ನೃತ್ಯ ಸಂಯೋಜಕಿ ವೈಭವಿ ಮರ್ಚೆಂಟ್, ‘ಕಲಾವಿದೆಯೊಬ್ಬಳು ವೇದಿಕೆ ಏರುವ ಮುನ್ನ ಎದುರಿಸುವ ಭಾವನೆಗಳು ಮತ್ತು ಹೋರಾಟಗಳ ಆಧಾರದ ಮೇಲೆ ಈ ಹಾಡನ್ನು ವಿನ್ಯಾಸಗೊಳಿಸಲಾಗಿದೆ’ ಎಂದಿದ್ದಾರೆ. ಗಾಯಕಿ ಶ್ರೇಯಾ ಘೋಷಾಲ್, ‘ಈ ಹಾಡು ಸಂಗೀತದ ಮೂಲಕ ಲಾವಣಿಯ ಶಕ್ತಿಯನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿತು’ ಎಂದು ಹೇಳಿದ್ದಾರೆ.

‘ಈತಾ’ ಸಿನಿಮಾದ 'ಜಿ ಜಿ ರೇ ಜಿ' ಹಾಡಿನಲ್ಲಿ ಲಾವಣಿ ಹೆಜ್ಜೆ ಹಾಕಿದ ಶ್ರದ್ಧಾ ಕಪೂರ್

ನಟಿ ಶ್ರದ್ಧಾ ಕಪೂರ್ (Shraddha Kapoor) ತಮ್ಮ ಮುಂಬರುವ 'ಈತಾ' ಚಿತ್ರದ ಮೊದಲ ಹಾಡು 'ಜಿ ಜಿ ರೇ ಜಿ' ಮೂಲಕ ಸಾಂಪ್ರದಾಯಿಕ ಲಾವಣಿ ನೃತ್ಯ ಜಗತ್ತಿಗೆ ಕಾಲಿಟ್ಟಿದ್ದಾರೆ. ಮ್ಯಾಡಾಕ್ ಫಿಲ್ಮ್ಸ್ ಮತ್ತು ಕತ್‌ಪುಟ್ಲಿ ಕ್ರಿಯೇಷನ್ಸ್ ನಿರ್ಮಿಸಿರುವ ಈ ಹಾಡು ಶ್ರದ್ಧಾ ಅವರನ್ನು ಈತಾ ಆಗಿ ಪರಿಚಯಿಸುತ್ತದೆ. ನೌವಾರಿ ಸೀರೆ, ಆಭರಣ ಮತ್ತು ಗೆಜ್ಜೆ ಧರಿಸಿರುವ ಶ್ರದ್ಧಾ, ಸಾಂಪ್ರದಾಯಿಕ ಲಾವಣಿ ಹೆಜ್ಜೆಗಳನ್ನು ಹಾಕಿದ್ದಾರೆ.

ವೈಭವಿ ಮರ್ಚೆಂಟ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಸಾಂಪ್ರದಾಯಿಕ ನೃತ್ಯದ ಲಯ ಮತ್ತು ಭಾವಾಭಿವ್ಯಕ್ತಿ ಈ ಹಾಡಿನಲ್ಲಿ ಎದ್ದು ಕಾಣುತ್ತದೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಜೋಡಿ ಅಜಯ್-ಅತುಲ್ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಅಮಿತಾಭ್ ಭಟ್ಟಾಚಾರ್ಯ ಅವರ ಸಾಹಿತ್ಯ ಮತ್ತು ಶ್ರೇಯಾ ಘೋಷಾಲ್ ಅವರ ಧ್ವನಿ ಈ ಹಾಡಿಗಿದೆ. ವೇದಿಕೆ ಮೇಲಿನ ಪ್ರದರ್ಶನವನ್ನು ಮೀರಿ, ಒಬ್ಬ ಕಲಾವಿದೆಯ ಶಕ್ತಿ, ಚೈತನ್ಯ ಮತ್ತು ಮಹತ್ವಾಕಾಂಕ್ಷೆಯನ್ನು ಈ ಹಾಡು ಕಟ್ಟಿಕೊಡುತ್ತದೆ ಎಂದು ಚಿತ್ರತಂಡ ಹೇಳಿದೆ.

ಸಂಗೀತ ಸಂಯೋಜನೆ ಬಗ್ಗೆ ಮಾತನಾಡಿದ ಅಜಯ್-ಅತುಲ್, ಕೇವಲ ಕಥೆಗೆ ಹಿನ್ನೆಲೆಯಾಗುವ ಬದಲು, ಪಾತ್ರ ಮತ್ತು ಸಿನಿಮಾದ ವಾತಾವರಣವನ್ನು ಸೃಷ್ಟಿಸುವಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ. ಲಾವಣಿಯ ಮೂಲ ಸೊಗಡನ್ನು ಉಳಿಸಿಕೊಂಡು, 'ಜಿ ಜಿ ರೇ ಜಿ' ಹಾಡು ಸಿನಿಮೀಯ ರೀತಿಯಲ್ಲಿ ಮೂಡಿಬರಬೇಕು ಎನ್ನುವುದು ಅವರ ಉದ್ದೇಶವಾಗಿತ್ತು. ಭಟ್ಟಾಚಾರ್ಯ ಅವರ ಸಾಹಿತ್ಯ, ಘೋಷಾಲ್ ಅವರ ಗಾಯನ ಮತ್ತು ನೃತ್ಯದ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಶ್ರದ್ಧಾ ಹಾಕಿರುವ ಶ್ರಮವನ್ನು ಅವರು ಕೊಂಡಾಡಿದ್ದಾರೆ.

ಈ ಹಾಡಿಗೆ ನೃತ್ಯ ಮಾಡಿದ್ದು ಒಂದು ರೋಮಾಂಚಕ ಮತ್ತು ಸವಾಲಿನ ಅನುಭವವಾಗಿತ್ತು

ಶ್ರದ್ಧಾ ಕಪೂರ್ ಅವರಿಗೆ ಈ ಹಾಡಿಗೆ ನೃತ್ಯ ಮಾಡಿದ್ದು ಒಂದು ರೋಮಾಂಚಕ ಮತ್ತು ಸವಾಲಿನ ಅನುಭವವಾಗಿತ್ತು. ಈ ಹಾಡು ಈತಾಳ ಜೀವನದಲ್ಲಿ ಒಂದು ಪ್ರಮುಖ ತಿರುವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿರುವ ಶ್ರದ್ಧಾ, ಪಾತ್ರವನ್ನು ತೆರೆಯ ಮೇಲೆ ತರಲು ಹಾಕಿರುವ ಶ್ರಮವನ್ನು ಪ್ರೇಕ್ಷಕರು ಗುರುತಿಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಕಲಾವಿದೆಯೊಬ್ಬಳು ವೇದಿಕೆ ಏರುವ ಮುನ್ನ ಎದುರಿಸುವ ಭಾವನೆಗಳು ಮತ್ತು ಹೋರಾಟ

ನೃತ್ಯ ಸಂಯೋಜಕಿ ವೈಭವಿ ಮರ್ಚೆಂಟ್, ಕಲಾವಿದೆಯೊಬ್ಬಳು ವೇದಿಕೆ ಏರುವ ಮುನ್ನ ಎದುರಿಸುವ ಭಾವನೆಗಳು ಮತ್ತು ಹೋರಾಟಗಳ ಆಧಾರದ ಮೇಲೆ ಈ ಹಾಡನ್ನು ವಿನ್ಯಾಸಗೊಳಿಸಲಾಗಿದೆ ಎಂದಿದ್ದಾರೆ. ಹಾಡಿಗೆ ಧ್ವನಿಯಾಗಿರುವ ಗಾಯಕಿ ಶ್ರೇಯಾ ಘೋಷಾಲ್, ಈ ಹಾಡು ಸಂಗೀತದ ಮೂಲಕ ಲಾವಣಿಯ ಶಕ್ತಿಯನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿತು ಎಂದು ಹೇಳಿದ್ದಾರೆ. ಲಕ್ಷ್ಮಣ್ ಉತೇಕರ್ ನಿರ್ದೇಶನದ 'ಈತಾ' ಚಿತ್ರವನ್ನು ದಿನೇಶ್ ವಿಜನ್, ಲಕ್ಷ್ಮಣ್ ಉತೇಕರ್ ಮತ್ತು ಕರೀಷ್ಮಾ ಶರ್ಮಾ ನಿರ್ಮಿಸಿದ್ದಾರೆ. ಈ ಚಿತ್ರವು ಡಿಸೆಂಬರ್ 4, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 'ಜಿ ಜಿ ರೇ ಜಿ' ಹಾಡು ಈಗ ಬಿಡುಗಡೆಯಾಗಿದೆ.