ಸಂಬಂಧಗಳ ಸಂಕೀರ್ಣತೆಯನ್ನು ಸರಳವಾಗಿ ಕಟ್ಟಿಕೊಡುವ ‘ಪ್ರೇಮದ ಊರಲಿ’ ಚಿತ್ರದಲ್ಲಿ ಶ್ರೀರಾಮ್‌, ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಅವರ ಅಭಿನಯ ಗಮನ ಸೆಳೆಯುತ್ತದೆ. ಜೀವಂತ ಪಾತ್ರಗಳು, ಸಹಜ ನಿರೂಪಣೆ.

ರಾಜೇಶ್ ಶೆಟ್ಟಿ

ತಂತ್ರಜ್ಞರು ಮತ್ತು ಕಲಾವಿದರು ಹೆಗಲಿಗೆ ಹೆಗಲು ಕೊಟ್ಟು ದುಡಿದರೆ ಒಂದು ಜೀವಂತಿಕೆಯ ಸಿನಿಮಾ ಮೂಡಿಬರಬಹುದು ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ನಾಯಕ ನಟ ಶ್ರೀ, ನಾಯಕಿಯರಾದ ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಈ ಸಿನಿಮಾದ ಜೀವಾಳ. ಅದ್ಭುತವಾಗಿ ನಟಿಸಿದ್ದಾರೆ. ಅದರ ಜೊತೆಗೆ ರಂಗಾಯಣ ರಘು ಸೇರಿದಂತೆ ಎಲ್ಲಾ ಪೋಷಕ ನಟರೂ ಪಾತ್ರವೇ ಆಗಿ ಜೀವ ತುಂಬಿದ್ದಾರೆ.

ನಿರ್ದೇಶಕ ಮನೋಜ್‌ ಕುಮಾರ್‌ ಒಂದು ಸರಳ ಕತೆ ಬರೆದಿದ್ದಾರೆ. ಸೊಗಸಾಗಿ ದೃಶ್ಯಗಳನ್ನು ಪೋಣಿಸಿದ್ದಾರೆ. ಅದನ್ನು ರಾಜ್‌ಕಾಂತ್‌ ಬಹಳ ಆಕರ್ಷಕವಾಗಿ ಸೆರೆ ಹಿಡಿದಿದ್ದಾರೆ. ಸುನಾದ್ ಗೌತಮ್‌ ಈ ಚಿತ್ರವನ್ನು ಆಹ್ಲಾದಕರವಾಗಿ ಸಂಗೀತಮಯಗೊಳಿಸಿದ್ದಾರೆ. ಹೀಗಾಗಿಯೇ ಪ್ರಾಮಾಣಿಕ ಪ್ರಯತ್ನದಿಂದ ಈ ಸಿನಿಮಾ ಜೀವಂತಿಕೆಯಿಂದ ನಳನಳಿಸುತ್ತಿದೆ. ಇದೊಂದು ಸಂಬಂಧಗಳ ಸಂಕೀರ್ಣತೆಯನ್ನು ಹೇಳುವ ಸಿನಿಮಾ.

ಒಳಗಣ್ಣಿನಿಂದ ನೋಡಿದರೆ ಎಲ್ಲವೂ ಅರ್ಥವಾಗುತ್ತದೆ ಎಂಬುದನ್ನು ಸಾರುವ ಸಿನಿಮಾ. ಅದನ್ನು ಹೇಳಲು ನಿರ್ದೇಶಕರು ಬರೆದಿರುವ ಪಾತ್ರಗಳು ಲವಲವಿಕೆಯಿಂದ ಕೂಡಿವೆ. ಊರಲ್ಲೇ ಇರುವ ತರುಣ ರೈತ, ಎಲ್ಲರನ್ನೂ ಗೋಳುಹೊಯ್ದುಕೊಳ್ಳುವ ತರ್ಲೆ ಹುಡುಗಿ, ಮೌನವೇ ಆಭರಣದಂತಿರುವ ಮತ್ತೊಬ್ಬಳು ತರುಣಿ, ಪುತ್ರನನ್ನು ಹಚ್ಚಿಕೊಂಡಿರುವ ಮುಗ್ಧ ತಂದೆ ಹೀಗೆ ಆಪ್ತ ಪಾತ್ರಪ್ರಪಂಚ ಸೃಷ್ಟಿಸಿದ್ದಾರೆ.

ಚಿತ್ರ: ಪ್ರೇಮದ ಊರಲಿ

ನಿರ್ದೇಶನ: ಮನೋಜ್‌ ಕುಮಾರ್

ತಾರಾಗಣ: ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ಪೂಣಚ್ಚ, ರಂಗಾಯಣ ರಘು, ಅಭಿಷೇಕ್ ಕಲ್ಮನಿ, ಇಳಾ ವಿಟ್ಲ

ರೇಟಿಂಗ್: 3

ಇಲ್ಲಿ ಹೇಳಿಕೊಳ್ಳುವ ವಿಲನ್‌ಗಳೂ ಇಲ್ಲ. ಸನ್ನಿವೇಶವೇ ವಿಲನ್‌. ಹಾಗಾಗಿ ಸಿನಿಮಾ ಕೊಂಚ ಭಿನ್ನ ಸಾಲಿನಲ್ಲಿ ನಿಲ್ಲುತ್ತದೆ. ಶ್ರೇಷ್ಠತೆಯ ಹಂಬಲವೇ ಇಲ್ಲದೆ ಹೃದಯ ಮುಟ್ಟುವ ಕತೆಯೊಂದನ್ನು ತಂಗಾಳಿ ಸವರಿಹೋಗುವಷ್ಟೇ ಸಹಜವಾಗಿ, ಸರಳವಾಗಿ ನಿರ್ದೇಶಕರು ಹೇಳಿದ್ದಾರೆ. ಅವರ ಕತೆಗಾರಿಕೆಗೆ ಮೆಚ್ಚುಗೆ.