Asianet Suvarna News Asianet Suvarna News

ಕೆರೆಮನೆ ರಾಷ್ಟ್ರೀಯ ನಾಟ್ಯೋತ್ಸವ.. ರಂಗ ಕಲೆಗಳ ಕಲರವ

5 ದಿನಗಳ ಕಾಲ ನಡೆಯುವ ಈ ನಾಟ್ಯೋತ್ಸವದಲ್ಲಿ ಒಂದೇ ವೇದಿಕೆಯಲ್ಲಿ ಹಲವು ಕಲೆಗಳನ್ನು ನೋಡಿ ಸವಿಯಬಹುದು. ಈ 5 ದಿನದ ನಾಟಕೋತ್ಸವವನ್ನು ಪೂರ್ತಿಯಾಗಿ ನೋಡಿಬಿಟ್ಟರೆ ದೇಶ ಬಹುತೇಕ ಕಲಾಪ್ರಕಾರ ನಿಮ್ಮ ಕಣ್ಣಮುಂದೆ ಸಾಗಿ ಹೋಗುತ್ತದೆ. ಅಲ್ಲಿ ಯಕ್ಷಗಾನ, ಸಂಗೀತ, ಓಡಿಸ್ಸಿ ನೃತ್ಯ, ನಾಟಕ, ರೂಪಕ, ಗಾಯನ ಹೀಗೆ ಬಗೆಬಗೆಯ ಕಲೆಯ ಮೆರವಣಿಗೆಯೇ ಸಾಗುತ್ತದೆ. 

Keremane National Dance Festivals at uttarakannada honnavar rav
Author
First Published Jan 25, 2023, 12:09 AM IST

- ಅಶ್ವತ್ಥ ಕೋಡಗದ್ದೆ

ಕನ್ನಡ ಸಿನಿಮಾ ಮತ್ತು ಸ್ಯಾಂಡಲ್​ವುಡ್ ಅಂತಾ ಬಂದ್ರೆ ಮೊದಲು ಮುನ್ನಲೆಗೆ ಬರುವ ಹೆಸರು ನಟಸಾರ್ವಭೌಮ ಡಾ. ರಾಜಕುಮಾರ್ ಕುಟುಂಬ. ರಾಜ್​ಕುಮಾರ್ ಹೆಸರಿಲ್ಲದೇ ಚಲನಚಿತ್ರ ಇತಿಹಾಸ ಮುಂದಕ್ಕೆ ಹೋಗುವುದೇ ಇಲ್ಲ.. ಇನ್ನು ರಂಗಭೂಮಿ ವಿಚಾರಕ್ಕೆ ಬಂದ್ರೆ ಗುಬ್ಬಿ ಕಂಪನಿಯನ್ನು, ಗುಬ್ಬಿ ವೀರಣ್ಣ ಹೆಸರನ್ನು ಬಿಡುವುದುಂಟೇ. ಕಂಪನಿ ನಾಟಕ ಅಂದರೆ ಗುಬ್ಬಿ ಕಂಪನಿ ಅನ್ನೋವಷ್ಟು ರಾಜ್ಯದಲ್ಲಿ ಮನೆಮಾತು. ಹಾಗೆಯೇ ಬಡಗುತಿಟ್ಟಿನ ಯಕ್ಷಗಾನದ ವಿಚಾರಕ್ಕೆ ಬಂದರೆ ಮೇರು ಪಂಕ್ತಿಯಲ್ಲಿ ನಿಲ್ಲುವುದು ಕೆರೆಮನೆ ಎಂಬ ಹೆಸರು. 

ಕೆರೆಮನೆ ಅನ್ನೋದು ಬರೀ ಒಂದು ಊರಿನ ಹೆಸರಲ್ಲ. ಬಡಗುತಿಟ್ಟಿನ ಯಕ್ಷಗಾನ ಪರಂಪರೆಯ ರಾಜಧಾನಿ ಈ ಕೆರೆಮನೆ ಅಂದರೂ ತಪ್ಪಲ್ಲ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕೆರೆಮನೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದವರು ದಿವಂಗತ ಶಿವರಾಮ ಹೆಗಡೆಯವರು. ಯಕ್ಷಗಾನ ಕಲೆಯನ್ನು ಸಾಗರದಾಚೆಗೂ ಕೊಂಡೊಯ್ದು ವಿದೇಶಗಳಲ್ಲಿ ಪ್ರದರ್ಶನ ನೀಡಿದ ಕೀರ್ತಿ ದಿವಂಗತ ಶಂಭು ಹೆಗಡೆಯವರಿಗೆ ಸಲ್ಲಬೇಕು. ಜೊತೆಗೆ ಯಕ್ಷಗಾನದಲ್ಲಿ ಕಾಲಾನುಕ್ರಮವಾಗಿ ಆಗಬೇಕಾದ ಬದಲಾವಣೆಯನ್ನು ಸಕಾರಾತ್ಮಕವಾಗಿ ಮಾಡಿದವರೂ ಶಂಭು ಹೆಗಡೆಯವರೇ. ಶಿವರಾಮ ಹೆಗಡೆಯವರು ಮಹಾನ್ ಕಲಾವಿದರಾಗಿದ್ದರೆ ಶಂಭು ಹೆಗಡೆಯವರು ಕಲಾವಿದರಷ್ಟೇ ಅಲ್ಲ, ಸಂಘಟಕರೆಂದೂ ಹೆಸರು ಪಡೆದಿದ್ದರು.

ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಮೂಲಕ ಶಂಭು ಹೆಗಡೆ ಯಕ್ಷಗಾನ ಕಲೆಯನ್ನು ಜಗತ್ತಿನ ಹಲವು ದೇಶಗಳಲ್ಲಿ ಹರಡಿದರು. ಕಾಲಮಿತಿ ಪ್ರಯೋಗವನ್ನು ಮಾಡಿ ಯಶಸ್ವಿಯಾದರು. ಅರ್ಧ ಚಂದ್ರಾಕೃತಿಯ ರಂಗಸ್ಥಳವನ್ನು ತಂದು ಪ್ರೇಕ್ಷಕ ಸ್ನೇಹಿ ಎನಿಸಿದರು. ಸಂಪ್ರದಾಯದ ಚೌಕಟ್ಟಿನೊಳಗೆ ಹಲವು ಬದಲಾವಣೆಯನ್ನು ಮಾಡುವ ಮೂಲಕ ಮುಂದಿನ ತಲೆಮಾರಿನವರೂ ಈ ಕ್ಷೇತ್ರಗಳತ್ತ ಆಕರ್ಷಿತವಾಗುವಂತೆ ಮಾಡಿದ್ದು ಕೆರೆಮನೆ. ಜೊತೆಗೆ  ಅಸಂಖ್ಯ ಕಲಾವಿದರನ್ನು ಹುಟ್ಟುಹಾಕಿದ್ದು, ಹೆಸರು ಮಾತಿನ ಕಲಾವಿದರಾಗುವಂತೆ ಮಾಡಿದ್ದು ಇದೇ ಕೆರೆಮನೆ ಅಂದರೂ ಅತಿಶಯೋಕ್ತಿಯಲ್ಲ. ಇವರಿಬ್ಬರ ಜೊತೆ ನೆನಪು ಮಾಡಿಕೊಳ್ಳಬೇಕಾದ ಇನ್ನೆರಡು ಹೆಸರೆಂದರೆ ಮಹಾಬಲ ಹೆಗಡೆ ಮತ್ತು ಗಜಾನನ ಹೆಗಡೆಯವರದ್ದು.

ಶಿವರಾಮ ಹೆಗಡೆ ಅನ್ನೋ ಮೇರು ಕಲಾವಿದರಿಂದ ಶುರುವಾಗಿದ್ದು ಈ ಕೆರೆಮನೆ ಪರಂಪರೆ ನಾಲ್ಕನೇ ತಲೆಮಾರಿನಲ್ಲೂ ಮುಂದುವರಿದುಕೊಂಡು ಬಂದಿದೆ. ಶಂಭು ಹೆಗಡೆಯವರ ಪುತ್ರ ಶಿವಾನಂದ ಹೆಗಡೆಯವರೂ ಕೂಡ ಯಕ್ಷಗಾನ ಕಲಾವಿದರು, ಅತ್ಯುತ್ತಮ ಸಂಘಟಕರು.  ದಿವಂಗತ ಶಂಭು ಹೆಗಡೆ ಹೆಸರಿನಲ್ಲಿ ಪ್ರತಿವರ್ಷ ನಡೆಯುವ ರಾಷ್ಟ್ರೀಯ ನಾಟ್ಯೋತ್ಸವವೇ ಇದಕ್ಕೆ ಸಾಕ್ಷಿ. ಸಂಗೀತ, ನೃತ್ಯ, ಮತ್ತು ಸಾಂಪ್ರದಾಯಿಕ ರಂಗ ಕಲೆಗಳ ಸಮಾಗಮ ಈ ನಾಟ್ಯೋತ್ಸವ.

5 ದಿನಗಳ ಕಾಲ ನಡೆಯುವ ಈ ನಾಟ್ಯೋತ್ಸವದಲ್ಲಿ ಒಂದೇ ವೇದಿಕೆಯಲ್ಲಿ ಹಲವು ಕಲೆಗಳನ್ನು ನೋಡಿ ಸವಿಯಬಹುದು. ಈ 5 ದಿನದ ನಾಟಕೋತ್ಸವವನ್ನು ಪೂರ್ತಿಯಾಗಿ ನೋಡಿಬಿಟ್ಟರೆ ದೇಶ ಬಹುತೇಕ ಕಲಾಪ್ರಕಾರ ನಿಮ್ಮ ಕಣ್ಣಮುಂದೆ ಸಾಗಿ ಹೋಗುತ್ತದೆ. ಅಲ್ಲಿ ಯಕ್ಷಗಾನ, ಸಂಗೀತ, ಓಡಿಸ್ಸಿ ನೃತ್ಯ, ನಾಟಕ, ರೂಪಕ, ಗಾಯನ ಹೀಗೆ ಬಗೆಬಗೆಯ ಕಲೆಯ ಮೆರವಣಿಗೆಯೇ ಸಾಗುತ್ತದೆ. 

13ನೇ ವರ್ಷದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಕಾರ್ಯಕ್ರಮ ಫೆಬ್ರವರಿ 3 ರಿಂದ 7ರ ವರೆಗೆ ನಡೆಯಲಿದೆ. ಪ್ರಸಿದ್ಧ ನಟ ಅನಂತನಾಗ್ ಅವರಿಗೆ ಈ ಬಾರಿಯ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಯಕ್ಷಗಾನ ಕಲಾವಿದ ಶಿರಳಗಿ ತಿಮ್ಮಪ್ಪ ಹೆಗಡೆ ಅವರಿಗೆ ಈ ಸಲದ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಸಂದಿದೆ. ಹಲವು ಕಲಾವಿದರು, ರಾಜಕೀಯ ಮುಖಂಡರು ಕೂಡ ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. 

ಯಾವುದೇ ಕಾರ್ಯಕ್ರಮ ಸಂಘಟನೆ ಮಾಡುವುದು ಕಷ್ಟದ ಕೆಲಸ. ಅದರಲ್ಲೂ 13 ವರ್ಷಗಳ ಕಾಲ ಯಶಸ್ವಿಯಾಗಿ ನಡೆಸುವುದು ತಮಾಷೆಯ ಸಂಗತಿಯೇ ಅಲ್ಲ. ಕೆರೆಮನೆ ಶಿವಾನಂದ ಹೆಗಡೆ ಈ ಕಾರ್ಯವನ್ನು ಶ್ರದ್ಧೆಯಿಂದ ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಹೆಗಲುಕೊಟ್ಟು ನಿಂತಿರುವುದು ಪುತ್ರ ಶ್ರೀಧರ್ ಹೆಗಡೆ. ಶಿವಾನಂದ ಹೆಗಡೆಯವರ ಹಲವು ದಿನಗಳ ಪರಿಶ್ರಮದ ಫಲ ನಾಟ್ಯೋತ್ಸವದಲ್ಲಿ ಎದ್ದು ಕಾಣುತ್ತದೆ. ಈ ಬಾರಿ ಫೆಬ್ರವರಿ 3ರಿಂದ ಆರಂಭವಾಗುವ ನಾಟ್ಯೋತ್ಸವ ಹಲವು ವಿಶೇಷತೆಗೆ ಸಾಕ್ಷಿಯಾಗುವುದರಲ್ಲಿ ಸಂಶಯವೇ ಇಲ್ಲ.

Follow Us:
Download App:
  • android
  • ios