Asianet Suvarna News Asianet Suvarna News

ಇಸ್ರೋ ಚಂದ್ರಯಾನ ಲ್ಯಾಂಡರ್ ಸಂಪರ್ಕ ಕಡೇ ಕ್ಷಣದಲ್ಲಿ ಕಡಿತ!

ಆತಂಕ ಉಂಟು ಮಾಡಿದ ಚಂದ್ರಯಾನದ ಕೊನೆ 15 ನಿಮಿಷ ಮೊದಲ ಕ್ಷಣಗಳು ಸುಸೂತ್ರ| ಕೊನೆಯಲ್ಲಿ ಸಿಗ್ನಲ್ ಸ್ಥಗಿತ| ಬೆಂಗಳೂರಿನಲ್ಲಿ ಚಂದ್ರಯಾನ ಕ್ಷಣಗಳನ್ನು ವೀಕ್ಷಿ ಸಿದ ಮೋದಿ

Chandrayaan 2 Efforts on to get in touch with Vikram lander after Isro loses contact
Author
Bangalore, First Published Sep 7, 2019, 7:26 AM IST

ಬೆಂಗಳೂರು[ಸೆ.07]: ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯ ಸಂಪರ್ಕ ಕೊನೆ ಕ್ಷಣದಲ್ಲಿ ಕಡಿತಗೊಂಡಿದೆ. ಇದರಿಂದಾಗಿ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಒಡಲಲ್ಲಿ ಅಡಗಿರುವ ಅನೂಹ್ಯ ರಹಸ್ಯಗಳನ್ನು ಭೇದಿಸುವ ಗುರಿ ಹೊಂದಿದ್ದ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ.

ಚಂದ್ರನ ಅಂಗಳದ ಮೇಲೆ ಲ್ಯಾಂಡರ್ ಅನ್ನು ಇಳಿಸುವ ಕೊನೆಯ 15ನಿಮಿಷ ಭಾರೀ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಹೀಗಾಗಿ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1 ಕಿ.ಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ ಕಡಿದುಕೊಂಡಿತು. ಈ ವೇಳೆ ಇಸ್ರೋ ಕೇಂದ್ರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಸಿಗ್ನಲ್‌ಗಾಗಿ ಕೆಲ ಹೊತ್ತು ನಿರೀಕ್ಷಿಸಲಾಯಿತು. ಆದರೆ ಯಾವುದೇ ಧನಾತ್ಮಕ ಫಲ ಸಿಗಲಿಲ್ಲ. ಕೊನೆಗೆ ಇಸ್ರೋ ಅಧ್ಯಕ್ಷ ಶಿವನ್ ಅವರು ಲ್ಯಾಂಡರ್ 2.1 ಕಿ. ಮೀ.ವರೆಗೆ ಸುಸೂತ್ರವಾಗಿ ಕೆಲಸ ಮಾಡಿದೆ. ಆ ನಂತರ ಸಿಗ್ನಲ್ ಕಡಿತಗೊಂಡಿದೆ. ಇದರ ಡೇಟಾವನ್ನು ವಿಶ್ಲೇಷಣೆ ಮಾಡುತ್ತೇವೆ ಎಂದು ಘೋಷಿಸಿದರು.

"

ಚಂದ್ರಯಾನ-2 ನೇತೃತ್ವ ಮಹಿಳಾ ವಿಜ್ಞಾನಿಗಳದ್ದು!

ಮೋದಿ ವೀಕ್ಷಣೆ:

ಇಸ್ರೋದ ಕೌತುಕ ಕ್ಷಣವನ್ನು ವೀಕ್ಷಿಸಲು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದರು. ವಿಜ್ಞಾನಿಗಳ ಜತೆ ಕೂತು ವೀಕ್ಷಿಸಿದರು. ಸಿಗ್ನಲ್ ಕಡಿತಗೊಂಡ ಬಳಿಕ ವಿಜ್ಞಾನಿಗಳು ಪ್ರಧಾನಿಯವರಿಗೆ ಮಾಹಿತಿ ನೀಡಿದರು. ನಮ್ಮ ವಿಜ್ಞಾನಿಗಳು ದೇಶದ ಹೆಮ್ಮೆ. ನಿಮ್ಮೊಂದಿಗೆ ನಾವಿದ್ದೇವೆ. ಮುಂದೆ ಹೆಜ್ಜೆ ಹಾಕೋಣ ಎಂದು ಹೇಳಿದರು. ಬಳಿಕ ಚಂದ್ರಯಾನ ವೀಕ್ಷಿಸಲು ಆಗಮಿಸಿದ್ದ ಮಕ್ಕಳ ಜತೆ ಸಂವಾದ ನಡೆಸಿದರು.

ಲ್ಯಾಂಡರ್ ಮತ್ತು ರೋವರ್ ಅನ್ನು ಚಂದ್ರನ ಮೇಲೆ ಸಾಫ್ಟ್‌ಲ್ಯಾಂಡಿಂಗ್ ಮಾಡುವುದು ರೋಚಕ ಮತ್ತು ಭಯಾನಕ ಕ್ಷಣವಾಗಿದ್ದು, ಇದೊಂದು ರೀತಿ ಮಗುವನ್ನು ತೊಟ್ಟಿಲಿನಲ್ಲಿ ಹಾಕುವ ರೀತಿಯ ಪ್ರಕ್ರಿಯೆಯಾಗಿದೆ ಎಂದು ಹಿರಿಯ ವಿಜ್ಞಾನಿಯೊಬ್ಬರು ಹೇಳಿದ್ದರು. ಹೀಗಾಗಿ ವಿಜ್ಞಾನಿಗಳಲ್ಲಿ ವಿಶ್ವಾಸವಿದ್ದರೂ ಎಲ್ಲೋ ಒಂದು ಕಡೆ ಆತಂಕವೂ ಇತ್ತು.

"

ಏನಾಯ್ತು? :

ಚಂದ್ರನ ಮೇಲ್ಮೈನಿಂದ 30 ಕಿ.ಮೀ. ಎತ್ತರದಲ್ಲಿ ಹಾರಾಡುತ್ತಿದ್ದ ಲ್ಯಾಂಡರ್ ಅನ್ನು ತಡರಾತ್ರಿ 1.35ಕ್ಕೆ ಇಳಿಸುವ ರಫ್ ಬ್ರೇಕಿಂಗ್ ಹಂತವನ್ನು ನೆರವೇರಿಸಲಾಯಿತು. ನಂತರ 10 ನಿಮಿಷಗಳ ನಂತರ 7 ಕಿ.ಮೀ. ಎತ್ತರಕ್ಕೆ ಇಳಿಸುವ ಫೈನ್ ಬ್ರೇಕಿಂಗ್ ಪ್ರಕ್ರಿಯೆ ನಡೆಯಿತು. ನಂತರ ಲೋಕಲ್ ನೇವಿಗೇಶನ್ ಆರಂಭವಾಗಿ, ಲ್ಯಾಂಡರ್ ಪೋಟೋವನ್ನು ಇಸ್ರೋಗೆ ಕಳುಹಿಸುವ ಪ್ರಕ್ರಿಯೆ ನಡೆಯಬೇಕಿತ್ತು. ಬಳಿಕ ಲ್ಯಾಂಡರ್ ಚಂದ್ರನ ಮೇಲೆ ನಿಧಾನವಾಗಿ ಇಳಿಯಬೇಕಿತ್ತು. ಆದರೆ ಫೈನ್ ಬ್ರೇಕಿಂಗ್ ಪ್ರಕ್ರಿಯೆ ನಂತರ ಲ್ಯಾಂಡರ್ ಸಂಪರ್ಕ ಕಡಿದುಹೋಯಿತು. ಇಸ್ರೋ ಟಿವಿ ಮಾನಿಟರ್‌ಗಳಲ್ಲಿ ಲ್ಯಾಂಡರ್ ನಿರ್ದಿಷ್ಟ ಪಥ ಬಿಟ್ಟು ಬೇರೆಡೆ ಚಲಿಸಿದ ಬಗ್ಗೆ ಕಾಣಿಸುತ್ತಿತ್ತು. ಈ ವೇಳೆ ಎಲ್ಲರಲ್ಲಿ ಆತಂಕ ಮನೆ ಮಾಡಿತ್ತು. ಕೆಲ ಹೊತ್ತು ಕಾದರೂ ಸಂಪರ್ಕ ಸಿಗಲಿಲ್ಲ. ಆಗ ಇಸ್ರೋ ಅಧ್ಯಕ್ಷ ಶಿವನ್ ಅವರು ಸಿಗ್ನಲ್ ಕಡಿತಗೊಂಡಿದೆ. ಡೇಟಾ ವಿಶ್ಲೇಷಿಸುತ್ತೇವೆ ಎಂದು ಹೇಳಿದರು.

ಚಂದ್ರಯಾನ-2 ಕಂಡಂತೆ ವಸುಧೆ: ತಾಯಿಯ ಮಡಿಲಂತೆ ಕಾಣದೆ?

ಜು.22ರಂದು ಆಂಧ್ರದ ಶ್ರೀಹರಿಕೋಟ ನೆಲೆಯಿಂದ ಜಿಎಸ್ ಎಲ್‌ವಿ ರಾಕೆಟ್ ಮೂಲಕ ಚಂದ್ರಯಾನ-2 ನೌಕೆ ಉಡಾವಣೆಯಾಗಿತ್ತು. ಈ ನೌಕೆಯಲ್ಲಿ ಆರ್ಬಿಟರ್, ರೋವರ್ ಅನ್ನು ಒಡಲಲ್ಲಿಟ್ಟುಕೊಂಡ ಲ್ಯಾಂಡರ್ ಇದ್ದವು. ಸೆ.2ರಂದು ಗಣೇಶ ಹಬ್ಬದ ದಿನದಂದು ಆರ್ಬಿಟರ್ ಹಾಗೂ ಲ್ಯಾಂಡರ್ ಪ್ರತ್ಯೇಕಗೊಂಡಿದ್ದವು

ಸಾಫ್ಟ್ ಲ್ಯಾಂಡಿಂಗ್ ಆಗ ಹುಟ್ಟಿದ ಮಗುವಿದ್ದಂತೆ

ಸಾಫ್ಟ್‌ಲ್ಯಾಂಡಿಂಗ್ ನಮಗೆ ಹೊಸದಾದ ಹಾಗೂ ಸಂಕೀರ್ಣತೆಯ ಪ್ರಕ್ರಿಯೆ. 15 ನಿಮಿಷವು ನಮಗೆ ಭಯಾನಕ. ಇದೊಂದು ರೀತಿ ಯಾರೋ ಒಬ್ಬರು ಆಗಷ್ಟೇ ಹುಟ್ಟಿದ ಮಗುವನ್ನು ಅನಿರೀಕ್ಷಿತವಾಗಿ ನಿಮ್ಮ ಕೈಗೆ ಇಟ್ಟಂತೆ. ಅಗತ್ಯದ ಸಹಾಯವಿಲ್ಲದೆ ಮಗುವನ್ನು ಎತ್ತಿಕೊಳ್ಳಲು ನಿಮ್ಮಿಂದ ಸಾಧ್ಯವೇ? ಸಹಾಯವಿಲ್ಲದೆ ಮಗುವನ್ನು ಎತ್ತಿಕೊಂಡರೆ, ಆ ಕಡೆಯಿಂದ ಈ ಕಡೆಗೆ ಮಗು ಅಲ್ಲಾಡುತ್ತದೆ. ಅದಕ್ಕಾಗಿ ಮಗುವನ್ನು ನಾವು ಹಿಡಿದಿಟ್ಟುಕೊಳ್ಳಬೇಕು. 

-ಡಾ. ಕೆ. ಶಿವನ್ ಇಸ್ರೋ ಮುಖ್ಯಸ್ಥ (ಶುಕ್ರವಾರ ಸಂಜೆ ನೀಡಿದ್ದ ಹೇಳಿಕೆ)

Follow Us:
Download App:
  • android
  • ios