ನವದೆಹಲಿ(ಏ.19): ಕೊರೋನಾ ನಿಯಂತ್ರಣಕ್ಕಾಗಿ ಭಾರತ ಸೇರಿದಂತೆ ವಿಶ್ವದಾದ್ಯಂತ ಎಲ್ಲಾ ದೇಶಗಳಲ್ಲೂ 2 ಡೋಸ್‌ನ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ಕೋವಿಡ್‌ 2ನೇ ಅಲೆಯ ತೀವ್ರತೆ ಹಿನ್ನೆಲೆಯಲ್ಲಿ, ಈಗ ವಿದೇಶದಲ್ಲಿ ಲಸಿಕೆ ನೀಡಲಾಗುತ್ತಿರುವ 2 ಲಸಿಕಾ ಕಂಪನಿಗಳು, ‘ರೋಗ ನಿರೋಧಕ ಶಕ್ತಿ ವೃದ್ಧಿಗೆ 3ನೇ ಡೋಸ್‌ ಲಸಿಕೆ ಕೂಡಬೇಕು’ ಎಂದು ಹೇಳುತ್ತಿವೆ ಹಾಗೂ ‘ಅಗತ್ಯ ಬಿದ್ದರೆ 4ನೇ ಡೋಸ್‌ ಕೂಡ ಬೇಕು’ ಎನ್ನುತ್ತಿವೆ. ಹೀಗಾಗಿ 3ನೇ ಹಾಗೂ 4ನೇ ಡೋಸ್‌ ನಿಜಕ್ಕೂ ಬೇಕಾ ಎಂಬ ಚರ್ಚೆ ಆರಂಭವಾಗಿದೆ.

ಫೈಝರ್‌ ಹಾಗೂ ಮಾಡೆರ್ನಾ ಲಸಿಕೆಗಳನ್ನು ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ನೀಡಲಾಗುತ್ತಿದೆ. ಈ ಎರಡೂ ಕಂಪನಿಗಳು ಇತ್ತೀಚೆಗೆ, ‘ಈಗಾಗಲೇ ನಮ್ಮ ಲಸಿಕೆಯ 2 ಡೋಸ್‌ ಪಡೆದಿರುವವರು ಇದೇ ವರ್ಷ 3ನೇ ಡೋಸನ್ನು ಬಹುಶಃ ರೋಗನಿರೋಧಕ ಶಕ್ತಿಯ ಮತ್ತಷ್ಟುವೃದ್ಧಿಗಾಗಿ ಪಡೆಯಬೇಕಾಗಬಹುದು. ಮುಂದಿನ ವರ್ಷ ಇನ್ನೊಂದು ‘ವಾರ್ಷಿಕ ಡೋಸ್‌’ ಪಡೆಯಬೇಕಾಗಲೂಬಹುದು’ ಎಂದು ಘೋಷಿಸಿದ್ದವು.

ಇನ್ನು ಭಾರತದಲ್ಲಿ ಭಾರತದಲ್ಲಿ ಭಾರತ್‌ ಬಯೋಟೆಕ್‌ನ ಕೋವ್ಯಾಕ್ಸಿನ್‌ ಲಸಿಕೆಯ 3ನೇ ಡೋಸ್‌ ಪ್ರಯೋಗಕ್ಕೆ ಅನುಮತಿ ಸಿಕ್ಕಿದ್ದು, ಇದನ್ನು ಸ್ವಯಂಸೇವಕರ ಮೇಲೆ ಪ್ರಯೋಗಿಸಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ತಜ್ಞ ಡಾ| ಸಮ್ರೀನ್‌ ಪಾಂಡಾ, ‘ಕಂಪನಿಗಳು ಈವರೆಗೆ 2 ಡೋಸ್‌ ನೀಡಿದರೆ ಪ್ರತಿಕಾಯ ಶಕ್ತಿಗಳು ವೃದ್ಧಿ ಆಗುತ್ತವೆ ಎಂದು ಹೇಳಿದ್ದವು. ಈಗ 3ನೇ ಡೋಸ್‌ ಬೇಕು ಎಂದು ಹೇಳುತ್ತಿವೆ. ಯಾವ ದತ್ತಾಂಶದ ಅಡಿ ಈ ಮಾತು ಹೇಳುತ್ತಿವೆ ಎಂಬುದನ್ನು ಅವು ಸ್ಪಷ್ಟಪಡಿಸಬೇಕು. ಕೇವಲ ಊಹೆಯ ಆಧಾರದಲ್ಲಿ ಇದರ ನಿರ್ಧಾರ ಆಗಬಾರದು’ ಎಂದಿದ್ದಾರೆ.

‘ಈಗ ಲಸಿಕೆ ನೀಡಿಕೆ ಆರಂಭವಾಗಿ ಕೇವಲ 5 ತಿಂಗಳಾಗಿದೆ. 2 ಡೋಸ್‌ ಲಸಿಕೆ ಪಡೆವರಲ್ಲಿ 6ರಿಂದ 9 ತಿಂಗಳು ಪ್ರತಿಕಾಯ ಶಕ್ತಿ ಇರುತ್ತವೆ ಎಂಬುದು ಈವರೆಗಿನ ಸಂಶೋಧನೆಯಲ್ಲಿ ಖಚಿತಪಟ್ಟಿದೆ. ಹಾಗಾಗಿ 9 ತಿಂಗಳು ಪೂರ್ಣಗೊಳ್ಳುವವರೆಗೆ ಕಾಯಬೇಕು. ಆಮೇಲೆ ಪ್ರತಿಕಾಯ ಶಕ್ತಿ ಕುಂದುತ್ತವೆಯೇ ಎಂಬುದನ್ನು ನೋಡಿ ಮುಂದಿನನ್ನು (3ನೇ ಡೋಸ್‌ ಬಗ್ಗೆ) ನಿರ್ಧರಿಸಬೇಕು’ ಎಂದು ಹೇಳಿದ್ದಾರೆ.