90ರ ದಶಕದಲ್ಲಿ ಮಿಂಚಿದ್ದ ನಟಿ ಬಿಂದಿಯಾ ಅಲಿಯಾಸ್ ಫರ್ಹೀನ್, ಸ್ಟಾರ್ ಕ್ರಿಕೆಟಿಗ ಮನೋಜ್ ಪ್ರಭಾಕರ್ರನ್ನು ವಿವಾಹವಾಗಿ ಚಿತ್ರರಂಗ ತೊರೆದರು. 'ಹಳ್ಳಿಮೇಷ್ಟ್ರು' ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿದ್ದ ಈ ನಟಿಯ ಬದುಕಿನ ಕುತೂಹಲಕಾರಿ ಕಥೆ ಇಲ್ಲಿದೆ.
90ರ ದಶಕದಲ್ಲಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅನೇಕ ಸೂಪರ್ಸ್ಟಾರ್ಗಳ ನಡುವೆ, ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ದಿಢೀರ್ ಎಂದು ಬಣ್ಣದ ಲೋಕಕ್ಕೆ ಗುಡ್ಬೈ ಹೇಳಿದ ತಾರೆಯರ ಪಟ್ಟಿಯೂ ದೊಡ್ಡದಿದೆ. ಅಂತಹ ತಾರೆಗಳಲ್ಲಿ ಕನ್ನಡದ 'ಹಳ್ಳಿಮೇಷ್ಟ್ರು' ಚಿತ್ರದ ಮೂಲಕ ಮನೆಮಾತಾಗಿದ್ದ ನಟಿ ಬಿಂದಿಯಾ ಅಲಿಯಾಸ್ ಫರ್ಹೀನ್ ಪ್ರಭಾಕರ್ ಪ್ರಮುಖರು. 1992ರಲ್ಲಿ ಬಿಡುಗಡೆಯಾದ 'ಜಾನ್ ತೇರೆ ನಾಮ್' (Jaan Tere Naam) ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ಫರ್ಹೀನ್, ಅಕ್ಷಯ್ ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ 'ಸೈನಿಕ್' (Sainik) ಮೂಲಕ ದೇಶಾದ್ಯಂತ ಭಾರಿ ಜನಪ್ರಿಯತೆ ಗಳಿಸಿದ್ದರು. ಹಿಂದಿ ಮಾತ್ರವಲ್ಲದೆ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲೂ ಮಿಂಚಿದ್ದ ಈ ಸುಂದರಿ, ಭಾರತದ ಸ್ಟಾರ್ ಕ್ರಿಕೆಟಿಗರೊಬ್ಬರ ಪ್ರೇಮಪಾಶಕ್ಕೆ ಸಿಲುಕಿ ಶಾಶ್ವತವಾಗಿ ನಟನೆಗೆ ವಿದಾಯ ಹೇಳಿದರು.
ಫರ್ಹೀನ್ ಬಾಲಿವುಡ್ಗೆ ಕಾಲಿಟ್ಟ ಸಂದರ್ಭದಲ್ಲಿ, ಆಕೆಯ ರೂಪ ಮತ್ತು ನಗು ಥೇಟ್ ಬಾಲಿವುಡ್ ಧಕ್-ಧಕ್ ಬೆಡಗಿ ಮಾಧುರಿ ದೀಕ್ಷಿತ್ ಅವರನ್ನೇ ಹೋಲುತ್ತಿತ್ತು. 1992ರಲ್ಲಿ 'ಜಾನ್ ತೇರೆ ನಾಮ್' ಯಶಸ್ಸಿನ ಬಳಿಕ ಫರ್ಹೀನ್ ಮನೆಮಾತಾದರು. ಅಂದಿನ ಸಿನಿಮಾ ಮಾಧ್ಯಮಗಳು ಆಕೆಯನ್ನು 'ಮಾಧುರಿ ದೀಕ್ಷಿತ್ ನಂ. 2' ಎಂದೇ ಕರೆಯುತ್ತಿದ್ದವು. 90ರ ದಶಕದಲ್ಲಿ ಸಾಲು ಸಾಲು ಅವಕಾಶಗಳೊಂದಿಗೆ ಜನಪ್ರಿಯತೆಯ ಶಿಖರದಲ್ಲಿದ್ದ ಫರ್ಹೀನ್, ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ನಟನೆಯನ್ನು ತ್ಯಜಿಸಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದರು.
'ಹಳ್ಳಿಮೇಷ್ಟ್ರು' ಚಿತ್ರದ ಪರಿಮಳ ಆಗಿ ಕನ್ನಡಿಗರ ಹೃದಯ ಗೆದ್ದಿದ್ದ ಬಿಂದಿಯಾ
ಕನ್ನಡ ಚಿತ್ರರಂಗದಲ್ಲೂ ಬಿಂದಿಯಾ ಅಲಿಯಾಸ್ ಫರ್ಹೀನ್ ಮರೆಯಲಾಗದ ಛಾಪು ಮೂಡಿಸಿದ್ದಾರೆ. ಕನ್ನಡದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅಭಿನಯದ ಬ್ಲಾಕ್ಬಸ್ಟರ್ ಚಿತ್ರ 'ಹಳ್ಳಿಮೇಷ್ಟ್ರು' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಬಿಂದಿಯಾ, ತಮ್ಮ ನಟನೆ, ಡ್ಯಾನ್ಸ್, ಹಳ್ಳಿ ಸೊಗಡಿನ ಡೈಲಾಗ್ ಡೆಲಿವರಿ ಹಾಗೂ ಕಣ್ಣೋಟದಿಂದಲೇ ಕನ್ನಡಿಗರ ಮನಸ್ಸು ಕದ್ದಿದ್ದರು. ಈ ಚಿತ್ರದ 'ಪರಿಮಳ' ಪಾತ್ರ ಇಂದಿಗೂ ಸಿನಿಪ್ರಿಯರ ಮನದಲ್ಲಿ ಹಸಿರಾಗಿದೆ.
'ಹಳ್ಳಿಮೇಷ್ಟ್ರು' ಚಿತ್ರದ ಬಳಿಕ 'ರಾಯರು ಬಂದರು ಮಾವನ ಮನೆಗೆ' ಸಿನಿಮಾದಲ್ಲೂ ಕಾಣಿಸಿಕೊಂಡಿದ್ದ ಬಿಂದಿಯಾ, ಆ ನಂತರ 1995ರಲ್ಲಿ ಶಶಿಕುಮಾರ್ ಅವರ ಶಿವ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅವರು ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಲಿಲ್ಲ. 1997ರ ವೇಳೆಗೆ ಅವರು ಸಿನಿಮಾದಿಂದ ಸಂಪೂರ್ಣವಾಗಿ ವಿಮುಖರಾದರು.
ಕ್ರಿಕೆಟಿಗ ಮನೋಜ್ ಪ್ರಭಾಕರ್ ಜೊತೆಗಿನ ಪ್ರೇಮ
ಬಾಲಿವುಡ್ನಲ್ಲಿ ಮಿಂಚುತ್ತಿದ್ದ ಫರ್ಹೀನ್, ಅಂದಿನ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಮನೋಜ್ ಪ್ರಭಾಕರ್ ಅವರನ್ನು ಪ್ರೀತಿಸುತ್ತಿದ್ದರು. ಮದುವೆಯ ಬಳಿಕ ನಟನೆಯನ್ನು ಸಂಪೂರ್ಣವಾಗಿ ತೊರೆದು ಗೃಹಿಣಿಯಾಗಿ ಬದಲಾದರು.
ಒಡೆದ ಕುಟುಂಬದಲ್ಲಿ ಬೆಳೆದಿದ್ದ ಫರ್ಹೀನ್, ತಮ್ಮ ದಾಂಪತ್ಯ ಜೀವನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಬೇಕೆಂದು ಬಯಸಿದ್ದರು. ಹೀಗಾಗಿಯೇ ವೃತ್ತಿಜೀವನಕ್ಕಿಂತ ಕುಟುಂಬಕ್ಕೇ ಮೊದಲ ಆದ್ಯತೆ ನೀಡಲು ನಿರ್ಧರಿಸಿದ್ದರು. ಹಿಂದೊಮ್ಮೆ ಸಂದರ್ಶನವೊಂದರಲ್ಲಿ ತಮ್ಮ ಮದುವೆಯ ನಿರ್ಧಾರದ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದ ಫರ್ಹೀನ್, ನನ್ನ ತಂದೆ ಮೂರು ಮದುವೆಯಾಗಿದ್ದರು; ಇದು ನನ್ನ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ನನಗೆ ಮುಸ್ಲಿಂ ಪುರುಷರಲ್ಲಿ ನಂಬಿಕೆ ಇರಲಿಲ್ಲ, ಹೀಗಾಗಿ ಚಿಕ್ಕವಯಸ್ಸಿನಲ್ಲೇ ನಾನು ಹಿಂದೂ ವ್ಯಕ್ತಿಯನ್ನು ಮದುವೆಯಾಗಬೇಕೆಂದು ನಿರ್ಧರಿಸಿದ್ದೆ" ಎಂದು ಮನಬಿಚ್ಚಿ ಮಾತನಾಡಿದ್ದರು.
ಮೊದಲ ಪತ್ನಿಯಿಂದ ಕೇಸ್ ಮತ್ತು ವಿಚ್ಛೇದನ
ಮನೋಜ್ ಪ್ರಭಾಕರ್ ಮತ್ತು ಫರ್ಹೀನ್ ಅವರ ಸಂಬಂಧ ಆರಂಭದಲ್ಲಿ ಕಾನೂನು ವಿವಾದಕ್ಕೂ ಕಾರಣವಾಗಿತ್ತು. ಪ್ರಭಾಕರ್ ಅವರ ಮೊದಲ ಪತ್ನಿ ಸಂಧ್ಯಾ, ಮಾಜಿ ಪತಿ ಮನೋಜ್ ಪ್ರಭಾಕರ್ ಹಾಗೂ ಬಿಂದಿಯಾ (ಫರ್ಹೀನ್) ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಮನೋಜ್ ಮತ್ತು ಸಂಧ್ಯಾ ನಡುವೆ ವಿಚ್ಛೇದನವಾಯಿತು. ಪ್ರಸ್ತುತ ಸಂಧ್ಯಾ, ಅವರ ಪುತ್ರ ರೋಹನ್ ಮತ್ತು ಸೊಸೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮುಸ್ಲಿಂ ಕುಟುಂಬದಲ್ಲಿ ಜನಿಸಿ, ಹಿಂದೂ ಸಂಪ್ರದಾಯದ ಮಾಜಿ ಭಾರತೀಯ ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರನ್ನು ವಿವಾಹವಾದ ಫರ್ಹೀನ್ ಅವರಿಗೆ ಈಗ 53 ವರ್ಷ ವಯಸ್ಸಾಗಿದೆ. ಕ್ರಿಕೆಟ್ನಿಂದ ನಿವೃತ್ತರಾದ ಬಳಿಕ ಉದ್ಯಮಿಯಾಗಿ ಯಶಸ್ಸು ಕಂಡಿರುವ ಪತಿ ಮನೋಜ್ ಪ್ರಭಾಕರ್, ಇಬ್ಬರು ಪುತ್ರರಾದ ರಾಹಿಲ್ (Rahil) ಮತ್ತು ಮನವಂಶ್ (Manavansh) ಹಾಗೂ ಮಾವನವರೊಂದಿಗೆ ಫರ್ಹೀನ್ ದೆಹಲಿಯಲ್ಲಿ ಬಾಲಿವುಡ್ ಗ್ಲಾಮರ್ ಲೋಕದಿಂದ ದೂರವಾಗಿ ನೆಮ್ಮದಿಯ ಮತ್ತು ಸಂತೋಷದ ಜೀವನ ನಡೆಸುತ್ತಿದ್ದಾರೆ.
















