ಬೆಂಗಳೂರಿನಲ್ಲಿ ತೃತೀಯಲಿಂಗಿಗಳಿಂದ ಸಾರ್ವಜನಿಕರಿಗೆ ಕಿರುಕುಳ ಮತ್ತು ಸುಲಿಗೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾದರೆ ಕೂಡಲೇ 112ಗೆ ಕರೆ ಮಾಡಲು ಸೂಚಿಸಲಾಗಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ.

ಬೆಂಗಳೂರು (ಸೆ.25): ತೃತೀಯಲಿಂಗಿ ವ್ಯಕ್ತಿಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕಿರುಕುಳ, ಕಾನೂನು ಬಾಹಿರ ಚಟುವಟಿಕೆಗಳು ಹಾಗೂ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತರು, ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೆಲ ಮಾರ್ಗ ಸೂಚಿಗಳನ್ನು ಹೊರಡಿಸಿದ್ದಾರೆ.

ತೃತೀಯ ಲಿಂಕಿಗಳಿಂದ ಸಾರ್ವಜನಿಕರಿಗೆ ಕಿರುಕುಳ ದೂರು

ನಗರದಲ್ಲಿ ಕೆಲವರು ತೃತೀಯಲಿಂಗಿ ವ್ಯಕ್ತಿಗಳು ತಮ್ಮ ಸ್ವಹಿತಾಸಕ್ತಿಗಾಗಿ ಸಾರ್ವಜನಿಕರಿಗೆ ಕಿರುಕುಳ ನೀಡುವುದು, ಸಂಚಾರಕ್ಕೆ ಅಡ್ಡಿಪಡಿಸುವುದು, ಸಮಾರಂಭದ ಸ್ಥಳಗಳಲ್ಲಿ ಬಲವಂತವಾಗಿ ಸುಲಿಗೆ ಮಾಡುವುದು ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಕುರಿತು ವ್ಯಾಪಕ ದೂರುಗಳು ಕೆಳ ಬಂದಿದೆ. ಈ ಬಗ್ಗೆ ಮಾಧ್ಯಮಗಳಲ್ಲಿಯೂ ಸಹ ಈ ಸುದ್ದಿಗಳು ಪ್ರಕಟವಾಗಿರುತ್ತದೆ. ಈ ವಿಷಯವನ್ನು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಮಾರ್ಗ ಸೂಚಿಗಳನ್ನು ಹೊರಡಿಸಲಾಗಿದೆ.

ಸಹಾಯಕ್ಕಾಗಿ 112ಗೆ ಕರೆ ಮಾಡಿ:

ಈ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬೆಂಗಳೂರು ನಗರದ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿ/ಸಿಬ್ಬಂದಿಗೆ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಇಂತಹ ಘಟನೆಗಳ ಕುರಿತು ಸಾರ್ವಜನಿಕರು ಆತಂಕಗೊಳ್ಳದೆ ಕೂಡಲೇ ನಮ್ಮ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ತಿಳಿಸುವುದು ಹಾಗೂ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

ಮಾರ್ಗಸೂಚಿಗಳೇನು?

  • ಆಕ್ರಮಣಕಾರಿ ರೀತಿಯಲ್ಲಿ ಹಣ ವಸೂಲಿ/ಬಿಕ್ಷೆ ಬೇಡುವುದು ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಅಡ್ಡಿ ಪಡಿಸುವುದು, ಬೆದರಿಕೆ ಹಾಕುವುದು ಬಗ್ಗೆ ದೂರು ಬಂದಲ್ಲಿ ಸ್ಥಳೀಯ ಪೊಲೀಸರು ಕೂಡಲೇ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕಾನೂನಿನ್ವಯ ಕ್ರಮ ಕೈಗೊಳ್ಳುವುದು
  • ಸಂಚಾರ ಸಿಗ್ನಲ್‌ಗಳು, ಮಾರುಕಟ್ಟೆಗಳು, ಬಸ್/ರೈಲು ನಿಲ್ದಾಣಗಳು ಹಾಗೂ ಇತರೆ ಸೂಕ್ಷ್ಮ ಪ್ರದೇಶಗಳು, ಮನೆ/ಸಮಾರಂಭ ನಡೆಯುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವ ತೃತೀಯಲಿಂಗಿ ವ್ಯಕ್ತಿಗಳ ವಿರುದ್ಧ ಕಾನೂನಿನ್ವಯ ಕ್ರಮ ಕೈಗೊಳ್ಳುವುದು
  • ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಪದೇಪದೇ ದೂರುಗಳು ಬರುತ್ತಿರುವ ಸ್ಥಳಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ಹೆಚ್ಚಿನ ಗಸ್ತು ನಿಯೋಜಿಸುವುದು.
  • ನಿಯಮಿತವಾಗಿ ತೃತೀಯಲಿಂಗಿಗಳ ಸಮುದಾಯದೊಂದಿಗೆ ಸಭೆ ನಡೆಸುವುದು ಹಾಗೂ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗದಂತೆ ಸಲಹೆ ನೀಡಿ ಜಾಗೃತಿ ಮೂಡಿಸುವುದು
  • ಸಾರ್ವಜನಿಕರಿಗೆ ತೃತೀಯಲಿಂಗಿಗಳಿಂದ ಕಿರುಕುಳ, ಕಾನೂನು ಉಲ್ಲಂಘನೆಯಾದಾಗ ಕೈಗೊಳ್ಳಬಹುದಾದ ತುರ್ತು ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು

ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಸುಗಮ ಸಂಚಾರವನ್ನು ಖಚಿತ ಪಡಿಸುವುದರ ಜತೆಗೆ ತೃತೀಯಲಿಂಗಿ ವ್ಯಕ್ತಿಗಳ ಕಾನೂನುಬದ್ದ ಹಕ್ಕುಗಳು, ಗೌರವ ಮತ್ತು ಘನತೆಯನ್ನು ಸಂರಕ್ಷಿಸುವುದು ಹಾಗೂ ಪೊಲೀಸ್ ಸಿಬ್ಬಂದಿ ತೃತೀಯಲಿಂಗಿ ವ್ಯಕ್ತಿಗಳೊಂದಿಗೆ ಅವಹೇಳನಕಾರಿ ಅಥವಾ ಸಾಮೂಹಿಕ ನಿಂದನಾತ್ಮಕ ಪದಗಳನ್ನು ಬಳಸದೆ ಗೌರವಯುತ ಮತ್ತು ತಾರತಮ್ಯ ರಹಿತ ಭಾಷೆ ಬಳಸುವುದರೊಂದಿಗೆ ಕಾನೂನುಬದ್ಧ ಹಕ್ಕುಗಳು ಮತ್ತು ಘನತೆಗೆ ಧಕ್ಕೆಯಾಗದಂತೆ ಎಚ್ಚರಿಕೆಯಿಂದ ಕ್ರಮವಹಿಸುವುದು