ಫ್ಯಾಷನ್ ಜಗತ್ತಿನಲ್ಲಿ ಹೆಣ್ಣು-ಗಂಡಿನ ವೇಷಭೂಷಣಗಳು ಅದಲು ಬದಲಾಗುತ್ತಿವೆ. ಹೆಣ್ಣುಮಕ್ಕಳು ಪುರುಷರ ಉಡುಪುಗಳನ್ನು ಅಳವಡಿಸಿಕೊಂಡರೆ, ಇದೀಗ ನಟ ಕಿಚ್ಚ ಸುದೀಪ್ ಅವರ ಹೊಸ ಹೇರ್ ಕ್ಲಿಪ್ ಸ್ಟೈಲ್ ಪುರುಷರಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಈ ಕ್ಲಿಪ್‌ಗಾಗಿ ಅವರ ಅಭಿಮಾನಿಗಳಿಂದ ಭಾರಿ ಬೇಡಿಕೆ ಶುರುವಾಗಿದೆ.

ಇತ್ತೀಚಿನ ದಿನಗಳಲ್ಲಿ ಫ್ಯಾಷನ್​ ಎನ್ನೋ ಕಲ್ಪನೆ ಚಿತ್ರ-ವಿಚಿತ್ರ ರೂಪ ಪಡೆಯುತ್ತಲೇ ಇದೆ. ಹೆಣ್ಣುಮಕ್ಕಳು ಎನ್ನಿಸಿಕೊಂಡವರು ಗಂಡಸರು ಹಾಕುವ ವೇಷ ತೊಟ್ಟು, ಗಂಡಸರಿಂದ ಕೂದಲು ಕಟ್​ ಮಾಡಿಕೊಂಡು ಹಣೆ ಬೋಳು, ಕಿವಿ ಬೋಳು, ಕೈ ಬೋಳು ಮಾಡಿಕೊಂಡು ತಿರುಗಾಡುವುದನ್ನೇ ಫ್ಯಾಷನ್​ ಅಂದುಕೊಂಡು ಕೆಲವು ದಶಕಗಳೇ ಕಳೆದುಹೋಗಿವೆ. ಹೀಗೆ ಡ್ರೆಸ್​ ಮಾಡಿಕೊಂಡರೆ ತಾವೂ ಗಂಡುಮಕ್ಕಳಿಗೆ ಸಮಾನ ಎನ್ನುವ ಕಲ್ಪನೆ ಬಂದು ಖುಷಿ ಪಡುತ್ತಿದ್ದಾರೆ ಹೆಣ್ಣುಮಕ್ಕಳು. ಇನ್ನೇನು ಭಾರತೀಯ ಸಂಸ್ಕೃತಿಯ ದಿರಿಸು ಎಂದುಕೊಂಡಿರುವ ಸೀರೆಗಳು ಮದುವೆ, ಕಾಲೇಜ್​ ಡೇ ಇಂಥ ಫಂಕ್ಷನ್​ಗಳಿಗೆ ಸೀಮಿತವಾಗಿದೆ. ಇನ್ನು ಕೂದಲು ಬಿಟ್ಟು ತಿರುಗಬೇಡ್ರಪ್ಪೋ ಎಂದು ಹಿರಿಯರು ಹೇಳುತ್ತಲೇ ಇದ್ದರೂ, ಕೂದಲಿನ ಅಂದಕ್ಕೆ ಸಹಸ್ರಾರು ರೂಪಾಯಿ ಖರ್ಚು ಮಾಡುವುದು ಮಾಮೂಲಾಗಿದೆ. ಜಡೆ ಹಾಕಿಕೊಳ್ಳುವ ಹೆಣ್ಣುಮಕ್ಕಳನ್ನು ವಿಚಿತ್ರವಾಗಿ ನೋಡುವ ನಗರ ಪ್ರದೇಶದ ಸೋ ಕಾಲ್ಡ್​ ಮಾಡರ್ನ್​ ಗರ್ಲ್ಸ್​ಗಳೂ ಸರ್ವೇ ಸಾಮಾನ್ಯವಾಗಿದ್ದಾರೆ.

ಹೆಣ್ಣು-ಗಂಡು ಎಕ್ಸ್​ಚೇಂಜ್​!

ಹೀಗೆ ಹೆಣ್ಣುಮಕ್ಕಳು, ತಮ್ಮ ಬಟ್ಟೆ ಬರೆ, ಡ್ರೆಸ್​ ಸ್ಟೈಲ್​ ಎಲ್ಲವನ್ನೂ ಒಂದೊಂದಾಗಿ ಕಳಚುತ್ತಾ ಇರುವ ಕಾರಣದಿಂದ, ಅದನ್ನು ಗಬಕ್​ ಎಂದು ಹಿಡಿದುಕೊಳ್ತಿದ್ದಾರೆ ಪುರುಷರು. ಕಿವಿಗೆ ಓಲೆ, ಕೈಗೆ ಬಳೆ, ಉದ್ದನೆಯ ಕೂದಲು ಇವೆಲ್ಲಾ ಮಾಮೂಲಿ ಆಗಿಬಿಟ್ಟಿವೆ. ಗಂಡು ಯಾರು, ಹೆಣ್ಣು ಯಾರು ಎಂದು ತಿಳಿಯೋದೇ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಜೀನ್ಸ್​ ತೊಟ್ಟರೆ, ಫ್ಯಾಷನ್ ಹೆಸರಿನಲ್ಲಿ ಗಂಡುಮಕ್ಕಳು ಕುರ್ತಾ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲವೂ ಅದಲು, ಬದಲು.

ಅಷ್ಟಕ್ಕೂ ಇಂಥ ಕಲ್ಪನೆ ಬರುವುದೇ ಹಲವರು ತಮ್ಮ ದೇವರು ಎಂದೇ ಅಂದುಕೊಂಡಿರುವ ಸಿನಿಮಾ ನಟ-ನಟಿಯರಿಂದ. ಇವರಿಗೆ ಅವರೇ ಗಾಡ್​ ಫಾದರು, ಮದರು. ಸಿನಿಮಾ ನಟರು ಏನು ಮಾಡಿದರೂ ಅದನ್ನು ಪ್ರಸಾದ ಎಂದು ಸ್ವೀಕರಿಸುವ ಅವರ ದೊಡ್ಡ ಅಭಿಮಾನಿ ವರ್ಗವೇ ಇದೆ. ಅವರ ಹೇರ್​ಸ್ಟೈಲ್​, ಅವರ ಹಾವ ಭಾವ... ಹೀಗೆ ಎಲ್ಲವನ್ನೂ ಕಾಪಿ ಮಾಡಿ ತಾವೂ ಆ ನಟನನ್ನು ಮೈಮೇಲೆ ಆಹ್ವಾನಿಸಿಕೊಂಡಿರುವಷ್ಟು ಖುಷಿ ಪಡುತ್ತಾರೆ ಅಭಿಮಾನಿಗಳು. ಅಷ್ಟಕ್ಕೂ ಅಭಿಮಾನ ಎಂದರೆ ಸುಮ್ನೆನಾ?

ಸುದೀಪ್​ ಹೇರ್​ ಕ್ಲಿಪ್​

ಇದೀಗ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ಎನ್ನಿಸಿರುವ ಕಿಚ್ಚ ಸುದೀಪ್​ (Kichcha Sudeep) ಬಿಗ್​ಬಾಸ್​ ಸಮಯದಲ್ಲಿ ಹೇರ್​ಬ್ಯಾಂಡ್​ ತೊಟ್ಟು ಹಲವು ಪುರುಷರಿಗೆ ಸ್ಫೂರ್ತಿ ನೀಡಿದ್ದರು. ಅಷ್ಟಕ್ಕೂ ಈ ಹೇರ್​ಬ್ಯಾಂಡ್​ ಈಗ ಹೆಣ್ಣುಮಕ್ಕಳು ಬಿಟ್ಟಿದ್ದು, ಹೆಚ್ಚಾಗಿ ಗಂಡಸರ ತಲೆಯ ಮೇಲೆಯೇ ಕಾಣಿಸುತ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಸುದೀಪ್​​ ಅವರು ಕೂದಲಿಗೆ ಕ್ಲಿಪ್​ ಹಾಕಿಕೊಂಡಿದ್ದಾರೆ. ರಬ್ಬರ್​ ಬ್ಯಾಂಡ್​ ಹಾಕಿಕೊಳ್ಳುವುದು ಕಾಮನ್​ ಆಗಿದ್ದರಿಂದ ಕ್ಲಿಪ್​ ಟ್ರೆಂಡ್​ ಸೃಷ್ಟಿಸಿದ್ದಾರೆ. ಈ ಮೂಲಕ ಹೆಣ್ಣುಮಕ್ಕಳೇ ನೀವು ಎಲ್ಲವನ್ನೂ ಬಿಡ್ತಾ ಇದ್ದೀರಿ ಎನ್ನುವ ಸಂದೇಶವನ್ನೂ ತೋರಿಸಿದಂತಿದೆ.

ಒಟ್ಟಿನಲ್ಲಿ ಸುದೀಪ್​ ಅವರ ಈ ಕ್ಲಿಪ್​ಗೆ ಈಗ ಭಾರಿ ಬೇಡಿಕೆ ಬಂದಿದೆ. ಇದ್ಯಾವ ಬ್ರ್ಯಾಂಡ್​, ಎಲ್ಲಿ ಸಿಗುತ್ತದೆ ಎಂದೆಲ್ಲಾ ಅವರ ಅಸಂಖ್ಯ ಫ್ಯಾನ್ಸ್​ ಶೋಧನೆಯಲ್ಲಿ ತೊಡಗಿದ್ದಾರೆ. ಏಕೆಂದರೆ, ತಮ್ಮ ನೆಚ್ಚಿನ ನಟ ಮಾಡಿರುವ ಸ್ಟೈಲ್​ ತಾವು ಮಾಡದೇ ಇದ್ದರೆ ಹೇಗೆ, ಆದ್ದರಿಂದ ಈಗ ಕ್ಲಿಪ್​ಗೆ ಭಾರಿ ಡಿಮಾಂಡ್ ಶುರುವಾಗಿದೆ.