ನಟ ಯಶ್ ತಮ್ಮ ಮುಂಬರುವ 'ಟಾಕ್ಸಿಕ್' ಸಿನಿಮಾದ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವುದರಿಂದ, ಈ ವರ್ಷದ ಜನ್ಮದಿನದಂದು ಅಭಿಮಾನಿಗಳನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು (ಜ.7): ಪ್ರತಿ ವರ್ಷ ತಮ್ಮ ನೆಚ್ಚಿನ ನಟ 'ರಾಕಿಂಗ್ ಸ್ಟಾರ್' ಯಶ್ ಅವರ ಜನ್ಮದಿನವನ್ನು ಹಬ್ಬದಂತೆ ಆಚರಿಸುವ ಅಭಿಮಾನಿಗಳಿಗೆ ಈ ಬಾರಿ ಕೊಂಚ ನಿರಾಸೆಯಾಗಿದೆ. ಜನವರಿ 8ರಂದು ಯಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರೂ, ಅಭಿಮಾನಿಗಳನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಯಶ್ ಪ್ರಸ್ತುತ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾದ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಹಗಲಿರುಳು ಬ್ಯುಸಿಯಾಗಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಸಂದೇಶ ಹಂಚಿಕೊಂಡಿರುವ ಅವರು..
'ನೀವು ನನ್ನನ್ನು ಭೇಟಿಯಾಗಲು ಕೆಲವು ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದೀರಿ ಎಂಬುದು ಚೆನ್ನಾಗಿ ಗೊತ್ತು. ನನಗೂ ನಿಮ್ಮನ್ನೆಲ್ಲ ಭೇಟಿಯಾಗುವ ಹಂಬಲವಿದೆ. ಈ ಜನ್ಮದಿನದಂದು ನಿಮ್ಮನ್ನೆಲ್ಲ ಭೇಟಿಯಾಗಬೇಕೆಂದು ನಾನೂ ಬಯಸಿದ್ದೆ. ಆದರೆ, ಇದೇ ಮಾರ್ಚ್ 19ರಂದು ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗಬೇಕಿದೆ. ಅಷ್ಟರೊಳಗೆ ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಮುಗಿಸಬೇಕಿದೆ. ಹಾಗಾಗಿ, ನಿಮ್ಮನ್ನು ಖುದ್ದಾಗಿ ಭೇಟಿಯಾಗಲು ಆಗುತ್ತಿಲ್ಲ. ಶೀಘ್ರದಲ್ಲೇ ಇನ್ನೂ ದೊಡ್ಡ ಮಟ್ಟದಲ್ಲಿ ಭೇಟಿಯಾಗೋಣ. ಅಲ್ಲಿಯವರೆಗೆ ನೀವು ಕಳುಹಿಸುವ ಸಂದೇಶಗಳನ್ನು ಓದುತ್ತೇನೆ. ನಿಮ್ಮ ಪ್ರೀತಿಯನ್ನು ಸದಾ ಸ್ಮರಿಸುತ್ತೇನೆ' ಎಂದು ಬರೆದಿದ್ದಾರೆ.
'ಟಾಕ್ಸಿಕ್' ಸಿನಿಮಾದ ಹೈಲೈಟ್ಸ್
2022ರ 'ಕೆಜಿಎಫ್-2' ನಂತರ ಸುಮಾರು ಮೂರು ವರ್ಷಗಳ ಬಳಿಕ ಯಶ್ ಬೆಳ್ಳಿಪರದೆಯ ಮೇಲೆ ಅಬ್ಬರಿಸಲಿದ್ದಾರೆ. ದೀರ್ಘ ವಿರಾಮದ ನಂತರ ಯಶ್ ಅವರನ್ನು ತೆರೆಯ ಮೇಲೆ ಕಾಣಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರ, ಕಿಯಾರಾ ಅಡ್ವಾನಿ, ರುಕ್ಕಿಣಿ ವಸಂತ್ ಸೇರಿದಂತೆ ಬೃಹತ್ ತಾರಾಬಳಗವೇ ಇದೆ. ಕೇವಲ ನಟನೆಯಷ್ಟೇ ಅಲ್ಲದೆ, ಚಿತ್ರಕಥೆ ಬರವಣಿಗೆಯಲ್ಲೂ ಯಶ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.



