ನಟನೆಯಿಂದ ಹಿಡಿದು ಸಾಹಸ ಕಲೆ, ಕಥೆ ರಚನೆ ಮತ್ತು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯವರೆಗೆ ನಟ ಡಾ. ವಿಷ್ಣುವರ್ಧನ್ ಅವರ ಸಾಧನೆಯ ಪಟ್ಟಿ ದೊಡ್ಡದು. ಕಾಲ ಬದಲಾದರೂ ಸಾಹಸ ಸಿಂಹನ ಖದರ್ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ. ಹಾಗಿದ್ರೆ ಏನೆಲ್ಲಾ ಅಪರೂಪದ ಘಟನೆಗಳಿವೆ? ನೋಡಿ..
ಕರ್ನಾಟಕ ರತ್ನ, ಸಾಹಸ ಸಿಂಹ ನಟ ಡಾ. ವಿಷ್ಣುವರ್ಧನ್; ಅಭಿಮಾನಿಗಳಿಗೂ ಗೊತ್ತಿರದ ಈ ಮೇರು ನಟನ ಜೀವನದ ಅಪರೂಪದ ಸಂಗತಿಗಳಿವು!
ಸಿನಿಮಾರಂಗದಲ್ಲಿ, ಅದರಲ್ಲೂ ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯ, ವ್ಯಕ್ತಿತ್ವ ಮತ್ತು ಸಾಧನೆಯ ಮೂಲಕ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡ ಅಪರೂಪದ ನಟರಲ್ಲಿ ಸಾಹಸ ಸಿಂಹ ಖ್ಯಾತಿಯ ನಟ ಡಾ. ವಿಷ್ಣುವರ್ಧನ್ (Vishnuvardhan) ಕೂಡ ಒಬ್ಬರು. ಇಂದು ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಸಿನಿಮಾಗಳು, ಪಂಚಿಂಗ್ ಡೈಲಾಗ್ಗಳು, ವಿಭಿನ್ನ ಪಾತ್ರಗಳು ಮತ್ತು ಅದ್ಭುತ ಅಭಿನಯದ ಮೂಲಕ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ವಿಷ್ಣುವರ್ಧನ್ ಅವರ ಬಗ್ಗೆ ಅನೇಕರಿಗೆ ತಿಳಿಯದ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ ನೋಡಿ..
ಸಂಪತ್ ಕುಮಾರ್ ಆಗಿದ್ದವರು ವಿಷ್ಣುವರ್ಧನ್ ಆದ ಕಥೆ!
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಮೂಲ ಹೆಸರು ಸಂಪತ್ ಕುಮಾರ್. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಅವರ ಸಿನಿಪಯಣದಲ್ಲಿ 220ಕ್ಕೂ ಅಧಿಕ ಚಿತ್ರಗಳು ಸೇರಿವೆ. 1972ರಲ್ಲಿ ಬಿಡುಗಡೆಯಾದ ಎಸ್.ಎಲ್. ಭೈರಪ್ಪ ಅವರ ಕಾದಂಬರಿ ಆಧಾರಿತ 'ವಂಶವೃಕ್ಷ' ಸಿನಿಮಾದಲ್ಲಿ ಸಣ್ಣ ಪಾತ್ರದ ಮೂಲಕ ಚಿತ್ರರಂಗಕ್ಕೆ ಪರಿಚಿತರಾದರು. ಆದರೆ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿದ್ದು ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು'. ಈ ಚಿತ್ರದ ಮೂಲಕ ರಾಮಾಚಾರಿ ಪಾತ್ರದಲ್ಲಿ ಮಿಂಚಿದ ವಿಷ್ಣುವರ್ಧನ್ ಕನ್ನಡಿಗರ ಮನೆಮಾತಾದರು. ಅಲ್ಲಿಂದ ಮುಂದೆ ಅವರ ಯಶಸ್ಸಿನ ಪಯಣಕ್ಕೆ ಹೊಸ ವೇಗ ಸಿಕ್ಕಿತು. ಅವರ ಸಾಧನೆಗೆ 'ಭಾರತೀಯ ಚಿತ್ರರಂಗದ ಫೀನಿಕ್ಸ್' ಎಂಬ ಬಿರುದೂ ಒಲಿದುಬಂದಿದೆ.
ಬ್ರೂಸ್ ಲೀ ಯುಗದಲ್ಲೂ ಮಾರ್ಷಿಯಲ್ ಆರ್ಟ್ಸ್ನಲ್ಲಿ ಪರಿಣತಿ!
ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡುವಾಗ ಕೇವಲ ನಟನೆಯನ್ನಷ್ಟೇ ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಮಾರ್ಷಿಯಲ್ ಆರ್ಟ್ಸ್ನಲ್ಲೂ ವಿಶೇಷ ಆಸಕ್ತಿ ಮತ್ತು ಪರಿಣತಿ ಇತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ತಮ್ಮ ಕಾಲ ಬ್ರೂಸ್ ಲೀ ಅವರ ಯುಗವಾಗಿತ್ತು ಎಂದು ಹೇಳಿಕೊಂಡಿದ್ದರು. ತಮ್ಮ ತಲೆಮಾರಿನಲ್ಲಿ ತಾವು ಮತ್ತು ಕಮಲ್ ಹಾಸನ್ ಮಾತ್ರ ಮಾರ್ಷಿಯಲ್ ಆರ್ಟ್ಸ್ನಲ್ಲಿ ಪರಿಣತಿ ಹೊಂದಿದ್ದೆವು ಎಂಬ ವಿಚಾರವನ್ನೂ ಹಂಚಿಕೊಂಡಿದ್ದರು. ಹೀಗಾಗಿಯೇ ಅವರ ಹಲವು ಸಿನಿಮಾಗಳಲ್ಲಿನ ಸಾಹಸ ದೃಶ್ಯಗಳು ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡುತ್ತಿದ್ದವು.
ಏಷ್ಯಾದಲ್ಲೇ ವಿಶೇಷ ದಾಖಲೆ ಹೊಂದಿರುವ ವಿಷ್ಣುವರ್ಧನ್ ರಸ್ತೆ!
ವಿಷ್ಣುವರ್ಧನ್ ಅವರ ಜನಪ್ರಿಯತೆ ಎಷ್ಟಿತ್ತು ಎಂಬುದಕ್ಕೆ ಬೆಂಗಳೂರಿನಲ್ಲಿರುವ ಅವರ ಹೆಸರಿನ ರಸ್ತೆಯೇ ಸಾಕ್ಷಿ. ಬನಶಂಕರಿ ದೇವಾಲಯದಿಂದ ಕೆಂಗೇರಿವರೆಗಿನ ಸುಮಾರು 14.5 ಕಿಲೋಮೀಟರ್ ಉದ್ದದ ರಸ್ತೆಗೆ ವಿಷ್ಣುವರ್ಧನ್ ರಸ್ತೆ ಎಂದು ಹೆಸರಿಡಲಾಗಿದೆ. ವಿಶೇಷವೆಂದರೆ, ಇದು ಏಷ್ಯಾದಲ್ಲಿಯೇ ಒಬ್ಬ ಸಿನಿಮಾ ನಟನ ಹೆಸರಿನಲ್ಲಿರುವ ಅತ್ಯಂತ ಉದ್ದದ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಟನೆಯಷ್ಟೇ ಅಲ್ಲ, ಕಥೆ ಬರೆಯುವುದರಲ್ಲೂ ಆಸಕ್ತಿ!
ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ವಿಷ್ಣುವರ್ಧನ್ ಕೇವಲ ಅದ್ಭುತ ನಟ ಮಾತ್ರವಲ್ಲ, ಕಥೆ ರಚನೆಯಲ್ಲೂ ಆಸಕ್ತಿ ಹೊಂದಿದ್ದರು. ಖ್ಯಾತ ನಿರ್ದೇಶಕ ಫಣಿ ರಾಮಚಂದ್ರ ಅವರ ನಿರ್ದೇಶನದ 'ಗಣೇಶ ಐ ಲವ್ ಯೂ' ಸಿನಿಮಾಗೆ ವಿಷ್ಣುವರ್ಧನ್ ಕಥೆ ಬರೆದಿದ್ದರು ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ.
ಹೀಗೆ ನಟನೆಯಿಂದ ಹಿಡಿದು ಸಾಹಸ ಕಲೆ, ಕಥೆ ರಚನೆ ಮತ್ತು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯವರೆಗೆ ವಿಷ್ಣುವರ್ಧನ್ ಅವರ ಸಾಧನೆಯ ಪಟ್ಟಿ ದೊಡ್ಡದು. ಅವರ ಜನ್ಮದಿನದಂದು ಈ ಅಪರೂಪದ ಸಂಗತಿಗಳನ್ನು ನೆನಪಿಸಿಕೊಳ್ಳುವುದು ಅಭಿಮಾನಿಗಳಿಗೆ ಮತ್ತೊಂದು ಸಂಭ್ರಮ. ಕಾಲ ಬದಲಾದರೂ ಸಾಹಸ ಸಿಂಹನ ಖದರ್ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ವಿಷ್ಣುವರ್ಧನ್ ಹೆಸರು ಸದಾ ಚಿರಸ್ಥಾಯಿಯಾಗಿರುತ್ತದೆ.















