ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಸುಧಾರಾಣಿ ತಮ್ಮ ದಾಂಪತ್ಯ ಜೀವನದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ವೃತ್ತಿಜೀವನದ ಉತ್ತುಂಗದಲ್ಲಿ ವಿವಾಹವಾಗಿ ಅಮೆರಿಕದಲ್ಲಿ ಅನುಭವಿಸಿದ ಮಾನಸಿಕ ಕಷ್ಟಗಳು ಮತ್ತು ವಿಚ್ಛೇದನದ ನಂತರ ಸಿನಿಮಾ ರಂಗದಲ್ಲಿ ಪುನಃ ಯಶಸ್ಸು ಕಂಡ ಬಗೆಯನ್ನು ವಿವರಿಸಿದ್ದಾರೆ. ಸುಧಾರಾಣಿ ಅವರು ಏನು ಹೇಳಿದರು? ಸ್ಟೋರಿ ಓದಿ.
ಸುಧಾರಾಣಿ ಕನ್ನಡ ಚಿತ್ರರಂಗದ ಎವರ್ಗ್ರೀನ್ ನಟಿ. ತಮ್ಮ ನೈಜ ಅಭಿನಯ, ಸರಳ ವ್ಯಕ್ತಿತ್ವ ಹಾಗೂ ವಿವಾದರಹಿತ ಬದುಕಿನ ಮೂಲಕ ಕನ್ನಡಿಗರ ಮನೆಮಗಳಾಗಿ ಗುರುತಿಸಿಕೊಂಡವರು. ‘ಆನಂದ್’ ಚಿತ್ರದಿಂದ ಆರಂಭಿಸಿ 'ಪಂಚಮವೇದ', ‘ವಸಂತ ಕಾವ್ಯ’, ‘ಮನೆ ದೇವರು’ ಸೇರಿದಂತೆ ಹಲವು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿ ಕೋಟ್ಯಂತರ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾದವರು.
ತೆರೆಯ ಮೇಲೆ ದಿಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಸುಧಾರಾಣಿ ತಮ್ಮ ನಿಜಜೀವನದಲ್ಲೂ ಅಷ್ಟೇ ದೊಡ್ಡ ಹೋರಾಟ ನಡೆಸಿದ್ದಾರೆ. 2024ರಲ್ಲಿ ನಡೆದ ಸಂದರ್ಶನ ಒಂದರಲ್ಲಿ ತಮ್ಮ ಬದುಕಿನ ಕಹಿ ಘಟನೆಗಳನ್ನ ಸ್ಮರಿಸಿದ್ದರು. ಮದುವೆ ಆಗಿ ಅಮೆರಿಕಗೆ ಹೋಗಿ ನೆಲೆಸಿದ ಬಳಿಕ ಏನಲ್ಲ ಆಯ್ತು ಅನ್ನೋದನ್ನು ವಿವರಿಸಿದ್ದಾರೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಅವರೇ ಹೇಳಿಕೊಂಡಂತೆ.. ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಸುಧಾರಾಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಮಾಡಬೇಕು ಎಂಬುದು ಅಮ್ಮನ ನಿರ್ಧಾರವಾಗಿತ್ತು. 21-22 ವರ್ಷದೊಳಗೆ ಜೀವನದಲ್ಲಿ ಸೆಟಲ್ ಆಗಬೇಕು ಎಂದು ಅಮ್ಮ ಮೊದಲೇ ಹೇಳಿದ್ದರು. ಹಳೇ ಕಾಲದ ಆಲೋಚನೆಗಳಿದ್ದ ಕಾರಣ, ಹುಡುಗನನ್ನು ನೋಡಿ ಮದುವೆ ಮಾಡಿದ್ದರು. ಆಗ ನಾನು ಚಿಕ್ಕವಳು. ನನ್ನ ಪ್ರಪಂಚವೇ ಬೇರೆ ಆಗಿತ್ತು. ನನ್ನನ್ನು ಎಲ್ಲೂ ಒಬ್ಬಳನ್ನೇ ಆಚೆ ಕಳಿಸುತ್ತಿರಲಿಲ್ಲ. ನನಗೆ ಹೊರಗಿನ ಯಾವುದೇ ವ್ಯವಹಾರ ಗೊತ್ತಿರಲಿಲ್ಲ. ಬ್ಯಾಂಕ್ಗೆ ಹೇಗೆ ಹೋಗಬೇಕು ಎಂಬ ಐಡಿಯಾವೂ ಇರಲಿಲ್ಲ. ಬರೀ ಶೂಟಿಂಗ್ಗೆ ಹೋಗು, ಮನೆಗೆ ಬಾ ಅಷ್ಟೇ ನನ್ನ ಪ್ರಪಂಚವಾಗಿತ್ತು.
ನಮ್ಮದು ಸಂಪ್ರದಾಯಸ್ಥ ಕುಟುಂಬ
ಆದರೆ ಮದುವೆ ಆಗಿ ಅಮೆರಿಕಗೆ ಹೋದಾಗ ಎಲ್ಲವನ್ನೂ ನಾನೇ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂತು. ಅದು ನನಗೆ Survival ಪ್ರಶ್ನೆ ಆಗಿತ್ತು. 'ಕೆಲಸಗಳನ್ನ ಕಲಿಯಲಿಲ್ಲ, ಮಾಡಲಿಲ್ಲ' ಎಂದರೆ ಅಲ್ಲಿ ಬದುಕಲು ಸಾಧ್ಯವೇ ಇರಲಿಲ್ಲ. ಹೀಗಾಗಿ ನಾನು ಅದೆಲ್ಲವನ್ನೂ ಬಹಳ ಬೇಗನೆ ಕಲಿತುಕೊಂಡೆ. ಆ ಕಲಿಕೆಯ ಪ್ರಕ್ರಿಯೆಯಲ್ಲಿ ನನ್ನಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದಾನೆ ಎಂಬ ಸತ್ಯ ಕಂಡುಕೊಂಡೆ.
ಇದರ ಮಧ್ಯೆ ನಾನು ಕೆಲವು ಕರಾಳ ಮುಖಗಳನ್ನ ನೋಡಿದೆ. ಅದೆಲ್ಲವೂ ನನ್ನ ಗಮನಕ್ಕೆ ಬಂದರೂ ನಾನು ಏಕಾಏಕಿ ಯಾವುದನ್ನೂ ಬಿಡಲಿಲ್ಲ. ನನ್ನ ಕೈಯಲ್ಲಿ ಏನೆಲ್ಲಾ ಸಾಧ್ಯವೋ ಅಷ್ಟೂ ಪ್ರಯತ್ನಿಸಿದೆ. ಎರಡೂ ಕುಟುಂಬಗಳು ಮಧ್ಯಪ್ರವೇಶಿಸಿ ಸರಿಪಡಿಸಲು ನೋಡಿದವು. ಒಂದೇ ತಿಂಗಳಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಭಾರತಕ್ಕೆ ವಾಪಸ್ ಬರುವ ಮನಸ್ಥಿತಿಯಲ್ಲಿ ಬೆಳೆದಿರಲಿಲ್ಲ. ಸಂಪ್ರದಾಯಸ್ಥ ಕುಟುಂಬ ನಮ್ಮದು. ನಾನು ಸಿನಿಮಾಗೆ ಬಂದಿದ್ದೇ ದೊಡ್ಡ ವಿಷಯವಾಗಿತ್ತು. ಹೀಗಿರುವಾಗ ದಾಂಪತ್ಯ ಮುರಿದುಕೊಂಡು ಬಂದರೆ ದೊಡ್ಡ ಕಪ್ಪು ಚುಕ್ಕೆಯಾಗುತ್ತದೆ ಎಂಬ ಭಾವನೆ ನನ್ನಲ್ಲಿ ಇತ್ತು. ಜೊತೆಗೆ ಅಲ್ಲಿನ ಅಮೆರಿಕನ್ ಸಂಸ್ಕೃತಿ, ನಾನು ಬೆಳೆದ ವಾತಾವರಣ ಎಲ್ಲವೂ ಬೇರೆಯೇ ಆಗಿದ್ದರಿಂದ ಹೊಂದಿಕೊಳ್ಳಲು ಸಮಯ ಬೇಕು ಎಂದುಕೊಂಡು ಸಮಯ ನೀಡಿದೆ.
ನನ್ನ ಕಾಲ ಮೇಲೆ ನಾನು ನಿಲ್ಲಬೇಕಾಗಿತ್ತು
ಆ ವ್ಯಕ್ತಿಗೆ ಕೆಲವು ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದವು. ಆ ಕಡೆಯಿಂದ ಯಾರೂ ಅದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅದನ್ನು ಅರ್ಥಮಾಡಿಕೊಂಡು ಚಿಕಿತ್ಸೆ ಕೊಡಿಸಬೇಕು ಅಥವಾ ಬೆಂಬಲ ನೀಡಬೇಕು ಎಂದು ಅನಿಸಲಿಲ್ಲ. ಆರಂಭದಲ್ಲಿ ನನಗೂ ವಿಷಯ ತಿಳಿಯದಿದ್ದಾಗ ಇಂದು ಸರಿಹೋಗಬಹುದು, ನಾಳೆ ಸರಿಹೋಗಬಹುದು ಎಂದು ಹೊಂದಾಣಿಕೆ ಮಾಡಿಕೊಂಡೆ. ಒಂದು ಹಂತ ದಾಟಿದ ಮೇಲೆ ನನಗೆ ಸಾಧ್ಯವಾಗಲಿಲ್ಲ. ಈ ವಿಚಾರದಲ್ಲಿ ಕಚ್ಚಾಟ ಮಾಡಿಕೊಂಡರೆ ಅರ್ಥವಿಲ್ಲ ಅಂದುಕೊಂಡು ನಾನು ಗಟ್ಟಿಯಾಗಿ ನನ್ನ ಕಾಲಮೇಲೆ ನಿಲ್ಲಬೇಕು ಅಂದುಕೊಂಡು ನಿರ್ಧಾರ ಮಾಡಿದೆ.
ಡಿವೋರ್ಸ್ ಪಡೆಯುವಾಗ ನನಗೆ ಭಯ ಇತ್ತು. ಆಗ ನನಗೆ 22-23 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಯಾಕೆ ಹೀಗಾಗುತ್ತಿದೆ ಎಂಬ ಆತಂಕ ಇತ್ತು. ವೃತ್ತಿಜೀವನ ಪೀಕ್ನಲ್ಲಿದ್ದಾಗ ಬಿಟ್ಟು ಹೋಗಿದ್ದೆ, ನನ್ನ ವಿದ್ಯಾಭ್ಯಾಸವೂ ಪೂರ್ಣಗೊಂಡಿರಲಿಲ್ಲ. ಮುಂದೇನು ಮಾಡಬೇಕು, ಯಾರ ಸಲಹೆ ಕೇಳಬೇಕು ಎಂಬ ಭಯ ಇತ್ತು. ಆದರೆ ಆಗಲ್ಲ ಅಂದಾಗ ನಿರ್ಧಾರ ತೆಗೆದುಕೊಳ್ಳುವುದು ನಾನೇ ಆಗಿತ್ತು.
ಅಂಬರೀಶ್ ಹಾಗೂ ಅಣ್ಣಾವ್ರ ಕುಟುಂಬದವರು ತುಂಬಾ ಬೆಂಬಲ ನೀಡಿದರು. ಫೋನ್ ಮಾಡಿದಾಗಲೆಲ್ಲಾ ಧೈರ್ಯವಾಗಿರು ಎಂದು ಮಾನಸಿಕ ಸ್ಥೈರ್ಯ ತುಂಬುತ್ತಿದ್ದರು. ಆದರೆ ಅಂತಿಮವಾಗಿ ನನ್ನ ಸಮಸ್ಯೆಯನ್ನು ನಾನೇ ಬಗೆಹರಿಸಿಕೊಂಡು ಹೊರಬರಬೇಕಿತ್ತು. ಆ ಜವಾಬ್ದಾರಿ ಬೇರೆಯವರ ಮೇಲೆ ಹಾಕಲು ಸಾಧ್ಯವಿರಲಿಲ್ಲ. ಹೀಗಾಗಿ ನನಗೆ ಯಾವುದು ಸರಿ ಅನಿಸಿತೋ ಆ ನಿರ್ಧಾರ ತೆಗೆದುಕೊಂಡೆ ಎಂದಿದ್ದಾರೆ.
ಹೀಗಿದ್ದೂ ಆ ವ್ಯಕ್ತಿಯ ಕ್ರೌರ್ಯ ಮಿತಿ ಮೀರಿತ್ತು ಎನ್ನಲಾಗಿದೆ. ಸುಧಾರಾಣಿ ಅವರ ಸಹೋದರ ಮುರಳಿ ಮಾಡಿರುವ ಆರೋಪದ ಪ್ರಕಾರ ಆತ ಇಂಜೆಕ್ಷನ್ಗಳನ್ನು ಕೂಡ ರೆಡಿ ಮಾಡಿಟ್ಟುಕೊಂಡಿದ್ದಂತಹ ಭೀಕರ ಪರಿಸ್ಥಿತಿಯೂ ಎದುರಾಗಿತ್ತು ಎನ್ನಲಾಗಿದೆ.1906-1998ರ ನಡುವೆ ಸಂಜಯ್ ಎಂಬ ವ್ಯಕ್ತಿಯ ಮದುವೆ ಆಗಿ ಅನುಭವಿಸಿದ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಸಿನಿಮಾ ರಂಗದಲ್ಲಿ ಎರಡನೇ ಇನ್ನಿಂಗ್ಸ್
ಅದೃಷ್ಟವಶಾತ್ ನನಗೆ ಚಿತ್ರರಂಗದಿಂದ ದೊಡ್ಡ ಗ್ಯಾಪ್ ಏನೂ ಆಗಲಿಲ್ಲ. ಅಲ್ಲಿದ್ದಾಗಲೂ ಬಂದು 'ಸ್ಪರ್ಶ' ಸಿನಿಮಾ ಮಾಡಿದೆ. ಆನಂತರವೂ ಸಿನಿಮಾಗಳು ಬರುತ್ತಲೇ ಇದ್ದವು. ಒಂದು ಹಂತದಲ್ಲಿ ನನ್ನ ಸ್ನೇಹಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಅಥವಾ ಯಾವುದೋ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಕೆಲವೊಂದು ಸಿನಿಮಾಗಳನ್ನು ಒಪ್ಪಿಕೊಂಡೆ. ಅವು ನನ್ನ ವೃತ್ತಿಜೀವನಕ್ಕೆ ಯಾವುದೇ ರೀತಿಯ ಸಹಾಯ ಮಾಡಲಿಲ್ಲ. ಆ ಸಿನಿಮಾಗಳನ್ನು ಮಾಡದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಅದರಿಂದಲೂ ನಾನು ಪಾಠ ಕಲಿತೆ ಎಂದಿದ್ದಾರೆ.
ಒಂದು ಹಂತದಲ್ಲಿ ಈ ಬದಲಾವಣೆಗೆ ಒಗ್ಗಿಕೊಳ್ಳಲೇಬೇಕು ಎಂದು ನಿರ್ಧರಿಸಿದೆ. ನಾನು ಹಠ ಹಿಡಿದು ಕೂರಲು ಸಾಧ್ಯವಿಲ್ಲ. ಆರೋಗ್ಯದ ದೃಷ್ಟಿಯಿಂದ ಮತ್ತು ಮಾನಸಿಕವಾಗಿ ನಾನು ಸಕ್ರಿಯವಾಗಿರಲು ಬಯಸುತ್ತೇನೆ. ಮನೆಯಲ್ಲಿ ಸುಮ್ಮನೆ ಕೂರಲು ನನಗೆ ಸಾಧ್ಯವಿಲ್ಲ. ಜನರಿಗೆ ಒಪ್ಪಿಗೆಯಾಗುವಂತಹ ಹಾಗೂ ನನಗೆ ಖುಷಿ ಕೊಡುವಂತಹ ಪಾತ್ರಗಳನ್ನು ಮಾಡಬೇಕು. ಸಿನಿಮಾ ಬಿಟ್ಟರೆ ನನಗೆ ಬೇರೆ ಏನೂ ಗೊತ್ತಿಲ್ಲ. ಅದೃಷ್ಟವಶಾತ್ ಅವಕಾಶಗಳು ಯಾವತ್ತೂ ಕಡಿಮೆಯಾಗಲಿಲ್ಲ. ಇದರ ಜೊತೆಗೆ ಡಬ್ಬಿಂಗ್, ಮಾಡೆಲಿಂಗ್ ಸೇರಿದಂತೆ ಬೇರೆ ಬೇರೆ ಪ್ರಯೋಗಗಳನ್ನು ಮಾಡುತ್ತಿದ್ದೇನೆ. ಯಾವುದೇ ಕಥೆ ಬಂದಾಗ ನನ್ನ ಒಳಮನಸ್ಸು ಏನು ಹೇಳುತ್ತದೆ ಮತ್ತು ಕಥೆ ಹೇಗಿದೆ ಎಂಬುದನ್ನು ನೋಡಿ ಸಕಾರಾತ್ಮಕವಾಗಿ ಮುಂದುವರಿಯುತ್ತೇನೆ.
ನನ್ನದು ನೇರ ಸ್ವಭಾವ
ಜನರಿಗೆ ನನ್ನ ಪಾತ್ರಗಳು ಮತ್ತು ಅಭಿನಯ ಇಷ್ಟವಾಗಿದ್ದರೆ ಸಂಪೂರ್ಣ ಶ್ರೇಯಸ್ಸು ನನ್ನ ನಿರ್ದೇಶಕರಿಗೆ ಸಲ್ಲಬೇಕು. ಅವರು ನನ್ನಿಂದ ಅಂತಹದ್ದೊಂದು ಕೆಲಸವನ್ನು ತೆಗೆಸಿದರು. ಮೊದಲಿನಿಂದಲೂ ನನಗೆ ಜೀವನದಲ್ಲಿ ಒಂದು ಸ್ಪಷ್ಟತೆ ಇದೆ. ನನಗೆ ಇಷ್ಟೇ ಬೇಕು, ಹೀಗೇ ಇರಬೇಕು ಎಂಬುದನ್ನು ಅರಿತಿದ್ದೇನೆ. ಅದನ್ನು ದಾಟಿ ನಾನು ಯಾವತ್ತೂ ಹೋಗಿಲ್ಲ. ಮೂಲತಃ ನಾನು ತುಂಬಾ ನೇರ ಸ್ವಭಾವದ ಮತ್ತು ಸರಳ ವ್ಯಕ್ತಿ. ನನ್ನದೇ ಆದ ಒಂದು ಪರಿಧಿ ಇರುತ್ತದೆ, ನಾನು ಯಾವಾಗಲೂ ಅದರೊಳಗೇ ಇರುತ್ತೇನೆ ಎನ್ನುವ ಮೂಲಕ ತಮ್ಮ ಯಶಸ್ವಿ ಹಾಗೂ ಗೌರವಯುತ ಬದುಕಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
















