ಚೆನ್ನಾಗಿ ಡ್ಯಾನ್ಸ್ ಮಾಡದಿದ್ರೆ ಹೊಡೀತೀನಿ ಅಂದಿದ್ರು ಪುನೀತ್: ವಿಕ್ರಂ ರವಿಚಂದ್ರನ್
ರವಿಚಂದ್ರನ್ ಪುತ್ರ ವಿಕ್ರಂ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ’ ಜೂ.24ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಚಿತ್ರ ಬಿಡುಗಡೆ ದಿನಾಂಕ ರಿವೀಲ್ ಮಾಡಲೆಂದೇ ಚಿತ್ರತಂಡ ಕಾರ್ಯಕ್ರಮ ಆಯೋಜಿಸಿತ್ತು.
ರವಿಚಂದ್ರನ್ (Ravichandran) ಪುತ್ರ ವಿಕ್ರಂ ರವಿಚಂದ್ರನ್ (Vikram Ravichandran) ನಟನೆಯ ‘ತ್ರಿವಿಕ್ರಮ’ (Trivikrama) ಜೂ.24ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಚಿತ್ರ ಬಿಡುಗಡೆ ದಿನಾಂಕ ರಿವೀಲ್ ಮಾಡಲೆಂದೇ ಚಿತ್ರತಂಡ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಮಾತನಾಡಿದ ವಿಕ್ರಂ ರವಿಚಂದ್ರನ್, ‘ಈ ಚಿತ್ರದ ಕತೆ ಪುನೀತ್ (Puneeth Rajkumar) ಹಾಗೂ ಶಿವಣ್ಣ (Shiva Rajkumar) ಅವರಿಗೆ ಗೊತ್ತಿದೆ. ನಾನು ಸಿನಿಮಾ ಮಾಡ್ತೀನಿ ಅಂದ ಕೂಡಲೇ ಕತೆ ಏನು ಅಂತ ಪುನೀತ್ ಕೇಳಿದರು.
ಕತೆ ಕೇಳಿದ ಬಳಿಕ ಬೆನ್ನು ತಟ್ಟಿ, ನಾನೇ ನಿಂಗೆ ಒಂದು ಹಾಡು ಹಾಡ್ತೀನಿ, ನೀನದಕ್ಕೆ ಚೆನ್ನಾಗಿ ಡ್ಯಾನ್ಸ್ ಮಾಡಬೇಕು, ಇಲ್ಲಾಂದ್ರೆ ಹೊಡೀತೀನಿ ಅಂದಿದ್ರು. ಪುನೀತ್ ಅವರಿಂದ ಹಾಡಿಸಬೇಕು ಅಂದುಕೊಂಡಿದ್ದ ಹಾಡನ್ನು ಈವರೆಗೆ ಶೂಟ್ ಮಾಡಲಾಗಲಿಲ್ಲ. ರವಿಚಂದ್ರನ್ ಮಗನಾಗಿ, ಈಶ್ವರಿ ಸಂಸ್ಥೆಯ ಮೂರನೇ ತಲೆಮಾರಿನವನಾಗಿದ್ದರೂ ಜನ ಅದನ್ನೆಲ್ಲ ನೋಡಲ್ಲ. ಹೊಸ ನಟ ಅಂತಲೇ ನೋಡ್ತಾರೆ. ಇದೊಂದು ಮಿಡ್ಲ್ ಕ್ಲಾಸ್ ಹುಡುಗನ ಕತೆ. ಎಲ್ಲರ ನಂಬಿಕೆ ಉಳಿಸುವಂತೆ ನಟಿಸಿದ್ದೇನೆ’ ಎಂದರು. ನಟ ಶರಣ್ (Sharan), ‘ತ್ರಿವಿಕ್ರಮ ಅನ್ನೋದು ಯಶಸ್ಸಿನ ಸಿಂಬಲ್. ಈ ಸಿನಿಮಾ ಮೂಲಕ ಒಬ್ಬ ಸ್ಟಾರ್ ಹುಟ್ಟಿಕೊಂಡಿದ್ದಾನೆ’ ಎಂದರು.
ನಟಿಯಾಗಿ ಬರಲು ‘ತ್ರಿವಿಕ್ರಮ’ ಸರಿಯಾದ ಆಯ್ಕೆ:ಆಕಾಂಕ್ಷ ಶರ್ಮಾ
ನಟಿ ತಾರಾ, 'ವಿಕ್ರಮ ಈಗ ತ್ರಿವಿಕ್ರಮ ಆಗಿದ್ದಾನೆ. ಸಹನಮೂರ್ತಿ ಬಹಳ ಬುದ್ದಿವಂತ ನಿರ್ದೇಶಕ. ಅದಕ್ಕೆ ಸಾಕ್ಷಿಯಾಗಿ ಈ ಸಿನಿಮಾ ಕಾರ್ಯಕ್ರಮಕ್ಕೆ ನಿರ್ದೇಶಕ ಶಿವಮಣಿ, ಚೇತನ್ ಕುಮಾರ್, ಸಂತೋಷ್ ಆನಂದ್‌ರಾಮ್, ಸಾಧು ಕೋಕಿಲ ಬಂದಿದ್ದಾರೆ. ಹಾಗೆಯೇ ನಟ ಶರಣ್ ಕೂಡ ಬಂದಿದ್ದಾರೆ. ಅವನು ತುಂಬ ಕಷ್ಟಪಟ್ಟು ಹೀರೋ ಆಗಿದ್ದಾನೆ. ಇವರೆಲ್ಲ ಬಂದಿರುವುದು ಖುಷಿ ನೀಡಿದೆ. ರವಿಚಂದ್ರನ್ ಸರ್ ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ತಂದುಕೊಟ್ಟವರು. ಗ್ಲಾಮರ್, ಡ್ಯಾನ್ಸರ್.. ಎಲ್ಲವನ್ನೂ ಅದ್ದೂರಿಯಾಗಿ ಮಾಡಿ ತೋರಿಸಿದ್ದಾರೆ.
ಮನು, ವಿಕ್ರಮ್, ಮಗಳು ಗೀತಾಂಜಲಿ ಈ ಮೂರು ಜನ ತಂದೆಗೆ ತಕ್ಕ ಮಕ್ಕಳು. ರವಿ ಸರ್ ಬಗ್ಗೆ ನನಗೆ ಸಣ್ಣ ಮುನಿಸು ಇದೆ. ಅವರು ಮಕ್ಕಳ ಹಿಂದೆ ನಿಲ್ಲಬೇಕು. ಮಕ್ಕಳನ್ನು ಅವರು ಶ್ರೀಮಂತವಾಗಿ ತೋರಿಸಬೇಕು. ಮನು ಮತ್ತು ವಿಕ್ರಮ್ ಇಬ್ಬರಿಗೂ ದೊಡ್ಡ ಯಶಸ್ಸು ಸಿಗಬೇಕು. ಇವರು ತಂದೆಯನ್ನು ಮೀರಿಸುವ ಮಕ್ಕಳಲಾಗಲಿ. ಮನು ಮತ್ತು ವಿಕ್ರಮ್ ಥರದ ಮಕ್ಕಳನ್ನು ಪಡೆಯೋಕೆ ರವಿಚಂದ್ರನ್ ಸರ್ ಪುಣ್ಯ ಮಾಡಿದ್ದಾರೆ..' ಎಂದರು.
ವಾರ ಕಾಲ ತ್ರಿವಿಕ್ರಮನ ಪ್ರೇಮೋತ್ಸವ, ಒಂದೊಂದು ದಿನಕ್ಕೂ ಒಂದೊಂದು ವಿಶೇಷ!
ನಟ ಮನು ರಂಜನ್ ರವಿಚಂದ್ರನ್, ‘ವಿಕ್ರಂ ನನಗೂ ರಿಲೀಸ್ ಡೇಟ್ ಹೇಳಿಲ್ಲ, ಸಿನಿಮಾನೂ ತೋರಿಸಿಲ್ಲ. ನೀನ್ ಸೆಟ್‌ಗೆ ಬರಂಗಿಲ್ಲ ಅಂತ ಸೆಟ್‌ಗೆ ಹೋಗೋದಕ್ಕೂ ಬಿಟ್ಟಿಲ್ಲ. ಅವನು ಮಾತ್ರ ನನ್ನ ಶೂಟಿಂಗ್ ಸೆಟ್‌ಗೆ ಬಂದು ಟಾರ್ಚರ್ ಕೊಡ್ತಿದ್ದ’ ಎಂದು ತಮ್ಮನ ಕಾಲೆಳೆಯುತ್ತಾ ಚಿತ್ರಕ್ಕೆ ಯಶಸ್ಸು ಕೋರಿದರು. ನಿರ್ದೇಶಕ ಸಹನಾಮೂರ್ತಿ, ‘ಹೇಗೆ ಲೆಕ್ಕಾಚಾರ ಹಾಕಿದ್ರೂ ಇದು ಸಕ್ಸಸ್ ಪಡೆಯೋ ಚಿತ್ರ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಿರ್ದೇಶಕರಾದ ಸಂತೋಷ್ ಆನಂದ್‌ರಾಮ್, ಬಹದ್ದೂರ್ ಚೇತನ್, ಶಿವಮಣಿ, ಚಿತ್ರತಂಡಕ್ಕೆ ಶುಭ ಕೋರಿದರು. ನಾಯಕಿ ಅಂಕಿತಾ ಶರ್ಮಾ, ನಿರ್ಮಾಪಕ ರಾಮ್ಕೋ ಸೋಮಣ್ಣ, ನಟ ಸಾಧು ಕೋಕಿಲ, ಆದಿ ಲೋಕೇಶ್ ಮತ್ತಿತರರು ಹಾಜರಿದ್ದರು.