ಬೆಂಗಳೂರಲ್ಲೊಂದು ಅಮಾನವೀಯ ಘಟನೆ: ಆಹಾರದಲ್ಲಿ ವಿಷ ಬೆರೆಸಿ 7 ನಾಯಿಗಳ ಹತ್ಯೆ!
ರಾಜಧಾನಿಯಲ್ಲಿ ಮೂಕಪ್ರಾಣಿಗಳ ಮೇಲೆ ಮನುಷ್ಯನ ದೌರ್ಜನ್ಯ ಮುಂದುವರೆದಿದೆ. ರಾಜರಾಜೇಶ್ವರಿನಗರ ಹಾಗೂ ಹೊಸಕೆರೆಹಳ್ಳಿ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಚೀಲದಲ್ಲಿ ಏಳು ಬೀದಿ ನಾಯಿಗಳ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬೆಂಗಳೂರು (ಆ.15) : ರಾಜಧಾನಿಯಲ್ಲಿ ಮೂಕಪ್ರಾಣಿಗಳ ಮೇಲೆ ಮನುಷ್ಯನ ದೌರ್ಜನ್ಯ ಮುಂದುವರೆದಿದೆ. ರಾಜರಾಜೇಶ್ವರಿನಗರ ಹಾಗೂ ಹೊಸಕೆರೆಹಳ್ಳಿ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಚೀಲದಲ್ಲಿ ಏಳು ಬೀದಿ ನಾಯಿಗಳ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದುಷ್ಕರ್ಮಿಗಳು ನಾಯಿಗಳನ್ನು ಹತ್ಯೆ ಮಾಡಿ ಬಳಿಕ ಮೃತದೇಹಗಳನ್ನು ಚೀಲಕ್ಕೆ ತುಂಬಿ ನಿರ್ಜನ ಪ್ರದೇಶದಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ರಾಜರಾಜೇಶ್ವರಿನಗರ ನಿವಾಸಿ ಹಾಗೂ ಪ್ರಾಣಿಪ್ರಿಯೆ ಲೀನಾ ಎಂಬುವವರು ನೀಡಿದ ದೂರಿನ ಮೇರೆಗೆ ರಾಜರಾಜೇಶ್ವರಿನಗರ ಠಾಣೆ ಪೊಲೀಸರು(Rajarajeshwarii police station) ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರಥಮ ಬಾರಿಗೆ ಬೀದಿ ನಾಯಿ ಗಣತಿಗೆ ಬಿಬಿಎಂಪಿ ಡ್ರೋಣ್ ಬಳಕೆ!
ದೂರಿನ ಹಿನ್ನೆಲೆಯಲ್ಲಿ ಭಾನುವಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದಾಗ ಏಳು ನಾಯಿಗಳ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ನಾಯಿಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುಷ್ಕರ್ಮಿಗಳು ಬೀದಿ ನಾಯಿಗಳಿಗೆ ವಿಷ ಮಿಶ್ರಿತ ಆಹಾರ ಉಣಿಸಿ ಹತ್ಯೆ ಮಾಡಿ ಬಳಿಕ ಚೀಲಕ್ಕೆ ತುಂಬಿ ನಿರ್ಜನ ಪ್ರದೇಶಕ್ಕೆ ಎಸೆದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ರಾಜರಾಜೇಶ್ವರಿನಗರದಲ್ಲಿ ಕಳೆದ ಒಂದು ವಾರದಿಂದ 18 ಬೀದಿ ನಾಯಿಗಳು ಕಾಣೆಯಾಗಿರುವ ಬಗ್ಗೆ ಅನಿಮಲ್ ವೆಲ್‌ಫೇರ್ ತಂಡಕ್ಕೆ ದೂರು ಬಂದಿದ್ದವು. ಈ ವೇಳೆ ತಂಡದ ಸದಸ್ಯರು ಹುಡುಕಾಟ ನಡೆಸಿದಾಗ ನಿರ್ಜನ ಪ್ರದೇಶದಲ್ಲಿ ಏಳು ನಾಯಿಗಳು ಮೃತದೇಹ ಪತ್ತೆಯಾಗಿವೆ. ಇದರಲ್ಲಿ ಐದು ನಾಯಿಗಳ ಮೃತದೇಹ ಬಹುತೇಕ ಕೊಳೆತು ಹೋಗಿರುವುದು ಕಂಡು ಬಂದಿದೆ. ಮೂಕಪ್ರಾಣಿಗಳ ಮೇಲಿನ ದೌರ್ಜನ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಎಚ್ಚರ.. ಬೆಂಗ್ಳೂರಿನಲ್ಲಿವೆ ರೇಬಿಸ್ ಲಸಿಕೆ ಪಡೆಯದ 2ಲಕ್ಷ ಬೀದಿನಾಯಿಗಳು..!