ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಕೇಂದ್ರ ವಲಯವನ್ನು ಮಣಿಸಿದ ಪೂರ್ವ ವಲಯ 14 ವರ್ಷಗಳ ಬಳಿಕ ಫೈನಲ್‌ ಪ್ರವೇಶಿಸಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಉತ್ತರ ವಲಯದ ವಿರುದ್ಧ ದಕ್ಷಿಣ ವಲಯ ಗೆಲುವಿನತ್ತ ಮುಖ ಮಾಡಿದ್ದು, ಫೈನಲ್‌ ಪ್ರವೇಶಿಸುವ ನಿರೀಕ್ಷೆಯಲ್ಲಿದೆ.

ಬೆಂಗಳೂರು: ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಪೂರ್ವ ವಲಯ ತಂಡ ಬರೋಬ್ಬರಿ 14 ವರ್ಷಗಳ ಬಳಿಕ ಫೈನಲ್‌ ಪ್ರವೇಶಿಸಿದೆ. ಮಂಗಳವಾರ ಕೊನೆಗೊಂಡ ಸೆಮಿಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೇಂದ್ರ ವಲಯ ವಿರುದ್ಧ ಪೂರ್ವ ವಲಯ 4 ವಿಕೆಟ್‌ ಗೆಲುವು ಸಾಧಿಸಿತು.

ಈ ಹಿಂದೆ 2012-13ರ ಆವೃತ್ತಿಯಲ್ಲಿ ಕೊನೆ ಬಾರಿ ಪೂರ್ವ ವಲಯ ಚಾಂಪಿಯನ್‌ ಆಗಿತ್ತು. ಆ ಬಳಿಕ ತಂಡ ಫೈನಲ್‌ಗೂ ಪ್ರವೇಶಿಸಿರಲಿಲ್ಲ. ಈ ಬಾರಿ ಇಶಾನ್‌ ಕಿಶನ್‌ ನಾಯಕತ್ವದಲ್ಲಿ ತಂಡಕ್ಕೆ ಯಶಸ್ಸು ಲಭಿಸಿದೆ. ವೈಭವ್‌ ಸೂರ್ಯವಂಶಿ ಅಬ್ಬರದ ಆಟ, ಮೊಹಮ್ಮದ್‌ ಶಮಿ, ಮುಕೇಶ್‌ ಕುಮಾರ್‌ ಬೌಲಿಂಗ್‌ ದಾಳಿ ತಂಡವನ್ನು ಫೈನಲ್‌ಗೇರಿಸಿದೆ.

ಮುಕೇಶ್‌ಗೆ 4, ಶಮಿಗೆ 3 ವಿಕೆಟ್

ಮೊದಲ ಇನ್ನಿಂಗ್ಸ್‌ನಲ್ಲಿ ರಜತ್‌ ಪಾಟೀದಾರ್‌ ನಾಯಕತ್ವದ ಕೇಂದ್ರ ವಲಯ 266 ರನ್‌ಗೆ ಆಲೌಟಾಗಿದ್ದರೆ, ಪೂರ್ವ ವಲಯ ಕೂಡಾ ಇಷ್ಟೇ ಮೊತ್ತ ಗಳಿಸಿದ್ದರಿಂದ ಸ್ಕೋರ್‌ ಸಮಬಲಗೊಂಡಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಕೇಂದ್ರ ತಂಡ ಕೇವಲ 158 ರನ್‌ಗೆ ಆಲೌಟಾಯಿತು. ಅಮನ್‌ ಮೋಖಡೆ 41, ಅರ್ಶದ್‌ ಖಾನ್‌ 25, ರಿಂಕು ಸಿಂಗ್‌ 20 ರನ್‌ ಗಳಿಸಿದರು. ಮುಕೇಶ್‌ ಕುಮಾರ್‌ 4, ಶಮಿ 3 ವಿಕೆಟ್‌ ಪಡೆದರು.

ಗೆಲುವಿಗೆ 159 ರನ್ ಗುರಿ ಬೆನ್ನತ್ತಿದ ಪೂರ್ವ ವಲಯಕ್ಕೆ ಮತ್ತೆ ವೈಭವ್‌, ನಾಯಕ ಇಶಾನ್‌ ಆಸರೆಯಾದರು. ವೈಭವ್‌ 43 ಎಸೆತಗಳಲ್ಲಿ 40 ರನ್‌ ಸಿಡಿಸಿದರೆ, ಇಶಾನ್‌ 41 ಎಸೆತಗಳಲ್ಲಿ ಔಟಾಗದೆ 39 ರನ್‌ ಗಳಿಸಿದರು. ಹರ್ಷ್‌ ದುಬೆ 4 ವಿಕೆಟ್‌ ಪಡೆದರು.

ಸ್ಕೋರ್: ಕೇಂದ್ರ ವಲಯ 266/10 ಮತ್ತು 158/10(ಅಮನ್‌ 41, ಅರ್ಶದ್‌ 25, ಮುಕೇಶ್‌ 4-44, ಶಮಿ 3-56), ಪೂರ್ವ ವಲಯ 266/10 ಮತ್ತು 162/6 (ವೈಭವ್‌ 40, ಇಶಾನ್‌ ಔಟಾಗದೆ 39, ಹರ್ಷ್‌ 4-53)

ಪಂದ್ಯಶ್ರೇಷ್ಠ: ಮುಕೇಶ್‌ ಕುಮಾರ್‌

ಉತ್ತರ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸುವತ್ತ ದಕ್ಷಿಣ ವಲಯ

ಬೆಂಗಳೂರು: ಸನತ್‌ ಸಂಗ್ವಾನ್‌ ಹೋರಾಟದ ನಡುವೆಯೂ ಉತ್ತರ ವಲಯ ವಿರುದ್ಧ ದುಲೀಪ್‌ ಟ್ರೋಫಿ ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯ ತಂಡ ಗೆಲುವಿನ ನಿರೀಕ್ಷೆಯಲ್ಲಿದೆ.

ಉತ್ತರ ವಲಯ ಮೊದಲ ಇನ್ನಿಂಗ್ಸ್‌ನಲ್ಲಿ 195 ರನ್‌ಗೆ ಆಲೌಟಾಗಿದ್ದರೆ, ದಕ್ಷಿಣ ತಂಡ 312 ರನ್‌ ಗಳಿಸಿ 117 ರನ್‌ ಮುನ್ನಡೆ ಸಾಧಿಸಿತು. ನಾಯಕ ತಿಲಕ್‌ ವರ್ಮಾ ಔಟಾಗದೆ 116 ರನ್‌ ಗಳಿಸಿದರು. ತಂಡ ಸೋಮವಾರದ ಮೊತ್ತಕ್ಕೆ ಮಂಗಳವಾರ 42 ರನ್‌ ಸೇರಿಸಿತು. ಬಳಿಕ 2ನೇ ಇನ್ನಿಂಗ್ಸ್‌ ಆರಂಭಿಸಿರುವ ಉತ್ತರ ವಲಯ 3ನೇ ದಿನದಂತ್ಯಕ್ಕೆ 7 ವಿಕೆಟ್‌ ನಷ್ಟದಲ್ಲಿ 256 ರನ್‌ ಗಳಿಸಿದ್ದು, 139 ರನ್‌ ಮುನ್ನಡೆಯಲ್ಲಿದೆ. ಸನತ್‌ 76, ಆಯುಶ್‌ ದೊಸೇಜಾ 52 ರನ್‌ ಗಳಿಸಿದರು. ಬುಧವಾರ ಪಂದ್ಯದ ಕೊನೆ ದಿನವಾಗಿದ್ದು, ಪಂದ್ಯ ಡ್ರಾಗೊಂಡರೆ ದಕ್ಷಿಣ ವಲಯ ಫೈನಲ್‌ಗೇರಲಿದೆ. ದಕ್ಷಿಣಕ್ಕೆ ದೊಡ್ಡ ಗುರಿ ನೀಡಿ ಪಂದ್ಯ ಗೆಲ್ಲಲು ಉತ್ತರ ವಲಯ ಅಸಾಧಾರಣ ಆಟ ಪ್ರದರ್ಶಿಸಬೇಕಿದೆ.

ಸ್ಕೋರ್‌: ಉತ್ತರ ವಲಯ 195/10 ಮತ್ತು 256/7(3ನೇ ದಿನದಂತ್ಯಕ್ಕೆ) (ಸನತ್ 76, ದೊಸೇಜಾ 52, ಕಾವೂರಿ 2-34, ನಿಧೀಶ್‌ 2-47, ಶ್ರೇಯಸ್‌ 2-77), ದಕ್ಷಿಣ ವಲಯ 312/10 (ತಿಲಕ್‌ ಔಟಾಗದೆ 116, ಗುರ್ನೂರ್‌ 4-88)