Yash Toxic Movie Teaser: ರಾಕಿಂಗ್ ಸ್ಟಾರ್ ಯಶ್ 40ನೇ ಜನ್ಮದಿನದ ಸಂಭ್ರಮದಲ್ಲಿ 'ಟಾಕ್ಸಿಕ್' ಸಿನಿಮಾದ ಟೀಸರ್‌ ರಿಲೀಸ್‌ ಆಗಲಿದೆ ಎನ್ನಲಾಗಿದೆ. 'ಪ್ಯಾನ್ ಇಂಡಿಯಾ' ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಇಂದು (ಜನವರಿ 8, 2026) ತಮ್ಮ 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 

ಕೆಜಿಎಫ್ ಸಿನಿಮಾ ಬಳಿಕ ಅವರ 'ಟಾಕ್ಸಿಕ್' ಸಿನಿಮಾ ಬಗ್ಗೆ ಕುತೂಹಲ ಶುರುವಾಗಿದೆ. ಯಶ್ ಅವರು ಅಭಿಮಾನಿಗಳನ್ನು ಭೇಟಿ ಮಾಡಿಲ್ಲವಾದರೂ ‘ಟಾಕ್ಸಿಕ್’‌ ಮೂಲಕ ಜನರಿಗೆ ಸರ್ಪ್ರೈಸ್‌ ನೀಡಿದ್ದಾರೆ.

'ಟಾಕ್ಸಿಕ್' ಟೀಸರ್, ಯಶ್ ಕ್ಯಾರೆಕ್ಟರ್ ರಿವೀಲ್

ಈ ಬಾರಿಯ ಯಶ್‌ ಅವರ ಹುಟ್ಟುಹಬ್ಬಕ್ಕೆ ಟಾಕ್ಸಿಕ್ ಚಿತ್ರತಂಡದಿಂದ ಅತಿದೊಡ್ಡ ಉಡುಗೊರೆ ಸಿಕ್ಕಿದೆ. ರಯಾ ಪಾತ್ರದ ಪರಿಚಯ ಮಾಡಿಕೊಡಲಾಗಿದೆ. ಇಂದು ಬೆಳಿಗ್ಗೆ 10:10ಕ್ಕೆ ಚಿತ್ರತಂಡವು ಯಶ್ ಅವರ ಪಾತ್ರವನ್ನು ಬಿಡುಗಡೆ ಮಾಡಿದೆ. ಯಶ್ ಅವರಂತೂ ಮಾಸ್, ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ಮಾರ್ಚ್ 19, 2026 ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.‌

ಟಾಕ್ಸಿಕ್‌ ವಿಡಿಯೋದಲ್ಲಿ ಏನಿದೆ?

ಈ ಸಿನಿಮಾವಂತೂ ಪಕ್ಕಾ ಹಾಲಿವುಡ್‌ ಸಿನಿಮಾ ಥರ ಕಾಣಿಸಿದೆ, ಅದರಲ್ಲಿಯೂ ಯಶ್‌ ಅವರು ಸಿಕ್ಸ್‌ ಪ್ಯಾಕ್‌ನಲ್ಲಿ ಭರ್ಜರಿಯಾಗಿ ಕಾಣಿಸಿಕೊಂಡಿದ್ದಾರೆ. ರಯಾ ಪಾತ್ರದಲ್ಲಿ ಅವರು ರೌಡಿಗಳನ್ನು ಹೊಡೆಯುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಡ್ಯಾಡಿ ಈಸ್‌ ಹೋಮ್‌ ಎಂದು ಅವರು ಒಂದೇ ಒಂದು ಡೈಲಾಗ್‌ ಹೊಡೆದಿದ್ದಾರೆ.

ಕೆಜಿಎಫ್‌ ನಂತರ ಯಶ್ ಅವರು ‘ಟಾಕ್ಸಿಕ್’‌ ಸಿನಿಮಾ ಕಡೆಗೆ ಗಮನ ಕೊಡುತ್ತಿದ್ದಾರೆ. ಈಗ ಮುಂಬೈನಲ್ಲಿ 'ಟಾಕ್ಸಿಕ್' ಸಿನಿಮಾದ ಪೋಸ್ಟ್ ಪ್ರೊಡಕ್ಷನ್, ಶೂಟಿಂಗ್‌ ಕೆಲಸ ನಡೆಯುತ್ತಿದೆಯಂತೆ. ಸಿನಿಮಾ ಚೆನ್ನಾಗಿರಬೇಕು ಎಂಬ ಕಾರಣಕ್ಕೆ ಅವರು ಸಮಯ ತಗೊಂಡು ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಸಿನಿಮಾ ರಿಲೀಸ್‌ ಆಗೋದು ತಡವಾಗುತ್ತಿದೆ.

ಸಿನಿಮಾದಲ್ಲಿ ಬ್ಯುಸಿ ಆಗಿರೋದರಿಂದ ಅವರು ಬೆಂಗಳೂರಿನಲ್ಲಿ ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಫ್ಯಾನ್ಸ್‌ಗೆ ಪತ್ರ ಬರೆದಿದ್ದು "ನಿಮ್ಮನ್ನು ಭೇಟಿಯಾಗಲು ನಾನು ಕೂಡ ಕಾತುರತೆ ಇದೆ. ಆದರೆ ಮಾರ್ಚ್ 19ಕ್ಕೆ ಸಿನಿಮಾ ಸಿದ್ಧಪಡಿಸುವ ಜವಾಬ್ದಾರಿಯೂ ನನ್ನ ಮೇಲಿದೆ. ಶೀಘ್ರದಲ್ಲೇ ದೊಡ್ಡ ಮಟ್ಟದಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ" ಎಂದು ಮನವಿ ಮಾಡಿದ್ದಾರೆ.

ಅಭಿಮಾನಿಗಳ ಸಾರ್ಥಕ ಆಚರಣೆ

ಯಶ್ ಅವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಯಶ್‌ ಅವರನ್ನು ಭೇಟಿ ಮಾಡಲು ಸಮಯ ಸಿಕ್ಕಿಲ್ಲವಾದರೂ ಕೂಡ, ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕೆಲವು ಅಭಿಮಾನಿಗಳು ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ಬೆಂಗಳೂರಿನ 'ನಮ್ಮ ಮೆಟ್ರೋ' ರೈಲುಗಳಲ್ಲಿ ಯಶ್ ಸಾಧನೆ, 'ಟಾಕ್ಸಿಕ್' ಸಿನಿಮಾದ ಪೋಸ್ಟರ್‌ಗಳನ್ನು ಹಾಕಲಾಗಿದೆ. ಇದೇ ಮೊದಲ ಬಾರಿಗೆ ನಟನೋರ್ವರಿಗೆ ಈ ರೀತಿ ಮಾಡಲಾಗಿದೆ. ರಾಜ್ಯದ ಹಲವೆಡೆ ಬಡವರಿಗೆ ಅನ್ನದಾನ, ಅನಾಥಾಶ್ರಮಗಳಿಗೆ ಸಹಾಯ ಮಾಡಲಾಗುತ್ತಿದೆ.

ಗೀತು ಮೋಹನ್ ದಾಸ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಕೆಜಿಎಫ್‌ ಬಳಿಕ ಯಶ್‌ ಅವರು ಯಾರ ಜೊತೆ ಸಿನಿಮಾ ಮಾಡಲಿದ್ದಾರೆ? ಯಾವ ರೀತಿಯ ಸಿನಿಮಾ ಬರಲಿದೆ ಎಂಬ ಕುತೂಹಲ ಇತ್ತು. ಸೂಕ್ಷ್ಮ ಕಥೆಗಳನ್ನು ಹೇಳಿದ ಗೀತಾ ಮೋಹನ್‌ದಾಸ್‌ ಜೊತೆ ಯಶ್‌ ಸಿನಿಮಾ ಮಾಡುತ್ತಿರುವುದು ಅಭಿಮಾನಿಗಳ ನಿರೀಕ್ಷೆ, ಕುತೂಹಲ ಹೆಚ್ಚಿಸಿದೆ.

ನಯನತಾರಾ (ಗಂಗಾ ಪಾತ್ರದಲ್ಲಿ), ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ದೊಡ್ಡ ಮಟ್ಟದಲ್ಲಿ ತಾರಾ ಬಳಗವಿದೆ. ರವಿ ಬಸ್ರೂರು ಸಂಗೀತ, ರಾಜೀವ್ ರವಿ ಛಾಯಾಗ್ರಹಣ ಈ ಸಿನಿಮಾಕ್ಕಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಹೆಮ್ಮೆಯ ಸಿನಿಮಾವಾಗಿದೆ.

YouTube video player