ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ವೇಳೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಸ್ಫೋಟಕ ತಪ್ಪೊಪ್ಪಿಗೆ ನೀಡಿದ್ದಾರೆ. ಈ ಹಗರಣದ ರೂವಾರಿ ಮಧ್ಯವರ್ತಿ ಬಸವರಾಜ್ ಕನ್ನಾಳೆ ಎಂದು ಹೇಳಿದ್ದು, ಪ್ರಶ್ನೆ ಪತ್ರಿಕೆಯನ್ನು ಮುದ್ರಣಕ್ಕೂ ಮೊದಲೇ ಸಿದ್ಧಪಡಿಸಲಾಗಿತ್ತು ಎಂಬ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

ಬೆಂಗಳೂರು (ಸೆ.01): ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ (KPSC) ನೇಮಕಾತಿ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಡಿ (CID) ಅಧಿಕಾರಿಗಳ ಮುಂದೆ ಹಿರಿಯ ಐಎಎಸ್ (IAS) ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರು ಹಲವು ಸ್ಫೋಟಕ ಸತ್ಯಗಳನ್ನು ಬಾಯ್ಬಿಟ್ಟಿದ್ದು, ತಪ್ಪೊಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

'ನನ್ನ ತಪ್ಪಿಲ್ಲ, ಎಲ್ಲದಕ್ಕೂ ಕನ್ನಾಳೆಯೇ ರೂವಾರಿ!'

ಸಿಐಡಿ ವಿಚಾರಣೆ ವೇಳೆ ತಮ್ಮ ಮೇಲಿದ್ದ ಆರೋಪಗಳ ಕುರಿತು ಸ್ಪಷ್ಟನೆ ನೀಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ, 'ಈ ಹಗರಣದಲ್ಲಿ ನನ್ನ ನೇರ ತಪ್ಪೇನೂ ಇಲ್ಲ. ಎಲ್ಲಾ ಅಕ್ರಮಗಳಿಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆಯೇ ಮುಖ್ಯ ರೂವಾರಿ' ಎಂದು ಬೊಟ್ಟು ಮಾಡಿದ್ದಾರೆ. 'ನಾನು ಯಾವುದೇ ಅಭ್ಯರ್ಥಿಗಳ ಜೊತೆ ನೇರವಾಗಿ ಮಾತನಾಡಿಲ್ಲ. ಅಭ್ಯರ್ಥಿಗಳೊಂದಿಗೆ ಹಣಕಾಸಿನ ವ್ಯವಹಾರ ಹಾಗೂ ಮಾತುಕತೆ ನಡೆಸಿದ್ದೆಲ್ಲವೂ ಬಸವರಾಜ್ ಕನ್ನಾಳೆಯೇ. ಆತ ಹೇಳಿದ ಸೂಚನೆಯಂತೆ ನಾನು ಕೆಲಸ ಮಾಡಿದ್ದೇನೆ ಅಷ್ಟೇ' ಎಂದು ಜ್ಞಾನೇಂದ್ರ ಸಿಐಡಿ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು ಹೇಗೆ? - ಶಾಕಿಂಗ್ ಮಾಹಿತಿ ಬಹಿರಂಗ!

ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದ ಕುರಿತು ಮಾತನಾಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ, ಪೇಪರ್ ಲೀಕ್ ಡೀಲ್ ಮಾಡಿದ್ದೇ ಬಸವರಾಜ್ ಕನ್ನಾಳೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಪ್ರಿಂಟಿಂಗ್ ಹಂತದಲ್ಲಿ ನಡೆದ ಗೋಲ್‌ಮಾಲ್ ಬಗ್ಗೆಯೂ ಬಾಯಿಬಿಟ್ಟಿದ್ದಾರೆ. 'ಅಂತಿಮವಾಗಿ ಪ್ರಿಂಟ್ ಆದ ಪ್ರಶ್ನೆ ಪತ್ರಿಕೆಯನ್ನು ನಾನು ನೇರವಾಗಿ ಹೊರಗೆ ತೆಗೆದಿಲ್ಲ' ಎಂದು ಹೇಳಿದ್ದಾರೆ. ಆದರೆ, ಪ್ರಶ್ನೆ ಪತ್ರಿಕೆ ಪ್ರಿಂಟ್ ಆಗುವುದಕ್ಕೆ ಮುಂಚಿತವಾಗಿ ಶೇ. 60 ರಷ್ಟು ಪ್ರಶ್ನೆಗಳನ್ನು ಮೊದಲೇ ಬರೆದುಕೊಳ್ಳಲಾಗಿತ್ತು! ಎಂಬ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ನಾವು ಮುಂಚಿತವಾಗಿ ಬರೆದುಕೊಂಡಿದ್ದ ಪ್ರಶ್ನೆಗಳ ಸೀರಿಸ್ (Series) ಅನ್ನೇ ಅಂತಿಮವಾಗಿ ಪ್ರಿಂಟ್ ಮಾಡಲು ಸೂಚನೆ ನೀಡಲಾಗಿತ್ತು. ತಾವು ಒಪ್ಪಿಗೆ ಮತ್ತು ಅನುಮೋದನೆ ನೀಡಿದ ಬಳಿಕವೇ ಪ್ರಶ್ನೆಪತ್ರಿಕೆ ಮುದ್ರಣಗೊಂಡಿತ್ತು ಎಂಬುದನ್ನು ಅವರು ಸಿಐಡಿ ಜ್ಞಾನೇಂದ್ರ ಎದುರು ಒಪ್ಪಿಕೊಂಡಿದ್ದಾರೆ.ಐಎಎಸ್ ಅಧಿಕಾರಿಯ ಈ ದಿಢೀರ್ ತಪ್ಪೊಪ್ಪಿಗೆಯಿಂದ ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಮತ್ತಷ್ಟು ಪ್ರಭಾವಿಗಳ ಮುಖವಾಡ ಕಳಚುವ ಸಾಧ್ಯತೆಯಿದ್ದು, ಸಿಐಡಿ ತನಿಖೆ ಮುಂದಿನ ದಿನಗಳಲ್ಲಿ ಯಾವ ದಿಕ್ಕು ತಿರುಗಲಿದೆ ಎಂಬುದು ಕುತೂಹಲ ಮೂಡಿಸಿದೆ.