ಡಾ. ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ 'ಡ್ಯಾಡ್' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಹಲವು ವರ್ಷಗಳ ಬಳಿಕ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವಣ್ಣ ಚಿತ್ರದ ಬಗ್ಗೆ ನಿರ್ದೇಶಕ ಅನಿಲ್ ಕನ್ನೆಗಂಟಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ 'ಡ್ಯಾಡ್' ಚಿತ್ರದ ಚಿತ್ರೀಕರಣ ಅಧಿಕೃತವಾಗಿ ಪೂರ್ಣಗೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಈಗಾಗಲೇ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದು, ಶೂಟಿಂಗ್ ಮುಕ್ತಾಯದ ಸುದ್ದಿಯನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದೆ. ಚಿತ್ರದ ನಿರ್ದೇಶಕ ಅನಿಲ್ ಕನ್ನೆಗಂಟಿ ಹಂಚಿಕೊಂಡ ಭಾವುಕ ಪೋಸ್ಟ್ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೂಟಿಂಗ್ ಪೂರ್ಣಗೊಂಡಿರುವ ಕುರಿತು ನಿರ್ದೇಶಕ ಅನಿಲ್ ಕನ್ನೆಗಂಟಿ, "ಪ್ರತಿ 'ಆ್ಯಕ್ಷನ್' ಮತ್ತು 'ಕಟ್' ಹಿಂದೆಯೂ ಒಂದು ಕನಸಿತ್ತು. ಇಂದು ಚಿತ್ರದ ಚಿತ್ರೀಕರಣ ಮುಗಿದಿದೆ. ಆದರೆ ಈ ಪಯಣ ನನ್ನ ಹೃದಯದಲ್ಲಿ ಸದಾ ಉಳಿಯಲಿದೆ. ಕನ್ನಡ ಚಿತ್ರರಂಗದ ದಿಗ್ಗಜ ನಟ ಶಿವಣ್ಣ ಅವರಿಗೆ ಆ್ಯಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಹೆಮ್ಮೆಯ ಕ್ಷಣ. ಕ್ಯಾಮೆರಾಗಳು ಆಫ್ ಆಗಿರಬಹುದು, ಆದರೆ 'ಡ್ಯಾಡ್' ಚಿತ್ರದ ನಿಜವಾದ ಹೃದಯಬಡಿತ ಈಗಷ್ಟೇ ಆರಂಭವಾಗಿದೆ" ಎಂದು ಬರೆದುಕೊಂಡಿದ್ದಾರೆ.

32 ವರ್ಷಗಳ ಬಳಿಕ ವೈದ್ಯನ ಪಾತ್ರದಲ್ಲಿ ಶಿವಣ್ಣ

ಈ ಚಿತ್ರದ ಪ್ರಮುಖ ವಿಶೇಷವೆಂದರೆ, ಹಲವು ವರ್ಷಗಳ ಬಳಿಕ ಡಾ. ಶಿವರಾಜ್‌ಕುಮಾರ್ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಈ ವಿಭಿನ್ನ ಪಾತ್ರ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ. ಚಿತ್ರದ ಮುಹೂರ್ತ ಮೈಸೂರಿನ ಐತಿಹಾಸಿಕ ನಂದಿ ವಿಗ್ರಹದ ಎದುರು ನೆರವೇರಿತ್ತು. ವಿಶೇಷವೆಂದರೆ, ಸುಮಾರು 32 ವರ್ಷಗಳ ಹಿಂದೆ ಶಿವರಾಜ್‌ಕುಮಾರ್ ಅಭಿನಯದ ಸೂಪರ್‌ಹಿಟ್ 'ಜಗ ಮೆಚ್ಚಿದ ಹುಡುಗ' ಚಿತ್ರದ ಮುಹೂರ್ತವೂ ಇದೇ ಸ್ಥಳದಲ್ಲಿ ನಡೆದಿತ್ತು. ಹೀಗಾಗಿ ಈ ಚಿತ್ರವೂ ಅದೇ ರೀತಿಯ ಯಶಸ್ಸು ಕಾಣಲಿದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿ ಮೂಡಿದೆ.

'ಡ್ಯಾಡ್' ಕನ್ನಡ, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಬಹುಭಾಷಾ ಚಿತ್ರವಾಗಿದೆ. ಶಿವರಾಜ್‌ಕುಮಾರ್ ಅವರಿಗೆ ಶರ್ಮಿಳಾ ಮಾಂಡ್ರೆ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಬೇಬಿ ನಕ್ಷತ್ರಾ, ಬಾಬು ಹಾಗೂ ಮಲಯಾಳಂನ ಖ್ಯಾತ ನಟ ಸೂರಜ್ ವೆಂಜರಮೂಡು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರವನ್ನು ಹರೀಶ್ ಪೆದ್ದಿ ನಿರ್ಮಿಸುತ್ತಿದ್ದು, ಬಿ.ಎಸ್. ಸುಧೀಂದ್ರ ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದು, ಬಿ. ರಾಜಶೇಖರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಭಾವನಾತ್ಮಕ ಕಥಾಹಂದರ, ಬಲಿಷ್ಠ ತಾರಾಗಣ ಹಾಗೂ ಶಿವರಾಜ್‌ಕುಮಾರ್ ಅವರ ವಿಭಿನ್ನ ಪಾತ್ರದೊಂದಿಗೆ 'ಡ್ಯಾಡ್' ಸಿನಿಮಾ ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಸಿನಿಪ್ರಿಯರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.