ಕನ್ನಡ ಚಿತ್ರರಂಗದ ನಟ ಕೋಮಲ್ ಕುಮಾರ್ ಅವರ ವ್ಯಕ್ತಿತ್ವ, ಗುಣವನ್ನು ನಿರ್ದೇಶಕ, ನಿರ್ಮಾಪಕ ಹಾಗೂ ಲೇಖಕ ಯೋಗೇಶ್ ಹುಣಸೂರು ಮನಬಿಚ್ಚಿ ಹಂಚಿಕೊಂಡಿದ್ದಾರೆ. ಸಂದರ್ಶನ ಒಂದರಲ್ಲಿ ಕೋಮಲ್ ಅವರೊಂದಿಗಿನ ಒಡನಾಟದ ದಿನವನ್ನು ನೆನಪಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ನಟ ಕೋಮಲ್ ಕುಮಾರ್ ಅವರ ವ್ಯಕ್ತಿತ್ವ, ಗುಣವನ್ನು ನಿರ್ದೇಶಕ, ನಿರ್ಮಾಪಕ ಹಾಗೂ ಲೇಖಕ ಯೋಗೇಶ್ ಹುಣಸೂರು ಮನಬಿಚ್ಚಿ ಹಂಚಿಕೊಂಡಿದ್ದಾರೆ. ಸಂದರ್ಶನ ಒಂದರಲ್ಲಿ ಕೋಮಲ್ ಅವರೊಂದಿಗಿನ ಒಡನಾಟದ ದಿನವನ್ನು ನೆನಪಿಸಿಕೊಂಡಿದ್ದಾರೆ. ಕೆಲಸವಿಲ್ಲದೆ, ಕೈಯಲ್ಲಿ ಹಣವಿಲ್ಲದೆ ಕಷ್ಟದಲ್ಲಿದ್ದ ಸಂದರ್ಭದಲ್ಲಿ ಕೋಮಲ್ ನೀಡಿದ ಆರ್ಥಿಕ ನೆರವು, ತಮ್ಮ ಮೊದಲ ನಿರ್ದೇಶನದ ಅವಕಾಶಕ್ಕೆ ನೀಡಿದ ₹5,000 ಮುಂಗಡ ಹಾಗೂ ಧಾರಾವಾಹಿ ನಿರ್ಮಾಣಕ್ಕಾಗಿ ಬರೋಬ್ಬರಿ ₹27 ಲಕ್ಷ ನೀಡಿದ್ದ ಘಟನೆಗಳನ್ನು ವಿವರಿಸಿದ್ದಾರೆ.
₹5 ಸಾವಿರ ಅಡ್ವಾನ್ಸ್ ಕೊಟ್ಟು ನಿರ್ದೇಶನದ ಅವಕಾಶ ನೀಡಿದ್ದ ಕೋಮಲ್
ಯೋಗೇಶ್ ಹುಣಸೂರು ಅವರು ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ 'ಬೇಡ ಕೃಷ್ಣ ರಂಗಿನಾಟ' ಚಿತ್ರದ ಚಿತ್ರೀಕರಣದ ವೇಳೆ ಒಂದು ಘಟನೆ ನಡೆದಿತ್ತು. ಚಿತ್ರದಲ್ಲಿ ನಾಯಕಿ ಬಂದು ನಾಯಕನಿಗಾಗಿ ಕಾಯುವ ದೃಶ್ಯದಲ್ಲಿ ಗುಲಾಬಿ ಹೂವು ಫ್ರೇಮ್ನಲ್ಲಿ ಕಾಣಿಸಬೇಕು ಎಂಬ ಕಾರಣಕ್ಕೆ ಸುಮಾರು ಮೂರು ಗಂಟೆಗಳ ಕಾಲ ಚಿತ್ರತಂಡ ಸಮಯ ತೆಗೆದುಕೊಳ್ಳುತ್ತಿತ್ತು. ಹೂವನ್ನು ಹೇಗೆ ಇಡಬೇಕು, ಯಾವ ಕೋನದಲ್ಲಿ ಚಿತ್ರೀಕರಿಸಬೇಕು ಎಂಬುದರಲ್ಲೇ ಸಮಯ ಕಳೆಯುತ್ತಿತ್ತು.
ಇದನ್ನು ಗಮನಿಸಿದ ಯೋಗೇಶ್, ಒಂದು ಹೂವಿಗಾಗಿ ಇಷ್ಟೊಂದು ಸಮಯ ವ್ಯರ್ಥ ಮಾಡುವುದು ಸರಿಯಲ್ಲ ಎಂದು ನೇರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರ ಮಾತು ಕೇಳಿ ಸೆಟ್ನಲ್ಲಿದ್ದವರೆಲ್ಲ ನಕ್ಕಿದ್ದರು. ಕೊನೆಗೆ ಆ ಹೂವಿಲ್ಲದಿದ್ದರೂ ದೃಶ್ಯ ಮಾಡಬಹುದು ಎಂದು ನಿರ್ದೇಶಕರು ಒಪ್ಪಿಕೊಂಡಿದ್ದರು. ಆದರೆ ಈ ಘಟನೆ ನಡೆದ ಮರುದಿನವೇ ಯೋಗೇಶ್ ಅವರಿಗೆ ಅಚ್ಚರಿಯೊಂದು ಕಾದಿತ್ತು. ಶೂಟಿಂಗ್ ಸ್ಥಳಕ್ಕೆ ಬಂದ ತಕ್ಷಣ ತಮ್ಮನ್ನು ಭೇಟಿಯಾಗುವಂತೆ ಕೋಮಲ್ ಹೇಳಿ ಕಳುಹಿಸಿದ್ದರು. ಭೇಟಿಯಾದಾಗ ₹5,000 ನೀಡಿ, "ಬಾಸ್ ತಗೊಳ್ಳಿ, ನಿಮ್ಮ ಮುಂದಿನ ಸಿನಿಮಾವನ್ನು ನೀವೇ ನಿರ್ದೇಶನ ಮಾಡಿ. ಇದು ಅಡ್ವಾನ್ಸ್" ಎಂದು ಹೇಳಿದ್ದರು. ಕೋಮಲ್ ಅವರ ಈ ನಡೆ ಯೋಗೇಶ್ ಅವರಿಗೆ ಅಚ್ಚರಿ ಮೂಡಿಸಿತ್ತು.
ಕೆಲಸವಿಲ್ಲದಿದ್ದಾಗ ಊಟ, ತಿಂಡಿ ಕೊಟ್ಟು ನೋಡಿಕೊಂಡಿದ್ದ ಕೋಮಲ್
ಕೋಮಲ್ ಅವರನ್ನು ಕೇವಲ ನಟನಾಗಿ ಮಾತ್ರವಲ್ಲ, ತಮ್ಮ ಜೀವನದಲ್ಲಿ ಮಹತ್ವದ ಸ್ಥಾನ ಹೊಂದಿರುವ ಸ್ನೇಹಿತನಾಗಿ ಯೋಗೇಶ್ ನೆನಪಿಸಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಪ್ರತಿದಿನ ಬೆಳಗ್ಗೆ 9.30ಕ್ಕೆ ಕೋಮಲ್ ಮನೆಗೆ ಹೋಗುತ್ತಿದ್ದರಂತೆ. ಅವರ ಕುಟುಂಬದೊಂದಿಗೆ ಆತ್ಮೀಯ ಸಂಬಂಧ ಬೆಳೆದಿತ್ತು. ಕೋಮಲ್ ಅವರ ಪತ್ನಿ, ಮಕ್ಕಳು ಎಲ್ಲರೂ ಯೋಗೇಶ್ ಅವರನ್ನು ಮನೆಯವರಂತೆಯೇ ನೋಡಿಕೊಳ್ಳುತ್ತಿದ್ದರು.
ಕೆಲವೊಮ್ಮೆ ಮನೆಯಲ್ಲಿ ಊಟ ಮಾಡಿಸುತ್ತಿದ್ದರು. ಇನ್ನು ಕೆಲವೊಮ್ಮೆ ಮಲ್ಲೇಶ್ವರಂ ರೈಲ್ವೆ ನಿಲ್ದಾಣದ ಬಳಿಯ ರಾಘವೇಂದ್ರ ಟಿಫನ್ಗೆ ಕರೆದುಕೊಂಡು ಹೋಗಿ ಇಡ್ಲಿ ತಿನ್ನಿಸುತ್ತಿದ್ದರು. ಕೋಮಲ್ ಅವರ ಅಣ್ಣ ಜಗ್ಗೇಶ್ ಮನೆಗೂ ಕರೆದುಕೊಂಡು ಹೋಗಿ ಊಟ ಮಾಡಿಸುತ್ತಿದ್ದರಂತೆ. ಕೆಲಸವಿಲ್ಲದೆ, ಕೈಯಲ್ಲಿ ಹಣವಿಲ್ಲದೆ ಇದ್ದ ದಿನಗಳಲ್ಲಿ ಕೋಮಲ್ ಅವರ ಮನೆಯಲ್ಲಿ ಊಟ, ತಿಂಡಿ ಮಾಡಿ ದಿನ ಕಳೆಯುತ್ತಿದ್ದೆ. ಹೀಗಾಗಿಯೇ ಅವರನ್ನು 'ಅನ್ನದಾತ' ಎಂದು ಕರೆಯುತ್ತೇನೆ ಎಂದು ಯೋಗೇಶ್ ಭಾವುಕರಾಗಿ ಹೇಳಿದ್ದಾರೆ.
ಧಾರಾವಾಹಿಗಾಗಿ ₹27 ಲಕ್ಷ ನೀಡಿದ್ದ ಕೋಮಲ್
ಯೋಗೇಶ್ ಅವರ ಜೀವನದಲ್ಲಿ ಕೋಮಲ್ ಮಾಡಿದ ಸಹಾಯದ ಅತ್ಯಂತ ಮಹತ್ವದ ಘಟನೆ ಧಾರಾವಾಹಿ ನಿರ್ಮಾಣದ ಸಂದರ್ಭದ್ದು. ಒಂದು ದಿನ ನಿರ್ದೇಶಕ ಜಯಂತ್ ಕಾಯ್ಕಿಣಿ ಅವರು ಯೋಗೇಶ್ ಅವರನ್ನು ಕರೆಸಿ ಮದುವೆ ಪರಿಕಲ್ಪನೆಯ ಸುತ್ತ ಒಂದು ಕಥೆ ಹೇಳುವಂತೆ ಕೇಳಿದ್ದರು. ಯೋಗೇಶ್ ಹೇಳಿದ ಒಂದು ಸಾಲಿನ ಕಥೆ ಅವರಿಗೆ ಇಷ್ಟವಾಗಿ ಧಾರಾವಾಹಿ ಮಾಡುವಂತೆ ಸೂಚಿಸಿದ್ದರು. ಕೈಯಲ್ಲಿ ಹಣವಿಲ್ಲದಿದ್ದರೂ ಧೈರ್ಯದಿಂದ ಧಾರಾವಾಹಿಯ ಮುಹೂರ್ತ ಮಾಡಿದ್ದ ಯೋಗೇಶ್, ಈ ವಿಷಯವನ್ನು ಕೋಮಲ್ ಅವರಿಗೆ ತಿಳಿಸಿದ್ದರು. ಆಗ ಕೋಮಲ್ ಕೂಡ ಧಾರಾವಾಹಿ ಆರಂಭಿಸುವಂತೆ ಪ್ರೋತ್ಸಾಹಿಸಿದ್ದರು.
ಆದರೆ ಚಾನೆಲ್ನಿಂದ ಹಣ ಬರಲು ಮೂರು ತಿಂಗಳು ಬೇಕಾಗಿತ್ತು. ಈ ಅವಧಿಯಲ್ಲಿ ಚಿತ್ರೀಕರಣ ನಿಲ್ಲದಂತೆ ಕೋಮಲ್ ತಮ್ಮ ಸ್ವಂತ ಹಣದಿಂದ ನೆರವು ನೀಡಿದ್ದರು. ಧಾರಾವಾಹಿ ಆರಂಭವಾದ ಮೊದಲ ದಿನದಿಂದಲೂ ಹಣದ ಅಗತ್ಯ ಬಂದಾಗಲೆಲ್ಲ ಕೋಮಲ್ ಸಹಾಯ ಮಾಡುತ್ತಿದ್ದರು. ಹೀಗೆ ಒಟ್ಟು ₹27 ಲಕ್ಷ ನೀಡಿದ್ದರು. ಧಾರಾವಾಹಿ ಸುಮಾರು 100ರಿಂದ 102 ಎಪಿಸೋಡ್ಗಳವರೆಗೆ ಪ್ರಸಾರವಾಗಿತ್ತು. ಕೊನೆಗೆ ಲಾಭವೂ ಬಂದಿತ್ತು. ಕೋಮಲ್ ನೀಡಿದ್ದ ₹27 ಲಕ್ಷವನ್ನು ಹಿಂದಿರುಗಿಸುವುದರ ಜೊತೆಗೆ ಹೆಚ್ಚುವರಿಯಾಗಿ ₹9 ಲಕ್ಷವನ್ನೂ ಯೋಗೇಶ್ ನೀಡಿದ್ದರು. ತಮ್ಮ ಪಾಲಿಗೆ ಸುಮಾರು ₹30 ಲಕ್ಷ ಲಾಭ ಉಳಿದಿತ್ತು ಎಂದು ಅವರು ವಿವರಿಸಿದ್ದಾರೆ.
ಈ ಘಟನೆಯನ್ನು ನೆನಪಿಸಿಕೊಂಡ ಯೋಗೇಶ್, "ಕೋಮಲ್ ಅವರನ್ನು ನಾನು ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ಒಳ್ಳೆಯ ಮನಸ್ಸಿನ ವ್ಯಕ್ತಿ ಅವರು. ನನ್ನ ಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತವರು" ಎಂದು ಭಾವುಕರಾಗಿದ್ದಾರೆ.
ಕೋಮಲ್ ಅವರನ್ನು ಸ್ಟಾರ್ ಆಗಲು ಪ್ರೋತ್ಸಾಹಿಸಿದ್ದ ಯೋಗೇಶ್
ಕೋಮಲ್ ಅವರು ಜಗ್ಗೇಶ್ ಅವರ ತಮ್ಮ ಎಂಬ ಗುರುತಿಗಿಂತ ಒಬ್ಬ ಪ್ರತಿಭಾವಂತ ಕಲಾವಿದರಾಗಿ ಗುರುತಿಸಿಕೊಳ್ಳಬೇಕು ಎಂಬುದು ಯೋಗೇಶ್ ಅವರ ಅಭಿಪ್ರಾಯ. ಕೋಮಲ್ ಅವರಲ್ಲಿ ಪ್ರತಿಭೆ ಇದ್ದರೂ, ಆರಂಭದಲ್ಲಿ ಅವರು ಹೆಚ್ಚು ಮುಜುಗರದ ಸ್ವಭಾವ ಹೊಂದಿದ್ದರು. ಇತರ ನಿರ್ದೇಶಕರೊಂದಿಗೆ ಬೆರೆಯಲು ಹಿಂಜರಿಯುತ್ತಿದ್ದರು.
ಹೀಗಾಗಿ ಹಲವು ಬಾರಿ ಯೋಗೇಶ್ ಅವರೇ ಕೋಮಲ್ ಅವರನ್ನು ನಿರ್ದೇಶಕರ ಬಳಿ ಕರೆದುಕೊಂಡು ಹೋಗಿ ಮಾತನಾಡುವಂತೆ ಪ್ರೋತ್ಸಾಹಿಸುತ್ತಿದ್ದರಂತೆ. ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಬೇಕು, ತಮ್ಮ ಪ್ರತಿಭೆಯನ್ನು ತೋರಿಸಬೇಕು ಎಂದು ಸಲಹೆ ನೀಡುತ್ತಿದ್ದರಂತೆ.













