ಕೇವಲ 45 ಶೋಗಳಿಂದ ಆರಂಭವಾದ ‘ಪ್ರೇಮದ ಊರಲಿ’ ಈಗ 350ಕ್ಕೂ ಅಧಿಕ ಶೋಗಳಿಗೆ ಏರಿಕೆಯಾಗಿದೆ. ಬಲವಾದ ವಾಚ್‌ಮೌತ್‌ನಿಂದ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಸಿನಿಮಾ ತೆಲುಗಿನಲ್ಲೂ ಬರಲಿದೆ.

ಕನ್ನಡ ಚಿತ್ರರಂಗದಲ್ಲಿ ಸದ್ಯ ‘ಪ್ರೇಮದ ಊರಲಿ’ ಸಿನಿಮಾ ಸದ್ದು ಮಾಡುತ್ತಿದೆ. ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾದ ಈ ಸಿನಿಮಾ ಆರಂಭದಲ್ಲಿ ಕೇವಲ 45 ಶೋಗಳೊಂದಿಗೆ ತೆರೆಗೆ ಬಂದಿತ್ತು. ಆದರೆ ಪ್ರೇಕ್ಷಕರಿಂದ ಸಿಕ್ಕ ಅದ್ಭುತ ಪ್ರತಿಕ್ರಿಯೆ ಹಾಗೂ ಬಲವಾದ ವಾಚ್‌ಮೌತ್‌ನಿಂದಾಗಿ ಸಿನಿಮಾದ ಶೋಗಳ ಸಂಖ್ಯೆ ದಿನದಿಂದ ದಿನಕ್ಕೆ ಭರ್ಜರಿಯಾಗಿ ಏರಿಕೆಯಾಗಿದೆ. ಬುಧವಾರದ ವೇಳೆಗೆ ಚಿತ್ರದ ದೈನಂದಿನ ಶೋಗಳ ಸಂಖ್ಯೆ 350ಕ್ಕೂ ಅಧಿಕವಾಗಿರುವುದು ವಿಶೇಷ.

ಪ್ರೇಕ್ಷಕರ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಪ್ರಮುಖ ವಿತರಕರಾದ ಜಯಣ್ಣ ಮತ್ತು ಬೋಗೇಂದ್ರ ಅವರು ಚಿತ್ರದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ‘ಪ್ರೇಮದ ಊರಲಿ’ ಈಗಾಗಲೇ ಸುಮಾರು ₹5 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದ್ದು, ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಮುಂದುವರಿದಿದೆ.

ಪ್ರೇಕ್ಷಕರ ಮಾತೇ ಚಿತ್ರದ ಬಲ!

ಚಿತ್ರಕ್ಕೆ ಸಿಕ್ಕಿರುವ ಬಲವಾದ ವಾಚ್‌ಮೌತ್ ಸಿನಿಮಾ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಆರಂಭದಲ್ಲಿ ಸೀಮಿತ ಶೋಗಳೊಂದಿಗೆ ಬಿಡುಗಡೆಯಾದ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದಂತೆ ಹಲವು ಚಿತ್ರಮಂದಿರಗಳಲ್ಲಿ ಶೋಗಳನ್ನು ಹೆಚ್ಚಿಸಲಾಗಿದೆ. ಈ ಬೆಳವಣಿಗೆ ಚಿತ್ರಮಂದಿರ ಮಾಲೀಕರಲ್ಲೂ ಹೊಸ ಉತ್ಸಾಹ ಮೂಡಿಸಿದ್ದು, ಕನ್ನಡ ಚಿತ್ರರಂಗಕ್ಕೂ ಹೊಸ ಭರವಸೆ ನೀಡಿದೆ. ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ‘ಹೌಸ್‌ಫುಲ್’ ಬೋರ್ಡ್‌ಗಳು ಕಾಣಿಸಿಕೊಳ್ಳುತ್ತಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು ಮತ್ತಷ್ಟು ಜನರಿಗೆ ಚಿತ್ರವನ್ನು ಶಿಫಾರಸು ಮಾಡುತ್ತಿದ್ದಾರೆ.

ಸರಳ ಕಥೆ.. ಮನಮುಟ್ಟುವ ನಿರೂಪಣೆ

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ‘ಪ್ರೇಮದ ಊರಲಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ವ್ಯಾನಿಲ್ಲಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಜನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ಹಳ್ಳಿಯ ಸೊಗಡಿನ ಸರಳ ಕಥೆಯನ್ನು ಆಧರಿಸಿರುವ ‘ಪ್ರೇಮದ ಊರಲಿ’ ಕುಟುಂಬ ಸಂಬಂಧಗಳು, ಮಾನವೀಯ ಮೌಲ್ಯಗಳು ಹಾಗೂ ಮುಗ್ಧ ಪ್ರೀತಿಯ ಸುತ್ತ ಕಥೆಯನ್ನು ಕಟ್ಟಿಕೊಟ್ಟಿದೆ. ಸರಳವಾದ ಕಥೆಯನ್ನು ಭಾವನಾತ್ಮಕವಾಗಿ ಕಟ್ಟಿಕೊಟ್ಟಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ತಾರಾಬಳಗ ಹೇಗಿದೆ?

ಚಿತ್ರದಲ್ಲಿ ಶ್ರೀರಾಮ್ ನಾಯಕನಾಗಿ ನಟಿಸಿದ್ದು, ರಾಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ರಂಗಾಯಣ ರಘು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ತಮ್ಮ ಅಭಿನಯದ ಮೂಲಕ ಸಿನಿಮಾದ ಭಾವನಾತ್ಮಕ ಅಂಶಕ್ಕೆ ಮತ್ತಷ್ಟು ಬಲ ನೀಡಿದ್ದಾರೆ. ಚಿತ್ರಕ್ಕೆ ಸುನಾದ್ ಗೌತಮ್ ಸಂಗೀತ ಸಂಯೋಜಿಸಿದ್ದು, ರಾಜ್‌ಕಾಂತ್ ಛಾಯಾಗ್ರಹಣದ ಜವಾಬ್ದಾರಿ ನಿರ್ವಹಿಸಿದ್ದಾರೆ. ಸಿನಿಮಾದ ಸಂಗೀತ ಮತ್ತು ದೃಶ್ಯಗಳು ಕಥೆಯ ಭಾವನೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಈ ವಾರ ತೆಲುಗಿನಲ್ಲೂ ‘ಪ್ರೇಮದ ಊರಲಿ’

ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು ಮುನ್ನುಗ್ಗುತ್ತಿರುವ ‘ಪ್ರೇಮದ ಊರಲಿ’ ಇದೀಗ ತೆಲುಗು ಪ್ರೇಕ್ಷಕರನ್ನೂ ತಲುಪಲು ಸಜ್ಜಾಗಿದೆ. ಈ ವಾರ ತೆಲುಗು ವರ್ಷನ್ ಬಿಡುಗಡೆಯಾಗಲಿದ್ದು, SK Pictures ಮತ್ತು Maharatna Productions ತೆಲುಗು ವಿತರಣೆಯ ಜವಾಬ್ದಾರಿ ವಹಿಸಿಕೊಂಡಿವೆ.

ಇನ್ನು ಕಡಿಮೆ ಶೋಗಳೊಂದಿಗೆ ಆರಂಭವಾಗಿ ಪ್ರೇಕ್ಷಕರ ಬೇಡಿಕೆಯಿಂದ 350ಕ್ಕೂ ಹೆಚ್ಚು ಶೋಗಳಿಗೆ ಏರಿಕೆ ಕಂಡಿರುವ ‘ಪ್ರೇಮದ ಊರಲಿ’, ಬಲವಾದ ವಾಚ್‌ಮೌತ್‌ನಿಂದ ಬಾಕ್ಸ್ ಆಫೀಸ್‌ನಲ್ಲಿ ಗಮನ ಸೆಳೆಯುತ್ತಿದೆ. ಉತ್ತಮ ಕಂಟೆಂಟ್ ಮತ್ತು ಪ್ರಾಮಾಣಿಕ ಕಥಾಹಂದರಕ್ಕೆ ಪ್ರೇಕ್ಷಕರು ಯಾವಾಗಲೂ ಬೆಂಬಲ ನೀಡುತ್ತಾರೆ ಎಂಬುದಕ್ಕೆ ಈ ಸಿನಿಮಾ ಮತ್ತೊಂದು ಉದಾಹರಣೆಯಾಗಿ ಕಾಣಿಸಿಕೊಂಡಿದೆ.