Rowing Star Salman khan: ಕುಟುಂಬ ನಿರ್ವಹಣೆಗಾಗಿ ಉಬರ್ ಕ್ಯಾಬ್ ಓಡಿಸುತ್ತಿದ್ದ ಸಲ್ಮಾನ್ ಖಾನ್, ಸೇನೆಗೆ ಸೇರಿದ ಬಳಿಕ ರೋಯಿಂಗ್ ಕ್ರೀಡೆಯಲ್ಲಿ ಮಿಂಚಿದ್ದಾರೆ. ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಪುರುಷರ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಇವರು ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಸಾಧಿಸುವ ಸಂಕಲ್ಪವಿದ್ದರೆ, ಗುರಿಮುಟ್ಟುವ ದೃಢ ನಿರ್ಧಾರವಿದ್ದರೆ ಹುಟ್ಟು ಬೆಳವಣಿಗೆ ಹೇಗಾಯ್ತು ಅನ್ನೋದು ಮುಖ್ಯವಾಗಲ್ಲ. ಬಾಲ್ಯದಲ್ಲಿ ಬಡತನದಲ್ಲಿ ಬೆಂದವರು, ಒಂದೊತ್ತಿನ ಊಟಕ್ಕೂ ಗತಿಯಿಲ್ಲದವರು ಇಂದು ಅಗರ್ಭ ಶ್ರೀಮಂತರು. ಕೆಲವರು ಗುರಿ ಸಾಧಿಸಲು ಮತ್ತು ಅದಕ್ಕಾಗಿ ಯಾವುದೇ ಸಣ್ಣ ಕೆಲಸ ಮಾಡಲು ಸಿದ್ಧರಿರ್ತಾರೆ. ಅದೇ ರೀತಿ ಕ್ಯಾಬ್ ಡ್ರೈವರ್ ಆಗಿದ್ದ ಈ ವ್ಯಕ್ತಿ ಇಂದು ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಬೇಟೆಯಾಡಿದ್ದಾನೆ. ಈ ರೋಯಿಂಗ್ ಸ್ಟಾರ್ ಸಲ್ಮಾನ್ ಖಾನ್ ಯಾರು?
ಜೀವನದಲ್ಲಿ ಎಷ್ಟೇ ಕಷ್ಟ ಎದುರಾದರು ಕುಗ್ಗದೆ, ಸೋಲೊಪ್ಪದೇ ಹಠಕ್ಕೆ ಬಿದ್ದು ಸಾಧನೆ ಮಾಡಿರುವ ಭಾರತೀಯ ರೋಯಿಂಗ್ ಪಟು ಸಲ್ಮಾನ್ ಖಾನ್ ಕ್ರೀಡಾ ಬದುಕಿನಲ್ಲಿ ಮತ್ತೊಂದು ಮೈಲಿಗಲ್ಲು ಮುಟ್ಟಿದ್ದಾರೆ. ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಗುರುವಾರ ಪುರುಷರ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಸತ್ನಾಮ್ ಸಿಂಗ್ ಅವರೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ಭಾರತೀಯ ಜೋಡಿ 6:13.25 ನಿಮಿಷಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಪಡೆದುಕೊಂಡಿತು. ಚೀನಾ ಚಿನ್ನದ ಪದಕ ಮತ್ತು ಉಜ್ಬೇಕಿಸ್ತಾನ್ ಬೆಳ್ಳಿ ಪದಕ ಗೆದ್ದವು.
ಸಲ್ಮಾನ್ ಖಾನ್ ವೃತ್ತಿ ಜೀವನದ ಮಹತ್ವದ ಸಾಧನೆ
ಇದು ಸಾಮಾನ್ಯ ಪದಕವಲ್ಲ. ಸಲ್ಮಾನ್ ಅವರ ರೋಯಿಂಗ್ ವೃತ್ತಿಜೀವನಕ್ಕೆ ಮತ್ತೊಂದು ಮಹತ್ವದ ಸಾಧನೆಯ ಸಂಕೇತವಾಗಿದೆ. ಇದು ಸುಲಭದ ಪ್ರಯಾಣವಲ್ಲ. ಏಷ್ಯನ್ ಗೇಮ್ಸ್ ವೇದಿಕೆಗೆ ತಲುಪಲು ಅವರು ಅದೆಷ್ಟು ಶ್ರಮಪಟ್ಟಿದ್ದಾರೆ ಎಂದರೆ ಸಾಮಾನ್ಯರಾಗಿದ್ದರೆ ಅರ್ಧಕ್ಕೆ ಕೈಚೆಲ್ಲಿ ವಾಪಸ್ ಬಂದು ಡ್ರೈವರ್ ವೃತ್ತಿ ಮುಂದುವರಿಸಿಬಿಡುತ್ತಿದ್ದರು. ಆದರೆ ಸಲ್ಮಾನ್ ಖಾನ್ ಕೈಚೆಲ್ಲಲಿಲ್ಲ. ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಮೊದಲು ತುಂಬಾ ಕಷ್ಟಪಡಬೇಕಾಯ್ತು. ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಸಲ್ಮಾನ್ ಜೀವನ ಸಾಗಿಸಲು ದೆಹಲಿಯಲ್ಲಿ ಉಬರ್ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಯಾರು ಈ ಸಲ್ಮಾನ್ ಖಾನ್?
ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಪ್ಯೂರ್ ಧಿಂಗೈ ಗ್ರಾಮದಲ್ಲಿ ಜನಿಸಿದ ಸಲ್ಮಾನ್, ನಾಲ್ವರು ಸಹೋದರರು ಮತ್ತು ಇಬ್ಬರು ಸಹೋದರಿಯರ ಪೈಕಿ ದೊಡ್ಡವನು. ಅವರ ತಂದೆ ಮೊಹಮ್ಮದ್ ಕಾಸಿಂ ಖಾನ್ ಹರಿಯಾಣದ ತೌರುದಲ್ಲಿ ಟ್ರಕ್ ಬಾಡಿ ನಿರ್ಮಾಣ ಕೆಲಸ ಮಾಡುತ್ತಿದ್ದರು. ಇದೇ ಸಮಯದಲ್ಲಿ ಸಲ್ಮಾನ್ ಅಲ್ಲಿಯೇ ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು.
ಚಿಕ್ಕವಯಸ್ಸಿಗೆ ತಂದೆಯನ್ನ ಕಳೆದುಕೊಂಡ ಸಲ್ಮಾನ್
ಸಲ್ಮಾನ್ ಅವರಿಗೆ 18 ವರ್ಷವಾಗಿದ್ದಾಗ ಡೆಂಗ್ಯೂ ಜ್ವರದಿಂದ ತಂದೆ ಮೃತಪಟ್ಟರು. ಇದರಿಂದ ತಮ್ಮ-ತಂಗಿಯರ ನೋಡಿಕೊಳ್ಳುವ ಜವಾಬ್ದಾರಿಯೂ ಸಲ್ಮಾನ್ ಖಾನ್ ಹೆಗಲ ಮೇಲೆ ಬಿತ್ತು. ಈ ಪರಿಸ್ಥಿತಿಯಲ್ಲಿ ಭಾರತೀಯ ಸೇನೆಗೆ ಸೇರುವ ಅವರ ಕನಸು ಅಲ್ಲಿಗೆ ದೂರವಾಯ್ತು. ಕುಟುಂಬ ನಿರ್ವಹಣೆಗಾಗಿ ಅವರು ದೆಹಲಿಯಲ್ಲಿ ಉಬರ್ ಕ್ಯಾಬ್ ಚಾಲನೆ ಮಾಡುತ್ತಾ ಹಗಲು-ರಾತ್ರಿ ದುಡಿಯಲು ಆರಂಭಿಸಿದರು. ಆದರೆ ಒಂದು ಅವಕಾಶ ಸಲ್ಮಾನ್ಗೆ ಸೇನೆ ಸೇರುವ ಕನಸಿಗೆ ಮತ್ತೆ ಜೀವ ನೀಡಿತು. ಅವರ ಎತ್ತರ ಮತ್ತು ದೈಹಿಕ ಸಾಮರ್ಥ್ಯ ಸೇನೆಗೆ ಸೂಕ್ತವಾಗಬಹುದು ಎಂದು ಸ್ನೇಹಿತರೊಬ್ಬರು ಅವರಿಗೆ ಸಲಹೆ ನೀಡಿದರು. ಬಳಿಕ ಸಲ್ಮಾನ್ ಕ್ಯಾಬ್ ಅನ್ನು ಮತ್ತೊಬ್ಬ ಚಾಲಕನಿಗೆ ಕೊಟ್ಟು ನಾಲ್ಕು ತಿಂಗಳ ಕಾಲ ಸೇನಾ ನೇಮಕಾತಿಗೆ ಸಿದ್ಧರಾದರು. ನಂತರ ನೇಮಕಾತಿ ರ‍್ಯಾಲಿ, ವೈದ್ಯಕೀಯ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅವರು 2018ರ ಸೆಪ್ಟೆಂಬರ್ 25ರಂದು ಪುಣೆಯ ಕಿರ್ಕಿಯಲ್ಲಿರುವ ಬಾಂಬೆ ಎಂಜಿನಿಯರ್ ಗ್ರೂಪ್ (BEG)ಗೆ ಸೇರ್ಪಡೆಯಾದರು.
ಹಾಗಾದರೆ ಸಲ್ಮಾನ್ ಖಾನ್ ರೋಯಿಂಗ್‌ಗೆ ಬಂದಿದ್ದು ಹೇಗೆ?
ರೋಯಿಂಗ್ ಕ್ರೀಡೆ ಆಯ್ಕೆ ಮಾಡುವುದು ಸಲ್ಮಾನ್ ಅವರ ಆಯ್ಕೆಯಾಗಿದ್ದಲ್ಲ. ಸೇನೆಗೆ ಸೇರಿದ ಬಳಿಕ ತರಬೇತಿ ಕೇಂದ್ರದ ಕೋಚ್‌ಗಳು ಅವರ ದೈಹಿಕ ಸಾಮರ್ಥ್ಯವನ್ನು ಗಮನಿಸಿ ರೋಯಿಂಗ್ ಕ್ರೀಡೆಗೆ ಪರಿಚಯಿಸಿದರು. ಅದಕ್ಕೂ ಮೊದಲು ಅಂತಹ ಕ್ರೀಡೆಯೊಂದು ಇದೆ ಅನ್ನೋದು ಸಹ ತಿಳಿದಿರಲಿಲ್ಲ. ಆರಂಭದಲ್ಲಿ ಸಲ್ಮಾನ್ ಪದೇಪದೆ ರೋಯಿಂಗ್ ಕ್ರೀಡೆ ನಿರಾಕರಿಸಿದರು. ನನಗಿದು ಹೊಸದು. ಇಷ್ಟವಿಲ್ಲ ಆಸಕ್ತಿಯಿಲ್ಲ ಎಂದರು. ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಇದಕ್ಕೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಕೋಚ್‌ಗಳು ಸಲ್ಮಾನ್ ಖಾನ್‌ನನ್ನ ಬಿಡಲಿಲ್ಲ. ಕೊನೆಗೆ ದೋಣಿಯಲ್ಲಿ ಕೂರಿಸಿ ತರಬೇತಿಗೆ ಇಳಿಸಿಯೇ ಬಿಟ್ಟರು.
ಅವರ ಮೊದಲ ಇಂಟರ್-ಸೆಂಟರ್ ರೆಗಟ್ಟಾದಲ್ಲೇ ಸಲ್ಮಾನ್ ಬೆಳ್ಳಿ ಪದಕ ಗೆದ್ದು ಆತ್ಮವಿಶ್ವಾಸ ಗಳಿಸಿದರು. 2021ರಲ್ಲಿ ಅವರ ಕ್ರೀಡಾ ಬದುಕಿನಲ್ಲಿ ದೊಡ್ಡ ತಿರುವು ಸಿಕ್ತು. ಎರ್ಗೋಮೀಟರ್ ಪರೀಕ್ಷೆಯ ಮಾನದಂಡಗಳನ್ನು ಪೂರ್ಣಗೊಳಿಸಿದ ಅವರು ಪುಣೆಯ CMEಯಲ್ಲಿರುವ ಆರ್ಮಿ ರೋಯಿಂಗ್ ನೋಡ್ (ARN)ಗೆ ಆಯ್ಕೆಯಾದರು. ನಂತರ ಭಾರತದ ಕೆಲವು ಅತ್ಯುತ್ತಮ ರೋಯಿಂಗ್ ಪಟುಗಳೊಂದಿಗೆ ತರಬೇತಿ ಪಡೆಯುವುದು ಸಲ್ಮಾನ್ ಅವರಿಗೆ ಹೊಸ ಆತ್ಮವಿಶ್ವಾಸ ನೀಡಿತು. ರೋಯಿಂಗ್ ಅನ್ನು ವೃತ್ತಿಪರ ಕ್ರೀಡಾ ಬದುಕಾಗಿ ಮುಂದುವರಿಸಬಹುದು ಎಂಬ ನಂಬಿಕೆ ಅವರಲ್ಲಿ ಮೂಡಿತು.
ಏಷ್ಯನ್ ಗೇಮ್ಸ್‌ನಲ್ಲಿ ಸಲ್ಮಾನ್ ಖಾನ್ ಕಂಚಿನ ಪದಕ
ಗುರುವಾರ ನಡೆದ ಪುರುಷರ ಡಬಲ್ ಸ್ಕಲ್ಸ್ ಫೈನಲ್‌ನಲ್ಲಿ ಸತ್ನಾಮ್ ಸಿಂಗ್ ಮತ್ತು ಸಲ್ಮಾನ್ ಖಾನ್ ಉತ್ತಮ ಪ್ರದರ್ಶನ ನೀಡಿದರು. ರೇಸ್‌ನ ಆರಂಭದಿಂದಲೇ ಭಾರತೀಯ ಜೋಡಿ ಪದಕದ ಸ್ಪರ್ಧೆಯಲ್ಲಿತ್ತು. 500 ಮೀಟರ್, 1000 ಮೀಟರ್ ಮತ್ತು 1500 ಮೀಟರ್ ಹಂತಗಳಲ್ಲಿ ಭಾರತೀಯ ಜೋಡಿ ಎರಡನೇ ಸ್ಥಾನದಲ್ಲಿತ್ತು. ಅಂತಿಮವಾಗಿ ಮೂರನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಮುತ್ತಿಕ್ಕಿತು.
ಭಾರತೀಯ ಜೋಡಿ 6:13.25 ನಿಮಿಷಗಳಲ್ಲಿ ಗುರಿ ತಲುಪಿತು. ಚಿನ್ನದ ಪದಕ ಗೆದ್ದ ಚೀನಾದ ಜೋಡಿಗಿಂತ 3.48 ಸೆಕೆಂಡ್ ಮತ್ತು ಬೆಳ್ಳಿ ಪದಕ ಪಡೆದ ಉಜ್ಬೇಕಿಸ್ತಾನದ ಜೋಡಿಗಿಂತ 2.76 ಸೆಕೆಂಡ್ ಹಿಂದುಳಿಯಿತು.
ಉಬರ್ ಕ್ಯಾಬ್ ಓಡಿಸುತ್ತಿದ್ದ ಸಲ್ಮಾನ್, ಇದೀಗ ಏಷ್ಯನ್ ಗೇಮ್‌ನಲ್ಲಿ ಪದಕ ಗೆದ್ದ
ಕುಟುಂಬವನ್ನು ಸಾಕಲು ಒಮ್ಮೆ ಉಬರ್ ಕ್ಯಾಬ್ ಓಡಿಸುತ್ತಿದ್ದ ಸಲ್ಮಾನ್, ಇದೀಗ ಭಾರತವನ್ನು ಪ್ರತಿನಿಧಿಸಿ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದಾರೆ. ಅವರ ಜೀವನದ ಈ ಪಯಣ ಕಷ್ಟಗಳನ್ನು ಎದುರಿಸಿ ಸಾಧನೆ ಮಾಡಿದ್ದಾರೆ. ಆದರೆ ಏಷ್ಯನ್ ಗೇಮ್ಸ್‌ನ ಪದಕವೇ ಸಲ್ಮಾನ್ ಅವರ ಅಂತಿಮ ಗುರಿಯಲ್ಲ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ, ಒಲಿಂಪಿಕ್ ಕೋಟಾ ಪಡೆಯಬೇಕು ಮತ್ತು ಅಂತಿಮವಾಗಿ ಭಾರತಕ್ಕಾಗಿ ಒಲಿಂಪಿಕ್ ಪದಕ ಗೆಲ್ಲಬೇಕು ಎಂಬುದು ಅವರ ಹಿಂದಿನ ಹೇಳಿಕೆಗಳಲ್ಲಿ ವ್ಯಕ್ತವಾಗಿರುವ ಮಹತ್ವಾಕಾಂಕ್ಷೆಯಾಗಿದೆ.
ಒಮ್ಮೆ ಕುಟುಂಬದ ಜವಾಬ್ದಾರಿಗಾಗಿ ತಮ್ಮ ಕ್ರೀಡಾ ಕನಸನ್ನು ಬದಿಗಿಟ್ಟಿದ್ದ ಯುವಕ, ಸೇನೆಗೆ ಸೇರಿದ ಬಳಿಕ ಅನಿರೀಕ್ಷಿತವಾಗಿ ರೋಯಿಂಗ್ ಕ್ರೀಡೆಯನ್ನು ಆಯ್ದುಕೊಂಡು ಅಲ್ಲಿಂದ ತಮ್ಮ ಪರಿಶ್ರಮ ಮತ್ತು ಛಲದಿಂದ ಮುಂದೆ ಸಾಗಿದ ಸಲ್ಮಾನ್, ಇದೀಗ ಭಾರತದ ಬಾವುಟ ಹಿಡಿದು ಏಷ್ಯನ್ ಗೇಮ್ಸ್ ವೇದಿಕೆಯಲ್ಲಿ ನಿಂತಿದ್ದಾರೆ. ಅವರ ಪಯಣ ನಿಜಕ್ಕೂ ಹೋರಾಟ ಮತ್ತು ಸಾಧನೆಯ ಕಥೆಯಾಗಿದೆ


