ವಿವಾಹಿತ ಪುರುಷನ ಪ್ರೇಯಸಿಯನ್ನು ಆತನ ಕುಟುಂಬದ ಸದಸ್ಯೆ ಅಥವಾ ಸಂಬಂಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಹೀಗಾಗಿ ಪತ್ನಿ ಮೇಲಿನ ಕ್ರೌರ್ಯ ಪ್ರಕರಣದಲ್ಲಿ ಪ್ರೇಯಸಿಯನ್ನು ಆರೋಪಿಯನ್ನಾಗಿ ಮಾಡುವಂತಿಲ್ಲ ಎಂದು ಆದೇಶಿಸಿದೆ.

ಬೆಂಗಳೂರು (ಸೆ.25): ವಿವಾಹಿತ ಪುರುಷನ ಪ್ರೇಯಸಿಯನ್ನು ಆತನ ಕುಟುಂಬದ ಸದಸ್ಯೆ ಅಥವಾ ಸಂಬಂಧಿ ಎಂದು ಪರಿಗಣಿಸಿ, ಪತ್ನಿ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆಕೆಯನ್ನು ಆರೋಪಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಪತಿ ಅಥವಾ ಪತಿಯ ಸಂಬಂಧಿಕರಿಂದ ಪತ್ನಿ ವಿರುದ್ಧ ಕ್ರೌರ್ಯ ಮೆರೆದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 85 ಅಡಿಯಲ್ಲಿ ತಮ್ಮ ವಿರುದ್ಧ ಬೆಂಗಳೂರಿನ ಕೇಂದ್ರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಪ್ರಕರಣದ ನಾಲ್ಕನೇ ಆರೋಪಿ ಎಂ. ತನುಶ್ರೀ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಸಂಬಂಧಿ ಎಂದು ಪರಿಗಣಿಸಲಾಗದು:

ವಿವಾಹೇತರ ಸಂಬಂಧ ಹೊಂದಿರುವ ಪ್ರೇಯಸಿ ಅಥವಾ ಮಹಿಳೆಯನ್ನು ‘ಪತಿಯ ಸಂಬಂಧಿ’ ಎಂದು ಪರಿಗಣಿಸಲಾಗದು. ರಕ್ತ ಸಂಬಂಧ, ವಿವಾಹ ಅಥವಾ ದತ್ತು ಸ್ವೀಕಾರದಿಂದ ಮಾತ್ರ ಸಂಬಂಧಿಯ ಸ್ಥಾನಮಾನ ಸಿಗುತ್ತದೆ. ವಿವಾಹವೇ ನಡೆದಿಲ್ಲದ ಸಂದರ್ಭದಲ್ಲಿ ಒಬ್ಬರನ್ನು ಮತ್ತೊಬ್ಬರ ಸಂಬಂಧಿ ಎಂದು ಪರಿಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆಯೇ ಸ್ಪಷ್ಟಪಡಿಸಿದೆ. ಅದರಂತೆ ಪತಿಯ ಪ್ರೇಯಸಿಯನ್ನು ಆತನ ಸಂಬಂಧಿ ಎಂದು ಕರೆಯಲು ಸಾಧ್ಯವಿಲ್ಲ. ಬಿಎನ್‌ಎಸ್‌ ಸೆಕ್ಷನ್‌ 85ರಡಿ ಆರೋಪಕ್ಕೆ ಸಂಬಂಧಿಸಿ ತನುಶ್ರೀ ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಮುಂದುವರಿಸಲಾಗದು ಎಂದು ಹೈಕೋರ್ಟ್‌ ಹೇಳಿದೆ.

ಪ್ರಕರಣದ ವಿವರ:

ಪ್ರಕರಣದ ಮೊದಲ ಆರೋಪಿ ಎಂ. ಧನುಷ್‌ ಕುಮಾರ್‌ ಮತ್ತು ದೂರುದಾರರಾದ ಎಸ್. ಪ್ರತೀಕ್ಷಾ ದಂಪತಿಯಾಗಿದ್ದಾರೆ. ಇಬ್ಬರ ನಡುವೆ ವೈವಾಹಿಕ ಕಲಹ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ತನುಶ್ರೀ ಅವರು ಧನುಷ್‌ ಕುಮಾರ್‌ ಅವರ ಪ್ರೇಯಸಿ ಎಂದು ಆರೋಪಿಸಲಾಗಿತ್ತು. ಆಕೆಯ ಕಾರಣದಿಂದಲೇ ದಂಪತಿಯ ವೈವಾಹಿಕ ಸಂಬಂಧ ಹದಗೆಟ್ಟಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು. ದೂರಿನ ಆಧಾರದ ಮೇಲೆ ತನುಶ್ರೀ ಸೇರಿ ಆರೋಪಿಗಳ ವಿವಾಹಿತ ಮಹಿಳೆ ವಿರುದ್ಧ ಕ್ರೌರ್ಯ, ವರದಕ್ಷಿಣೆ ಕಿರುಕುಳ ಮತ್ತಿತರ ಆರೋಪಗಳ ಸಂಬಂಧ ದೂರು ದಾಖಲಿಸಲಾಗಿದೆ. ಪ್ರಕರಣ ಬೆಂಗಳೂರಿನ 6ನೇ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಹಾಗಾಗಿ, ತನ್ನ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ತನುಶ್ರೀ ಹೈಕೋರ್ಟ್‌ ಮೊರೆ ಹೋಗಿದ್ದರು.