Kannada actors only in Kannada films: ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯ ಸಿನಿಮಾದಲ್ಲಿ ನಟಿಸದೇ ಕನ್ನಡಿಗರ ಮನಗೆದ್ದ ಸ್ಯಾಂಡಲ್ವುಡ್ನ ಅಪ್ಪಟ ಕನ್ನಡ ನಟರು ಯಾರು ಗೊತ್ತಾ? ಇಲ್ಲಿದೆ ಆ ತಾರೆಯರ ಕುರಿತ ಆಸಕ್ತಿದಾಯಕ ಮಾಹಿತಿ!
ಇಂದಿನ ಪ್ಯಾನ್-ಇಂಡಿಯಾ ಯುಗದಲ್ಲಿ ಹಲವು ಕಲಾವಿದರು ಪರಭಾಷಾ ಚಿತ್ರರಂಗಗಳತ್ತ ಮುಖ ಮಾಡುವುದು ಸಾಮಾನ್ಯವಾಗಿದೆ. ಆದರೆ, ಕನ್ನಡ ಚಿತ್ರರಂಗದಲ್ಲೇ ಬೆಳೆದು, ತಮ್ಮ ಸಿನಿ ಜೀವನದಲ್ಲಿ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯ ಚಿತ್ರದಲ್ಲಿ ನಟಿಸದ ಅನೇಕ ಖ್ಯಾತ ನಟರು ಸ್ಯಾಂಡಲ್ವುಡ್ನಲ್ಲಿದ್ದಾರೆ. ದಶಕಗಳಿಂದ ಕೇವಲ ಕನ್ನಡ ಸಿನಿಮಾಗಳಲ್ಲಿಯೇ ನಟಿಸಿ ಅಭಿಮಾನಿಗಳನ್ನು ರಂಜಿಸುತ್ತಿರುವ ಪ್ರಮುಖ ನಟರ ವಿವರ ಇಲ್ಲಿದೆ.
ಡಾ. ರಾಜ್ಕುಮಾರ್
ಈ ಸಾಲಿನಲ್ಲಿ ಮೊದಲು ಕೇಳಿಬರುವ ಹೆಸರು ನಟ ಸಾರ್ವಭೌಮ ಡಾ. ರಾಜ್ಕುಮಾರ್. ತಮ್ಮ 50 ವರ್ಷಗಳ ಸಿನಿ ಜೀವನದಲ್ಲಿ ಸುಮಾರು 205ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಅಣ್ಣಾವ್ರು, ಬೇರೆ ಯಾವುದೇ ಭಾಷೆಯ ಚಿತ್ರಗಳಲ್ಲಿ ನಟಿಸಲಿಲ್ಲ. ಡಾ. ರಾಜ್ಕುಮಾರ್ ಪೂರ್ಣ ಹೆಸರು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. ಬಾಲನಟನಾಗಿ ಕಾಣಿಸಿಕೊಂಡಿದ್ದರೂ, 1954ರಲ್ಲಿ ತೆರೆಕಂಡ ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡಿದರು. 2000ರಲ್ಲಿ ಬಿಡುಗಡೆಯಾದ ‘ಶಬ್ದವೇಧಿ’ ಇವರ ಕೊನೆಯ ಚಿತ್ರ.
ವಿಶೇಷ ಮಾಹಿತಿ: (1954ರ ‘ಬೇಡರ ಕಣ್ಣಪ್ಪ’ ಚಿತ್ರದ ತೆಲುಗು ಅವತರಣಿಕೆ ‘ಶ್ರೀ ಕಾಳಹಸ್ತೀಶ್ವರ ಮಹಾತ್ಯಂ’ನಲ್ಲಿ ನಟಿಸಿದ್ದು ಹೊರತುಪಡಿಸಿದರೆ) ಇಡೀ 50 ವರ್ಷಗಳ ವೃತ್ತಿಜೀವನವನ್ನು ಸಂಪೂರ್ಣವಾಗಿ ಕನ್ನಡ ಚಿತ್ರರಂಗಕ್ಕೇ ಮುಡಿಪಾಗಿಟ್ಟರು. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗೂ ಜೇಮ್ಸ್ ಬಾಂಡ್ ಮಾದರಿಯ ಪತ್ತೇದಾರಿ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡರು.
ಪುನೀತ್ ರಾಜ್ಕುಮಾರ್
ಅವರ ಹಾದಿಯಲ್ಲೇ ಸಾಗಿದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ತಮ್ಮ 45ಕ್ಕೂ ಹೆಚ್ಚು ವರ್ಷಗಳ ಸಿನಿ ಪಯಣದಲ್ಲಿ ಸುಮಾರು 46ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದು, ಪರಭಾಷಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಬಾಲ್ಯದಲ್ಲೇ ‘ಪ್ರೇಮದ ಕಾಣಿಕೆ’, ‘ಭಕ್ತ ಪ್ರಹ್ಲಾದ’, ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. 1985ರ ‘ಬೆಟ್ಟದ ಹೂವು’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದರು. 2002ರಲ್ಲಿ ‘ಅಪ್ಪು’ ಚಿತ್ರದ ಮೂಲಕ ನಾಯಕನಾಗಿ ಅಬ್ಬರಿಸಿದರು. ನಟನೆಯ ಜೊತೆಗೆ ಅತ್ಯುತ್ತಮ ಗಾಯಕ, ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದ ನಿರೂಪಕ ಹಾಗೂ ಪಿಆರ್ಕೆ (PRK) ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ ನಿರ್ಮಾಪಕರಾಗಿದ್ದರು. ಇವರ ಸಮಾಜಮುಖಿ ಕಾರ್ಯಗಳು ಹಾಗೂ ನೇತ್ರದಾನ ಜಾಗೃತಿ ಇಂದಿಗೂ ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದೆ. ಇವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನವರಸ ನಾಯಕ ಜಗ್ಗೇಶ್
ಇನ್ನು ನವರಸ ನಾಯಕ ಜಗ್ಗೇಶ್ ತಮ್ಮ 40ಕ್ಕೂ ಹೆಚ್ಚು ವರ್ಷಗಳ ಸಿನಿ ಜೀವನದಲ್ಲಿ 150ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿ ಜನರನ್ನು ರಂಜಿಸಿದ್ದಾರೆಯೇ ಹೊರತು ಬೇರೆ ಯಾವುದೇ ಭಾಷೆಯ ಚಿತ್ರದಲ್ಲಿ ನಟಿಸಿಲ್ಲ. ಇವರ ಪೂರ್ಣ ಹೆಸರು ಈಶ್ವರ್ ಗೌಡ. 1980ರ ದಶಕದಲ್ಲಿ ಸಣ್ಣಪುಟ್ಟ ಪಾತ್ರಗಳು ಹಾಗೂ ಖಳನಟನಾಗಿ ಚಿತ್ರರಂಗ ಪ್ರವೇಶಿಸಿದ ಜಗ್ಗೇಶ್, 1992ರಲ್ಲಿ ಉಪೇಂದ್ರ ನಿರ್ದೇಶನದ ‘ತರ್ಲೆ ನನ್ ಮಗ’ ಹಾಗೂ ‘ಭಂಡ ನನ್ನ ಗಂಡ’ ಚಿತ್ರಗಳ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಭಾರಿ ಯಶಸ್ಸು ಗಳಿಸಿದರು. ವಿಶಿಷ್ಟ ಹಾವಭಾವ, ಡೈಲಾಗ್ ಡೆಲಿವರಿ ಮತ್ತು ಕಾಮಿಡಿ ಟೈಮಿಂಗ್ ಮೂಲಕ ‘ನವರಸ ನಾಯಕ’ ಎನಿಸಿಕೊಂಡಿದ್ದಾರೆ. ನಟನೆಯಷ್ಟೇ ಅಲ್ಲದೆ ನಿರ್ದೇಶನ, ನಿರ್ಮಾಣ, ಕಿರುತೆರೆ ರಿಯಾಲಿಟಿ ಶೋ ತೀರ್ಪುಗಾರರಾಗಿ ಹಾಗೂ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದಾರೆ.
ನಟ ವಿಜಯ್ ರಾಘವೇಂದ್ರ
ಮತ್ತೊಂದೆಡೆ, ನಟ ವಿಜಯ್ ರಾಘವೇಂದ್ರ ತಮ್ಮ 40 ವರ್ಷಗಳ ಸಿನಿ ಜೀವನದಲ್ಲಿ 50ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನೆಮಾತಾಗಿದ್ದಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಬಂದ ಇವರು 1993ರ ‘ಚಿನ್ನಾರಿ ಮುತ್ತ’ ಚಿತ್ರದಿಂದ ಮನೆಮಾತಾದರು. 1994ರ ‘ಕೊಟ್ರೇಶಿ ಕನಸು’ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದರು. 2000ರಲ್ಲಿ ‘ನಿನ್ನೇ ಪ್ರೀತಿಸುವೆ’ ಚಿತ್ರದ ಮೂಲಕ ನಾಯಕನಾದರು. ಕೌಟುಂಬಿಕ ಮತ್ತು ಭಾವನಾತ್ಮಕ ಪಾತ್ರಗಳಿಗೆ ಹೆಚ್ಚು ಹೆಸರಾದವರು. ‘ಬಿಗ್ ಬಾಸ್ ಕನ್ನಡ’ ಮೊದಲ ಸೀಸನ್ನ ವಿಜೇತರಾಗಿಯೂ ಹೊರಹೊಮ್ಮಿದ್ದರು.
ಗೋಲ್ಡನ್ ಸ್ಟಾರ್ ಗಣೇಶ್
ಹಾಗೆಯೇ, ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ 20 ವರ್ಷಕ್ಕೂ ಹೆಚ್ಚಿನ ಸಿನಿ ಜೀವನದಲ್ಲಿ 45ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆಯೇ ಹೊರತು ಬೇರೆ ಭಾಷೆಯ ಚಿತ್ರದಲ್ಲಿ ನಟಿಸಿಲ್ಲ. ಕಿರುತೆರೆಯ ‘ಕಾಮಿಡಿ ಟೈಮ್’ ಕಾರ್ಯಕ್ರಮದ ಮೂಲಕ ಮನೆಮಾತಾಗಿದ್ದ ಗಣೇಶ್, ಆರಂಭದಲ್ಲಿ ಕೆಲವು ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಿದರು. 2006ರಲ್ಲಿ ‘ಚೆಲ್ಲಾಟ’ ಚಿತ್ರದ ಮೂಲಕ ನಾಯಕನಾದರು. ಅದೇ ವರ್ಷ ಬಿಡುಗಡೆಯಾದ ‘ಮುಂಗಾರು ಮಳೆ’ ಕನ್ನಡ ಚಿತ್ರರಂಗದ ಸಾರ್ವಕಾಲಿಕ ದಾಖಲೆಗಳನ್ನು ಮುರಿಯಿತು. ‘ಮುಂಗಾರು ಮಳೆ’ ಯಶಸ್ಸಿನ ನಂತರ ಬೇರೆ ಭಾಷೆಗಳಿಂದ ಸಾಕಷ್ಟು ಅವಕಾಶಗಳು ಬಂದರೂ, ಕನ್ನಡದಲ್ಲೇ ನೆಲೆಯೂರಿ ಪ್ರೇಮಕಥೆ ಮತ್ತು ಫ್ಯಾಮಿಲಿ ಎಂಟರ್ಟೇನರ್ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಶ್ರೀಮುರಳಿ, ಶ್ರೀನಗರ ಕಿಟ್ಟಿ
ನಟ ಶ್ರೀಮುರಳಿ ತಮ್ಮ 25 ವರ್ಷಗಳ ಸಿನಿ ಜೀವನದಲ್ಲಿ 25ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಮಿಂಚಿದ್ದರೆ, ನಟ ಶ್ರೀನಗರ ಕಿಟ್ಟಿ ತಮ್ಮ 23 ವರ್ಷಗಳ ಸಿನಿ ಪಯಣದಲ್ಲಿ 35ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2003ರಲ್ಲಿ ತೆರೆಕಂಡ ಮ್ಯೂಸಿಕಲ್ ಹಿಟ್ ‘ಚಂದ್ರ ಚಕೋರಿ’ ಚಿತ್ರದ ಮೂಲಕ ನಾಯಕನಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟರು ಶ್ರೀಮುರಳಿ. ಆದರೆ ನಂತರದ ಕೆಲವು ವರ್ಷಗಳು ಸತತ ಸೋಲುಗಳನ್ನು ಕಂಡರು.
2014ರಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ ‘ಉಗ್ರಂ’ ಚಿತ್ರ ಇವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು ಹಾಗೂ ‘ರೋರಿಂಗ್ ಸ್ಟಾರ್’ ಎಂಬ ಬಿರುದು ತಂದುಕೊಟ್ಟಿತು.ಇವರು ನಟ ವಿಜಯ್ ರಾಘವೇಂದ್ರ ಅವರ ಸಹೋದರ ಕೂಡ ಹೌದು.
ಧ್ರುವ ಸರ್ಜಾ (ಆಕ್ಷನ್ ಪ್ರಿನ್ಸ್)
ಯುವ ನಟ ಧ್ರುವ ಸರ್ಜಾ ಅವರು ಕೂಡ ತಮ್ಮ 14 ವರ್ಷಗಳ ಸಿನಿ ಜೀವನದಲ್ಲಿ ಆರು ಚಿತ್ರಗಳಲ್ಲಿ ನಟಿಸಿದ್ದು, ಅದರಲ್ಲಿ ಯಾವುದೂ ಬೇರೆ ಭಾಷೆಯ ಚಿತ್ರವಿಲ್ಲ ಎಂಬುದು ವಿಶೇಷ. 2012ರಲ್ಲಿ ಬಿಡುಗಡೆಯಾದ ‘ಅದ್ಧೂರಿ’ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ ಧ್ರುವ, ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು (100ಕ್ಕೂ ಹೆಚ್ಚು ದಿನ ಪ್ರದರ್ಶನ) ಕಂಡರು. 14 ವರ್ಷಗಳಲ್ಲಿ ಕೇವಲ 6 ಸಿನಿಮಾಗಳಲ್ಲಿ ನಟಿಸಿದ್ದರೂ, ಪ್ರತಿಯೊಂದು ಚಿತ್ರಕ್ಕೂ 2-3 ವರ್ಷಗಳ ಕಾಲ ದೇಹದಾರ್ಢ್ಯ ಮತ್ತು ಪಾತ್ರಕ್ಕಾಗಿ ತಯಾರಿ ನಡೆಸುತ್ತಾರೆ. ಇವರ ಮಾಸ್ ಅಭಿನಯ ಮತ್ತು ಪಂಚ್ ಡೈಲಾಗ್ಗಳಿಗೆ ದೊಡ್ಡ ಅಭಿಮಾನಿ ಬಳಗವಿದೆ.













