ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆನ್‌ಲೈನ್ ಮೂಲಕ ವಿದೇಶಿ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದರು. ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಬದುಕಿನ ಅಸ್ಮಿತೆ ಮತ್ತು ಸಂಸ್ಕೃತಿಯ ಪ್ರತೀಕ ಎಂದು ಬಣ್ಣಿಸಿದ ಅವರು, ತಂತ್ರಜ್ಞಾನದ ಯುಗದಲ್ಲಿ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ನೆನಪಿಸಿದರು ಮತ್ತು ಸಾಂಸ್ಕೃತಿಕ ಬೇರುಗಳನ್ನು ಮರೆಯಬಾರದೆಂದು ಭಾವಪೂರ್ಣವಾಗಿ ಕರೆ ನೀಡಿದರು.
ದೂರದ ಅಮೇರಿಕಾದ ನಗರವೊಂದರ ಭವ್ಯ ಸಭಾಂಗಣದಲ್ಲಿ ದೀಪಗಳು ಮಂದವಾಗುತ್ತಿದ್ದಂತೆ, ವೇದಿಕೆಯ ಮೇಲಿದ್ದ ದೊಡ್ಡ ಪರದೆಯಲ್ಲಿ ಕನ್ನಡ ನಾಡಿನ ಮಣ್ಣಿನ ಸೌರಭ ಹರಡತೊಡಗಿತು. ಅಕ್ಕ (AKKA) ವಿಶ್ವ ಕನ್ನಡ ಸಮ್ಮೇಳನದಲ್ಲಿ ಸೇರಿದ್ದ ಸಾವಿರಾರು ವಿದೇಶಿ ಕನ್ನಡಿಗರ ಕಣ್ಣುಗಳಲ್ಲಿ ತಾಯ್ನಾಡಿನ ನೆನಪುಗಳು ಹಸಿಯಾಗಿದ್ದವು. ಈ ಅಪರೂಪದ ಕನ್ನಡ ಸಂಭ್ರಮಕ್ಕೆ ಸಾಕ್ಷಿಯಾದ ಜೋಗಿ ಅವರೇ ಅಮೇರಿಕಾದಿಂದ ಈ ವಿಶೇಷ ವರದಿಯನ್ನು ನೀಡಿದ್ದಾರೆ. ಸಮ್ಮೇಳನದ ಸಂಭ್ರಮ, ವಿದೇಶಿ ಕನ್ನಡಿಗರ ಕನ್ನಡಾಭಿಮಾನ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆನ್‌ಲೈನ್ ಸಂದೇಶ ಮೂಡಿಸಿದ ಭಾವನಾತ್ಮಕ ಕ್ಷಣಗಳನ್ನು ಕನ್ನಡಪ್ರಭ ಸಂಪಾದಕ ಜೋಗಿ ಅವರು ತಮ್ಮ ಈ ವರದಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಇದು ನಮ್ಮ ಸಂಸ್ಕೃತಿಯ ಜಾತ್ರೆ!
ಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಭಾಷಣವನ್ನು ಸರಳ ನಮಸ್ಕಾರದಿಂದ ಆರಂಭಿಸಲಿಲ್ಲ; ಬದಲಿಗೆ ವಿಶ್ವದ ಮೂಲೆ ಮೂಲೆಯಲ್ಲೂ ಕನ್ನಡದ ಕಂಪನ್ನು ಪಸರಿಸುತ್ತಿರುವ ಸಮಸ್ತ ಕನ್ನಡಾಂಬೆಯ ಮಕ್ಕಳಿಗೆ ಶಿರಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿದರು. ಇದು ಕೇವಲ ಕಡಲಾಚೆಗೆ ಆಯೋಜಿಸಿರುವ ಒಂದು ಔಪಚಾರಿಕ ಸಮಾವೇಶವಲ್ಲ. ಇದು ನಮ್ಮ ಸಂಸ್ಕೃತಿಯ ಜಾತ್ರೆ, ಕರ್ನಾಟಕದ ಪವಿತ್ರ ಹಬ್ಬ ಮತ್ತು ನಾವೆಲ್ಲರೂ ಬಾಲ್ಯದಲ್ಲಿ ಉಂಡು ಬೆಳೆದ ಸಿಹಿ ನೆನಪುಗಳನ್ನು ಮತ್ತೆ ಸ್ಪರ್ಶಿಸುವ ಪವಿತ್ರ ಕ್ಷಣ" ಎಂಬ ಅವರ ಮಾತುಗಳು ಸಭಾಂಗಣದಲ್ಲಿದ್ದ ಎಲ್ಲರ ಮನಸ್ಸನ್ನು ತಾಗಿದವು.
ಕನ್ನಡವೇ ನಮ್ಮ ಬದುಕು; ಡಿಕೆಶಿ
ಕನ್ನಡ ಎನ್ನುವುದು ಕೇವಲ ಕಿವಿಗೆ ಇಂಪಾದ ಮಾತನಾಡುವ ಭಾಷೆಯಲ್ಲ, ಅದು ನಮ್ಮ ಬದುಕಿನ ಜೀವತಂತಿ. ಅದು ಒಂದು ಸದಾ ಹರಿಯುವ ಜೀವ ನದಿ, ಸಂಸ್ಕೃತಿ ಮತ್ತು ನಮ್ಮ ಪರಂಪರೆಯ ಪ್ರತೀಕ ಎಂದು ಡಿಕೆಶಿ ಬಣ್ಣಿಸಿದ್ದಾರೆ. ಕರ್ನಾಟಕದ ಭೂಪಟವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ ಅವರು, ಕರಾವಳಿಯ ಅಲೆಗಳ ಸದ್ದು, ಉತ್ತರ ಕರ್ನಾಟಕದ ಜಾನಪದ ಸೊಗಡು, ಮಲೆನಾಡಿನ ಹಸಿರು ಸೌಂದರ್ಯ, ಹೈದರಾಬಾದ್ ಕರ್ನಾಟಕದ ದಿಟ್ಟತನ, ಮೈಸೂರಿನ ರಾಜಸಿಕ ಪರಂಪರೆ ಮತ್ತು ಬೆಂಗಳೂರಿನ ತಾಂತ್ರಿಕ ವೇಗ, ಇವೆಲ್ಲವೂ ಸೇರಿದಾಗಷ್ಟೇ ಕರ್ನಾಟಕದ ಪೂರ್ಣ ಸುಂದರ ಚಿತ್ರಣ ಮೂಡುತ್ತದೆ. ಈ ಭೌಗೋಳಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯೇ ಕನ್ನಡಿಗರ ನಿಜವಾದ ಆಂತರಿಕ ಶಕ್ತಿ ಎಂಬ ಸತ್ಯವನ್ನು ಎಂದು ಕನ್ನಡ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದಾರೆ.
ಮಹನೀಯರನ್ನು ಸ್ಮರಿಸಿದ ಡಿಕೆ!
ನಾಡಿನ ಬೆಳವಣಿಗೆಗೆ ಶ್ರಮಿಸಿದ ಮಹನೀಯರನ್ನು ಸ್ಮರಿಸಿದ ಅವರ ಮಾತುಗಳು ಕನ್ನಡಿಗರ ಭವ್ಯ ಇತಿಹಾಸವನ್ನು ಪುನರುಜ್ಜೀವನಗೊಳಿಸಿದವು. ದಾಸ ಸಾಹಿತ್ಯದ ಮೂಲಕ ಭಕ್ತಿ ಮತ್ತು ದಾಸೋಹ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಕನಕ-ಪುರಂದರರು, ಸಾಮಾಜಿಕ ಸಮಾನತೆ ಮತ್ತು ಕಾಯಕವೇ ಕೈಲಾಸ ಎಂಬ ಕ್ರಾಂತಿಕಾರಿ ವಿಚಾರ ನೀಡಿದ ವಚನಕಾರರು, 'ವಿಶ್ವಮಾನವ' ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು, ತಮ್ಮ ಭಾವಪೂರ್ಣ ಕಾವ್ಯಗಳಿಂದ ಕನ್ನಡಿಗರ ಮನಸ್ಸನ್ನು ತಣಿಸಿದ ದ.ರಾ. ಬೇಂದ್ರೆ ಹಾಗೂ ಜ್ಞಾನ ಮತ್ತು ಸೃಜನಶೀಲತೆಯ ಹೊಸ ದಿಕ್ಕುಗಳನ್ನು ತೋರಿದ ಶಿವರಾಮ ಕಾರಂತ ಅವರಂತಹ ಯುಗಪುರುಷರು ಕಟ್ಟಿಕೊಟ್ಟ ಗಟ್ಟಿ ಅಡಿಪಾಯದ ಮೇಲೆ ಇಂದು ಕನ್ನಡ ನಾಡು ನಿಂತಿದೆ ಎಂಬುದನ್ನು ನೆನಪಿಸಿದ್ದಾರೆ.
ತಂತ್ರಜ್ಞಾನವೂ ಅತ್ಯಗತ್ಯ!
ಇಂದಿನ ಡಿಜಿಟಲ್ ಯುಗದಲ್ಲಿ ಕನ್ನಡದ ಸವಾಲುಗಳನ್ನು ಅವರು ನೇರವಾಗಿ ಉಲ್ಲೇಖಿಸಿದರು. ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯನ್ನು ತಂತ್ರಜ್ಞಾನಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವುದು ಅತ್ಯಗತ್ಯ. ಭಾಷೆಯನ್ನು ಕೇವಲ ಮನೆಯೊಳಗಿನ ಸಂಭಾಷಣೆಗೆಷ್ಟೇ ಸೀಮಿತಗೊಳಿಸದೆ, ಹೊಸ ಪೀಳಿಗೆಯ ಮಕ್ಕಳಿಗೆ ಮತ್ತು ಯುವಜನತೆಗೆ ಸುಲಭವಾಗಿ ತಲುಪಿಸುವ ಬೃಹತ್ ಜವಾಬ್ದಾರಿ ವಿದೇಶದಲ್ಲಿರುವ ಪ್ರತಿಯೊಬ್ಬ ಕನ್ನಡಿಗನ ಮೇಲೂ ಇದೆ ಎಂದು ಕರೆ ನೀಡಿದರು.
ನಮ್ಮ ಸಂಸ್ಕೃತಿಯೇ ನಮ್ಮ ಹೆಮ್ಮೆ!
ಕರ್ನಾಟಕದ ನಿಜವಾದ ನಾಯಕರಾದ ಶ್ರಮಿಕ ವರ್ಗವನ್ನು ಅವರು ಗೌರವದಿಂದ ಸ್ಮರಿಸಿದರು. ನಮ್ಮ ಮಣ್ಣಿನಲ್ಲಿ ಬೆವರು ಹರಿಸಿ ಅನ್ನ ನೀಡುವ ರೈತರು, ನಗರಗಳ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸುವ ಕಾರ್ಮಿಕರು ಮತ್ತು ಭವಿಷ್ಯದ ಪ್ರಜೆಗಳನ್ನು ತೀಡಿ ತಿದ್ದುವ ಶಿಕ್ಷಕರು—ಈ ಮೂರು ಶಕ್ತಿಗಳೇ ನಾಡಿನ ಬೆನ್ನೆಲುಬು. ಇವರ ನಿಸ್ವಾರ್ಥ ಸೇವೆಯನ್ನು ಗೌರವಿಸುವುದೇ ನಾವು ಕನ್ನಡ ಮಾತೆಗೆ ಸಲ್ಲಿಸುವ ನಿಜವಾದ ಪೂಜೆ ಎಂದರು. ಕೊನೆಯಲ್ಲಿ, ಜಾಗತಿಕ ಮಟ್ಟದಲ್ಲಿ ಕನ್ನಡಿಗರು ಎಲ್ಲೇ ಇರಲಿ, ತಮ್ಮ ಸಾಂಸ್ಕೃತಿಕ ಬೇರುಗಳನ್ನು ಮರೆಯಬಾರದು ಎಂಬ ಕಿವಿಮಾತಿನೊಂದಿಗೆ ಸಂದೇಶ ಮುಕ್ತಾಯವಾಯಿತು. ನಾವು ಎಲ್ಲೇ ವಾಸಿಸಲಿ, ನಮ್ಮ ಉಸಿರು ಮತ್ತು ಹೆಮ್ಮೆ ಕನ್ನಡವಾಗಿರಲಿ. ಇದು ಬರೀ ಜಾತ್ರೆಯಲ್ಲ, ನಮ್ಮ ನೆನಪುಗಳ ಸಮ್ಮಿಲನ" ಎಂಬ ಸಾಲುಗಳು ಸಭಾಂಗಣದಲ್ಲಿದ್ದ ಪ್ರತಿಯೊಬ್ಬ ಕನ್ನಡಿಗನ ಕಣ್ಣಿನಲ್ಲಿ ಆನಂದಭಾಷ್ಪ ತರಿಸಿದ್ದಾವೆ. ವೇದಿಕೆಯ ಪರದೆ ಮುಚ್ಚಿದರೂ, ಸಾವಿರಾರು ಮೈಲಿಗಳ ಆಚೆಯಿಂದ ಬಂದ ಆ ಸಂದೇಶದ ಧ್ವನಿ ಪ್ರತಿಯೊಬ್ಬ ಕನ್ನಡಿಗನ ಎದೆಯಲ್ಲಿ 'ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ' ಎಂಬ ಜಯಘೋಷವಾಗಿ ಪ್ರವೇಶಿಸಿ, ತಾಯ್ನಾಡಿನ ಮೇಲಿನ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.


