2026ರ ಆಗಸ್ಟ್ ತಿಂಗಳು ಜಾಗತಿಕವಾಗಿ ಅತಿ ಹೆಚ್ಚು ಉಷ್ಣಾಂಶ ದಾಖಲಿಸಿದ್ದು, ಇದಕ್ಕೆ ಹಸಿರುಮನೆ ಅನಿಲಗಳು ಮತ್ತು 'ಎಲ್ ನಿನೋ' ಕಾರಣವಾಗಿವೆ. ಇದರ ನೇರ ಪರಿಣಾಮ ಕರ್ನಾಟಕದ ಮೇಲಾಗಿದ್ದು, ರಾಜ್ಯದಲ್ಲಿ ತೀವ್ರ ಬರಗಾಲದ ಜೊತೆಗೆ ತಾಪಮಾನವು ಸರಾಸರಿಗಿಂತ 5.5 ಡಿಗ್ರಿಯಷ್ಟು ಹೆಚ್ಚಳವಾಗಿದೆ, ಇದು ಕೃಷಿ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ಸೃಷ್ಟಿಸಿದೆ.
ನವದೆಹಲಿ/ಬೆಂಗಳೂರು: ವಿಶ್ವದಾದ್ಯಂತ ಹವಾಮಾನ ವೈಪರೀತ್ಯ ತೀವ್ರಗೊಳ್ಳುತ್ತಿದ್ದು, 2026ರ ಆಗಸ್ಟ್ ತಿಂಗಳು ಜಾಗತಿಕವಾಗಿ ಅತ್ಯಂತ ಹೆಚ್ಚಿನ ಉಷ್ಣಾಂಶ ಹೊಂದಿದ್ದ ತಿಂಗಳು ಎಂಬ ಆತಂಕಕಾರಿ ದಾಖಲೆಗೆ ಪಾತ್ರವಾಗಿದೆ. ಯುರೋಪಿಯನ್ ಹವಾಮಾನ ವೀಕ್ಷಣಾಲಯ ‘ಸಿ3ಎಸ್’ (C3S) ನೀಡಿರುವ ವರದಿಯ ಪ್ರಕಾರ, ಈ ಬಾರಿಯ ಆಗಸ್ಟ್ ತಾಪಮಾನವು ಜುಲೈ 2023ರಲ್ಲಿ ದಾಖಲಾಗಿದ್ದ ಸಾರ್ವಕಾಲಿಕ ಗರಿಷ್ಠ ಉಷ್ಣಾಂಶದ ಮಟ್ಟಕ್ಕೆ ಸಮನಾಗಿದೆ.
ಮಾನವ ನಿರ್ಮಿತ ಜಾಗತಿಕ ತಾಪಮಾನ ಏರಿಕೆಯನ್ನು ಅಳೆಯಲು ಆಧಾರವಾಗಿಟ್ಟುಕೊಳ್ಳುವ ‘ಕೈಗಾರಿಕಾ ಪೂರ್ವ ಅವಧಿ’ಗೆ (Pre-industrial period) ಹೋಲಿಸಿದರೆ, ಕಳೆದ ಆಗಸ್ಟ್‌ನಲ್ಲಿ ಜಾಗತಿಕ ಸರಾಸರಿ ತಾಪಮಾನವು 1.65 ಡಿ.ಸೆ. ನಷ್ಟು ಹೆಚ್ಚಾಗಿದೆ. ನವೆಂಬರ್ 2025ರ ನಂತರ ಇದೇ ಮೊದಲ ಬಾರಿಗೆ ಮಾಸಿಕ ಸರಾಸರಿ ತಾಪಮಾನವು ಕೈಗಾರಿಕಾ ಪೂರ್ವದ ಸರಾಸರಿಗಿಂತ1.5 ನಷ್ಟು ಗಡಿಯನ್ನು ದಾಟಿದೆ. ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು, ತೈಲ ಹಾಗೂ ನೈಸರ್ಗಿಕ ಅನಿಲಗಳ ಅತಿಯಾದ ದಹನದಿಂದ ವಾತಾವರಣಕ್ಕೆ ಸೇರುತ್ತಿರುವ ಹಸಿರುಮನೆ ಅನಿಲಗಳು ಮತ್ತು ‘ಎಲ್ ನಿನೋ’ (El Niño) ಮಾರುತಗಳ ಪ್ರಭಾವವೇ ಈ ತಾಪಮಾನ ಏರಿಕೆಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ. ಕಲ್ಲಿದ್ದಲು ಮತ್ತು ಇಂಧನಗಳ ಬಳಕೆಗೆ ಶೀಘ್ರವೇ ಕಡಿವಾಣ ಹಾಕದಿದ್ದರೆ ತಾಪಮಾನವು ಇಂತೆಯೇ ಏರುತ್ತಾ ಹೋಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ಕರ್ನಾಟಕದಲ್ಲೂ ‘ಎಲ್ ನಿನೋ’ ಬಿಸಿ: ಸರಾಸರಿಗಿಂತ 5.5 ಡಿಗ್ರಿಯಷ್ಟು ಉಷ್ಣಾಂಶ ಹೆಚ್ಚಳ
ಜಾಗತಿಕ ತಾಪಮಾನ ವೈಪರೀತ್ಯದ ಬಿಸಿ ಈಗ ಕರ್ನಾಟಕಕ್ಕೂ ನೇರವಾಗಿ ತಟ್ಟಿದೆ. ರಾಜ್ಯದಲ್ಲಿ ಮುಂಗಾರು ಮಳೆಗಾಲ ಪೂರ್ಣಗೊಳ್ಳುವ ಮೊದಲೇ ಬೇಸಿಗೆಯಂತಹ ಕಠಿಣ ವಾತಾವರಣ ನಿರ್ಮಾಣವಾಗಿದ್ದು, ಅರ್ಧಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಾಪಮಾನವು ಸಾಧಾರಣ ಮಟ್ಟಕ್ಕಿಂತ ಗರಿಷ್ಠ 5.5 ಡಿಗ್ರಿಯಷ್ಟು ಹೆಚ್ಚಾಗಿದೆ.
‘ಎಲ್ ನಿನೋ’ ಪರಿಣಾಮದಿಂದಾಗಿ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂಗಾರು ಮಳೆಯ ಅಭಾವ ಉಂಟಾಗಿ ತೀವ್ರ ಬರಗಾಲ ಆವರಿಸಿದೆ. ಇದರ ಮುಂದುವರಿದ ಭಾಗವಾಗಿ ಈಗ ಬಿಸಿಲಿನ ತಾಪಮಾನವೂ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ವಿಶೇಷವಾಗಿ, ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಮಳೆಗಾಲದ ಕೊನೆಯ ತಿಂಗಳಾದ ಸೆಪ್ಟೆಂಬರ್‌ನಲ್ಲಿ ಸಾಮಾನ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಒಳಗಿರುತ್ತಿತ್ತು. ಆದರೆ, ಈ ವರ್ಷ ಸೆಪ್ಟೆಂಬರ್ 1ರಿಂದಲೇ ನಿರಂತರವಾಗಿ 30 ರಿಂದ 32 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ.
ಬೆಂಗಳೂರು ಹವಾಮಾನ ಇಲಾಖೆ ಮುಖ್ಯಸ್ಥ ಡಾ. ಎನ್. ಪುವಿಅರಸನ್ ನೀಡಿರುವ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಯಾವುದೇ ಲಕ್ಷಣಗಳಿಲ್ಲ. ಆ ನಂತರ ದಕ್ಷಿಣ ಒಳನಾಡಿನಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗುವ ಸಾಧ್ಯತೆಯಿದ್ದು, ಆಗ ತಾಪಮಾನದಲ್ಲಿ ಕೊಂಚ ಇಳಿಕೆ ಕಂಡುಬರಬಹುದು.
ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಗುರುವಾರ ಹಾಸನದಲ್ಲಿ ಸರಾಸರಿಗಿಂತ 5.5°C ತಾಪಮಾನ ಹೆಚ್ಚಳವಾಗಿ ಗರಿಷ್ಠ 32.8°C ದಾಖಲಾದರೆ, ಧಾರವಾಡದಲ್ಲಿ 4.3°C ಹೆಚ್ಚಳದೊಂದಿಗೆ 32.2°C ಮತ್ತು ಮೈಸೂರಿನಲ್ಲಿ 3.9°C ಹೆಚ್ಚಳದೊಂದಿಗೆ 33.0°C ಉಷ್ಣಾಂಶ ದಾಖಲಾಗಿದೆ. ಇದೇ ರೀತಿ ಬೀದರ್ 3.2 ಹೆಚ್ಚಳ (32.8°C), ಗದಗ 3.0 ಹೆಚ್ಚಳ (32.6°C), ಚಿತ್ರದುರ್ಗ 3.0 ಹೆಚ್ಚಳ (32.0°C), ರಾಯಚೂರು 2.9 ಹೆಚ್ಚಳ (35.0°C) ಹಾಗೂ ಕಲಬುರಗಿಯಲ್ಲೂ 2.6 ಹೆಚ್ಚಳ (34.6°C) ತಾಪಮಾನ ವಾಡಿಕೆಗಿಂತ ಹೆಚ್ಚಾಗಿದೆ.
ಮಳೆಗಾಲದ ಕೊನೆಯ ತಿಂಗಳಾದ ಸೆಪ್ಟೆಂಬರ್‌ನಲ್ಲಿ ಸಾಮಾನ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನವು 30°C ಒಳಗಿರುತ್ತಿತ್ತು. ಆದರೆ, ಈ ವರ್ಷ ಸೆಪ್ಟೆಂಬರ್ 1ರಿಂದಲೇ ನಿರಂತರವಾಗಿ 30°C ನಿಂದ 32°C ವರೆಗೆ ಉಷ್ಣಾಂಶ ಮುಟ್ಟುತ್ತಿದ್ದು, ನಗರದಲ್ಲೂ ಸರಾಸರಿಗಿಂತ 3.2°C ನಷ್ಟು ಹೆಚ್ಚು ತಾಪಮಾನ (31.4°C) ದಾಖಲಾಗಿದೆ. ವಾತಾವರಣದಲ್ಲಿನ ಈ ದಿಢೀರ್ ಬದಲಾವಣೆಯು ಸಾರ್ವಜನಿಕರ ಆರೋಗ್ಯ ಹಾಗೂ ಕೃಷಿ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಮೂಡಿಸಿದೆ.


