೇಶದ ಜನರ ಭಾವನೆಯನ್ನು ಒಂದೇ ಚಿತ್ರದಲ್ಲಿ ಹಿಡಿದಿಟ್ಟ ಚಿಕ್ಕಮಗಳೂರಿನ ಕಾರ್ಟೂನಿಸ್ಟ್| ಬಾಲಿವುಡ್ ತಾರೆಯರ ಖಾತೆಯಲ್ಲೂ ಕನ್ನಡಿಗನ ಕಾರ್ಟೂನ್
ಬೆಂಗಳೂರು[ಸೆ.07]: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ 2 ನೌಕೆಯ ಸಂಪರ್ಕ ಕೊನೆಯ ಕ್ಷಣದಲ್ಲಿ ಕಡಿತಗೊಂಡಿದೆ. ಹೀಗಾಗಿ ಚಂದ್ರನಲ್ಲಿ ಅಡಗಿರುವ ರಹಸ್ಯ ಭೇದಿಸುವ ಕನಸು ಹೊತ್ತಿದ್ದ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ. ಅಂತಿಮ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ಜೊತೆಗಿನ ಸಿಗ್ನಲ್ ಕಡಿತಗೊಂಡಿದ್ದರೂ ಚಂದ್ರಯಾನ 2 ಶೇ. 95ರಷ್ಟು ಯಶಸ್ವಿಯಾಗಿದೆ. ಮೊದಲ ಪ್ರಯತ್ನದಲ್ಲೇ ಈ ಮಟ್ಟದ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಇಡೀ ದೇಶವೇ ಭೇಷ್ ಎಂದಿದೆ. ಸದ್ಯ ಪ್ರತಿಯೊಬ್ಬ ಭಾರತೀಯನ ಭಾವನೆಯನ್ನು ಹಿಡಿದಿಟ್ಟಿರುವ ಕನ್ನಡಿಗನ ಕೈಯ್ಯಲ್ಲರಳಿದ ಕಾರ್ಟೂನ್ ಒಂದು ವೈರಲ್ ಆಗುತ್ತಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.
ಇಸ್ರೋ ವಿಜ್ಞಾನಿಗಳೇ, ನಿಮ್ಮೊಂದಿಗಿದೆ ಭಾರತ: ಮೋದಿ ವಿಶ್ವಾಸದ ಮಾತಿಗೆ ವಿಜ್ಞಾನಿಗಳು ಭಾವುಕ!
ಬಿಗ್ ಬಿ ಸೋಶಿಯಲ್ ಮೀಡಿಯಾ ಖಾತೆಯಲ್ಲೂ ಮಿಂಚಿದ ಕಾರ್ಟೂನ್
ಹೌದು ಚಿಕ್ಕಮಗಳೂರಿನ ಹವ್ಯಾಸಿ ಕಾರ್ಟೂನಿಸ್ಟ್ ರಘುಪತಿ ಶೃಂಗೇರಿ ಕೈಯಲ್ಲಿ ಮೂಡಿಬಂದ ಚಿತ್ರವೊಂದು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಸೌಂಡ್ ಮಾಡುತ್ತಿದೆ. ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ ಕೂಡಾ ತಮ್ಮ ಟ್ವಿಟರ್ ಹಾಗೂ ಫೇಸ್ ಬುಕ್ ಖಾತೆಗಳಲ್ಲಿ ಈ ಕಾರ್ಟೂನ್ ಶೇರ್ ಮಾಡಿಕೊಂಡು ಇಸ್ರೋ ಸಾಧನೆಯನ್ನು ಹಾಡಿ ಹೊಗಳಿದ್ದಾರೆ.
ಭಾರತೀಯರೆಲ್ಲರ ಭಾವನೆಯನ್ನು ಹಿಡಿದಿಟ್ಟಿರುವ ಈ ಕಾರ್ಟೂನ್ ನಲ್ಲಿ ತ್ರಿವರ್ಣ ಬಣ್ಣವಿರುವ ಭಾರತ ಇಸ್ರೋ ಮುಖ್ಯಸ್ಥ ಡಾ. ಕೆ. ಶಿವನ್ ರನ್ನು ಅಪ್ಪಿಕೊಂಡಿರುವ ದೃಶ್ಯವಿದೆ. ಇದರ ಜೊತೆ India Is With You ISRO ಎಂದೂ ಬರೆಯಲಾಗಿದೆ. ಇದು ಒಂದೆಡೆ 'ನಿಮ್ಮ ಸಾಧನೆ ಅಸಾಮಾನ್ಯ, ನಾವು ನಿಮ್ಮೊಂದಿಗಿದ್ದೇವೆ. ಕುಗ್ಗದಿರಿ, ಮತ್ತೆ ಪ್ರಯತ್ನಿಸಿ' ಎಂದ ಭಾರತೀಯರ ಒಕ್ಕೊರಲಿನ ಧ್ವನಿಯನ್ನು ಎತ್ತಿ ಹಿಡಿಯುತ್ತಿದ್ದರೆ, ಮತ್ತೊಂದೆಡೆ ಇಂದು ಶನಿವಾರ ಬೆಳಗ್ಗೆ ಪ್ರಧಾನಿ ಮೋದಿ ತಮ್ಮ ಭಾಷಣ ಮುಗಿದ ಬಳಿಕ ಅಳುತ್ತಿದ್ದ ಶಿವನ್ ರನ್ನು ತಬ್ಬಿ ಧೈರ್ಯ ತುಂಬಿರುವುದನ್ನೂ ನೆನಪಿಸುತ್ತದೆ.
Video: ಮೋದಿ ತಬ್ಬಿ ಕಣ್ಣೀರು ಹಾಕಿದ ಇಸ್ರೋ ಅಧ್ಯಕ್ಷ, ಬೆನ್ನು ತಟ್ಟಿ ಧೈರ್ಯ ತುಂಬಿದ ಪಿಎಂ!
ಶೃಂಗೇರಿಯ ಹವ್ಯಾಸಿ ವ್ಯಂಗ್ಯಚಿತ್ರಕಾರ
ಶೃಂಗೇರಿಯ ಶೃಂಗೇಶ್ವರ ರಾವ್ ಮತ್ತು ಯಶೋದ ದಂಪತಿ ಪುತ್ರ ರಘುಪತಿ ಶೃಂಗೇರಿ ನಮ್ಮ ನಾಡು ಕಂಡ ಶ್ರೇಷ್ಠ ವ್ಯಂಗ್ಯಚಿತ್ರಕಾರರಲ್ಲೊಬ್ಬರಾದ ಡಾ. ಸತೀಶ್ ಶೃಂಗೇರಿ ಅವರ ಸಹೋದರರೂ ಹೌದು. ಇವರ ಕೆಲವು ವ್ಯಂಗ್ಯಚಿತ್ರಗಳಿಗೆ 6 ಅಂತರಾಷ್ಟ್ರೀಯ, 2 ರಾಷ್ಟ್ರೀಯ ಮತ್ತು ಹಲವು ರಾಜ್ಯ ವಲಯದ ಪ್ರಶಸ್ತಿಗಳು ಲಭಿಸಿವೆ. ಇದುವರೆಗೆ ಇವರ ಹಲವಾರು ಕಲಾಕೃತಿಗಳು ಪ್ರದರ್ಶನಗೊಂಡಿವೆ.
ವಾಟ್ಸಾಪ್ ಸ್ಟೇಟಸ್, ಫೇಸ್ ಬುಕ್ ಹಾಗೂ ಟ್ವಿಟರ್ ಹೀಗೆ ಎಲ್ಲೆಡೆ ರಾರಾಜಿಸುತ್ತಿರುವ ಈ ಕಾರ್ಟೂನ್ ಗೆ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ. ಭಾರತೀಯರೆಲ್ಲರ ಭಾವನೆಯನ್ನು ಒಂದೇ ಚಿತ್ರದಲ್ಲಿ ಹಿಡಿದಿಟ್ಟ ಕಲಾವಿದ ಕರುನಾಡಿನವರೆಂಬುವುದು ಮತ್ತೊಂದು ಹೆಮ್ಮೆಯ ವಿಚಾರ.