ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರು ಇತ್ತೀಚೆಗೆ ರೈಲು ಪ್ರಯಾಣದ ವೇಳೆ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಸಹಪ್ರಯಾಣಿಕರ ಅಶಿಸ್ತಿನ ವರ್ತನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ನಾಗರಿಕ ಪ್ರಜ್ಞೆಯ ಕೊರತೆಯ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಧರ್ಮಪತ್ನಿ, ಪ್ರಸಿದ್ಧ ಕರ್ನಾಟಕ ಸಂಗೀತ ಗಾಯಕಿ ಹಾಗೂ 'ಅಹುತಿ' ಸಂಸ್ಥೆಯ ಸಂಸ್ಥಾಪಕಿ ಶಿವಶ್ರೀ ಸ್ಕಂದಪ್ರಸಾದ್ ಅವರು ಇತ್ತೀಚೆಗೆ ತಮಗೆ ಎದುರಾದ ಅತ್ಯಂತ ಆಘಾತಕಾರಿ ಹಾಗೂ ಭಯಾನಕ ರೈಲು ಪ್ರಯಾಣದ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿನ ನಾಗರಿಕ ಪ್ರಜ್ಞೆಯ ಕೊರತೆಯ ಕುರಿತು ಅವರು ವ್ಯಕ್ತಪಡಿಸಿರುವ ತೀವ್ರ ಕಳವಳದ ಪೋಸ್ಟ್ ಇದೀಗ ಭಾರೀ ವೈರಲ್ ಆಗುತ್ತಿದ್ದು, ವ್ಯಾಪಕ ಚರ್ಚೆ ಹುಟ್ಟುಹಾಕಿದೆ.
5 ಗಂಟೆಯ ನರಕ ಪ್ರಯಾಣ
ತಮ್ಮ ಪೋಸ್ಟ್‌ನಲ್ಲಿ ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿರುವ ಶಿವಶ್ರೀ, ಇಂದು ನನಗೆ ಅತ್ಯಂತ ಆಘಾತಕಾರಿ ರೈಲು ಪ್ರಯಾಣವಾಯಿತು. ಕಲಾವಿದರಾದ ನಮಗೆ ನಿರಂತರವಾಗಿ ಮನಸ್ಸಿನಲ್ಲಿ ನೂರಾರು ಆಲೋಚನೆಗಳು ಓಡುತ್ತಿರುತ್ತವೆ. ಹೊಸ ಚಿಂತನೆಗಳು ಹಾಗೂ ಸೃಜನಶೀಲ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸಲು ನಮಗೆ ಮೌನ ಮತ್ತು ಶಾಂತಿಯುತ ವಾತಾವರಣ ಅತ್ಯಗತ್ಯ. ಆದರೆ, ನನ್ನ ಬೋಗಿಯಲ್ಲಿದ್ದ ಜನರ ನಡವಳಿಕೆ ಶಾಂತಿಯುತ ಪ್ರಯಾಣದ ನನ್ನ ನಿರೀಕ್ಷೆಯನ್ನು ಸಂಪೂರ್ಣವಾಗಿ ಸುಳ್ಳು ಮಾಡಿತು ಎಂದು ಬರೆದುಕೊಂಡಿದ್ದಾರೆ.
ಅವರು ಪ್ರಯಾಣಿಸುತ್ತಿದ್ದ 56 ಆಸನಗಳ ರೈಲು ಬೋಗಿಯಲ್ಲಿ ಸುಮಾರು 40 ಮಧ್ಯವಯಸ್ಕ ಪುರುಷರ ದೊಡ್ಡ ಗುಂಪೊಂದು ಇಡೀ ಜಾಗವನ್ನು ಆಕ್ರಮಿಸಿಕೊಂಡಿತ್ತು. ಸುಮಾರು 5 ಗಂಟೆಗಳ ದೀರ್ಘ ಪ್ರಯಾಣದುದ್ದಕ್ಕೂ ಈ ಗುಂಪು ನಿರಂತರವಾಗಿ ಜೋರಾಗಿ ಮಾತನಾಡುತ್ತಾ, ಕೂಗಾಡುತ್ತಾ ಮತ್ತು ಅಟ್ಟಹಾಸದಿಂದ ನಗುತ್ತಾ ಇತರ ಪ್ರಯಾಣಿಕರಿಗೆ ತೀವ್ರ ಕಿರಿಕಿರಿ ಅನ್ನಿಸುತ್ತಿತ್ತು.
'56 ಸೀಟುಗಳ ಕೋಚ್‌ನಲ್ಲಿ 40 ಜನರು ಐದು ಗಂಟೆಗಳ ಕಾಲ ನಿರಂತರವಾಗಿ ಅಬ್ಬರಿಸುತ್ತಿದ್ದರೆ ಅಲ್ಲಿ ಒಂದು ಕ್ಷಣವೂ ಶಾಂತಿ ಇರಲು ಸಾಧ್ಯವೇ? ಆ ಗುಂಪಿನ ಭಾಗವಲ್ಲದ ಉಳಿದ 16 ಪ್ರಯಾಣಿಕರು ಈ ಶಬ್ದ ಮಾಲಿನ್ಯ ಮತ್ತು ಕಿರಿಕಿರಿಯಿಂದ ಮೌನವಾಗಿ ಇರುವುದನ್ನು ಸಹಿಸಿಕೊಳ್ಳಬೇಕಾಯಿತು. ಭಾರತದಲ್ಲಿ ಇಂತಹ ದೊಡ್ಡ ಗುಂಪುಗಳನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲದಿರುವುದೇ ದೊಡ್ಡ ಸಮಸ್ಯೆಯಾಗಿದೆ" ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಉನೋ ಆಟ, ಟಿಟಿಇ ಮಧ್ಯಪ್ರವೇಶ ಮತ್ತು ಬಾಲಿವುಡ್ ಹಾಡುಗಳ ರಂಪಾಟ!
ರೈಲಿನಲ್ಲಿ ಪರಿಸ್ಥಿತಿ ಮಿತಿಮೀರಿದಾಗ ಶಿವಶ್ರೀ ಸ್ಕಂದಪ್ರಸಾದ್ ಅವರು ತಮ್ಮ ಕೋಚ್ ಬದಲಾಯಿಸಿಕೊಡುವಂತೆ ಟಿಕೆಟ್ ಪರಿಶೀಲಕರಿಗೆ ವಿನಂತಿ ಮಾಡಿದ್ದರು. ಆದರೆ, ರೈಲಿನ ಇತರ ಯಾವುದೇ ಬೋಗಿಗಳಲ್ಲಿ ಆಸನಗಳು ಖಾಲಿ ಇಲ್ಲದ ಕಾರಣ ಅದು ಸಾಧ್ಯವಾಗಲಿಲ್ಲ.
ಬೊಬ್ಬೆ ಹೊಡೆಯುತ್ತಿದ್ದ ನಡುವೆಯೇ ಆ 8 ಜನರ ಗುಂಪು ಎಡೆಬಿಡದೆ ಕಿರುಚುತ್ತಾ 'ಉನೋ' (UNO) ಕಾರ್ಡ್ ಆಟವಾಡಲು ಪ್ರಾರಂಭಿಸಿದಾಗ, ಶಿವಶ್ರೀ ಅವರು ಟಿಟಿಇ ಬಳಿ ಅಧಿಕೃತವಾಗಿ ದೂರು ನೀಡಿದರು. ಟಿಟಿಇ ವಿನಂತಿಸಿದಾಗ ಗುಂಪು ತಾತ್ಕಾಲಿಕವಾಗಿ ಆಟ ನಿಲ್ಲಿಸಿತಾದರೂ, ಕೆಲವೇ ನಿಮಿಷಗಳಲ್ಲಿ ಸ್ವತಃ ಟಿಟಿಇ ಹಿಂತಿರುಗಿ ಆ ಗುಂಪನ್ನು ತಮಾಷೆಯಾಗಿ ಅಣಕಿಸುತ್ತಾ ಮಾತನಾಡಿಸಿದರು. ಇದರಿಂದ ಮತ್ತಷ್ಟು ಉತ್ತೇಜನಗೊಂಡ ಆ ಗುಂಪು ಟಿಟಿಇಯನ್ನೂ ಆಟಕ್ಕೆ ಆಹ್ವಾನಿಸಿತಲ್ಲದೆ, ಶಿವಶ್ರೀ ದೂರು ನೀಡಿದ್ದಕ್ಕೆ ಪ್ರತಿಯಾಗಿ ಉದ್ದೇಶಪೂರ್ವಕವಾಗಿ ಜೋರಾಗಿ ಬಾಲಿವುಡ್ ಹಾಡುಗಳನ್ನು ಹಾಡುತ್ತಾ ರಂಪಾಟ ಮುಂದುವರಿಸಿತು.
"ನಾವು ನಾಗರಿಕ ಪ್ರಜ್ಞೆಯ ಆಟವನ್ನು ಸೋತೆವು!"
ಈ ಇಡೀ ಘಟನೆಯಿಂದ ತೀವ್ರ ಬೇಸರಗೊಂಡ ಶಿವಶ್ರೀ ಸ್ಕಂದಪ್ರಸಾದ್, ಸಾರ್ವಜನಿಕ ಸ್ಥಳಗಳಲ್ಲಿ ಭಾರತೀಯರು ನಡೆದುಕೊಳ್ಳುವ ರೀತಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಸಾರ್ವಜನಿಕ ಸ್ಥಳಗಳಲ್ಲಿ ಜನರು ಇತರರ ವೈಯಕ್ತಿಕ ಜಾಗವನ್ನು ಮತ್ತು ನೆಮ್ಮದಿಯನ್ನು ಗೌರವಿಸುವುದಿಲ್ಲ ಎಂಬುದನ್ನು ನೋಡಲು ತುಂಬಾ ದುಃಖವಾಗುತ್ತದೆ. ಸಾರ್ವಜನಿಕವಾಗಿ ನಾವು ಇದ್ದಾಗ ಕೂಗಾಡುವುದನ್ನು, ಗಟ್ಟಿಯಾಗಿ ಮಾತನಾಡುವುದನ್ನು ಮತ್ತು ಇತರರಿಗೆ ತೊಂದರೆ ಕೊಡುವುದನ್ನು ತಡೆಯಬೇಕು. ಇಲ್ಲಿ ಯಾರು ಗೆದ್ದರು ಎಂಬುದು ಮುಖ್ಯವಲ್ಲ, ಆದರೆ ಒಬ್ಬ ಭಾರತೀಯಳಾಗಿ ನಾನು ಅವರೊಂದಿಗೆ ನಾಗರಿಕ ಪ್ರಜ್ಞೆಯ ಆಟವನ್ನು ಸೋತಿದ್ದೇನೆ. ಒಂದು ರಾಷ್ಟ್ರವಾಗಿ ನಾವು ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ನಡವಳಿಕೆಯನ್ನು ಯಾವಾಗ ಸುಧಾರಿಸಿಕೊಳ್ಳುತ್ತೇವೆಯೋ ತಿಳಿಯುತ್ತಿಲ್ಲ... ದೇವರೇ ಈ ದೇಶವನ್ನು ಕಾಪಾಡಲಿ!" ಎಂದು ಅವರು ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ್ದಾರೆ.


