ಭಾರತದ ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್ ಟಿ20 ಕ್ರಿಕೆಟ್‌ನಲ್ಲಿ 9,000 ರನ್‌ಗಳ ಬೃಹತ್ ಮೈಲಿಗಲ್ಲು ದಾಟಿ, ಈ ಸಾಧನೆ ಮಾಡಿದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2026ರ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ.

ಭಾರತದ ಕ್ರಿಕೆಟ್ ತಾರೆ ಸಂಜು ಸ್ಯಾಮ್ಸನ್ ಟಿ20 ಕ್ರಿಕೆಟ್‌ನಲ್ಲಿ 9,000 ರನ್‌ಗಳ ಬೃಹತ್ ಮೈಲಿಗಲ್ಲು ದಾಟುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಸುವರ್ಣ ಅಧ್ಯಾಯ ಬರೆದಿದ್ದಾರೆ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಅವರು ಈ ಐತಿಹಾಸಿಕ ಸಾಧನೆ ಮಾಡಿದರು. ಈ ಪಂದ್ಯಕ್ಕೂ ಮುನ್ನ 9,000 ರನ್‌ಗಳ ಗಡಿ ತಲುಪಲು ಸಂಜು ಅವರಿಗೆ ಕೇವಲ 23 ರನ್‌ಗಳ ಅಗತ್ಯವಿತ್ತು. ಭಾರತದ ಇನ್ನಿಂಗ್ಸ್ ಆರಂಭಿಸಲು ಬಂದ ಸಂಜು, ಎದುರಾದ ಒತ್ತಡವನ್ನು ಸೈಲೆಂಟ್ ಆಗಿ ಮೆಟ್ಟಿ ನಿಂತು ಐದನೇ ಓವರ್‌ನಲ್ಲೇ ಆ 23 ರನ್ ಪೂರೈಸಿ ಇತಿಹಾಸ ನಿರ್ಮಿಸಿದರು.

9000 ಪೂರೈಸಿದ ಸಂಜು!

ಸಂಜು ಸ್ಯಾಮ್ಸನ್ ತಮ್ಮ ಟಿ20 ವೃತ್ತಿಜೀವನದ 351ನೇ ಪಂದ್ಯದ 334ನೇ ಇನ್ನಿಂಗ್ಸ್‌ನಲ್ಲಿ ಈ 9,000 ರನ್‌ಗಳ ಮಾಂತ್ರಿಕ ಗಡಿಯನ್ನು ದಾಟಿದ್ದಾರೆ. 2011 ರಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಂಜು, ಆರಂಭದಿಂದಲೂ ಮೈದಾನದಲ್ಲಿ ತಾಳ್ಮೆ, ಕಠಿಣ ಶ್ರಮ ಮತ್ತು ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅವರ ಈ ಸುದೀರ್ಘ ಪ್ರಯಾಣಕ್ಕೆ ಈಗ ಸೂಕ್ತ ಪ್ರತಿಫಲ ಸಿಕ್ಕಂತಾಗಿದೆ.

ಎಲೈಟ್‌ ಕ್ಲಬ್‌ ಸೇರಿದ ಚೆಟ್ಟಾ!

ಈ 9,000 ರನ್‌ಗಳ ಮೈಲಿಗಲ್ಲು ತಲುಪುವ ಮೂಲಕ ಸಂಜು ಸ್ಯಾಮ್ಸನ್ ವಿಶ್ವ ಹಾಗೂ ಭಾರತೀಯ ಕ್ರಿಕೆಟ್‌ನ ದೈತ್ಯ ಬ್ಯಾಟರ್‌ಗಳ ಗಣ್ಯ ಕ್ಲಬ್‌ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ 9,000ಕ್ಕೂ ಹೆಚ್ಚು ರನ್ ಗಳಿಸಿದ ಕೇವಲ ಐದನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಪ್ರಸ್ತುತ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸಂಜು (9,027 ರನ್) ಐದನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (14,218 ರನ್), ರೋಹಿತ್ ಶರ್ಮಾ (12,531 ರನ್), ಶಿಖರ್ ಧವನ್ (9,797 ರನ್) ಮತ್ತು ಸೂರ್ಯಕುಮಾರ್ ಯಾದವ್ (9,729 ರನ್) ಮೊದಲ ನಾಲ್ಕು ಸ್ಥಾನಗಳಲ್ಲಿದ್ದಾರೆ.

ಜಾಗತಿಕ ಮಟ್ಟದಲ್ಲೂ ಸಂಜು ಸಾಧನೆ!

ಕೇವಲ ಭಾರತದಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ ಸಂಜು ಸಾಧನೆ ಸಣ್ಣದೇನಲ್ಲ. ವಿಶ್ವ ಕ್ರಿಕೆಟ್‌ನಲ್ಲಿ ಟಿ20 ಮಾದರಿಯಲ್ಲಿ 9,000 ರನ್‌ಗಳ ಗಡಿ ದಾಟಿದ ಜಗತ್ತಿನ 35ನೇ ಆಟಗಾರ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಈ ಅಂಕಿ-ಅಂಶವೇ ಜಾಗತಿಕ ಮಟ್ಟದಲ್ಲಿ ಅವರ ಬ್ಯಾಟಿಂಗ್‌ಗಿರುವ ಪವರ್ ಏನೆಂಬುದನ್ನು ಸಾಬೀತುಪಡಿಸುತ್ತದೆ. ಸಂಜು ಬ್ಯಾಟ್‌ನಿಂದ ರನ್‌ಗಳು ಹರಿಯುವುದು ಮಾತ್ರವಲ್ಲ, ತಂಡಕ್ಕೆ ಅಗತ್ಯವಿದ್ದಾಗ ದೊಡ್ಡ ದೊಡ್ಡ ಇನ್ನಿಂಗ್ಸ್‌ಗಳು ಹೊರಬರುತ್ತವೆ. ತಮ್ಮ ವೃತ್ತಿಜೀವನದಲ್ಲಿ ಅವರು ಬರೋಬ್ಬರಿ 8 ಅದ್ಭುತ ಶತಕಗಳು ಮತ್ತು 57 ಅರ್ಧಶತಕಗಳನ್ನು ಬಾರಿಸಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ತಂಡ ಸಂಕಷ್ಟದಲ್ಲಿದ್ದಾಗಲೆಲ್ಲಾ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ತಂಡವನ್ನು ದಂಡೆಗೆ ತಲುಪಿಸುವ ಸಾಮರ್ಥ್ಯ ಅವರಲ್ಲಿದೆ.

ಇದು ಸುವರ್ಣ ಕ್ಷಣ!

ವಿಶೇಷವೆಂದರೆ, 2026ರ ವರ್ಷ ಸಂಜು ಸ್ಯಾಮ್ಸನ್ ವೃತ್ತಿಜೀವನದಲ್ಲಿ ಒಂದು ಸುವರ್ಣ ಕ್ಷಣವಾಗಿದೆ. ಈ ವರ್ಷವೊಂದರಲ್ಲೇ ಅವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ರನ್ ಚಚ್ಚಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ಅವರು ತೋರಿಸುತ್ತಿರುವ ಆ ಆತ್ಮವಿಶ್ವಾಸ ಮತ್ತು ಪಕ್ವತೆ ನಿಜಕ್ಕೂ ಅದ್ಭುತವಾಗಿದೆ. ಭಾರತ ತಂಡ 2026ರ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಸಂಜು ಅವರ ಕೊಡುಗೆ ಅಪಾರ. ಟೀಮ್ ಇಂಡಿಯಾ 'ಮಾಡು ಇಲ್ಲವೇ ಮಡಿ' ಪರಿಸ್ಥಿತಿಯಲ್ಲಿದ್ದಾಗಲೆಲ್ಲಾ ಸಂಜು ತಮ್ಮ ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್ ಮೂಲಕ ತಂಡವನ್ನು ಕಾಯ್ದಿದ್ದಾರೆ. ವಿಶ್ವಕಪ್ ಸೆಮಿಫೈನಲ್ ಮತ್ತು ಫೈನಲ್‌ನಂತಹ ಹೈ-ವೋಲ್ಟೇಜ್ ಪಂದ್ಯಗಳಲ್ಲಿ ಅತ್ಯಂತ ಶಾಂತವಾಗಿ ಬ್ಯಾಟ್ ಬೀಸಿ ಭಾರತ ಜಗತ್ತಿನ ರಾಜನಾಗಲು ನೆರವಾದರು. ಈ ಮೂಲಕ ತಾವು ಬಿಗ್ ಪಂದ್ಯಗಳ ರಿಯಲ್ ಹೀರೋ ಎಂಬುದನ್ನು ಸಾಬೀತುಪಡಿಸಿದರು.

ಪ್ಲೇಯರ್‌ ವಿಥ್ ಟೂರ್ನಾಮೆಂಟ್‌!

ಟೂರ್ನಿಯುದ್ದಕ್ಕೂ ನೀಡಿ ದ ನಿಸ್ವಾರ್ಥ ಪ್ರದರ್ಶನ ಮತ್ತು ಜವಾಬ್ದಾರಿಯುತ ಆಟಕ್ಕಾಗಿ ಸಂಜು ಸ್ಯಾಮ್ಸನ್ ಅವರಿಗೆ ಪ್ರತಿಷ್ಠಿತ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿ ಒಲಿದುಬಂತು. ಇದು ಅವರ ಕ್ರಿಕೆಟ್ ಜೀವನದ ಅತಿದೊಡ್ಡ ಗೌರವಗಳಲ್ಲಿ ಒಂದಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಕೇರಳ ತಂಡವನ್ನು ಪ್ರತಿನಿಧಿಸುವ ಸಂಜು, ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಹಲವು ಐತಿಹಾಸಿಕ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಗಲ್ಲಿ ಕ್ರಿಕೆಟ್‌ನಿಂದ ಶುರುವಾದ ಇವರ ಈ ಸಾಧನೆಯ ಪಯಣ ಈಗ ಜಾಗತಿಕ ಮಟ್ಟದಲ್ಲಿ ರಾರಾಜಿಸುತ್ತಿದೆ.