ಕೋಮಲ್ ಮತ್ತು ಸೋನಲ್ ಮೊಂತೆರೊ ಜೋಡಿಯಾಗಿ ನಟಿಸಿರುವ ‘ರಿಲ್ಯಾಕ್ಸ್’ ಕನ್ನಡ ಸಿನಿಮಾ ನವೆಂಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ.
ಕೋಮಲ್ ಹಾಗೂ ಸೋನಲ್ ಮಾಂತೆರೊ ಜೋಡಿಯಾಗಿ ನಟಿಸಿರುವ ‘ರಿಲ್ಯಾಕ್ಸ್’ ಸಿನಿಮಾ ಇದೇ ನವೆಂಬರ್ 27ಕ್ಕೆ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ವಿಶೇಷ ಎಂದರೆ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರದ್ದು ವಿಲನ್ ರೋಲ್. ಅಂಬಟಿ ಮಧುಮೋಹನ್ ಕೃಷ್ಣ ನಿರ್ಮಾಣ, ಶ್ರೀನಿವಾಸ್ ಮಂಡ್ಯ ನಿರ್ದೇಶನದ ಚಿತ್ರವಿದು. ನಿರ್ಮಾಪಕರಾದ ಚಿಂಗಾರಿ ಮಹದೇವ್, ಭಾ. ಮ. ಹರೀಶ್ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಒಳ್ಳೆಯ ಮೈಲೇಜ್ ನೀಡಲಿದೆ
ಕೋಮಲ್, ‘ನಿರ್ದೇಶಕ ದಿನೇಶ್ ಬಾಬು ಅವರೊಂದಿಗೆ ಸೇರಿ ಕೇವಲ ಎಂಟೂವರೆ ದಿನಗಳಲ್ಲಿ 38 ಲಕ್ಷ ರು. ವೆಚ್ಚದಲ್ಲಿ ‘ಮಿಸ್ಟರ್ ಗರಗಸ’ ಚಿತ್ರ ಮಾಡಿದ್ದೆವು. ಆ ಸಿನಿಮಾ ಉತ್ತಮ ಹಣ ಗಳಿಸಿತು. ಆ ಚಿತ್ರದಂತೆ ‘ರಿಲ್ಯಾಕ್ಸ್’ ಚಿತ್ರವೂ ನನಗೆ ಒಳ್ಳೆಯ ಮೈಲೇಜ್ ನೀಡಲಿದೆ ಎನ್ನುವ ವಿಶ್ವಾಸವಿದೆ. ಈ ಚಿತ್ರವನ್ನು ಒಬ್ಬರೇ ಕುಳಿತು ನೋಡಿದರೆ ನಗುತ್ತೀರಿ, ಜೊತೆಯಲ್ಲಿ ಕುಳಿತು ನೋಡಿದರೆ ಬಿದ್ದು ಬಿದ್ದು ನಗುತ್ತೀರಿ’ ಎಂದರು.
ಅಂಬಟಿ ಮಧುಮೋಹನ್ ಕೃಷ್ಣ, ‘ಚಿತ್ರಕ್ಕೆ ಶೇಕಡಾ 25ರಷ್ಟು ಚಿತ್ರೀಕರಣ ಮುಗಿದ ಬಳಿಕ ನಾನು ಸಿನಿಮಾ ನೋಡಿದೆ. ನಟ ಕೋಮಲ್ ಅವರ ಪಾತ್ರ ನನಗೆ ತುಂಬಾ ಇಷ್ಟವಾಯಿತು. ಹಾಗಾಗಿ ಸಿನಿಮಾವನ್ನು ನಾನೇ ಕೈಗೆತ್ತಿಕೊಂಡು ನಿರ್ಮಾಣ ಕೆಲಸ ಪೂರ್ತಿ ಮಾಡಿದ್ದೇನೆ. ಬಡ ಕುಟುಂಬದ ನಾಯಕ ಹಾಗೂ ಶ್ರೀಮಂತ ಮನೆತನದ ನಾಯಕಿ ನಡುವಿನ ಕಥೆ ಇದಾಗಿದೆ. ಸಿನಿಮಾ ನೋಡಿ ಖುಷಿಯಾಯಿತು. ಹಣ ಬರುತ್ತದೆ, ಹೋಗುತ್ತದೆ. ಆದರೆ ಉತ್ತಮ ಚಿತ್ರ ನಿರ್ಮಿಸಿದ ತೃಪ್ತಿ ನನಗಿದೆ. ಅಪ್ಪ-ಮಗನ ಸಂಬಂಧದ ಸನ್ನಿವೇಶಗಳು ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿವೆ’ ಎಂದರು.
ಸಿನಿಮಾ ನೋಡಿ ಹರಸಿ
ಶ್ರೀನಿವಾಸ್ ಮಂಡ್ಯ, ‘ಇದು ಪ್ರೇಕ್ಷಕರಿಗಾಗಿ ಮಾಡಿರುವ ಸಿನಿಮಾ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಹರಸಿ. ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದರು. ಸೋನಲ್ ಮೊಂತೆರೊ ಅವರು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.
















