ಎಚ್ಚರ.. ಬೆಂಗ್ಳೂರಿನಲ್ಲಿವೆ ರೇಬಿಸ್ ಲಸಿಕೆ ಪಡೆಯದ 2ಲಕ್ಷ ಬೀದಿನಾಯಿಗಳು..!
* ಚುಚ್ಚುಮದ್ದು ಪಡೆಯದ 2ಲಕ್ಷ ಶ್ವಾನ
* ಪಾಲಿಕೆ ವ್ಯಾಪ್ತಿಯಲ್ಲಿವೆ 3.09 ಲಕ್ಷ ಶ್ವಾನ
* ರೇಬಿಸ್ ಚುಚ್ಚುಮದ್ದು ನೀಡುವಲ್ಲಿ ಗುರಿ ಮುಟ್ಟದ ಪಾಲಿಕೆ
ಸಂಪತ್ ತರೀಕೆರೆ
ಬೆಂಗಳೂರು(ಜೂ.22): ನಗರವನ್ನು 2025ನೇ ಇಸವಿಯೊಳಗೆ ರೇಬಿಸ್ ಮುಕ್ತ ಮಾಡುವ ಗುರಿ ಪಾಲಿಕೆಯದ್ದು. ಆದರೆ ಶ್ವಾನಗಳಿಗೆ ರೇಬಿಸ್ ರೋಗ ನಿರೋಧಕ (ಆ್ಯಂಟಿ ರೇಬಿಸ್ ವ್ಯಾಕ್ಸಿನ್-ಎಆರ್‌ವಿ) ಚುಚ್ಚುಮದ್ದು ನೀಡುವ ಗುರಿಯನ್ನು ಮುಟ್ಟಲು ಇದುವರೆಗೂ ಸಾಧ್ಯವಾಗಿಲ್ಲ. ಇಂದಿಗೂ ನಗರದ 2 ಲಕ್ಷಕ್ಕೂ ಶ್ವಾನಗಳಿಗೆ ರೇಬಿಸ್ ಚುಚ್ಚುಮದ್ದು ಹಾಕಿಲ್ಲ! ಪಾಲಿಕೆ ವ್ಯಾಪ್ತಿಯಲ್ಲಿ 3.09 ಲಕ್ಷ ಶ್ವಾನಗಳಿದ್ದು, ಅವುಗಳಿಗೆ ಪ್ರತಿ ವರ್ಷ ರೇಬಿಸ್ ರೋಗ ನಿರೋಧಕ ಚುಚ್ಚು ಮದ್ದು ನೀಡಬೇಕು. ಆದರೆ ಇನ್ನೂ 2 ಲಕ್ಷಕ್ಕೂ ಅಧಿಕ ನಾಯಿಗಳಿಗೆ ಕಳೆದ ಸಾಲಿನಲ್ಲಿ ಲಸಿಕೆಯನ್ನೇ ಹಾಕಿಲ್ಲ.
ಇನ್ನು ಪಾಲಿಕೆಯ ಪಶುಪಾಲನಾ ವಿಭಾಗದ ಮಾಹಿತಿಯಂತೆ ಈವರೆಗೆ ಶೇ.70ರಷ್ಟು ಶ್ವಾನಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ (ಎಬಿಸಿ-ಅನಿಮಲ್ ಬಥ್‌ರ್ ಕಂಟ್ರೋಲ್) ಮಾಡಲಾಗಿದೆ. ಇನ್ನೂ ಶೇ.30ರಷ್ಟು ಶ್ವಾನಗಳಿಗೆ ಎಬಿಸಿ ಮಾಡಿಲ್ಲ. ಹೀಗಾಗಿ ಎಬಿಸಿಗೆ ಒಳಗಾಗದ ಶ್ವಾನಗಳಿಂದ ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಶ್ವಾನಗಳ ಸಂತತಿಯು ಹೆಚ್ಚುತ್ತಿದ್ದು, ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ. ಆದರೂ ಸಂತಾನಹರಣ ಶಸ್ತ್ರಚಿಕಿತ್ಸೆ ಸಂಖ್ಯೆ ಹೆಚ್ಚಿಸುವ ಕಾರ್ಯ ಮಾಡುವಲ್ಲಿ ಪಾಲಿಕೆ ವಿಫಲವಾಗಿದೆ.
Kolar: ಬೀದಿ ನಾಯಿಗಳ ಕಾಟ: ಸಾರ್ವಜನಿಕರಿಗೆ ತೀವ್ರ ತೊಂದರೆ!
ಎಂಟು ವಲಯಗಳಲ್ಲಿ ನಿತ್ಯ 800 ಶ್ವಾನಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಗುರಿಯನ್ನು ಈ ಹಿಂದೆ ನೀಡಲಾಗಿತ್ತು. ಆದರೆ, 2021-22ನೇ ಸಾಲಿನಲ್ಲಿ ಪ್ರತಿ ವಲಯದಲ್ಲಿ ದಿನಕ್ಕೆ 20ರಂತೆ ಎಂಟು ವಲಯಗಳಲ್ಲಿ ನಿತ್ಯ 160ರಿಂದ 200 ಶ್ವಾನಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ.
ಪಾಲಿಕೆಯು ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಲಸಿಕೆಗಾಗಿ ಪ್ರತಿ ವರ್ಷ ಬಜೆಟ್‌ನಲ್ಲಿ .5 ಕೋಟಿ ಅನುದಾನ ಮೀಸಲಿಡುತ್ತದೆ. ಪ್ರತಿ ಶ್ವಾನಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು .1200 ಮತ್ತು ರೇಬಿಸ್ ಚುಚ್ಚು ಮದ್ದು ನೀಡಲು .155 ಗಳನ್ನು ಪಾಲಿಕೆ ವೆಚ್ಚ ಮಾಡುತ್ತಿದೆ. ಪ್ರತಿ ವರ್ಷ ಇಷ್ಟೆಲ್ಲಾ ಅನುದಾನ ಖರ್ಚಾಗುತ್ತಿದ್ದರೂ ಸಂತಾನಹರಣ ಶಸ್ತ್ರಚಿಕಿತ್ಸೆಗೊಳಗಾದ ಶ್ವಾನಗಳನ್ನು ಪತ್ತೆ ಮಾಡುವುದೇ ಕಷ್ಟ. ಪಶುಪಾಲನಾ ವಿಭಾಗದ ಮಾಹಿತಿಯಂತೆ ಶಸ್ತ್ರಚಿಕಿತ್ಸೆಗೆ ಒಳಗಾದ ಶ್ವಾನದ ಕಿವಿಯನ್ನು ಸ್ವಲ್ಪ ಕತ್ತರಿಸಿ ಗುರುತು ಮಾಡಲಾಗಿರುತ್ತದೆ. ಆದರೆ, ಹಾಗೆ ಕಿವಿ ಕತ್ತರಿಸಿದ ನಾಯಿಗಳನ್ನು ಹುಡುಕಾಡಿದರೂ ಸಿಗುತ್ತಿಲ್ಲ ಎಂಬ ಆರೋಪವೂ ಇದೆ.
ಇನ್ನು ಶ್ವಾನಗಳಿಗೆ ರೇಬಿಸ್ ರೋಗ ಬರದಂತೆ ತಡೆಯುವ ಉದ್ದೇಶದಿಂದಲೇ ಎಆರ್‌ವಿ ಚುಚ್ಚುಮದ್ದು ಹಾಕಲಾಗುತ್ತಿದೆ. ನಿತ್ಯ ಎಂಟು ವಲಯಗಳಲ್ಲಿ 320 ರಿಂದ 350 ಶ್ವಾನಗಳಿಗೆ ಲಸಿಕೆ ಹಾಕಲಾಗುತ್ತಿದೆ. ಬಹುತೇಕ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದಾಗಲೇ ಚುಚ್ಚುಮದ್ದನ್ನು ಕೂಡ ನೀಡುತ್ತಿದ್ದೇವೆ. ಆದರೂ, ಸಂತಾನಹರಣ ಶಸ್ತ್ರಚಿಕಿತ್ಸೆಯಿಂದ ತಪ್ಪಿಸಿಕೊಂಡಿರುವ ಶ್ವಾನಗಳಿಂದ ಸಂತಾನಾಭಿವೃದ್ಧಿಯೂ ಹೆಚ್ಚುತ್ತಿದೆ. ಅಂತಹ ಶ್ವಾನಗಳನ್ನು ಗುರುತಿಸುವಂತ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಬಿಬಿಎಂಪಿ ಪಶುಪಾಲನಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಗುವನ್ನು ಕಿತ್ತು ತಿಂದ ಬೀದಿ ನಾಯಿಗಳು, ಹಾಸನದಲ್ಲೊಂದು ಹೃದಯ ವಿದ್ರಾವಕ ಘಟನೆ
ಶ್ವಾನಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಶೇ.70ರಷ್ಟುಪೂರ್ಣಗೊಂಡಿದೆ. ರೇಬಿಸ್ ಲಸಿಕೆ ನೀಡುವುದು ನಿರಂತರ ಕಾರ್ಯವಾಗಿದ್ದು ಬೆಂಗಳೂರನ್ನು 2025ರೊಳಗೆ ರೇಬಿಸ್ ಮುಕ್ತವನ್ನಾಗಿ ಮಾಡುವ ಗುರಿಯನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ರೇಬಿಸ್ ಸೋಂಕಿಗೆ ಒಳಗಾದ ಶ್ವಾನಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಅಂತ ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಮಂಜುನಾಥ ಶಿಂಧೆ ತಿಳಿಸಿದ್ದಾರೆ.
ಯಾವ ವರ್ಷ ಎಷ್ಟು ಶ್ವಾನಗಳಿಗೆ ಚುಚ್ಚುಮದ್ದು?
2019-20ರಲ್ಲಿ - 65 ಸಾವಿರ
2020-21ರಲ್ಲಿ - 85 ಸಾವಿರ
2021-22ರಲ್ಲಿ - 1 ಲಕ್ಷದ 9 ಸಾವಿರ