ನಿವೇದಿತಾ ಜೈನ್ ಅವರ ಸಾವಿನ ಸುತ್ತ ಇಂದಿಗೂ ಸಂದೇಹ ಮತ್ತು ನೋವು ಎರಡೂ ಉಳಿದಿವೆ. ಕೇರಳ ಜ್ಯೋತಿಷಿಯ ಮಾತುಗಳನ್ನು ಅಂದು ಅವರ ಕುಟುಂಬ ಗಂಭಿರವಾಗಿ ತೆಗೆದುಕೊಳ್ಳಬೇಕಿತ್ತೇ? ಆದರೆ, ಈಗ ಆ ಪ್ರಶ್ನೆಗಳಿಗೆ ಉತ್ತರ ಹುಡುಕುವುದರಿಂದ ಕಳೆದುಹೋದ ಜೀವ ಮರಳಿ ಬರುವುದಿಲ್ಲ. ಚಿತ್ರರಂಗದಲ್ಲಿ ಮಿಂಚುತ್ತಿದ್ದ ಆ ಸುಂದರ ಪ್ರತಿಭೆ ಇಂದು ನೆನಪು ಮಾತ್ರ!
ನಿವೇದಿತಾ ಜೈನ್ ಸಾವಿನ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದರಾ ಜ್ಯೋತಿಷಿ? ಅಂದು ತಾಯಿ-ಮಗಳ ಮನಸ್ಸಿನಲ್ಲಿ ಮೂಡಿದ್ದ ಆತಂಕವೇನು?
ಸ್ಯಾಂಡಲ್ವುಡ್ನಲ್ಲಿ ತಮ್ಮ ಅಪೂರ್ವ ಸೌಂದರ್ಯ, ಆಕರ್ಷಕ ವ್ಯಕ್ತಿತ್ವ ಮತ್ತು ಮಾಡೆಲಿಂಗ್ ಮೂಲಕವೇ ಅಪಾರ ಜನಪ್ರಿಯತೆ ಗಳಿಸಿದ್ದ ನಟಿ ನಿವೇದಿತಾ ಜೈನ್ (Nivedita Jain) ಅವರನ್ನು ಕನ್ನಡ ಸಿನಿಪ್ರೇಕ್ಷಕರು ಇಂದಿಗೂ ಮರೆತಿಲ್ಲ. ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕಿದ್ದ ಈ ಸುಂದರ ನಟಿ ಕೇವಲ 19ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ನೋವು ಮೂಡಿಸುತ್ತದೆ. ಅವರ ಸಾವು ಅಂದಿನಿಂದ ಇಂದಿನವರೆಗೂ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಇದು ಕೇವಲ ಅಪಘಾತವೇ ಅಥವಾ ಇದರ ಹಿಂದೆ ಬೇರೇನಾದರೂ ಕಾರಣವಿತ್ತೇ ಎಂಬ ಪ್ರಶ್ನೆಗಳೂ ಆಗಾಗ ಮುನ್ನೆಲೆಗೆ ಬರುತ್ತವೆ. ಆದರೆ ಪೊಲೀಸ್ ತನಿಖೆಯ ವರದಿಯಲ್ಲಿ ಇದನ್ನು ಆಕಸ್ಮಿಕ ಸಾವು ಎಂದೇ ಉಲ್ಲೇಖಿಸಲಾಗಿದೆ.
ನಿವೇದಿತಾ ಜೈನ್ ಸಾವಿನ ಬಗ್ಗೆ ಜ್ಯೋತಿಷಿಯೊಬ್ಬರು ಮೊದಲೇ ಭವಿಷ್ಯ ನುಡಿದಿದ್ದರು!
ಇವೆಲ್ಲದರ ನಡುವೆ ನಿವೇದಿತಾ ಜೈನ್ ಅವರ ಸಾವಿನ ಬಗ್ಗೆ ಜ್ಯೋತಿಷಿಯೊಬ್ಬರು ಮೊದಲೇ ಭವಿಷ್ಯ ನುಡಿದಿದ್ದರು ಎಂಬ ವಿಚಾರ ಈಗಲೂ ಕುತೂಹಲ ಮೂಡಿಸುತ್ತದೆ. ಈ ಘಟನೆ ನಡೆದಿದ್ದು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ನಿವೇದಿತಾ ತಮ್ಮ ಕುಟುಂಬದವರೊಂದಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎನ್ನಲಾಗಿದೆ. ಆಗ ಕೇರಳದ ಮಾಂತ್ರಿಕ ಜ್ಯೋತಿಷಿಯೊಬ್ಬರು ನಿವೇದಿತಾ ಅವರನ್ನು ನೋಡಿದ ತಕ್ಷಣ ಅವರ ಭವಿಷ್ಯದ ಬಗ್ಗೆ ಆಘಾತಕಾರಿ ಮಾತುಗಳನ್ನು ಹೇಳಿದ್ದರಂತೆ.
ನಿವೇದಿತಾ ಅವರಿಗೆ ಅಲ್ಪಾಯುಷ್ಯವಿದೆ, ಹಣೆಯ ಭಾಗಕ್ಕೆ ಗಂಭೀರ ಗಾಯವಾಗಿ ಸಾವು ಸಂಭವಿಸಬಹುದು ಎಂದು ಕುಟುಂಬದವರ ಎದುರಲ್ಲೇ ಹೇಳಿದ್ದರಂತೆ. ಅಷ್ಟೇ ಅಲ್ಲದೆ, ಅವರ ಮನೆಯ ಕೋಣೆಗಳ ಬಗ್ಗೆಯೂ ಕೆಲವು ವಿಚಾರಗಳನ್ನು ತಿಳಿಸಿ, ಆದಷ್ಟು ಬೇಗ ಮನೆ ಬದಲಾಯಿಸುವಂತೆ ಸಲಹೆ ನೀಡಿದ್ದರಂತೆ. ಈ ಮಾತುಗಳನ್ನು ಕೇಳಿದ ಕುಟುಂಬದವರು ಒಂದು ಕ್ಷಣ ದಂಗಾಗಿದ್ದರು ಎನ್ನಲಾಗಿದೆ.
ನಿವೇದಿತಾ ಜೈನ್ ತಾಯಿ ಪ್ರಿಯಾ ಜೈನ್ ಈ ಹಿಂದೆ ಅ ಬಗ್ಗೆ ಮಾತನಾಡಿದ್ದರು
ಈ ಘಟನೆ ಕುರಿತು ನಿವೇದಿತಾ ಅವರ ತಾಯಿ ಪ್ರಿಯಾ ಜೈನ್ ಕೂಡ ಈ ಹಿಂದೆ ಮಾತನಾಡಿದ್ದರು. 'ಜ್ಯೋತಿಷಿ ಹೇಳಿದ ಮಾತುಗಳು ನಿಜ. ಆ ಸಂದರ್ಭದಲ್ಲಿ ನಿವೇದಿತಾ ತುಂಬಾ ಭಾವುಕರಾಗಿ ಅತ್ತಿದ್ದಳು. ಆದರೆ ನಂತರ ತಾನೇ ಧೈರ್ಯ ತಂದುಕೊಂಡು, ಇಂತಹದ್ದೇನೂ ಆಗುವುದಿಲ್ಲ ಎಂದು ಸಮಾಧಾನ ಮಾಡಿಕೊಂಡಿದ್ದಳು' ಎಂದು ಅವರು ಹೇಳಿಕೊಂಡಿದ್ದಾರೆ. 'ಒಂದು ವೇಳೆ ವಿಧಿಯಲ್ಲಿ ಹಾಗೇ ಬರೆದಿದ್ದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂಬ ರೀತಿಯಲ್ಲಿ ನಿವೇದಿತಾ ಮಾತನಾಡಿದ್ದಳಂತೆ. ಮಗಳು ಧೈರ್ಯ ಮಾಡಿಕೊಂಡಿರುವಾಗ ನಾವೇಕೆ ಆತಂಕಪಡಬೇಕು ಎಂದು ಕುಟುಂಬದವರೂ ಆ ವಿಚಾರವನ್ನು ಮತ್ತೆ ಕೆದಕದೆ ಸುಮ್ಮನಾಗಿದ್ದರಂತೆ.
ಇನ್ನು ನಿವೇದಿತಾ ಅವರ ಸಿನಿಪಯಣ ಕೂಡ ಅಚ್ಚರಿಯ ಸಂಗತಿಗಳಿಂದ ಕೂಡಿತ್ತು. ಕೇವಲ 16ನೇ ವಯಸ್ಸಿನಲ್ಲೇ ಮಿಸ್ ಬೆಂಗಳೂರು ಕಿರೀಟ ಗೆದ್ದಿದ್ದ ಅವರು, ಅತಿ ಕಡಿಮೆ ಸಮಯದಲ್ಲಿ ಜನಪ್ರಿಯ ಮಾಡೆಲ್ ಆಗಿ ಗುರುತಿಸಿಕೊಂಡಿದ್ದರು. ಅವರ ಸೌಂದರ್ಯ ಮತ್ತು ವ್ಯಕ್ತಿತ್ವಕ್ಕೆ ಚಿತ್ರರಂಗದಿಂದಲೂ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಸಾವಿಗೂ ಮುನ್ನ ಸುಮಾರು 12 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ನಿವೇದಿತಾ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದರು. ಬಾಲಿವುಡ್ನಿಂದಲೂ ಸಿನಿಮಾ ಆಫರ್ ಬಂದಿತ್ತು ಎನ್ನಲಾಗಿದೆ.
ಆದರೆ, ಅವರು ನಟಿಸಿದ್ದ ಚಿತ್ರಗಳು ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸದ ಹಿನ್ನೆಲೆಯಲ್ಲಿ ಮತ್ತೆ ಮಾಡೆಲಿಂಗ್ ಕ್ಷೇತ್ರದತ್ತ ಹೆಚ್ಚಿನ ಆಸಕ್ತಿ ತೋರಿಸಿದ್ದರು. ಇನ್ನೂ ಸಾಕಷ್ಟು ಸಾಧನೆ ಮಾಡಬೇಕಿದ್ದ ಸಮಯದಲ್ಲೇ ಅವರ ಬದುಕು ದುರಂತ ಅಂತ್ಯ ಕಂಡಿತು.
ನಿವೇದಿತಾ ಜೈನ್ ಅವರ ಸಾವಿನ ಸುತ್ತ ಇಂದಿಗೂ ಕುತೂಹಲ ಮತ್ತು ನೋವು ಎರಡೂ ಉಳಿದಿವೆ. ಜ್ಯೋತಿಷಿಯ ಮಾತುಗಳು ಕೇವಲ ಕಾಕತಾಳೀಯವಾಗಿದ್ದವೇ ಅಥವಾ ಅದರಲ್ಲಿ ಯಾವುದಾದರೂ ಅರ್ಥವಿತ್ತೇ ಎಂಬ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಈಗ ಆ ಪ್ರಶ್ನೆಗಳಿಗೆ ಉತ್ತರ ಹುಡುಕುವುದರಿಂದ ಕಳೆದುಹೋದ ಜೀವ ಮರಳಿ ಬರುವುದಿಲ್ಲ. ಅಂದು ಚಿತ್ರರಂಗದಲ್ಲಿ ಮಿಂಚುತ್ತಿದ್ದ ಆ ಸುಂದರ ಪ್ರತಿಭೆ ಇಂದು ನೆನಪುಗಳಲ್ಲಿ ಮಾತ್ರ ಉಳಿದಿದ್ದಾರೆ. ಅವರ ಸೌಂದರ್ಯ, ಆತ್ಮವಿಶ್ವಾಸ ಮತ್ತು ಅಕಾಲಿಕ ನಿರ್ಗಮನವನ್ನು ನೆನಪಿಸಿಕೊಳ್ಳುವ ಅಭಿಮಾನಿಗಳಿಗೆ ನಿವೇದಿತಾ ಜೈನ್ ಎಂದಿಗೂ ಮರೆಯಲಾಗದ ಹೆಸರು.















