ಕೊರೋನಾ ವಿರುದ್ಧ ಹೋರಾಟ: 3ನೇ ಡೋಸ್ ಲಸಿಕೆ ಅಗತ್ಯವಿದೆಯೇ?
* ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆ ಅಧ್ಯಯನ
* ಎರಡೂ ಡೋಸ್ ಪಡೆದ ಬಳಿಕ ಪ್ರತಿಕಾಯಗಳು ಎಷ್ಟು ದಿನದವರೆಗೆ ಸಕ್ರಿಯ?
* ಪ್ರಯೋಗಕ್ಕೆ ಒಳಪಡಲಿರುವ 45 ವರ್ಷ ಮೀರಿದ ವೈದ್ಯಕೀಯ ಸಿಬ್ಬಂದಿ
ಬೆಂಗಳೂರು(ಜು.15): ರೂಪಾಂತರಗೊಳ್ಳುತ್ತಿರುವ ಕೊರೋನಾ ವೈರಸ್ ಸಂಪೂರ್ಣ ನಿಗ್ರಹಕ್ಕೆ ಕೋವಿಡ್ ಲಸಿಕೆಯ 3ನೇ ಡೋಸ್ ಪಡೆಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆ ಅಧ್ಯಯನ ನಡೆಸಲು ಮುಂದಾಗಿದೆ.
ಕೆಲ ತಜ್ಞರು ಎರಡೂ ಡೋಸ್ ಲಸಿಕೆ ಪಡೆದ ಏಳೆಂಟು ತಿಂಗಳ ಬಳಿಕ 3ನೇ ಡೋಸ್ ಪಡೆದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಅಧ್ಯಯನದ ಅನ್ವಯ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಲಸಿಕಾ ಅಭಿಯಾನ ಆರಂಭಗೊಂಡ ಆರಂಭದ ದಿನಗಳಲ್ಲಿ ಲಸಿಕೆ ಪಡೆದು ಫೆಬ್ರವರಿಯೊಳಗೆ ಎರಡೂ ಡೋಸ್ ಪಡೆದುಕೊಂಡಿರುವ 200 ಆರೋಗ್ಯ ಸಿಬ್ಬಂದಿಗಳು ಈ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಒಳಪಡಲಿದ್ದಾರೆ. 45 ವರ್ಷ ಮೀರಿದ ವೈದ್ಯಕೀಯ ಸಿಬ್ಬಂದಿಗಳು ಪ್ರಯೋಗಕ್ಕೆ ಒಳಪಡಲಿದ್ದಾರೆ. ಇವರಲ್ಲಿ ಶೇ. 50 ಮಹಿಳೆಯರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಎರಡೂ ಡೋಸ್ ಪಡೆದ ಬಳಿಕ ಪ್ರತಿಕಾಯಗಳು ಎಷ್ಟು ದಿನದವರೆಗೆ ಸಕ್ರಿಯವಾಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅಧ್ಯಯನ ನಡೆಸಲು ಸಂಸ್ಥೆ ಸಿದ್ಧತೆ ನಡೆಸುತ್ತಿದೆ. ಈ ಸಿಬ್ಬಂದಿಗಳನ್ನು ರಕ್ತದಲ್ಲಿನ ಪ್ರತಿಕಾಯಗಳನ್ನು ಪತ್ತೆ ಹಚ್ಚಲು ಬಳಸುವ ಇಮ್ಯುನೋಸೊರ್ಬೆಟ್ ಅಸ್ಸೆ (ಎಲಿಸಾ) ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪರೀಕ್ಷೆಯಲ್ಲಿ ಎರಡೂ ಡೋಸ್ ಲಸಿಕೆ ಪಡೆದ 5-6 ತಿಂಗಳ ಬಳಿಕ ಸೃಷ್ಟಿಯಾಗಿರುವ ಪ್ರತಿಕಾಯಗಳ ಗುಣಮಟ್ಟಮತ್ತು ಪ್ರತಿಕಾಯಗಳ ಆಯುಷ್ಯವನ್ನು ಅಳೆಯಲಾಗುತ್ತದೆ.
ಈ ಇನ್ನೂರು ಮಂದಿ ಎರಡೂ ಡೋಸ್ ಲಸಿಕೆ ಪಡೆದ ಎರಡು ತಿಂಗಳ (ಏಪ್ರಿಲ್) ಬಳಿಕ ಇವರಲ್ಲಿನ ಪ್ರತಿಕಾಯಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಶೇ.77.7 ಮಂದಿಯಲ್ಲಿ ಪ್ರತಿಕಾಯ ಇದ್ದದ್ದು ಖಚಿತವಾಗಿತ್ತು. ಇದೀಗ ಎರಡನೇ ಪರೀಕ್ಷೆ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಲಸಿಕೆ ಪಡೆದ ಎರಡು ತಿಂಗಳಲ್ಲಿದ್ದ ಪ್ರತಿಕಾಯ ಆರು ತಿಂಗಳ ಬಳಿಕವೂ ಉಳಿದುಕೊಂಡಿದೆಯೇ ಅಥವಾ ಪ್ರತಿಕಾಯಗಳ ಶಕ್ತಿ ಕುಂದಿದೆಯೇ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.
ಪ್ರತಿಕಾಯ ಶಕ್ತಿ ವೃದ್ಧಿಗೆ 3ನೇ ಡೋಸ್ ಅಗತ್ಯ: ಮಾಡೆರ್ನಾ, ಫೈಝರ್!
ಕೊರೋನಾ ವೈರಸ್ ರೂಪಾಂತರಗೊಳ್ಳುತ್ತಿರುವುದರಿಂದ ಈಗಾಗಲೇ ತೆಗೆದುಕೊಂಡಿರುವ ಲಸಿಕೆ ಎಷ್ಟು ಕಾಲ ಪ್ರಭಾವ ಹೊಂದಿರುತ್ತದೆ. 3ನೇ ಡೋಸ್ ತೆಗೆದುಕೊಳ್ಳಬೇಕಾಗಬಹುದೇ ಎಂಬ ಚರ್ಚೆ ವೈದ್ಯಕೀಯ ಕ್ಷೇತ್ರದಲ್ಲಿ ಗಂಭೀರವಾಗಿ ನಡೆಯುತ್ತಿದೆ.
ಅಧ್ಯಯನ ಏಕೆ?
ವೈರಸ್ ರೂಪಾಂತರಗೊಳ್ಳುತ್ತಿರುವ ಕಾರಣ ಲಸಿಕೆ ಎಷ್ಟು ಕಾಲ ಪ್ರಭಾವ ಹೊಂದಿರುತ್ತದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಹೀಗಾಗಿ 3ನೇ ಡೋಸ್ ಬೇಕಾಗಬಹುದು ಎಂಬ ಚರ್ಚೆ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಎರಡೂ ಡೋಸ್ ಪಡೆದ ಬಳಿಕ ಪ್ರತಿಕಾಯಗಳು ಎಷ್ಟು ದಿನದವರೆಗೆ ಸಕ್ರಿಯವಾಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅಧ್ಯಯನ ನಡೆಸಲಾಗುತ್ತಿದೆ.