ಜೀ ಕನ್ನಡದ 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ರಾಘವೇಂದ್ರ ಸ್ವಾಮಿಗಳ ಮತ್ತೊಂದು ಪವಾಡ ಅನಾವರಣಗೊಳ್ಳಲಿದೆ. ಸತ್ತ ಮಗುವಿಗೆ ಪುನರ್ಜೀವ ನೀಡುವ ರೋಚಕ ಪ್ರಸಂಗದ ಜೊತೆಗೆ ಹಿರಿಯ ನಟ ಬಿ.ಸಿ ಪಾಟೀಲ್ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿ ತನ್ನ ಭಕ್ತಿಪ್ರಧಾನ ಕಥಾಹಂದರದ ಮೂಲಕ ಪ್ರೇಕ್ಷಕರ ಮನಗೆದ್ದಿದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನದ ಮಹಿಮೆ, ಅವರ ಆಧ್ಯಾತ್ಮಿಕ ಪಯಣ ಮತ್ತು ಪವಾಡಗಳನ್ನು ಮನಮುಟ್ಟುವ ರೀತಿಯಲ್ಲಿ ತೆರೆ ಮೇಲೆ ಮೂಡಿಸುತ್ತಿರುವ ಈ ಧಾರಾವಾಹಿಗೆ ಮನೆಮನೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ವಾರ ಪ್ರಸಾರವಾದ ಸಂಚಿಕೆಯಲ್ಲಿ, ಪೂರ್ವಾಶ್ರಮದ ಪತ್ನಿ ಸರಸ್ವತಿಗೆ ಸದ್ಗತಿ ನೀಡುವ ಪ್ರಸಂಗ ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸಿತ್ತು. ಭಾವನಾತ್ಮಕವಾಗಿ ಮೂಡಿಬಂದ ಈ ಘಟನೆಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದು, ರಾಯರ ಪಾತ್ರದಲ್ಲಿ ನಟ ಪರೀಕ್ಷಿತ್ ಅವರ ಅಭಿನಯಕ್ಕೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅವರ ನೈಜ ಅಭಿನಯದಿಂದ ರಾಯರ ವ್ಯಕ್ತಿತ್ವ ಜೀವಂತವಾಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಇದೀಗ ಧಾರಾವಾಹಿಯ ಮುಂದಿನ ಸಂಚಿಕೆಗಳಲ್ಲಿ ಮತ್ತೊಂದು ಅದ್ಭುತ ಪವಾಡ ಅನಾವರಣಗೊಳ್ಳಲಿದೆ. ಸನ್ಯಾಸ ದೀಕ್ಷೆಯ ಬಳಿಕ ಮೂಲರಾಮನ ಆಜ್ಞೆಯಂತೆ ದಿವ್ಯ ಸಂಚಾರ ಆರಂಭಿಸಿದ ರಾಘವೇಂದ್ರ ತೀರ್ಥರು ಭುವನಗಿರಿಯಲ್ಲಿ ಪಾದಪೂಜೆ ಮುಗಿಸಿ ಕರಟಗಿರಿ ಸಮೀಪ ತಂಗುತ್ತಾರೆ. ಈ ವೇಳೆ ಕರಟಗಿರಿಯ ದೇಸಾಯಿ ಅವರು ತಮ್ಮ ಮನೆಗೆ ಪೂಜೆಗೆ ಆಹ್ವಾನಿಸುತ್ತಾರೆ. ರಾಯರ ಆಗಮನವನ್ನು ಸಂಭ್ರಮದಿಂದ ಆಚರಿಸಲು ದೇಸಾಯಿ ಕುಟುಂಬ ವಿಶೇಷ ಭೋಜನದ ಸಿದ್ಧತೆಯಲ್ಲಿ ತೊಡಗುತ್ತದೆ.

ಆದರೆ ಅಡುಗೆ ತಯಾರಿಯ ಮಧ್ಯೆ ಅನಿರೀಕ್ಷಿತ ದುರಂತ ಸಂಭವಿಸುತ್ತದೆ. ಮಾವಿನಕಾಯಿ ಸಿಕರಣೆಯ ಪಾತ್ರೆಯಲ್ಲಿ ಆಕಸ್ಮಿಕವಾಗಿ ಬಿದ್ದ ದೇಸಾಯಿ ಅವರ ಪುತ್ರ ಪ್ರಾಣ ಕಳೆದುಕೊಳ್ಳುತ್ತಾನೆ. ಪೂಜೆಯಲ್ಲಿ ತಲ್ಲೀನರಾಗಿದ್ದ ರಾಘವೇಂದ್ರ ತೀರ್ಥರಿಗೆ ಈ ಘಟನೆ ದೈವಿಕವಾಗಿ ಅರಿವಾಗುತ್ತದೆ. ಮಗುವನ್ನು ಪೂಜಾ ಸ್ಥಳಕ್ಕೆ ತರಿಸುವಂತೆ ಸೂಚಿಸಿದ ಅವರು, ಮಂತ್ರ ಪ್ರೋಕ್ಷಣೆಯ ಮೂಲಕ ಮಗುವಿಗೆ ಪುನರ್ಜೀವ ನೀಡುವ ದೃಶ್ಯ ಧಾರಾವಾಹಿಯ ಪ್ರಮುಖ ಆಕರ್ಷಣೆಯಾಗಲಿದೆ. ಈ ಪವಾಡದ ಪ್ರಸಂಗ ಭಕ್ತರಲ್ಲಿ ಭಕ್ತಿ ಮತ್ತು ಭಾವನೆಯನ್ನು ಇನ್ನಷ್ಟು ಗಾಢಗೊಳಿಸುವ ನಿರೀಕ್ಷೆಯಿದೆ.

ದೇಸಾಯಿ ಪಾತ್ರದಲ್ಲಿ ಬಿ.ಸಿ. ಪಾಟೀಲ್

ಈ ವಿಶೇಷ ಸಂಚಿಕೆಗಳ ಮತ್ತೊಂದು ವಿಶೇಷವೆಂದರೆ, ಹಿರಿಯ ನಟ ಬಿ.ಸಿ. ಪಾಟೀಲ್ ಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿದ್ದಾರೆ. ಅವರು ದೇಸಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪತ್ನಿಯ ಪಾತ್ರದಲ್ಲಿ ಅರುಣಾ ಬಾಲರಾಜ್ ಅಭಿನಯಿಸಿದ್ದಾರೆ. ಜೊತೆಗೆ ಅನುಭವಿ ಕಲಾವಿದರ ಅಭಿನಯ ಧಾರಾವಾಹಿಗೆ ಮತ್ತಷ್ಟು ಮೆರಗು ತಂದಿದೆ. ಭಕ್ತಿ, ಭಾವನೆ ಮತ್ತು ಪವಾಡಗಳ ಸಂಗಮವಾಗಿರುವ 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ಭಕ್ತರು ಹಾಗೂ ಕಿರುತೆರೆ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆಯುತ್ತಿದೆ.