ಕೇರಳದಲ್ಲಿ ಇನ್​ಫ್ಲುಯೆನ್ಸರ್ ಒಬ್ಬರ ನಕಲಿ ವಿಡಿಯೋದಿಂದ ಮನನೊಂದು ದೀಪಕ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಘಟನೆಯ ಬಗ್ಗೆ ನಟ ಮಾಸ್ಟರ್ ಆನಂದ್ ನೋವು ವ್ಯಕ್ತಪಡಿಸಿದ್ದಾರೆ.  ಒಬ್ಬರನ್ನು ತಪ್ಪಿತಸ್ಥರೆಂದು ತೀರ್ಮಾನಿಸುವುದರಿಂದ ಅಮಾಯಕರ ಜೀವ ಹೋಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ. 

'ಜನರ ಮನಸ್ಥಿತಿಯೇ ಹಾಗೆ. ನೀವೇ ಒಮ್ಮೆ ನೋಡಿಬಿಡಿ. ಯಾರಾದರೂ ಸೋಷಿಯಲ್​ ಮೀಡಿಯಾದಲ್ಲಿ ಏನಾದರೂ ವಿಡಿಯೋ ಹಾಕಿದರೆ, ಮೊದಲಿಗೆ ನಾಲ್ಕೈದು ನೆಗೆಟಿವ್​ ಕಮೆಂಟ್ಸ್​ ಬಂದರೆ ಸಾಕು, ಆ ವಿಡಿಯೋದ ಬಗ್ಗೆ ಪಾಸಿಟಿವ್​ ಕಮೆಂಟ್​ ಹಾಕಲು ಬಂದವರು ಕೂಡ ಮನಸ್ಸನ್ನು ಬದಲಿಸಿ ನೆಗೆಟಿವ್​ ಹಾಕಿ ಹೋಗ್ತಾರೆ. ಎಲ್ಲರೂ ನೆಗೆಟಿವ್​ ಬರೆದಿರುವಾಗ ನಾನು ಪಾಸಿಟಿವ್​ ಬರೆದರೆ, ನನ್ನನ್ನೇ ಹುಚ್ಚ ಎಂದುಕೊಳ್ತಾರೆ ಎಂದು ಏನೂ ಬರೆಯದೇ ಹೋಗ್ತಾರೆ, ಇಲ್ಲವೇ ನೆಗೆಟಿವ್​ ಕಮೆಂಟೇ ಹಾಕ್ತಾರೆ. ಇದು ಇಂದಿನ ಹೆಚ್ಚಿನ ಜನರ ಮನಸ್ಥಿತಿ' ಎಂದು ವಿವರಿಸುತ್ತಲೇ ನಟ ಮಾಸ್ಟರ್​ ಆನಂದ್​ ನೋವಿನಿಂದ ಒಂದು ವಿಡಿಯೋ ಮಾಡಿದ್ದಾರೆ. ಅದುವೇ ಕೇರಳದಲ್ಲಿ ಈಚೆಗೆ ನಡೆದ ದೀಪಕ್​ ಎನ್ನುವವರ ಆತ್ಮಹ*ತ್ಯೆಯ ಪ್ರಕರಣದ ಕುರಿತು ಅವರು ಮಾಡಿರುವ ವಿಡಿಯೋ ಇದು.

ಲೈಕ್​ ಗಳಿಸಲು ಕುಕೃತ್ಯ

ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಆಗಲು, ಲೈಕ್ಸ್​ ಗಳಿಸಲು ಈಚೆಗೆ ಕೇರಳದಲ್ಲಿ, ಶಿಮ್ಜಿತಾ ಮುಸ್ತಫಾ ಎಂಬಾಕೆ ಅನ್ಯಾಯವಾಗಿ ದೀಪಕ್​ ಎನ್ನುವವರ ಪ್ರಾಣವನ್ನೇ ಬಲಿ ಪಡೆದ ಘಟನೆ ಸೋಷಿಯಲ್​ ಮೀಡಿಯಾದಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋ ಎಡಿಟ್​ ಮಾಡಿ ಪೋಸ್ಟ್​ ಮಾಡಿರುವುದು ಇದಾಗಲೇ ಪೊಲೀಸ್​ ತನಿಖೆಯಿಂದ ತಿಳಿದುಬಂದಿದೆ. ಬಸ್​ನಲ್ಲಿ ಹೋಗುವಾಗ ಈ ಇನ್​ಫ್ಲುಯೆನ್ಸರ್​ ದೀಪಕ್​ ಎನ್ನುವವರು ತನ್ನ ಖಾಸಗಿ ಅಂಗ ಟಚ್​ ಮಾಡಿದಂತೆ ವಿಡಿಯೋ ಮಾಡಿ 2 ಲಕ್ಷ ವ್ಯೂವ್ಸ್​ ಪಡೆದುಕೊಂಡಿದ್ದಾಳೆ. ಇವಳು ವಿಡಿಯೋ ಹಾಕಿದಾಗ ಅದನ್ನು ಬೆಂಬಲಿಸಿ ದೀಪಕ್​ ಅವರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿರುವ ಕಾರಣ, ಮನನೊಂದ ದೀಪಕ್​ ಅವರು ಸಾವಿನ ಹಾದಿ ತುಳಿದಿದ್ದಾರೆ.

ತಪ್ಪು ಶಿಮ್ಜಿತಾ ಮುಸ್ತಫಾದ್ದೇ!

ಅವರು ಸತ್ತ ಮೇಲೆ ಈ ಪ್ರಕರಣದ ವಿಮರ್ಶೆ ನಡೆದು, ಈ ಶಿಮ್ಜಿತಾ ಮುಸ್ತಫಾದ್ದೇ ತಪ್ಪು ಎನ್ನುವುದು ತಿಳಿದಿದೆ. ಈ ವಿಷಯವಾಗಿಯೇ ಮಾತನಾಡಿದ ಮಾಸ್ಟರ್​ ಆನಂದ್​, ಒಬ್ಬರು ತಪ್ಪು ಎಂದು ಸಾಬೀತು ಮಾಡಲು ಸಾಯಲೇಬೇಕಾ ಎಂದು ಪ್ರಶ್ನಿಸಿದ್ದಾರೆ. ಸತ್ತ ಮೇಲೆ ಅನಾಲಿಸಿಸ್​ ಮಾಡಿ, ದೀಪಕ್​ ಅವರದ್ದು ತಪ್ಪಿಲ್ಲ ಎನ್ನುವುದು ತಿಳಿದಿದೆ. ಆಕೆ ವಿಕೃತವಾಗಿ ನಗುವುದು ತಿಳಿದಿದೆ. ಆದರೆ ಅವಳು ಮೊದಲೇ ಈ ವಿಡಿಯೋ ಪೋಸ್ಟ್​ ಮಾಡಿದಾಗ, ಇದರ ಬಗ್ಗೆ ಅಲ್ಲಿಯವರು, ಆಕೆಯ ಫಾಲೋವರ್ಸ್​ ಯಾರೂ ಯಾಕೆ ದನಿ ಎತ್ತಲಿಲ್ಲ ಎನ್ನುವುದು ಆನಂದ್​ ಅವರ ಪ್ರಶ್ನೆ. ಅವಳು ವಿಡಿಯೋ ಹಾಕಿದಾಗ, ದೀಪಕ್​ ಅವರದ್ದೇ ತಪ್ಪು ಎನ್ನುವಂತೆ ಬಿಂಬಿಸಲಾಯಿತು. ಆಗಲೇ ಪರಾಮರ್ಶೆ ಮಾಡಿದ್ದರೆ, ಅಮಾಯಕನ ಜೀವ ಕಾಪಾಡಬಹುದಿತ್ತು. ಆದರೆ ಒಬ್ಬ ನಿರಪರಾಧಿ ಎಂದು ಪ್ರೂವ್​ ಮಾಡಲು ಆತ ಸಾವಿನ ಹಾದಿ ತುಳಿಯಬೇಕಾಯಿತು. ಇದು ಎಷ್ಟು ಘೋರ ಅಲ್ಲವೆ ಎಂದು ಆನಂದ್​ ಪ್ರಶ್ನಿಸಿದ್ದಾರೆ.

ಮಾಸ್ಟರ್​ ಆನಂದ್​ ಮನವಿ

ಇದು ಕೇರಳದ ಘಟನೆ ಎಂದು ಸುಮ್ಮನೇ ಕುಳಿತುಕೊಳ್ಳುವಂತಿಲ್ಲ. ಇಂಥ ಘಟನೆ ಎಲ್ಲಿ ಬೇಕಾದರೂ ಆಗಬಹುದು. ಆದ್ದರಿಂದ ದಯವಿಟ್ಟು ಇಂಥ ವಿಡಿಯೋ ನೋಡಿದಾಗ ಏಕಾಏಕಿ ಜಡ್ಜ್​ ಮಾಡಬೇಡಿ. ಇಂಥವರೇ ತಪ್ಪು ಎಂದು ತೀರ್ಮಾನ ತೆಗೆದುಕೊಳ್ಳಬೇಡಿ, ಈ ಮೂಲಕ ಅಮಾಯಕರ ಜೀವ ತೆಗೆದುಕೊಳ್ಳಬೇಡಿ. ಒಂದು ವಿಡಿಯೋ ವೈರಲ್​ ಆದರೆ, ಅದರ ಸತ್ಯಾಸತ್ಯತೆ ಎಂದು ಎಂದು ಪರಾಮರ್ಶಿಸಿ ಎಂದು ಮಾಸ್ಟರ್​ ಆನಂದ್​ ಮನವಿ ಮಾಡಿಕೊಂಡಿದ್ದಾರೆ.