ರಾಜ್ಯದಲ್ಲಿ ಸೈಬರ್ ಅಪರಾಧಗಳ ನಿಯಂತ್ರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಮುಖ್ಯ ಕಾರ್ಯದರ್ಶಿ ನಡೆಸಿದ ಸಭೆಯಲ್ಲಿ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ತೀವ್ರ ವಾಗ್ಯುದ್ಧ ನಡೆದಿದೆ. ಪರಿಣಾಮವಾಗಿ, ಎಲ್ಲಾ ಸೈಬರ್ ಪ್ರಕರಣಗಳ ತನಿಖೆಯನ್ನು ಕೇವಲ ಸೈಬರ್ ಠಾಣೆಗಳಿಗೆ ಮಾತ್ರ ವಹಿಸಿ ಆದೇಶ ಹೊರಡಿಸಲಾಗಿದೆ.

ವರದಿ: ಗಿರೀಶ್ ಮಾದೇನಹಳ್ಳಿ

ಬೆಂಗಳೂರು: ಸೈಬರ್ ಅಪರಾಧ ಕೃತ್ಯಗಳ ನಿಯಂತ್ರಣ, ತನಿಖೆ ಸಂಬಂಧ ರಾಜ್ಯ ಪೊಲೀಸರ ಕಾರ್ಯವೈಖರಿ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರಿ ಮೋದಿ ತೀವ್ರ ತರಾಟೆ ತೆಗೆದುಕೊಂಡ ಮತ್ತು ಈ ಕುರಿತು ಚರ್ಚೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಯೋಜಿಸಿದ್ದ ಸಭೆಯಲ್ಲಿ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳು ಭಾರೀ ವಾಕ್ಸಮರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಬಳಿಕ ಸ್ವತಃ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಪ್ರಧಾನಿ ಗರಂ:

ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳ ತನಿಖೆ ಬಗ್ಗೆ ರಾಷ್ಟ್ರಮಟ್ಟದಲ್ಲಿ ಪ್ರಧಾನಮಂತ್ರಿಗಳು ಪರಿಶೀಲನಾ ಸಭೆ ನಡೆಸಿದ್ದಾರೆ. ಆಗ ಕರ್ನಾಟಕದಲ್ಲಿ ಸೈಬರ್ ಪ್ರಕರಣಗಳ ಹೆಚ್ಚಳ ಹಾಗೂ ತನಿಖೆ ಪ್ರಮಾಣದ ಅಂಕಿ ಅಂಶ ಗಮನಿಸಿದ ಮೋದಿ ಅವರು, ‘ಕ್ಯಾ ಕರ್ತೆ ಯೇ ಕರ್ನಾಟಕ್ ಪೊಲೀಸ್...’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ. ಅಲ್ಲದೆ ಮುಂದಿನ ಸಭೆಯಲ್ಲಿ ಸೈಬರ್ ಅಪರಾಧ ಪತ್ತೆದಾರಿಕೆ ಸಂಬಂಧ ಸ್ಪಷ್ಟ ಕ್ರಿಯಾ ಯೋಜನೆ (ಆ್ಯಕ್ಷನ್ ಪ್ಲಾನ್‌) ಪ್ರಸುತ್ತಪಡಿಸುವಂತೆ ಪ್ರಧಾನಮಂತ್ರಿಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.ಐಪಿಎಸ್‌ಗಳ ಜಟಾಪಟಿ:

ಮೋದಿ ಅಸಮಾಧಾನ ಹಿನ್ನಲೆಯಲ್ಲಿ ಸೈಬರ್ ಅಪರಾಧ ಪ್ರಕರಣಗಳ ವಿರುದ್ಧ ಕಾರ್ಯಾಚರಣೆ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿಗಳ ಉನ್ನತ ಮಟ್ಟದ ಸಭೆಯನ್ನು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಕರೆದಿದ್ದರು. ಆ ಸಭೆಯಲ್ಲಿ ಸೈಬರ್ ಅಪರಾಧ ಪತ್ತೆದಾರಿಕೆ ವಿಷಯವಾಗಿ ರಾಜ್ಯದ ಹಿರಿಯ ಇಬ್ಬರು ಐಪಿಎಸ್ ಅಧಿಕಾರಿಗಳ ಮಧ್ಯೆ ಬಿರುಸಿನ ಮಾತಿನ ಚಕಮಕಿ ನಡೆದಿದೆ. ಸೈಬರ್‌ ಅಪರಾಧಗಳ ತನಿಖಾ ಪ್ರಮಾಣ ಇಳಿಕೆ ಬಗ್ಗೆ ‘ಹೊಣೆಗಾರಿಕೆ’ ಮತ್ತು ‘ಉತ್ತರಾದಾಯಿತ್ವ’ಕ್ಕೆ ಪ್ರಸ್ತಾಪವಾಗಿದೆ. ಆಗ ಹಿರಿಯ ಅಧಿಕಾರಿಗಳ ಮಧ್ಯೆ ಬಿರುಸಿನ ವಾಗ್ಯುದ್ಧವಾಗಿದೆ. ಕೊನೆಗೆ ಮುಖ್ಯಕಾರ್ಯದರ್ಶಿ ಅವರೇ ಮಧ್ಯಪ್ರವೇಶಿಸಿ ಇಬ್ಬರು ಅಧಿಕಾರಿಗಳನ್ನು ಶಾಂತಗೊಳಿಸಿದ್ದಾರೆ ಎನ್ನಲಾಗಿದೆ.

ಎಲ್ಲ ಕೇಸ್‌ ಸೈಬರ್‌ ಠಾಣೆಗೆ:

ಈ ಸಭೆ ಬೆನ್ನಲ್ಲೇ ಸೈಬರ್ ಅಪರಾಧ ಪ್ರಕರಣಗಳ ತನಿಖೆಯ ಸಂಪೂರ್ಣ ಅಧಿಕಾರ ಮತ್ತು ಜವಾಬ್ದಾರಿಯನ್ನು ಸೈಬರ್ ವಿಭಾಗಕ್ಕೆ ರಾಜ್ಯ ಪೊಲೀಸ್ ಇಲಾಖೆ ವರ್ಗಾಯಿಸಿದೆ. ಇನ್ಮುಂದೆ ಸೈಬರ್ ಅಪರಾಧ ಸಂಬಂಧ ಸ್ಥಳೀಯ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸುವಂತಿಲ್ಲ ಹಾಗೂ ಈಗ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಸೈಬರ್ ಠಾಣೆಗಳಿಗೆ ವರ್ಗಾವಣೆ ಮಾಡುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದುವರೆಗೆ ಕನಿಷ್ಠ 1 ರಿಂದ ಗರಿಷ್ಠ 5 ಲಕ್ಷ ರುವವರೆಗಿನ ಸೈಬರ್ ವಂಚನೆ ಕೃತ್ಯಗಳ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗುತ್ತಿದ್ದವು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ, ಅಶ್ಲೀಲ ಪೋಟೋ, ಸುಳ್ಳು ಸುದ್ದಿ ಸೇರಿದಂತೆ ಇತರೆ ಕೃತ್ಯಗಳ ಬಗ್ಗೆ ಸಹ ಸ್ಥಳೀಯ ಠಾಣೆಗಳಲ್ಲಿ ದೂರು ಸಲ್ಲಿಸಬಹುದಾಗಿತ್ತು. ಇನ್ಮುಂದೆ ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಸೈಬರ್ ಠಾಣೆಗಳಲ್ಲೇ ದೂರು ದಾಖಲಿಸಬೇಕು ಎಂದು ಮೂಲಗಳು ಹೇಳಿವೆ.

ಮೋದಿ ಸಭೆ ಏಕೆ?:

ದೇಶದಲ್ಲಿ ‘ಡಿಜಿಟಲ್‌ ಅರೆಸ್ಟ್‌’ ಕೃತ್ಯಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್‌, ಈ ಕೃತ್ಯಗಳ ತಡೆಗೆ ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ ಹಲವು ನಾಗರಿಕರು ಕೋಟ್ಯಂತರ ರು. ಹಣ ಕಳೆದುಕೊಂಡಿದ್ದರು. ಅಲ್ಲದೆ ಕೆಲವರು ಜೀವ ಕಳೆದುಕೊಂಡಿದ್ದರು. ಹೀಗಾಗಿ ಸೈಬರ್ ಅಪರಾಧ ಕೃತ್ಯಗಳಿಗೆ ಕಡಿವಾಣಕ್ಕೆ ಸರ್ವೋಚ್ಛ ನ್ಯಾಯಾಲಯ ಕಟ್ಟಪ್ಪಣೆ ಮಾಡಿತ್ತು.

ಈ ಆದೇಶ ಹಿನ್ನಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸೈಬರ್ ಅಪರಾಧ ಪ್ರಕರಣಗಳ ತನಿಖೆ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯನ್ನು ವಿಡಿಯೋ ಕಾನ್ಫೆರನ್ಸ್ ಮೂಲಕ ಪ್ರಧಾನಿ ಮಂತ್ರಿ ನರೇಂದ್ರ ಅವರು ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಹಾಗೂ ಎಲ್ಲ ರಾಜ್ಯಗಳ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಹಾಗೂ ಸೈಬರ್ ತನಿಖಾ ವಿಭಾಗದ ಮುಖ್ಯಸ್ಥರು ಭಾಗವಹಿಸಿದ್ದರು. ಅಂತೆಯೇ ಆ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳು ಪಾಲ್ಗೊಂಡಿದ್ದರು ಎನ್ನಲಾಗಿದೆ.

ಆಗ ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ತನಿಖೆ ಹಾಗೂ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಅಂಕಿ ಅಂಶಗಳ ಸಮೇತ ಮುಖ್ಯ ಕಾರ್ಯದರ್ಶಿ ಮುಂದಿಟ್ಟಿದ್ದಾರೆ. ಆಗ ಪ್ರಾತ್ಯಕ್ಷಿಯ ಪರದೆಯಲ್ಲಿ ತನಿಖೆ ಪ್ರಮಾಣ ಹಾಗೂ ಪ್ರಕರಣಗಳ ಹೆಚ್ಚಳದ ಬಗ್ಗೆ ‘ಕೆಂಪು’ ಬಣ್ಣದ ಗುರುತು ಕಂಡು ‘ಕ್ಯಾ ಕರ್ತೆ ಯೇ ಕರ್ನಾಟಕ್ ಪೊಲೀಸ್‌’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಅವರಿಗೆ ಯಾಕೆ ಸೈಬರ್ ಅಪರಾಧ ಬಗ್ಗೆ ತನಿಖೆ ನಡೆಸುತ್ತಿಲ್ಲ. ಪೊಲೀಸರ ಕಾರ್ಯವೈಖರಿ ಬಗ್ಗೆ ಯಾಕೆ ನಿಯಮಿತವಾಗಿ ಪರಿಶೀಲನೆ ನಡೆಸುತ್ತಿಲ್ಲ ಎಂದು ಪ್ರಧಾನ ಮಂತ್ರಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕ್ಯಾ ಕರ್ತೆ ಹೈ ಯೇ ಕರ್ನಾಟಕ್ ಪೊಲೀಸ್: ಪ್ರಧಾನಿ ಮೋದಿ ಗರಂ

ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳ ತನಿಖೆ ಬಗ್ಗೆ ರಾಷ್ಟ್ರಮಟ್ಟದಲ್ಲಿ ಪ್ರಧಾನಮಂತ್ರಿಗಳು ಪರಿಶೀಲನಾ ಸಭೆ ನಡೆಸಿದ್ದಾರೆ. ಆಗ ಕರ್ನಾಟಕದಲ್ಲಿ ಸೈಬರ್ ಪ್ರಕರಣಗಳ ಹೆಚ್ಚಳ ಹಾಗೂ ತನಿಖೆ ಪ್ರಮಾಣದ ಅಂಕಿ ಅಂಶ ಗಮನಿಸಿದ ಮೋದಿ ಅವರು, ‘ಕ್ಯಾ ಕರ್ತೆ ಯೇ ಕರ್ನಾಟಕ್ ಪೊಲೀಸ್...’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೋದಿ ಸಭೆ ನಡೆಸಿದ್ದೇಕೆ? ಪರಿಶೀಲನಾ ಸಭೆ ಯಾಕೆ?

  • ಡಿಜಿಟಲ್‌ ಅರೆಸ್ಟ್‌ ಕೃತ್ಯ ಹೆಚ್ಚಳದ ಬಗ್ಗೆ ಇತ್ತೀಚೆಗೆ ಸುಪ್ರೀಂಕೋರ್ಟ್‌ ಆಕ್ಷೇಪ
  • ಇದರ ತಡೆಗೆ ಸೂಕ್ತ ಮಾರ್ಗಸೂಚಿ ರಚಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ
  • ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಸಿಎಸ್‌, ಡಿಜಿ-ಐಜಿಪಿಗಳ ಜತೆ ಪಿಎಂ ಸಭೆ
  • ಸಭೇಲಿ ಕರ್ನಾಟಕ ಪೊಲೀಸರ ಕಾರ್ಯವೈಖರಿ ಬಗ್ಗೆ ಮೋದಿ ತೀವ್ರ ಆಕ್ಷೇಪ
  • ಮುಂದಿನ ಸಭೇಲಿ ಅಪರಾಧ ಪತ್ತೆಗೆ ಸೂಕ್ತ ಆ್ಯಕ್ಷನ್‌ ಪ್ಲಾನ್‌ ಸಲ್ಲಿಕೆಗೆ ಸೂಚನೆ
  • ಇದೇ ಕಾರಣಕ್ಕೆ ರಾಜ್ಯದಲ್ಲಿ ಪೊಲೀಸರ ಸಭೆ ಆಯೋಜಿಸಿದ್ದ ಮುಖ್ಯ ಕಾರ್ಯದರ್ಶಿ