Mahaan: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ವಿಜಯ್ ರಾಘವೇಂದ್ರ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಮಹಾನ್' ದಿನದಿಂದ ದಿನಕ್ಕೆ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ವಿಭಿನ್ನ ಕಥಾಹಂದರ ಮತ್ತು ಬಲಿಷ್ಠ..

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ವಿಜಯ್ ರಾಘವೇಂದ್ರ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಮಹಾನ್' ದಿನದಿಂದ ದಿನಕ್ಕೆ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ವಿಭಿನ್ನ ಕಥಾಹಂದರ ಮತ್ತು ಬಲಿಷ್ಠ ತಾರಾಗಣದ ಕಾರಣದಿಂದಲೇ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರಕ್ಕೆ ಇದೀಗ ಮತ್ತೊಂದು ದೊಡ್ಡ ಆಕರ್ಷಣೆ ಸೇರ್ಪಡೆಯಾಗಿದೆ. ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವುದು ಅಧಿಕೃತವಾಗಿ ಬಹಿರಂಗವಾಗಿದ್ದು, ಸಿನಿಮಾ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿರ್ದೇಶಕ ಪಿ.ಸಿ. ಶೇಖರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಮಹಾನ್' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ, ಶೀರ್ಷಿಕೆ, ಕಥಾಹಂದರ ಹಾಗೂ ತಾರಾಬಳಗದ ಕಾರಣದಿಂದ ಆರಂಭದಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದೀಗ ಶಿವರಾಜ್‌ಕುಮಾರ್ ಅವರ ಎಂಟ್ರಿಯೊಂದಿಗೆ ಚಿತ್ರದ ಹೈಪ್ ಇನ್ನಷ್ಟು ಏರಿಕೆಯಾಗಿದೆ.

ವಿಶೇಷವೆಂದರೆ, 'ರಿಷಿ' ಮತ್ತು 'ಮಾಸ್ ಲೀಡರ್' ಸಿನಿಮಾಗಳ ಬಳಿಕ ಡಾ. ಶಿವರಾಜ್‌ಕುಮಾರ್ ಹಾಗೂ ವಿಜಯ್ ರಾಘವೇಂದ್ರ ಮತ್ತೆ ಒಂದೇ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಬಂಧಿಕರಾಗಿರುವ ಈ ಇಬ್ಬರು ಕಲಾವಿದರು ಹಲವು ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ವಿಶೇಷ ನಿರೀಕ್ಷೆ ಹುಟ್ಟುಹಾಕಿದೆ.

'ಮಹಾನ್' ರೈತರ ಬದುಕು, ಸಮಾಜದ ಮೌಲ್ಯಗಳು ಹಾಗೂ ಜವಾಬ್ದಾರಿಯ ಸುತ್ತ ಹೆಣೆಯಲಾದ ಕಥೆಯನ್ನು ಹೊಂದಿದೆ. ಚಿತ್ರದಲ್ಲಿನ ಪ್ರತಿಯೊಂದು ಪಾತ್ರವೂ ಕಥೆಯ ಬೆಳವಣಿಗೆಯಲ್ಲಿ ಮಹತ್ವದ ಸ್ಥಾನ ಪಡೆದಿದ್ದು, ಸಮಾಜದಲ್ಲಿ ದಾರಿ ತಪ್ಪಿದ ಸಂದರ್ಭಗಳನ್ನು ಸರಿದಾರಿಗೆ ತರುವ ವ್ಯಕ್ತಿಯ ಅಗತ್ಯವನ್ನು ಚಿತ್ರ ಪರಿಣಾಮಕಾರಿಯಾಗಿ ಹೇಳಲು ಹೊರಟಿದೆ. ಇದೇ ಹಿನ್ನೆಲೆಯಲ್ಲೇ ಡಾ. ಶಿವರಾಜ್‌ಕುಮಾರ್ ಅವರು ಸಮಾಜಕ್ಕೆ ಮಾರ್ಗದರ್ಶನ ನೀಡುವ ಹಿರಿಯ ವಕೀಲರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಕಥೆಯ ತಿರುವುಗಳಲ್ಲಿ ಈ ಪಾತ್ರ ನಿರ್ಣಾಯಕವಾಗಿರಲಿದೆ.

ಕೆಲಸ ಮಾಡುವ ಆಸೆ

ಶಿವರಾಜ್‌ಕುಮಾರ್ ಅವರನ್ನು ನಿರ್ದೇಶಿಸುವುದು ಬಹುಕಾಲದ ಕನಸಾಗಿತ್ತು ಎಂದು ನಿರ್ದೇಶಕ ಪಿ.ಸಿ. ಶೇಖರ್ ಸಂತಸ ವ್ಯಕ್ತಪಡಿಸಿದ್ದಾರೆ. "ಪ್ರತಿಯೊಬ್ಬ ನಿರ್ದೇಶಕರಿಗೂ ಶಿವರಾಜ್‌ಕುಮಾರ್ ಅವರೊಂದಿಗೆ ಕೆಲಸ ಮಾಡುವ ಆಸೆ ಇರುತ್ತದೆ. ನನ್ನ ಆ ಕನಸು 'ಮಹಾನ್' ಮೂಲಕ ಈಡೇರಿದೆ. ಅವರು ತೋರಿದ ಸಹಕಾರ ಮತ್ತು ಅದ್ಭುತ ಅಭಿನಯ ಇಡೀ ಚಿತ್ರತಂಡಕ್ಕೆ ಅಪಾರ ಸಂತೋಷ ನೀಡಿದೆ. ಅವರಿಗಿರುವ ನಮ್ಮ ಕೃತಜ್ಞತೆ ಅಪಾರ," ಎಂದು ಅವರು ತಿಳಿಸಿದ್ದಾರೆ.

ಬಹುತಾರಾಗಣದ ಈ ಚಿತ್ರದಲ್ಲಿ ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ, ವರ್ಷ ಬೊಳ್ಳಮ್ಮ ಹಾಗೂ ಕಿರಣ್ ಶ್ರೀನಿವಾಸ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಕಾಶ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಬುದ್ದೂರು ನಿರ್ಮಾಣ ಮಾಡುತ್ತಿರುವ 'ಮಹಾನ್' ಇದೇ ವರ್ಷ ತೆರೆಗೆ ಬರಲಿದ್ದು, ವಿಭಿನ್ನ ಕಥೆ ಮತ್ತು ಬಲಿಷ್ಠ ಕಲಾವಿದರ ಬಳಗದೊಂದಿಗೆ ಈಗಾಗಲೇ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.