ಸೆಲೆಬ್ರಿಟಿ ಕ್ರಿಕೇಟ್ ಲೀಗ್ ಪಂದ್ಯದಲ್ಲಿ ಬಳಸಿದ ಅವಾಚ್ಯ ಶಬ್ದದ ಬಗ್ಗೆ ಎದ್ದಿದ್ದ ಚರ್ಚೆಗೆ ನಟ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮಾತಿಗೆ ನಿರ್ದೇಶಕ ಜೋಗಿ ಪ್ರೇಮ್ ಅವರೇ ಗುರು ಎಂದು ಹೇಳಿದ ಅವರು, ಕ್ರಿಕೆಟ್ ಮೈದಾನದ ವಾತಾವರಣ ಹಾಗೂ ಕೌಟುಂಬಿಕ ಕಾರ್ಯಕ್ರಮದ ಬಗ್ಗೆ ಹೇಳಿದ್ದೇನು?
ಸೆಲೆಬ್ರಿಟಿ ಕ್ರಿಕೇಟ್ ಲೀಗ್ (CCL) ಪಂದ್ಯದಲ್ಲಿ, ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕರಾಗಿರೋ ಸುದೀಪ್ ಅವರು, ಆಡಿದ್ದ ಒಂದು ಮಾತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಹಲ್ಚಲ್ ಸೃಷ್ಟಿಸಿತ್ತು. ಇದು ಅವಾಚ್ಯ ಶಬ್ದ, ಇಂಥ ನಟನಿಗೆ ಇದು ಶೋಭೆ ತರುವುದಿಲ್ಲ ಎಂದೆಲ್ಲಾ ಭಾರಿ ಸದ್ದು ಮಾಡಿತ್ತು. ಬೌಲಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಕಳಪೆ ಎನ್ನುವ ಬೈಗುಳ ಮಾತನಾಡಿದ್ದರು ಸುದೀಪ್. ಬೌಲಿಂಗ್ ವಿಚಾರಕ್ಕೆ ಹೀಗೆ ಬಾಲ್ ಹಾಕಿದ್ರೆ, ಮ್ಯಾಚ್ *** ಹೋಗುತ್ತದೆ ಎಂದು ಹೇಳಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಹಂಗಾಮಾ ಸೃಷ್ಟಿಸಿತ್ತು. ಬಿಗ್ಬಾಸ್ನಲ್ಲಿ ಕೆಟ್ಟ ಶಬ್ದ ಹೇಳಿದಾಗ ಬುದ್ಧಿ ಹೇಳುವ ಸುದೀಪ್ ಹೀಗೆಲ್ಲಾ ಮಾಡಿರೋದು ಸರಿಯಲ್ಲ ಎನ್ನುವುದು ಹಲವರ ವಾದವಾಗಿತ್ತು.
ಸ್ಪಷ್ಟನೆ ಕೊಟ್ಟ ಕಿಚ್ಚ
ಇದೀಗ ಖುದ್ದು ಸುದೀಪ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದಕ್ಕೆ ಕಾರಣ ಜೋಗಿ ಪ್ರೇಮ್ ಎಂದಿದ್ದಾರೆ! ಅಷ್ಟಕ್ಕೂ ಆಗಿದ್ದೇನೆಂದರೆ, ರಾಜ್ ಬಿ ಶೆಟ್ಟಿ ನಟನೆಯ ‘ರಕ್ಕಸಪೂರದೊಳ್’ ಸಿನಿಮಾ ಟ್ರೈಲರ್ ಲಾಂಚ್ ಈವೆಂಟ್ ಸಂದರ್ಭದಲ್ಲಿ ಸುದೀಪ್, ನಿರ್ದೇಶಕ ಪ್ರೇಮ್ ಹಾಗೂ ರಕ್ಷಿತಾ ಅತಿಥಿಯಾಗಿ ಬಂದಿದ್ದರು. ಈ ಸಮಯದಲ್ಲಿ ಜೋಗಿ ಪ್ರೇಮ್ ಸುಖಾ ಸುಮ್ಮನೇ ಈ ವಿಷಯ ಕೆದಕಿ ಸುದೀಪ್ ಕಾಲೆಳೆದರು. ಈ ಮೊದಲು ಜೋಗಿ ಪ್ರೇಮ್ ಅವರು ಏನಾದರೂ ಮಾತನಾಡುವಾಗ ಕೆಟ್ಟ ಪದ ಬಳಕೆ ಮಾಡಿದರೆ ಸುದೀಪ್ ಅದನ್ನು ಪ್ರಶ್ನೆ ಮಾಡುತ್ತಿದ್ದರಂತೆ. ಹಾಗೆಲ್ಲ ಏಕೆ ಮಾತನಾಡಿದೆ ಎಂದು ಕೇಳುತ್ತಿದ್ದರಂತೆ. ಈಗ ಸುದೀಪ್ ಕೂಡ ಬಳಕೆಗೆ ಅರ್ಹವಲ್ಲದ ಶಬ್ದ ಹೇಳಿದ್ದನ್ನು ಕೇಳಿ ಖುಷಿ ಆಗಿದೆ ಎಂದರು.
ಪ್ರೇಮ್ ಬುಡಕ್ಕೇ ತಂದ ಸುದೀಪ್
ಆದರೆ, ಜೋಗಿ ಅವರಿಗೇ ಫಿಟ್ಟಿಂಗ್ ಇಟ್ಟ ಸುದೀಪ್, ನಾನು ಹೀಗೆ ಮಾತನಾಡಿದ್ದಕ್ಕೆ ಇವರೇ ಕಾರಣ ಎಂದುಬಿಟ್ಟರು. ಇಂಥ ಮಾತಿನಲ್ಲಿ ಇವರೇ ನನಗೆ ಗುರು ಎಂದು ಜೋಗಿ ಅವರ ಬುಡಕ್ಕೇ ತಂದಿಟ್ಟರು. ‘ಮೊನ್ನೆ ಏನು ವೈರಲ್ ಆಯ್ತಲ್ಲ ರೀಲ್ ಅದಕ್ಕೆ ಕಾರಣ ಗುರುಗಳು ಪ್ರೇಮ್. ಸೆಮಿ ಫೈನಲ್ ಅಲ್ಲಿ ಏನಾದರೂ ಬಂದರೆ ಅದಕ್ಕೆ ಕಾರಣನೂ ಪ್ರೇಮ್ ಅವರೇ’ ಎಂದರು.
ಸೀರಿಯಸ್ ಸ್ಪಷ್ಟನೆ
ಕೊನೆಗೆ ಸೀರಿಯಸ್ ಆಗಿ ಸ್ಪಷ್ಟನೆ ಕೊಟ್ಟ ಸುದೀಪ್, ಕ್ರಿಕೆಟ್ ಮೈದಾನದಲ್ಲಿನ ಸ್ನೇಹಪೂರ್ಣ ವಾತಾವರಣದ ಭಾಗವಾಗಿದ್ದು, ಯಾವುದೇ ಉದ್ದೇಶಪೂರ್ವಕ ಅವಮಾನವಲ್ಲ ಎಂದರು. ಬಿಗ್ ಬಾಸ್‌ನಂತಹ ಕುಟುಂಬ ಸಮೇತ ವೀಕ್ಷಿಸುವ ಕಾರ್ಯಕ್ರಮ ಮತ್ತು ಕ್ರಿಕೆಟ್ ಆಟದ ಸಂದರ್ಭದ ವರ್ತನೆ ವಿಭಿನ್ನವಾಗಿವೆ ಎಂದು ಹೇಳಿದರು.


