ಪ್ರಪ್ರಥಮ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಗಣತಿಗೆ ಬಿಬಿಎಂಪಿಯು ಡ್ರೋನ್ ಬಳಸುತ್ತಿದೆ. ಕಳೆದ ಒಂದು ವಾರದಿಂದ ಬೈಕ್ ಮೇಲೇರಿದ ಸಿಬ್ಬಂದಿಯು ನಗರದ ಬೀದಿ ಬೀದಿ ಸುತ್ತಿ ಬೀದಿ ನಾಯಿಗಳ ಗಣತಿಗೆ ನಡೆಸುತ್ತಿದ್ದಾರೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಜು.18) : ಪ್ರಪ್ರಥಮ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಗಣತಿಗೆ ಬಿಬಿಎಂಪಿಯು ಡ್ರೋನ್ ಬಳಸುತ್ತಿದೆ.
ಕಳೆದ ಒಂದು ವಾರದಿಂದ ಬೈಕ್ ಮೇಲೇರಿದ ಸಿಬ್ಬಂದಿಯು ನಗರದ ಬೀದಿ ಬೀದಿ ಸುತ್ತಿ ಬೀದಿ ನಾಯಿಗಳ ಗಣತಿಗೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಬಿಬಿಎಂಪಿಯ ಪಶುಪಾಲನಾ ವಿಭಾಗವೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಹಯೋಗದಲ್ಲಿ ಪ್ರಮುಖ ಸ್ಥಳದಲ್ಲಿ ಡ್ರೋನ್ ಬಳಕೆ ಮಾಡುತ್ತಿದೆ.
ಬಿಬಿಎಂಪಿ ವ್ಯಾಪ್ತಿಯ 840 ಚದರ ಕಿಲೋ ಮೀಟನ್ನು ತಲಾ 0.5 ಚ.ಕಿ.ಮೀ. ವ್ಯಾಪ್ತಿಯಂತೆ 6,850 ಮೈಕ್ರೋ ವಲಯಗಳಾಗಿ ವಿಂಗಡಿಸಿಕೊಂಡು ಪ್ರತಿ ದಿನ 0.5 ಕಿ.ಮೀ. ವ್ಯಾಪ್ತಿಯಲ್ಲಿ ತಲಾ ಒಂದು ತಂಡ ಬೈಕ್‌ನಲ್ಲಿ ಗಣತಿ ನಡೆಸುತ್ತಿದ್ದಾರೆ. ಆದರೆ, ಕೆರೆ ಅಂಗಳದಲ್ಲಿ ಬೈಕ್ ಸಂಚಾರ ಮಾಡುವುದಕ್ಕೆ ಸಾಧ್ಯವಿಲ್ಲ.
BBMP: ಮೊದಲ ದಿನ 4 ಸಾವಿರ ಬೀದಿ ನಾಯಿಗಳ ಗಣತಿ
ಕೆರೆ ಅಂಗಳದಲ್ಲಿ ಡ್ರೋನ್ ಹಾರಾಟ:
ನೂರಾರು ಎಕರೆ ಪ್ರದೇಶದಲ್ಲಿ ಸಿಬ್ಬಂದಿ ಓಡಾಟ ಮಾಡಿ ಗಣತಿ ನಡೆಸುವುದು ದುಸ್ತರ ಎಂಬ ಕಾರಣಕ್ಕೆ ಪ್ರಮುಖವಾಗಿ ಸಾರಕ್ಕಿ ಕೆರೆ, ಎಲೆಮಲ್ಲಪ್ಪ ಚೆಟ್ಟಿಕೆರೆ (ಹಗಲು ಕನಸಿನ ಕೆರೆ) ಹಾಗೂ ಹುಳಿಮಾವು ಕೆರೆಯಲ್ಲಿ ಡ್ರೋನ್ ಬಳಕೆ ಮಾಡಲಾಗುತ್ತಿದೆ. ಒಂದು ಕೆರೆಯಲ್ಲಿ ಒಂದು ದಿನ ಡ್ರೋನ್‌ನಲ್ಲಿ ಬೀದಿ ನಾಯಿಗಳ ಗಣತಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡ್ರೋನ್‌ಗೆ ವೆಚ್ಚ ಇಲ್ಲ
ಡ್ರೋನ್ ಮೂಲಕ ನಾಯಿ ಗಣತಿಗೆ ಬಿಬಿಎಂಪಿಯಿಂದ ಯಾವುದೇ ವೆಚ್ಚ ಮಾಡುತ್ತಿಲ್ಲ. ಐಐಎಸ್ಸಿಯೊಂದಿಗೆ ಸಹಯೋಗ ಹೊಂದಿರುವ ಡ್ರೋನ್ ಸ್ಟಾರ್ಚ್‌ಆಪ್ ಕಂಪನಿಗಳು ಉಚಿತವಾಗಿ ಗಣತಿ ಪ್ರಕ್ರಿಯೆ ನಡೆಸುವುದಕ್ಕೆ ಮುಂದೆ ಬಂದಿವೆ. ಡ್ರೋನ್ ಮೂಲಕ ನಾಯಿ ಗಣತಿ ಮಾಹಿತಿಯನ್ನು ಬಿಬಿಎಂಪಿ ನಡೆಸುತ್ತಿರುವ ಬೀದಿ ನಾಯಿ ಗಣತಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.
ಯಶಸ್ವಿಯಾದರೆ ಖಾಲಿ ಜಾಗದಲ್ಲಿ ಬಳಕೆ:
ಕೆರೆ ಅಂಗಳದಲ್ಲಿ ನಡೆಸಲಾಗುತ್ತಿರುವ ಬೀದಿ ನಾಯಿಗಳ ಗಣತಿ ಯಶಸ್ವಿಯಾದರೆ, ಮೈದಾನ, ಖಾಲಿ ನಿವೇಶನ, ಕೆರೆ ಅಂಗಳಗಳು, ಪಾರ್ಕ್ ಸೇರಿದಂತೆ ಮೊದಲಾದ ಕಡೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ಶ್ರಮ ಕಡಿಮೆ ಆಗಲಿದೆ. ತ್ವರಿತವಾಗಿ ಗಣತಿ ಪ್ರಕ್ರಿಯೆ ನಡೆಸಬಹುದಾಗಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾತ್ರಿಲೋಕಚಂದ್ರ ತಿಳಿಸಿದ್ದಾರೆ.
Bengaluru: ರೇಬೀಸ್ ರೋಗ ತಡೆಗಟ್ಟಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಮೀಕ್ಷೆ
ಪ್ರಥಮ ಬಾರಿಗೆ ಬೀದಿ ನಾಯಿಗಳ ಗಣತಿಗೆ ಬೆಂಗಳೂರಿನಲ್ಲಿ ಡ್ರೋನ್ ಬಳಕೆ ಮಾಡಲಾಗುತ್ತಿದೆ. ಪ್ರಾಯೋಗಿಕವಾಗಿ ಮೂರು ಕೆರೆ ಅಂಗಳದಲ್ಲಿನ ಬೀದಿ ನಾಯಿಗಳ ಗಣತಿಗೆ ಬಳಕೆ ಮಾಡಿಕೊಳ್ಳಲಾಗಿದೆ.-ಡಾತ್ರಿಲೋಕಚಂದ್ರ, ವಿಶೇಷ ಆಯುಕ್ತ, ಪಾಲಿಕೆ ಆರೋಗ್ಯ ವಿಭಾಗ.
